varthabharthi


ಸಂಪಾದಕೀಯ

ಸರಕಾರದ ಪ್ರಾಯೋಜಕತ್ವದಲ್ಲಿ ಮಹಾ ಕೊರೋನ ಮೇಳ

ವಾರ್ತಾ ಭಾರತಿ : 5 Apr, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಈ ಬಾರಿಯ ಮಹಾ ಕುಂಭಮೇಳ ‘ಮಹಾ ಕೊರೋನ ಮೇಳ’ವಾಗಿ ಪರಿವರ್ತನೆಗೊಳ್ಳುವ ಕುರಿತಂತೆ ದೇಶದ ವೈದ್ಯಕೀಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಸರಕಾರದ ನೇತೃತ್ವದಲ್ಲೇ ನಡೆಯಲಿರುವ ಈ ಮೇಳದಲ್ಲಿ ಸುಮಾರು ಐದು ಕೋಟಿ ಜನರು ಭಾಗವಹಿಸುವ ಸಾಧ್ಯತೆಗಳಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ದೇಶಾದ್ಯಂತ ಕೊರೋನ ಗುಮ್ಮನನ್ನು ತೋರಿಸಿ ಲಾಕ್‌ಡೌನ್ ವಿಧಿಸಿ ಜನಸಾಮಾನ್ಯರ ಬದುಕನ್ನು ನಾಶ ಮಾಡುತ್ತಿರುವ ಹೊತ್ತಿನಲ್ಲೇ, ಕೋಟ್ಯಂತರ ಜನರನ್ನು ಒಟ್ಟು ಸೇರಿಸಿ ನಡೆಸಲಾಗುವ ಕುಂಭಮೇಳಕ್ಕೆ ಅನುಮತಿ ನೀಡಿರುವುದು ವಿಪರ್ಯಾಸವೇ ಸರಿ. ಕೋಟ್ಯಂತರ ಜನರು ಸೇರುವ ಕುಂಭಮೇಳದಲ್ಲಿ ಹರಡದ ಕೊರೋನ, ಜನಸಾಮಾನ್ಯರು ಮದುವೆಗೆ ಸೇರಿದಾಗ, ವಿದ್ಯಾರ್ಥಿಗಳು ಶಾಲೆಗೆ ಹೊರಟಾಗ, ಜನಸಾಮಾನ್ಯರು ದೈನಂದಿನ ಬದುಕನ್ನು ಸಾಗಿಸುವಾಗ ಹರಡುವುದು ಹೇಗೆ ಎನ್ನುವ ಪ್ರಶ್ನೆಯೊಂದು ತಲೆಯೆತ್ತಿದೆ. ತನಗೆ ಅಗತ್ಯವೆನಿಸಿದಾಗ ಸಹಸ್ರಾರು ಜನರನ್ನು ರಸ್ತೆಗಳಲ್ಲಿ, ಸಮಾವೇಶಗಳಲ್ಲಿ ಒಂದೆಡೆ ಸೇರಿಸುವ ಸರಕಾರ, ಜನಸಾಮಾನ್ಯರಿಗೆ ಮಾತ್ರ ‘ಸುರಕ್ಷಿತ ಅಂತರ’ದ ನಿಬಂಧನೆಯನ್ನು ವಿಧಿಸುವುದು, ಕೊರೋನವನ್ನು ಈ ದೇಶ ಅದೆಷ್ಟು ಹಗುರವಾಗಿ ಪರಿಗಣಿಸಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ.

ಈ ದೇಶಕ್ಕೆ ಕೊರೋನ ಕಾಲಿಟ್ಟದ್ದೇ ಸರಕಾರದ ಬೇಜವಾಬ್ದಾರಿಯಿಂದ. ಚೀನಾ, ಇಟಲಿ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನ ತನ್ನ ರುದ್ರ ನರ್ತನ ಮಾಡುತ್ತಿದ್ದಾಗಲೇ ಭಾರತಕ್ಕೆ ಎಚ್ಚೆತ್ತುಕೊಳ್ಳಲು ಅವಕಾಶವಿತ್ತು. ಆದರೆ ಅಹಮದಾಬಾದ್‌ನಲ್ಲಿ ಹಮ್ಮಿಕೊಂಡ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಿಂದಾಗಿ ವಿಮಾನ ನಿಲ್ದಾಣಕ್ಕೆ ನಿರ್ಬಂಧ ವಿಧಿಸಲು ಸರಕಾರ ಹಿಂದೇಟು ಹಾಕಿತು. ಕಾರ್ಯಕ್ರಮದಿಂದ ದೇಶಕ್ಕೆ ಅದೇನು ಪ್ರಯೋಜನವಾಯಿತೆನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ, ಕೊರೋನ ದೇಶಾದ್ಯಂತ ಹರಡುವುದಕ್ಕ್ಕೆ ಅದೂ ಒಂದು ನಿಮಿತ್ತವಾಯಿತು. ಫೆಬ್ರವರಿ ತಿಂಗಳಲ್ಲೇ ವಿಮಾನ ನಿಲ್ದಾಣಗಳಿಗೆ ನಿರ್ಬಂಧ ವಿಧಿಸಿದ್ದಿದ್ದರೆ ದೇಶದಲ್ಲಿಂದು ಲಾಕ್‌ಡೌನ್ ವಿಧಿಸುವ ಅಗತ್ಯವೇ ಇರಲಿಲ್ಲ. ಸರಕಾರ ಇನ್ನೂ ಕೊರೋನ ಕುರಿತಂತೆ ಜಾಗೃತಿಯನ್ನು ವಹಿಸದೇ ಇರುವ ಸಂದರ್ಭದಲ್ಲೇ, ದಿಲ್ಲಿಯಲ್ಲಿ ತಬ್ಲೀಗ್ ಸಮಾವೇಶ ನಡೆಯಿತು. ಸರಕಾರವೇ ಇದಕ್ಕೆ ಅನುಮತಿ ನೀಡಿತ್ತು. ಸರಕಾರದ ಪರವಾನಿಗೆಯಿಂದಲೇ ಅಲ್ಲಿ ಜನರು ಜಮಾಯಿಸಿದ್ದರು. ಅವರೆಲ್ಲ ಅಲ್ಲಿ ಸೇರುವವರೆಗೆ ಸುಮ್ಮನಿದ್ದ ಸರಕಾರ, ಬಳಿಕ ಏಕಾಏಕಿ ಎಚ್ಚೆತ್ತು ಲಾಕ್‌ಡೌನ್ ವಿಧಿಸಿತು ಮತ್ತು ಕೊರೋನವನ್ನು ತಬ್ಲೀಗ್ ಜಮಾತಿನ ತಲೆಗೆ ಕಟ್ಟಿ, ಅಪಪ್ರಚಾರ ನಡೆಸಿತು. ಆ ಮೂಲಕ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಪ್ರಯತ್ನಿಸಿತು.

ಅದಾದ ಬಳಿಕವೂ ದೇಶಾದ್ಯಂತ ಬೇರೆ ಬೇರೆ ಧಾರ್ಮಿಕ ಸಮಾವೇಶಗಳು ನಡೆದವು. ಸರಕಾರದ ಬೇಜವಾಬ್ದಾರಿಗೆ ಇಡೀ ದೇಶ ಹಲವು ತಿಂಗಳು ಲಾಕ್‌ಡೌನ್ ಅನುಭವಿಸಬೇಕಾಯಿತು. ನೂರಾರು ಜನರು ಹಸಿವಿನಿಂದ ಸತ್ತರು. ವಲಸೆ ಕಾರ್ಮಿಕರು ತಮ್ಮ ಊರು ಸೇರಲಾರದೆ ಅರ್ಧ ದಾರಿಯಲ್ಲೇ ಅಸ್ವಸ್ಥಗೊಂಡು ಪ್ರಾಣ ಕಳೆದುಕೊಂಡರು. ವ್ಯಾಪಾರ, ಉದ್ದಿಮೆ ನೆಲಕಚ್ಚಿದವು. ಇಂದು ದೇಶ ಆರ್ಥಿಕವಾಗಿ ಸರ್ವನಾಶವಾಗಿ ಕೂತಿದೆ. ಕೊರೋನದಿಂದ ಈ ದೇಶಕ್ಕೆ ಆದ ಹಾನಿಗಿಂತ, ಸರಕಾರದ ಬೇಜವಾಬ್ದಾರಿಯುತ ಲಾಕ್‌ಡೌನ್‌ನಿಂದಾಗಿ ಆದ ಹಾನಿಯೇ ದೊಡ್ಡದು. ಆದರೆ ತನ್ನ ತಪ್ಪಿನಿಂದ ಸರಕಾರ ಪಾಠ ಕಲಿತಂತೆ ಕಾಣುವುದಿಲ್ಲ. ಇಲ್ಲವಾದರೆ, ಒಂದೆಡೆ ದೇಶಾದ್ಯಂತ ಕೊರೋನ ಎರಡನೇ ಅಲೆ ಎದ್ದಿದೆ ಎಂದು ಜನರನ್ನು ಭಯ ಬೀಳಿಸಿ ಅಲ್ಲಲ್ಲಿ ಲಾಕ್‌ಡೌನ್‌ಗಳನ್ನು ಹೇರುತ್ತಿರುವ ಸರಕಾರ ಮಗದೊಂದೆಡೆ ಕೋಟ್ಯಂತರ ಜನರು ಸೇರುವ ಕುಂಭ ಮೇಳಕ್ಕೆ ಅನುಮತಿ ನೀಡುತ್ತಿರಲಿಲ್ಲ. ಮಹಾಕುಂಭ ಮೇಳ ಆರಂಭದ ದಿನವಾದ ಗುರುವಾರ ಉತ್ತರಾಖಂಡದಲ್ಲಿ 500ಕ್ಕೂ ಅಧಿಕ ಕೊರೋನ ಪ್ರಕರಣಗಳು ವರದಿಯಾಗಿವೆ. ಜೊತೆಗೆ ಮಹಾಕುಂಭಮೇಳಕ್ಕೆ ಆಗಮಿಸುತ್ತಿರುವ ಬಹುತೇಕ ಯಾತ್ರಿಕರಲ್ಲಿ ಸೋಂಕು ಕಂಡು ಬಂದಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಕೋಟ್ಯಂತರ ಮಂದಿ ಸೇರುವ ಮೇಳವೊಂದರಲ್ಲಿ ಯಾರಿಗೆ ಪಾಸಿಟಿವ್? ಯಾರಿಗೆ ನೆಗೆಟಿವ್? ಎಂದು ಗುರುತಿಸುವುದು ಸುಲಭವಲ್ಲ. ಜೊತೆಗೆ ಈ ಮೇಳಕ್ಕೆ ದೇಶದ ಮೂಲೆ ಮೂಲೆಯಿಂದ ಜನರು ಆಗಮಿಸುವುದರಿಂದ, ಮರಳುವಾಗ ಅವರು ದೇಶದ ಮೂಲೆ ಮೂಲೆಗೂ ಸೋಂಕನ್ನು ಹೊತ್ತೊಯ್ಯಲಿದ್ದಾರೆ.

ವಿಪರ್ಯಾಸವೆಂದರೆ ಪಶ್ಚಿಮ ಬಂಗಾಳವೂ ಸೇರಿದಂತೆ ಹಲವೆಡೆ ನಡೆಯುತ್ತಿರುವ ಚುನಾವಣಾ ಪ್ರಚಾರಗಳಲ್ಲಿ ಲಕ್ಷಾಂತರ ಜನರು ಸೇರುತ್ತಿದ್ದಾರೆ. ಆದರೆ ಇಲ್ಲಿ ಕೊರೋನದ ಕುರಿತಂತೆ ಯಾವುದೇ ರಾಜಕಾರಣಿಗಳು ಆತಂಕ ವ್ಯಕ್ತಪಡಿಸುತ್ತಿಲ್ಲ. ಈ ಸಂದರ್ಭದಲ್ಲಿ ಕೊರೋನ ಹರಡುವುದಿಲ್ಲ ಎಂದು ರಾಜಕಾರಣಿಗಳಿಗೆ ಭರವಸೆ ನೀಡಿದವರು ಯಾರು? ಕೇರಳ, ಪಶ್ಚಿಮಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೋನ ಮತ್ತೆ ವಿಜೃಂಭಿಸುತ್ತಿದೆ ಎಂದು ಎಚ್ಚರಿಕೆ ನೀಡುತ್ತಿರುವ ಪ್ರಧಾನಿಯವರೇ ಈ ಚುನಾವಣಾ ಪ್ರಚಾರಗಳ ನೇತೃತ್ವ ವಹಿಸಿರುವುದು ವಿಶೇಷವಾಗಿದೆ. ಚುನಾವಣಾ ಸಮಾವೇಶಗಳನ್ನು ಹಮ್ಮಿಕೊಳ್ಳಲಿ. ಹಾಗೆಯೇ ಬೃಹತ್ ಕುಂಭಮೇಳವೂ ಯಶಸ್ವಿಯಾಗಿ ನಡೆಯಲಿ. ಯಾರೂ ಬೇಡವೆನ್ನುವುದಿಲ್ಲ. ಆದರೆ ಇದೇ ಸಂದರ್ಭದಲ್ಲಿ ದೇಶಾದ್ಯಂತ ಜನಸಾಮಾನ್ಯರು ದೈನಂದಿನ ತುತ್ತನ್ನು ಅರಸಲು ಹೊರಡುವಾಗ ಲಾಕ್‌ಡೌನ್ ಹೇರುವುದನ್ನು ಸರಕಾರ ನಿಲ್ಲಿಸಲಿ. ಸಿನೆಮಾ ಥಿಯೇಟರ್, ಮಾಲ್ ಮೊದಲಾದ ಎಲ್ಲ ಕಡೆಗಳಲ್ಲಿರುವ ನಿರ್ಬಂಧಗಳನ್ನು ಹಿಂದೆಗೆಯಲಿ. ಹಾಗೆಯೇ ಶಾಲಾ-ಕಾಲೇಜುಗಳನ್ನು ವಿದ್ಯಾರ್ಥಿಗಳಿಗಾಗಿ ತೆರೆದುಕೊಳ್ಳಲಿ. ಕುಂಭಮೇಳ, ರಾಜಕೀಯ ಸಮಾವೇಶಗಳಿಗಿಂತಲೂ ಮುಖ್ಯವಾದದ್ದು ಈ ದೇಶದ ವಿದ್ಯಾರ್ಥಿಗಳ ಶಿಕ್ಷಣವಲ್ಲವೇ?

ಲಾಕ್‌ಡೌನ್ ಹೆಸರಿನಲ್ಲಿ ಸರಕಾರ ಸ್ಪಷ್ಟವಾಗಿ ಜನರನ್ನು ಯಾಮಾರಿಸುತ್ತಿದೆ. ಲಾಕ್‌ಡೌನ್‌ನಿಂದಾಗಿ ಕೊರೋನವನ್ನು ತಡೆಯಬಹುದು ಎಂದು ಅದು ನಿಜಕ್ಕೂ ನಂಬಿದ್ದರೆ, ತನ್ನ ಪ್ರಾಯೋಜಕತ್ವದಲ್ಲೇ ಯಾಕೆ ಜನರನ್ನು ಸೇರಿಸಲು ಮುಂದಾಗುತ್ತಿದೆ? ಈಗಾಗಲೇ ಮಹಾರಾಷ್ಟ್ರವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಸರಕಾರಗಳು ಲಘು ಲಾಕ್‌ಡೌನ್‌ಗಳನ್ನು ಹೇರಿವೆ. ತನಗೆ ಅಗತ್ಯವಿದ್ದಾಗ ಸುರಕ್ಷಿತ ಅಂತರಗಳನ್ನು ತಾನೇ ಮುರಿಯುತ್ತಾ, ತನಗೆ ಅಗತ್ಯವಿಲ್ಲದೇ ಇದ್ದಾಗ ಅಮಾಯಕ ಜನರ ಮೇಲೆ ಲಾಕ್‌ಡೌನ್‌ಗಳನ್ನು ಹೇರುವ ಸರಕಾರವೇ ಭಾರತದ ಇಂದಿನ ದುಸ್ಥಿತಿಗೆ ನೇರ ಕಾರಣ. ಈಗ ಸರಕಾರದ ಮುಂದೆ ಎರಡೇ ಆಯ್ಕೆಗಳಿವೆ. ಒಂದೋ, ಕುಂಭಮೇಳ ಸೇರಿದಂತೆ ಎಲ್ಲ ಬೃಹತ್ ಸಮಾವೇಶಗಳಿಗೆ ಅನುಮತಿಯನ್ನು ನಿರಾಕರಿಸಬೇಕು ಅಥವಾ ದೇಶದಲ್ಲಿ ವಿಧಿಸಲಾಗಿರುವ ಎಲ್ಲ ಲಾಕ್‌ಡೌನ್ ಮತ್ತು ನಿರ್ಬಂಧಗಳನ್ನು ಹಿಂದೆಗೆದು ಜನಸಾಮಾನ್ಯರು ತಮ್ಮ ದೈನಂದಿನ ಬದುಕನ್ನು ನೆಮ್ಮದಿಯಿಂದ ಸಾಗಿಸುವುದಕ್ಕೆ ಅನುಕೂಲ ಮಾಡಿಕೊಡಬೇಕು. ಲಾಕ್‌ಡೌನ್ ವಿಷಯದಲ್ಲಿ ಸರಕಾರ ದ್ವಂದ್ವ ನೀತಿಯನ್ನು ಅನುಸರಿಸುತ್ತಾ ಹೋದರೆ, ಮುಂದೊಂದು ದಿನ ಜನರೇ ಲಾಕ್‌ಡೌನ್ ವಿರುದ್ಧ ದಂಗೆಯೇಳುವ ಸ್ಥಿತಿ ನಿರ್ಮಾಣವಾಗಬಹುದು. ಅದಕ್ಕೂ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)