varthabharthi


ತಿಳಿ ವಿಜ್ಞಾನ

ಅಂತರಿಕ್ಷದಲ್ಲಿ ಸಾವಿಗೀಡಾದರೆ...

ವಾರ್ತಾ ಭಾರತಿ : 4 Apr, 2021

ವಿಶ್ವದ ಜನಸಂಖ್ಯೆ ನಾಗಾಲೋಟದಲ್ಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಅದಕ್ಕಿಂತಲೂ ವೇಗದಲ್ಲಿ ಚಲಿಸುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಸದುಪಯೋಗದಿಂದ ಜನರಿಗೆ ಭವಿಷ್ಯದ ಜನವಸತಿ ಸೌಲಭ್ಯಕ್ಕಾಗಿ ಭೂಮಿಯಾಚೆ ಜನವಸತಿ ತಾಣಗಳಿಗಾಗಿ ಶೋಧ ನಡೆಯುತ್ತಲೇ ಇದೆ. ಇದರ ಭಾಗವಾಗಿ ಈಗಾಗಲೇ ಮಂಗಳನತ್ತ ನಮ್ಮ ಪಯಣದ ಪ್ರಯತ್ನಗಳು ಸಾಗಿವೆ. ಇದರ ಜೊತೆಜೊತೆಗೆ ಬಾಹ್ಯಾಕಾಶ ನಿಲ್ದಾಣಗಳಲ್ಲಿ ಕೆಲವು ದಿನಗಳ ಮಟ್ಟಿಗಾದರೂ ವಾಸಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದೇವೆ. ಮುಂದಿನ ದಿನಗಳಲ್ಲಿ ಈ ಪ್ರಯತ್ನಗಳು ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ. ಇದರ ಜೊತೆಗೆ ಅಪಾಯಗಳ ಪ್ರಮಾಣಗಳೂ ಹೆಚ್ಚುವ ಸಾಧ್ಯತೆಗಳನ್ನು ನಾವು ತಳ್ಳಿಹಾಕುವಂತಿಲ್ಲ. ಅವಕಾಶಗಳು ಹೆಚ್ಚಿದಂತೆಲ್ಲಾ ಅಪಾಯಗಳು ಸಹ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಅನ್ಯ ಗ್ರಹಗಳಿಗೆ ತೆರಳುವ ನಮ್ಮ ಪ್ರಯಾಣದಲ್ಲಿ ಅಂತರಿಕ್ಷದಲ್ಲಿ ನಮ್ಮ ಸಾವು ಉಂಟಾದರೆ ಏನಾಗುತ್ತದೆ ಎಂಬ ಪ್ರಶ್ನೆ ನಮ್ಮನ್ನು ಕಾಡದಿರದು.

ಅಂತರಿಕ್ಷ ಎಲ್ಲಿದೆ?

ಭೂವಾತಾವರಣದ ಆಚೆ ಇರುವ ಪ್ರದೇಶವನ್ನು ಅಂತರಿಕ್ಷ ಎಂದು ಹೇಳುತ್ತೇವೆ. ಆದರೆ ಭೂಮಿಯಿಂದ ಅದು ಎಷ್ಟು ದೂರದಲ್ಲಿದೆ ಎಂದು ನಿಖರವಾಗಿ ಹೇಳಲಾಗದು. ಭೂಮಿಯಿಂದ 160 ಕಿ.ಮೀ. ಎತ್ತರದಿಂದ ಅಂತರಿಕ್ಷ ಪ್ರಾರಂಭವಾಗುತ್ತದೆ ಎಂದು ಕೆಲ ವಿಜ್ಞಾನಿಗಳು ಹೇಳುತ್ತಾರೆ. ಹೀಗಾಗಿ ಸೂರ್ಯ, ಚಂದ್ರ, ಸೇರಿದಂತೆ ನಮ್ಮ ಸೌರವ್ಯೆಹದ ಇನ್ನಿತರ ಗ್ರಹಗಳೆಲ್ಲವೂ ಅಂತರಿಕ್ಷದಲ್ಲಿವೆ ಎಂಬುದು ತಿಳಿಯುತ್ತದೆ. ಅಂತರಿಕ್ಷಕ್ಕೆ ತೆರಳುವ ಪ್ರಯಾಣಿಕರನ್ನು ಗಗನಯಾತ್ರಿಗಳು ಅಥವಾ ವ್ಯೋಮಯಾನಿಗಳೆಂದೂ, ಇವರನ್ನು ಕರೆದುಕೊಂಡು ಹೋಗುವ ವಾಹನಗಳನ್ನು ಅಂತರಿಕ್ಷ ನೌಕೆಗಳೆಂದು ಕರೆಯುತ್ತಾರೆ. 1957ರಿಂದ ಅಂತರಿಕ್ಷ ಯಾನ ಪ್ರಾರಂಭವಾಯಿತು. 1961ರಲ್ಲಿ ರಶ್ಯದ ಗಗನಯಾತ್ರಿ ಯೂರಿ ಗಾಗರಿನ್ ಅಂತರಿಕ್ಷ ಯಾನ ಮಾಡಿದ ಮೊದಲ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ. ಈತ 1 ಗಂಟೆ 48 ನಿಮಿಷಗಳಲ್ಲಿ ಒಂದು ಬಾರಿ ಭೂಪ್ರದಕ್ಷಿಣೆ ಮಾಡಿ ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿದ. ಅಲ್ಲಿಂದ ಇಲ್ಲಿಯವರೆಗೂ ಇನ್ನೂರಕ್ಕೂ ಹೆಚ್ಚು ಜನ ಅಂತರಿಕ್ಷ ಯಾತ್ರೆ ಮಾಡಿದ್ದಾರೆ. 20ನೇ ಶತಮಾನದ ಇಂಟ್ರಾಗ್ಯಾಲಾಕ್ಟಿಕ್ ಪ್ರಯಾಣದ ಆರಂಭದಿಂದ ಇಂದಿನವರೆಗೆ 19 ಜನರು ಅಂತರಿಕ್ಷದಲ್ಲಿ ಸಾವನ್ನಪ್ಪಿದ್ದಾರೆ. ಅಂತರಿಕ್ಷದಲ್ಲಿ ಸಾವು ಏಕೆ?

ಪ್ರತೀ ಗಗನಯಾನಿಯೂ ಅಂತರಿಕ್ಷ ಯಾನದೊಂದಿಗೆ ತನ್ನ ಸಾವನ್ನು ಕೂಡಾ ಹೊತ್ತೊಯ್ಯುತ್ತಾನೆ ಎಂಬ ಮಾತಿದೆ. ಏಕೆಂದರೆ ಯಾವ ಕ್ಷಣದಲ್ಲಿಯಾದರೂ ಅವರ ಸಾವು ಸಂಭವಿಸಬಹುದು ಅಲ್ಲವೇ?. ಸಾಮಾನ್ಯವಾಗಿ ಅಂತರಿಕ್ಷಕ್ಕೆ ತೆರಳುವ ಪ್ರತಿಯೊಬ್ಬ ಗಗನಯಾತ್ರಿಯೂ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವಂತಹ ಮನೋಸ್ಥಿತಿ ಹಾಗೂ ಅದಕ್ಕೆ ಪೂರಕವಾದ ಉಡುಪು ಹಾಗೂ ಅಗತ್ಯ ರಕ್ಷಣಾ ಕ್ರಮಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿಕೊಂಡು ಪ್ರಯಾಣ ಆರಂಭಿಸುತ್ತಾರೆ. ಇಷ್ಟೆಲ್ಲಾ ರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದರೂ ಅಂತರಿಕ್ಷದಲ್ಲಿ ಸಾವು ಸಂಭವಿಸುವುದೇಕೆ? ಎಂಬ ಪ್ರಶ್ನೆ ಸಹಜ. ಅಂತರಿಕ್ಷ ಪ್ರಯಾಣ ಗ್ರಹಗಳ ನಡುವಿನ ಗುರುತ್ವ ಹಾಗೂ ತೇಲುವಿಕೆಯ ವೇಗವನ್ನು ಅವಲಂಬಿಸಿರುತ್ತದೆ. ಅಂತರಿಕ್ಷದಲ್ಲಿ ನಡೆಯುವ ಅನಿರೀಕ್ಷಿತ ವಿದ್ಯಮಾನಗಳು ರಕ್ಷಣಾತ್ಮಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಸಾವು ಸಂಭವಿಸುತ್ತವೆ. ಅಂತರಿಕ್ಷದಲ್ಲಿ ಸಾವು ಸಂಭವಿಸಿದರೆ ಏನಾಗುತ್ತದೆ?

