varthabharthi


ಆರೋಗ್ಯ

ಇಂದು ವಿಶ್ವ ಆರೋಗ್ಯ ದಿನ

ಸರ್ವರಿಗೂ ಸಿಗಲಿ ಆರೋಗ್ಯ ಭಾಗ್ಯ

ವಾರ್ತಾ ಭಾರತಿ : 7 Apr, 2021
ಡಾ. ಮುರಲೀ ಮೋಹನ್ ಚೂಂತಾರು

ಜಾಗತಿಕವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ ಎಪ್ರಿಲ್ 7ನ್ನು ‘ವಿಶ್ವ ಆರೋಗ್ಯ ದಿನ’ ಎಂದು ಆಚರಿಸುತ್ತದೆ. 1950ರಿಂದ ಇದು ಆರಂಭಗೊಂಡು ಪ್ರತಿ ವರ್ಷ ಯಾವುದಾದರೊಂದು ವಿಶೇಷ ಧ್ಯೇಯವಾಕ್ಯ ಇಟ್ಟುಕೊಂಡು ಆಚರಿಸಲಾಗುತ್ತದೆ. ಜಾಗತಿಕ ಜನಸಂಖ್ಯೆಯಲ್ಲಿನ 100 ಮಿಲಿಯನ್ ಮಂದಿ ಬಡತನ ರೇಖೆಗಿಂತಲೂ ಕೆಳಗಿನವರಾಗಿದ್ದು, ಅಧಿಕ ವೈದ್ಯಕೀಯ ವೆಚ್ಚದ ಕಾರಣದಿಂದಾಗಿ ಬಡತನ ರೇಖೆಯ ಕೆಳಗೆಯೇ ಉಳಿಯುವಂತಾಗಿದೆ. ಹೆಚ್ಚಿನವರು ದುಡಿದ ಹಣವನ್ನೆಲ್ಲಾ ಆರೋಗ್ಯ ಸಂಬಂಧಿ ವೈದ್ಯಕೀಯ ವೆಚ್ಚಕ್ಕಾಗಿ ವ್ಯಯಿಸುವುದರಿಂದ ದಿನವೊಂದರಲ್ಲಿ ಕನಿಷ್ಠ 2 ಡಾಲರ್‌ನಲ್ಲಿ ಬದುಕಬೇಕಾದ ಅನಿವಾರ್ಯತೆ ಹೊಂದಿದ್ದಾರೆ. ಇನ್ನು ಜಾಗತಿಕ ಜನಸಂಖ್ಯೆಯ 800 ಮಿಲಿಯನ್ ಮಂದಿ ತಮ್ಮ ಸಂಪಾದನೆಯ 10 ಶೇಕಡಾದಷ್ಟು ಆರೋಗ್ಯಕ್ಕಾಗಿ ವ್ಯಯಿಸುತ್ತಾರೆ ಎಂದು ವಿಶ್ವಸಂಸ್ಥೆಯು ಹೇಳುತ್ತಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಅಮೆರಿಕ, ಯುರೋಪ್, ಏಶ್ಯಖಂಡದ ಕೆಲವೊಂದು ದೇಶಗಳು ಈ ರೀತಿಯ ವೆಚ್ಚವನ್ನು ಸರಿದೂಗಿಸುವ ಸಾಮರ್ಥ್ಯ ಹೊಂದಿವೆ. ಆದರೆ ಬಡರಾಷ್ಟ್ರಗಳಾದ ಆಫ್ರಿಕ, ಲಿಬಿಯಾ ಮತ್ತು ಏಶ್ಯಖಂಡದ ಕೆಲವು ರಾಷ್ಟ್ರಗಳು ಆರೋಗ್ಯಕ್ಕಾಗಿ ಹೆಚ್ಚಿನ ಹಣ ವ್ಯಯಿಸಲಾಗದಿರುವುದು ಆರೋಗ್ಯ ಕ್ಷೇತ್ರದ ದುರಂತವೆಂದರೂ ತಪ್ಪಲ್ಲ.

ಎಲ್ಲರಿಗೂ ಉತ್ತಮವಾದ ಆರೋಗ್ಯಕರ ಜಗತ್ತನ್ನು ನಿರ್ಮಿಸುವುದು ಎಂದರೆ ಎಲ್ಲರಿಗೂ ಉಚಿತ ಆರೋಗ್ಯ ಸೌಲಭ್ಯ ಕೊಡಲು ಸಾಧ್ಯವಾಗಲಾರದು. ಯಾಕೆಂದರೆ ಜಗತ್ತಿನ ಯಾವ ರಾಷ್ಟ್ರವೂ ಎಲ್ಲರಿಗೂ ಏಕಕಾಲದಲ್ಲಿ ಎಲ್ಲಾ ಸಮಯದಲ್ಲಿ ಉಚಿತ ಆರೋಗ್ಯ ಸೌಲಭ್ಯ ಕೊಡಲು ಶಕ್ತವಾಗಿಲ್ಲ. ಎಲ್ಲರಿಗೂ ಆರೋಗ್ಯ ಎಂಬುದು ಕೇವಲ ವ್ಯಕ್ತಿ ಆಧಾರಿತ ಸೇವೆ ಆಗಿರದೆ, ಜಗತ್ತಿನ ಎಲ್ಲ ಸಮುದಾಯಕ್ಕೆ ಮೂಲಭೂತ ವೈದ್ಯಕೀಯ ಸೌಲಭ್ಯ ನೀಡುವುದೇ ಆಗಿರುತ್ತದೆ. ಉದಾಹರಣೆಗೆ ನೀರಿಗೆ ಪ್ಲೋರೈಡ್ ಮಿಶ್ರಣ ಅಥವಾ ಸೊಳ್ಳೆ ಉತ್ಪಾದನೆಗೆ ಪ್ರೋತ್ಸಾಹಿಸುವ ವಾತಾವರಣವನ್ನು ನಿಯಂತ್ರಿಸುವುದು ಅಥವಾ ವೈರಾಣು ಉತ್ಪತ್ತಿಯಾಗದಂತೆ ತಡೆಯುವುದಾಗಿದೆ.

ಮೂಲಭೂತ ಸೌಲಭ್ಯಗಳಾದ ಶುದ್ಧ ನೀರು, ಗಾಳಿ, ಬೆಳಕು ನೀಡಿ ರೋಗವನ್ನು ತಡೆಗಟ್ಟುವ ಪ್ರಕ್ರಿಯೆ ಹೆಚ್ಚು ಒತ್ತು ನೀಡುವ ಸದುದ್ದೇಶವನ್ನು ವಿಶ್ವ ಆರೋಗ್ಯ ಸಂಸ್ಥೆ ಹೊಂದಿದೆ. ಇದರ ಜೊತೆಗೆ ಉನ್ನತ ವೈದ್ಯಕೀಯ ಸೌಲಭ್ಯಗಳು, ಸಲಕರಣೆಗಳು ಮತ್ತು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಕೂಡ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಗುರುತರ ಉದ್ದೇಶದ ಜೊತೆಗೆ ಸೂಕ್ತ ಕಾನೂನು ಮತ್ತು ಸರಕಾರದ ಕಾಯ್ದೆಗಳ ಮುಖಾಂತರ ಎಲ್ಲರಿಗೂ ಸಕಾಲದಲ್ಲಿ ಸಕಲ ವೈದ್ಯಕೀಯ ಸೌಲಭ್ಯ ತಲುಪಿಸುವ ಮಹದಾಸೆಯನ್ನೂ ಹೊಂದಿದೆ. ವೈದ್ಯಕೀಯ ನೆರವು ಎನ್ನುವುದು ಬರೀ ಆಸ್ಪತ್ರೆ ಕಟ್ಟಿಸಿ ಉಚಿತ ಔಷಧಿ ನೀಡುವುದಲ್ಲ. ಜನರಿಗೆ ಪ್ರಾಥಮಿಕ ಅವಶ್ಯಕತೆಗಳನ್ನು ನೀಡಿ ರೋಗ ಬರದಂತೆ ಮತ್ತು ರೋಗ ಉಲ್ಬಣಿಸದಂತೆ ಪೂರಕವಾದ ವಾತಾವರಣ ಸೃಷ್ಟಿಸಬೇಕು. ಮೆಡಿಕಲ್ ಕಾಲೇಜ್‌ನ್ನು ನಿರ್ಮಿಸಿ ವೈದ್ಯರ ಸಂಖ್ಯೆ ಜಾಸ್ತಿ ಮಾಡಿ ರೋಗಕ್ಕೊಂದರಂತೆ ಪರಿಣಿತ ವೈದ್ಯರನ್ನು, ಹೊಸ ಹೊಸ ರೋಗವನ್ನು ಸೃಷ್ಟಿಸುವುದಲ್ಲ. ರೋಗದ ಬಗ್ಗೆ ಜನರಲ್ಲಿ ಜಾಗೃತಿ, ಅರಿವು ಮೂಡಿಸಿ ರೋಗದ ಚಿಕಿತ್ಸೆಗಿಂತ ರೋಗ ತಡೆಗಟ್ಟುವುದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಜನರನ್ನು ಜಾಣರನ್ನಾಗಿಸಬೇಕಾಗಿದೆ.

ಜೀವನ ಶೈಲಿ ಮತ್ತು ಆರೋಗ್ಯ:
ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ದಿನಕ್ಕೊಂದರಂತೆ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿವೆ. ಪುರಾತನ ರೋಗಗಳಾದ ಕುಷ್ಠರೋಗ, ಸಿಫಿಲಿಸ್ ಮುಂತಾದ ಕಾಯಿಲೆಗಳು ಈಗ ಮಾಯಾವಾಗಿವೆ. ಆದರೆ ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗ ಬರುವ ರೋಗಗಳಾದ ಮಧುಮೇಹ, ರಕ್ತದೊತ್ತಡ, ಹೃದಯಾಘಾತ, ಖಿನ್ನತೆ ಮುಂತಾದ ರೋಗಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಇಂದಿನ ಧಾವಂತದ, ಒತ್ತಡದ ