varthabharthi


ಸಂಪಾದಕೀಯ

ಇಂದಿರಾ ಕ್ಯಾಂಟೀನ್ ಕತ್ತು ಹಿಸುಕಬೇಡಿ

ವಾರ್ತಾ ಭಾರತಿ : 6 Apr, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ದುಡಿದುಂಡು ಜೀವಿಸುವ ಕಡು ಬಡವರ ಹಸಿವು ಇಂಗಿಸುವ ಮಾನವೀಯ ಸದುದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ಯೋಜನೆ ಈಗ ಅನುದಾನದ ಕೊರತೆಯಿಂದ ಕೊನೆಯುಸಿರೆಳೆಯುವ ಸ್ಥಿತಿಗೆ ತಲುಪಿದೆ. ಕಳೆದ ಮೂರು ವರ್ಷಗಳಿಂದ ಮುಂಗಡ ಪತ್ರದಲ್ಲಿ ಈ ಯೋಜನೆಗೆ ಅನುದಾನ ಒದಗಿಸಿಲ್ಲ ಎಂಬುದು ಅತ್ಯಂತ ಆತಂಕದ ಸಂಗತಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ಬಡವರ ಹೆಸರು ಹೇಳಿಕೊಂಡು, ಅವರಿಂದ ಮತ ಪಡೆದು ಅಧಿಕಾರಕ್ಕೆ ಬರುವ ಪಕ್ಷಗಳು ಗೆದ್ದ ನಂತರ ತಮಗೆ ಮತ ನೀಡಿ ಗೆಲ್ಲಿಸಿದವರಿಗೆ ದ್ರೋಹ ಮಾಡಿ ಸಾಹುಕಾರರ ತಿಜೋರಿ ತುಂಬುವ ಕೈಂಕರ್ಯಕ್ಕೆ ಲಜ್ಜೆಗೆಟ್ಟು ನಿಲ್ಲುತ್ತವೆ. ಅದರಲ್ಲೂ ಸಾಮಾಜಿಕ ನ್ಯಾಯದ, ಅಸಮಾನತೆ ನಿವಾರಣೆಯ ಯಾವ ಕಾರ್ಯಸೂಚಿಯನ್ನ್ನೂ ಹೊಂದಿಲ್ಲದೆ, ದೇವರು ಮತ್ತು ಧರ್ಮವನ್ನು ಬಂಡವಾಳ ಮಾಡಿಕೊಂಡಿರುವ ಪಕ್ಷಗಳ ಕೈಗೆ ಅಧಿಕಾರ ಸೂತ್ರ ಸಿಕ್ಕರೆ ಸಾಕು ಬಡವರ ಬದುಕು ನರಕವಾಗುತ್ತದೆ.

ಸಿದ್ದರಾಮಯ್ಯನವರ ಸರಕಾರವಿದ್ದಾಗ ಊಟವಿಲ್ಲದೆ ಯಾರೂ ಹಸಿವೆಯಿಂದ ನರಳಬಾರದೆಂದು ರಾಜ್ಯದ ಪ್ರಮುಖ ನಗರಗಳಲ್ಲಿ ಮಾತ್ರವಲ್ಲ ತಾಲೂಕು ಕೇಂದ್ರಗಳಲ್ಲಿ, ಸರಕಾರಿ ಆಸ್ಪತ್ರೆಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಯಿತು. ಹಳ್ಳಿಗಳಿಂದ ನಗರಗಳಿಗೆ, ಸರಕಾರಿ ಕಚೇರಿಗಳಿಗೆ, ಆಸ್ಪತ್ರೆಗಳಿಗೆ ಬರುತ್ತಿದ್ದ ಬಡವರ ಪಾಲಿಗೆ ಈ ಇಂದಿರಾ ಕ್ಯಾಂಟೀನ್‌ಗಳು ಸಂಜೀವಿನಿಯಾಗಿದ್ದವು. ಹಳ್ಳಿಯ ಬಡವರು ಮಾತ್ರವಲ್ಲ ನಗರಗಳಲ್ಲಿನ ಆಟೊ ಚಾಲಕರು, ಬಡ ವಿದ್ಯಾರ್ಥಿಗಳು, ಕಟ್ಟಡ ಕಾರ್ಮಿಕರು, ಹಮಾಲರು ಹೀಗೆ ಅಸಂಘಟಿತ ವಲಯದ ಲಕ್ಷಾಂತರ ಜನರ ಹಸಿವನ್ನು ಈ ಇಂದಿರಾ ಕ್ಯಾಂಟೀನ್‌ಗಳು ನೀಗಿಸುತ್ತಿದ್ದವು. ಬಡವರೇನೂ ಪುಗಸಟ್ಟೆ ಊಟ ಮಾಡುತ್ತಿರಲಿಲ್ಲ. ಉಳಿದ ಹೊಟೇಲ್‌ಗಳಿಗಿಂತ ಕಡಿಮೆ ಬೆಲೆಯಲ್ಲಿ ಸಿಗುವ ಊಟ, ತಿಂಡಿ ತಿಂದು ಹಸಿವನ್ನು ಇಂಗಿಸಿಕೊಳ್ಳುತ್ತಿದ್ದರು. ಆಗಲೂ ಇವುಗಳು ಉಳ್ಳವರ ಹೊಟ್ಟೆಯುರಿಗೆ ಕಾರಣವಾಗಿದ್ದವು. ಸಿದ್ದರಾಮಯ್ಯ ಬಡವರನ್ನು ಸೋಮಾರಿಗಳನ್ನಾಗಿ ಮಾಡುತ್ತಿದ್ದಾರೆಂದು ಕುಹಕದ ಮಾತುಗಳನ್ನಾಡುತ್ತಿದ್ದರು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಅದರ ನಿರಂಕುಶ ಸರ್ವಾಧಿಕಾರಿ ಯಂತಿರುವ ಪ್ರಧಾನಮಂತ್ರಿ ಮತ್ತು ಅವರ ಸರಕಾರದ ಕಣ್ಣಿಗೆ ಬಡವರು ಕಾಣುವುದೇ ಇಲ್ಲ. ಆಧಾರ್ ಕಾರ್ಡ್ ದಾಖಲಿಸಿಲ್ಲವೆಂದು ಕಡು ಬಡವರ ಮೂರು ಕೋಟಿ ಪಡಿತರ ಚೀಟಿಗಳನ್ನೇ ರದ್ದು ಮಾಡಲು ಹೊರಟ ಈ ಸರಕಾರದ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಇತ್ತೀಚೆಗೆ ಅಸಮಾಧಾನವನ್ನು ವ್ಯಕ್ತಪಡಿಸಿತ್ತು. ಗೋದಾಮುಗಳಲ್ಲಿ ಲಕ್ಷಾಂತರ ಟನ್ ಆಹಾರ ಧಾನ್ಯ ಕೊಳೆಯುತ್ತಾ ಇಲಿ, ಹೆಗ್ಗಣಗಳ ಪಾಲಾಗುತ್ತಿರುವಾಗ ಬಡವರ ರೇಷನ್ ಕಾರ್ಡ್ ರದ್ದು ಮಾಡಲು ಹೊರಟಿರುವ ಇದೇ ಸರಕಾರ ಕಾರ್ಪೊರೇಟ್ ಬಂಡವಾಳಶಾಹಿಗಳ ಲಕ್ಷಾಂತರ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದೆ. ಇನ್ನೊಂದೆಡೆ ದೇಶದ ಎಪ್ಪತ್ತು ವರ್ಷಗಳ ಗಳಿಕೆಯ ಸಾರ್ವಜನಿಕ ಸಂಪತ್ತನ್ನು, ಉದ್ಯಮಗಳನ್ನು ಅಗ್ಗದ ಬೆಲೆಗೆ ಅದಾನಿ, ಅಂಬಾನಿಯಂತಹ ಕಾರ್ಪೊರೇಟ್ ಬಂಡವಾಳಿಗರ ಮಡಿಲಿಗೆ ಹಾಕಲು ಹೊರಟಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಮಗದೊಂದೆಡೆ ಇಂಧನ ಬೆಲೆ ಏರಿಕೆ, ನಿರುದ್ಯೋಗದಿಂದ ದುಡಿಯುವ ಬಡಜನರ ಬದುಕು ಅಸಹನೀಯವಾಗಿದೆ. ಕೇಂದ್ರ ಸರಕಾರ ಹೀಗೆ ಮಾಡಿದರೆ ರಾಜ್ಯದ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ಬಡವರ ಹಸಿವು ಇಂಗಿಸುತ್ತಿದ್ದ ಇಂದಿರಾ ಕ್ಯಾಂಟೀನ್‌ಗಳನ್ನು ಅನುದಾನದ ಕೊರತೆಯಿಂದ ಮುಚ್ಚಲು ಹೊರಟಿದೆ.

ಸರಕಾರ ಅನುದಾನದ ಕೊರತೆಯ ನೆಪ ಮುಂದೆ ಮಾಡಿ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚಲು ಹೊರಟಿರುವುದು ಸರಿಯಲ್ಲ. ಈ ಸರಕಾರದ ಬಳಿ ಮಠ, ಮಂದಿರಗಳಿಗೆ ನೀಡಲು ಕೋಟ್ಯಂತರ ರೂಪಾಯಿ ಹಣವಿದೆ. ಆದರೆ ಬಡವರು ಊಟ ಮಾಡುವ ಕ್ಯಾಂಟೀನ್‌ಗೆ ನೀಡಲು ಹಣವಿಲ್ಲ ಅಂದರೆ ಜನರು ನಗುತ್ತಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿದ್ದ ಅನುದಾನದ ಮೊತ್ತವನ್ನು ಕೋವಿಡ್ ಕಾರಣದಿಂದಾಗಿ ಕಡಿತಗೊಳಿಸಿದ್ದ ಸರಕಾರ ಅಭಿವೃದ್ಧಿ ಕಾಮಗಾರಿಗಳಿಗೂ ತಡೆ ಹಾಕಿತ್ತು. ಇದೇ ನೆಪ ಮುಂದೆ ಮಾಡಿ ಇಂದಿರಾ ಕ್ಯಾಂಟೀನ್‌ಗಳಿಗೆ ಬೀಗ ಜಡಿಯಲು ಹೊರಟಿದೆ. ಆದರೆ ಆರ್ಥಿಕ ವರ್ಷದ ಕೊನೆಯಲ್ಲಿ ವಿವಿಧ ಮಠ, ಮಂದಿರಗಳಿಗೆ ಹಾಗೂ ಜಾತಿವಾರು ಸಂಘ ಸಂಸ್ಥೆಗಳಿಗೆ ಒಂದೇ ಕಂತಿನಲ್ಲಿ 80.25 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದೆ. ಬಿಜೆಪಿಯಲ್ಲಿ ಇದ್ದರೂ ರೈತ ಹೋರಾಟದ ಹಿನ್ನೆಲೆಯಿಂದ ಬಂದ, ಕಳೆದ ಐವತ್ತು ವರ್ಷಗಳಿಂದ ರಾಜಕೀಯದಲ್ಲಿ ಇರುವ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಇಂತಹ ಪ್ರಮಾದ ನಡೆಯಬಾರದಿತ್ತು.

ಯಡಿಯೂರಪ್ಪಸರಕಾರಕ್ಕೆ ಇಂದಿರಾ ಕ್ಯಾಂಟೀನ್ ಎಂಬ ಹೆಸರಿನ ಬಗ್ಗೆ ಅಸಮಾಧಾನವಿದೆಯೇ? ಇಂದಿರಾ ಗಾಂಧಿ ಅವರೂ ಈ ದೇಶದ ಪ್ರಧಾನಿಯಾಗಿದ್ದವರು. ಬಾಂಗ್ಲಾದೇಶ ಯುದ್ಧದ ಸಂದರ್ಭದಲ್ಲಿ ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರಿಂದ ದುರ್ಗೆ ಎಂದು ಶ್ಲಾಘನೆಗೆ ಒಳಗಾದವರು. ಅವರ ಹೆಸರಿಗೆ ಪಕ್ಷ ರಾಜಕೀಯ ಅಡ್ಡಿಯಾಗಬಾರದು. ಇಂದಿರಾ ಅವರಂತೆ ಅಟಲ್‌ಜಿ ಹೆಸರಿನಲ್ಲಿ ಅನೇಕ ಯೋಜನೆಗಳಿವೆ. ಕಾಂಗ್ರೆಸ್ ಸರಕಾರ ಅವುಗಳನ್ನೇನೂ ಬದಲಿಸಿಲ್ಲ. ಇಂದಿರಾ ಹೆಸರು ತೆಗೆಯಬೇಕೆಂದು ಪಕ್ಷ ಮತ್ತು ಪರಿವಾರದಲ್ಲಿ ಒತ್ತಡವಿದ್ದರೆ ಬಸವಣ್ಣ, ಕುವೆಂಪು ಹೆಸರಿನಲ್ಲಾದರೂ ಈ ಯೋಜನೆ ಮುಂದುವರಿಸಲಿ. ಒಟ್ಟಾರೆ ಬಡವರ ಹಸಿವು ಇಂಗುವಂತಾಗಲಿ.

ಅದೇ ರೀತಿ ಈಗ ಯಾವ್ಯಾವ ಶಾಲೆಗಳಲ್ಲಿ ತರಗತಿಗಳು ನಡೆಯುತ್ತಿವೆಯೋ ಅಲ್ಲಿ ಮಧ್ಯಾಹ್ನದ ಬಿಸಿಯೂಟದ ಏರ್ಪಾಡು ಮಾಡಲಿ. ರಾಜ್ಯದ ಸಾವಿರಾರು ಅತಿಥಿ ಉಪನ್ಯಾಸಕರಿಗೆ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಸರಿಯಾಗಿ ಸಂಬಳ ಪಾವತಿಯಾಗುತ್ತಿಲ್ಲ. ಮಠ, ಮಂದಿರ ಮತ್ತು ಜಾತಿ ಸಂಘಟನೆಗಳಿಗೆ ಮಂಜೂರು ಮಾಡಲಾದ ಅನುದಾನವನ್ನು ರದ್ದು ಪಡಿಸಿ ಬಾಕಿ ಉಳಿದ ಸಂಬಳ ಪಾವತಿ ಮಾಡಲಿ. ಇಂದಿರಾ ಕ್ಯಾಂಟೀನ್‌ಗಳಿಗೆ ಜೀವ ನೀಡಲಿ. ರೈತನ ಮಗ ಎಂದು ಹೇಳಿಕೊಳ್ಳುವ ಯಡಿಯೂರಪ್ಪನವರು ಬಡವರ ಶಾಪಕ್ಕೆ ಗುರಿಯಾಗದಿರಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)