ಅಂತರಿಕ್ಷದಲ್ಲಿ ಸಾವು ಸಂಭವಿಸಿದ 10 ಸೆಕೆಂಡ್‌ಗಳಲ್ಲಿ ಅವರ ಚರ್ಮ ಮತ್ತು ರಕ್ತದಲ್ಲಿನ ನೀರು ಆವಿಯಾಗುತ್ತದೆ. ಇದರಿಂದ ಅವರ ದೇಹವು ಗಾಳಿಯಿಂದ ತುಂಬಿಕೊಳ್ಳುತ್ತದೆ. ಚರ್ಮದ ಬಳಿ ಇರುವ ಕರಗಿದ ಸಾರಜನಕವು ದೇಹದ ಮೇಲೆ ಸಾವಿರಾರು ಗುಳ್ಳೆಗಳನ್ನು ರೂಪಿಸುತ್ತದೆ. ಈ ಗುಳ್ಳೆಗಳು ಕೇವಲ 15 ಸೆಕೆಂಡ್‌ಗಳಲ್ಲಿಯೇ ಗಾತ್ರದಲ್ಲಿ ದ್ವಿಗುಣವಾಗುತ್ತವೆ. ಆಗ ದೇಹ ಬಲೂನಿನ ಅಂಗಡಿಯಂತೆ ತೋರುತ್ತದೆ. ಅಂತರಿಕ್ಷದಲ್ಲಿ ಸಾವು ಸಂಭವಿಸಿದ 30 ಸೆಕೆಂಡುಗಳಲ್ಲಿ ಅವರ ಶ್ವಾಸಕೋಶಗಳು ಹಾಳಾಗುತ್ತವೆ ಮತ್ತು ಅವು ಪಾರ್ಶ್ವವಾಯುವಿಗೆ ಒಳಗಾಗುತ್ತವೆ. ದೇಹವು ಹೆಪ್ಪುಗಟ್ಟುವ ಮೊದಲೇ ಉಸಿರುಗಟ್ಟುವಿಕೆಯಿಂದ ಸಾವು ಸಂಭವಿಸಿರುತ್ತದೆ. ಏಕೆಂದರೆ ದೇಹದ ಶಾಖವು ನಿಧಾನವಾಗಿ ನಿರ್ವಾತದಲ್ಲಿ ಸೇರಿಕೊಳ್ಳುತ್ತದೆ.

ಅಂತರಿಕ್ಷದಲ್ಲಿ ಸಾವು ಸಂಭವಿಸಿದರೆ ಇನ್ನೊಂದು ಪ್ರಶ್ನೆ ಉಂಟಾಗುತ್ತದೆ. ಅದೇನೆಂದರೆ ಸತ್ತ ವ್ಯಕ್ತಿಯ ಹೆಣವನ್ನು ಏನು ಮಾಡುತ್ತಾರೆ? ಭೂಮಿಗೆ ವಾಪಸ್ ತರುತ್ತಾರೋ? ಅಥವಾ ಅಲ್ಲಿಯೇ ಅಂತ್ಯಕ್ರಿಯೆ ಮಾಡುತ್ತಾರೋ? ಎಂಬ ಗೊಂದಲ ಉಂಟಾಗುತ್ತದೆ. ಅಂತರಿಕ್ಷದಲ್ಲಿನ ಶೂನ್ಯ ಗುರುತ್ವದಲ್ಲಿ ಅಂತ್ಯಕ್ರಿಯೆ ಮಾಡಲು ಸಾಧ್ಯವೇ? ಎಂಬ ಪ್ರಶ್ನೆಯೂ ಕಾಡುತ್ತದೆ. ಅಂತರಿಕ್ಷದಲ್ಲಿ ಸತ್ತ ದೇಹದ ನಿರ್ವಹಣೆ ಬಗ್ಗೆ ನಾಸಾ ಯಾವುದೇ ಅಧಿಕೃತ ನೀತಿಯನ್ನು ಪ್ರಕಟಿಸಿಲ್ಲ. ಐ.ಎಸ್.ಎಸ್. ತರಬೇತುದಾರರಾದ ಹ್ಯಾಡ್‌ಫೀಲ್ಡ್ ಅವರ ಪ್ರಕಾರ ಸತ್ತ ದೇಹವನ್ನು ಜೈವಿಕ ಅಪಾಯಗಳು ಬರಲಾರದಂತೆ ನಿರ್ವಹಿಸಬೇಕಾಗುತ್ತದೆ. ಅದಕ್ಕಾಗಿ ಶೇಖರಣಾ ಆಯ್ಕೆಗಳ ಬಗ್ಗೆ ಸಂಶೋಧನೆಗಳು ಆಗಬೇಕಿದೆ. ಸದ್ಯಕ್ಕೆ ಇರುವ ಆಯ್ಕೆ ಎಂದರೆ ದೇಹವನ್ನು ಅಂತರಿಕ್ಷ ಕಸದ ಮಾದರಿಯಲ್ಲಿ ಸಂಗ್ರಹಿಸಲಾಗುತ್ತದೆ. ದೇಹವನ್ನು ಒತ್ತಡಕ್ಕೊಳಗಾದ ಸೂಟ್‌ನಲ್ಲಿ ಇಡುವುದೊಂದೇ ಸದ್ಯದ ಪರಿಹಾರ. ಹೀಗೆ ಇಡುವುದೂ ಸಹ ಅಪಾಯಕರವಾಗಿದೆ. ಏಕೆಂದರೆ ಮೃತ ದೇಹಗಳು ಅಪಾಯಕಾರಿಗಳಲ್ಲವೇ? ಅದರಿಂದ ಬ್ಯಾಕ್ಟೀರಿಯಾಗಳ ಸೋಂಕು ಇನ್ನಿತರರಿಗೆ ಹರಡುತ್ತದೆ. 2005ರಲ್ಲಿ ಸ್ವೀಡಿಶ್ ಕಂಪೆನಿಯೊಂದು ಮೃತ ದೇಹಗಳ ಸಂಸ್ಕರಣೆ ವ್ಯವಸ್ಥೆಯನ್ನು ಪ್ರಸ್ತಾಪಿಸಿತ್ತು. ಇದರ ಪ್ರಕಾರ ದೇಹವನ್ನು ಸಣ್ಣ ಸಣ್ಣ ಹೆಪ್ಪುಗಟ್ಟಿದ ಅಂಗಾಂಶಗಳಾಗಿ ವಿಭಜಿಸುವುದು. ಇದು ಸಂಪೂರ್ಣವಾಗಿ ಶವಸಂಸ್ಕಾರದ ರೀತಿಯಲ್ಲಿಯೇ ಇರುತ್ತದೆ ಎಂದು ಹೇಳಿತ್ತು. ಇದು ತುಂಬಾ ಕಡಿಮೆ ಜಾಗವನ್ನು ತೆಗೆದುಕೊಳ್ಳುತ್ತದೆ ಮತ್ತು ಜೈವಿಕ ಅಪಾಯಗಳನ್ನು ನಿವಾರಿಸುತ್ತದೆ. ಜೊತೆಗೆ ಭೂಮಿಗೆ ಸುಲಭವಾಗಿ ಸಾಗಿಸಲು ಅನುಕೂಲವಾಗುತ್ತದೆ ಎಂದೂ ಹೇಳಿತ್ತು. ಹಡಗಿನಲ್ಲಿ ಘನೀಕರಿಸುವಿಕೆಗಾಗಿ ದ್ರವ ಸಾರಜನಕ ಬಳಸುವಂತೆ ಇಲ್ಲಿಯೂ ದ್ರವ ಸಾರಜನಕ ಬಳಸಿ ಶವವನ್ನು ಕೆಡದಂತೆ ಸಂರಕ್ಷಿಸುವುದೇ ಇದರ ಪ್ರಸ್ತಾವನೆಯಾಗಿತ್ತು. ಅಂದರೆ ದ್ರವ ಸಾರಜನಕದ ಮಂಜುಗಡ್ಡೆಯೊಂದಿಗೆ ಸತ್ತ ದೇಹವನ್ನು ಸಂಗ್ರಹಿಸಲಾಗುತ್ತದೆ. ಸರಳವಾಗಿ ಹೇಳುವುದಾದರೆ ಇದನ್ನು ಶೀತ ನಿರ್ವಾತದಲ್ಲಿ ಸಂಗ್ರಹಿಸಲಾಗುತ್ತದೆ.

ಸಾಮಾನ್ಯವಾಗಿ ಗಗನಯಾತ್ರಿಗಳು ಯಾವಾಗಲೂ ಸ್ಪೇಸ್ ಸೂಟ್ ಮತ್ತು ಸ್ಪೇಸ್ ಹೆಲ್ಮೆಟ್ ಧರಿಸಿರುತ್ತಾರೆ. ಇವುಗಳು ಇಲ್ಲದಿದ್ದರೆ ಅಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳಲಾಗುವುದೇ ಇಲ್ಲ. ಅಂತರಿಕ್ಷದಲ್ಲಿ +1,200 ಸೆಲ್ಸಿಯಸ್‌ಗೂ ಅಧಿಕ ಹಾಗೂ -1,000 ಸೆಲ್ಸಿಯಸ್‌ಗೂ ಕಡಿಮೆ ತಾಪಮಾನ ಇರುತ್ತದೆ. ಹೀಗಾಗಿ ಸೂರ್ಯನ ಕಾಸ್ಮಿಕ್ ಕಿರಣಗಳು ಅಥವಾ ಮಂಜಿನ ವಾತಾವರಣಕ್ಕೆ ಒಗ್ಗಿಕೊಳ್ಳದೇ ಸಾವು ಸಂಭವಿಸಬಹುದು.

ಅಂತರಿಕ್ಷದಲ್ಲಿ ಸಾವು ಏಕೆ ಮತ್ತು ಹೇಗೆ ಸಂಭವಿಸುತ್ತದೆ ಎಂಬುದನ್ನು ತೋರಿಸಲು ಅನೇಕ ಹಾಲಿವುಡ್ ಸಿನೆಮಾಗಳು ಬಂದಿವೆ. ಅವುಗಳಲ್ಲಿ ಸ್ಟೇನ್ಲಿ ಕೂಬ್ರಿಕ್ ನಿರ್ದೇಶನದಲ್ಲಿ 1968ರಲ್ಲಿ ತೆರೆಗೆ ಬಂದ ‘2001: ಎ ಸ್ಪೇಸ್ ಒಡೆಸ್ಸಿ’ ಎನ್ನುವ ಕುತೂಹಲಭರಿತ ಸಿನೆಮಾ ನಮ್ಮ ಪ್ರಸ್ತುತ ಚರ್ಚೆಗೆ ಉತ್ತರವನ್ನು ನೀಡುತ್ತದೆ. ಅದರಲ್ಲಿನ ನಾಯಕ ಡೇವಿಡ್ ಬೌಮನ್ ಅಂತರಿಕ್ಷ ನೌಕೆಯಲ್ಲಿ ಚಲಿಸುವಾಗ ಹೆಲ್ಮೆಟ್ ಹಾಕಿರದ ತನ್ನ ತಲೆಯನ್ನು ಪಾಡ್‌ನಿಂದ ಏರ್‌ಲಾಕ್‌ಗೆ ಹೊರಹಾಕುತ್ತಾನೆ. ಆಗ ಆತನಿಗೆ ಜೀವ ಹೋಗುವ ಅನುಭವವಾಗುತ್ತದೆ. ನೌಕೆ ಅವನ ನಿಯಂತ್ರಣ ಕಳೆದುಕೊಳ್ಳುತ್ತದೆ ಮತ್ತು ಅಪಘಾತ ಅನುಭವಿಸುವ ಹಂತ ತಲುಪುತ್ತದೆ. ತಕ್ಷಣವೇ ಕೇವಲ 30 ಸೆಕೆಂಡುಗಳಲ್ಲಿ ತನ್ನ ತಲೆಯನ್ನು ಒಳಗೆಳೆದುಕೊಂಡು ನಾಕೆಯನ್ನು ನಿಯಂತ್ರಿಸುತ್ತಾನೆ ಮತ್ತು ಅದರಲ್ಲಿನ ಎಲ್ಲರೂ ಬದುಕುಳಿಯಲು ಸಾಧ್ಯವಾಗುತ್ತದೆ. 2000ನೇ ಇಸ್ವಿಯಲ್ಲಿ ತೆರೆಕಂಡ ಬ್ರೇನ್ ಡಿ ಪಾಮಾ ನಿರ್ದೇಶನದ ‘ಮಿಶನ್ ಟು ಮಾರ್ಸ್‌’ ಮೂವಿಯಲ್ಲಿ ಗಗನಯಾತ್ರಿಗಳ ಸೂಟ್ ಒತ್ತಡಕ್ಕೊಳಗಾಗಿ ಹಾನಿಯಾದರೆ ಏನಾಗಬಹುದು ಎಂಬುದನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ತೋರಿಸಲಾಗಿದೆ. 2012ರಲ್ಲಿ ತೆರೆಗೆ ಬಂದ ಲೆನ್ ವೈಸ್‌ಮ್ಯಾನ್ ನಿರ್ದೇಶನದ ‘ಟೋಟಲ್ ರೀಕಾಲ್’ ಎಂಬ ಸಿನೆಮಾದಲ್ಲಿ ಗಗನಯಾತ್ರಿಗಳು ಅಂತರಿಕ್ಷದಲ್ಲಿ ಸತ್ತರೆ ದೇಹ ಸ್ಫೋಟಗೊಳ್ಳುತ್ತದೆ ಎಂಬಂತೆ ತೋರಿಸಲಾಗಿದೆ. ಇದು ತಪ್ಪುಕಲ್ಪನೆಯಾಗಿದೆ. ಹೀಗೆ ಅನೇಕ ದೃಷ್ಟಾಂತಗಳ ಮೂಲಕ ಅಂತರಿಕ್ಷದಲ್ಲಿ ಸಾವು ಸಂಭವಿಸಿದರೆ ಏನಾಗುತ್ತದೆ ಎಂಬುದನ್ನು ಊಹಿಸಬಹುದು. ವಾಸ್ತವವಾಗಿ ಅಂತರಿಕ್ಷದಲ್ಲಿ ಅಂತಹ ಯಾವುದೇ ಸಾವುಗಳು ಸಂಭವಿಸಿಲ್ಲ. ಮೇಲೆ ಉಲ್ಲೇಖಿಸಿದಂತೆ 19 ಗಗನಯಾತ್ರಿಗಳು ಅಂತರಿಕ್ಷದಲ್ಲಿಯೇ ಸಾವಿಗೀಡಾದರು ನಿಜ. ಆದರೆ ಅವರೆಲ್ಲರೂ ಅಂತರಿಕ್ಷ ನೌಕೆಗಳಲ್ಲಿ ಅಪಘಾತಗಳಾಗಿ ಸತ್ತರು. ಬಹುತೇಕ ಎಲ್ಲಾ ದೇಹಗಳು ಅಲ್ಲಿಯೇ ಬೆಂಕಿಗೆ ಆಹುತಿಯಾದವು ಎಂಬುದು ನೋವಿನ ಸಂಗತಿ. ಅದರಲ್ಲಿ 2003ರಲ್ಲಿ ಸಂಭವಿಸಿದ ಕೊಲಂಬಿಯಾ ಅಂತರಿಕ್ಷ ನೌಕಾ ದುರಂತದಲ್ಲಿ ಭಾರತೀಯ ಸಂಜಾತೆ ಕಲ್ಪನಾ ಚಾವ್ಲಾ ಅವರೂ ಒಬ್ಬರು ಎಂಬುದು ಇನ್ನೂ ನೋವಿನ ಸಂಗತಿ. ಇಡೀ ಜಗತ್ತಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವವನ್ನು ಸಾರಲು ಹೊರಟ ಗಗನಯಾತ್ರಿಗಳಿಗೆ ಇಂತಹ ಸಾವು ಬಾರದಿರಲಿ ಎಂಬುದೇ ನಮ್ಮ ಆಶಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)