varthabharthi


ಬೆಂಗಳೂರು

ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೋವಿಡ್ ಸೋಂಕು ದೃಢ: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ವಾರ್ತಾ ಭಾರತಿ : 5 Apr, 2021

ಬೆಂಗಳೂರು, ಎ. 5: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಕೊವೀಡ್-19 ಸೋಂಕು ದೃಢಪಟ್ಟಿದ್ದು, ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ರವೀಂದ್ರ ಆಂಟಿನ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ಗೋಕಾಕ್‍ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಣ್ಣ ಪ್ರಮಾಣದ ಆರೋಗ್ಯ ಸಮಸ್ಯೆಗಳಿದ್ದ ಕಾರಣ ಮಾ.31ಕ್ಕೆ ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ಅವರಿಗೆ ಆಂಟಿಜನ್ ಪರೀಕ್ಷೆ ಮಾಡಿದಾಗ ಅವರಿಗೆ ಸೋಂಕು ಇರುವುದು ದೃಢಪಟ್ಟಿತ್ತು.

ಪ್ರಾಥಮಿಕ ಚಿಕಿತ್ಸೆ ನೀಡಿ ಹೋಮ್ ಕ್ವಾರಂಟೈನಲ್ಲಿರಲು ಕಳುಹಿಸಲಾಗಿತ್ತು. ಆದರೆ, ಅವರಿಗೆ ಉಸಿರಾಟದ ಸಮಸ್ಯೆ ಇದ್ದುದರಿಂದ ನಿನ್ನೆ ರಾತ್ರಿ 10.30ರ ಸುಮಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಮೇಶ್ ಅವರಿಗೆ ರಕ್ತದೊತ್ತಡ ಮತ್ತು ಮಧುಮೇಹದ ಅಂಶ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತೀವ್ರ ನಿಗಾಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದರು.

ರಮೇಶ್ ಜಾರಕಿಹೊಳಿ ಅವರು ಮಹಾರಾಷ್ಟ್ರ ಹಾಗೂ ಬೆಂಗಳೂರಿನಲ್ಲಿ ಪ್ರವಾಸ ಮಾಡಿದ್ದಾಗಿ ಹೇಳಿಕೊಂಡಿದ್ದರು. ಅಲ್ಲೆಲ್ಲ ಕೊರೋನ ಸೋಂಕು ಹೆಚ್ಚಾಗಿರುವುದರಿಂದ ಮುನ್ನಚ್ಚರಿಕೆ ಕ್ರಮವಾಗಿ ಅವರಿಗೆ ಪರೀಕ್ಷೆ ನಡೆಸಿದ್ದು, ಕೋವಿಡ್ ದೃಢಪಟ್ಟಿದೆ. ಅವರನ್ನು ಇನ್ನೂ ಮೂರ್ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ. ಆ ಬಳಿಕ ಪರಿಸ್ಥಿತಿಯನ್ನು ನೋಡಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)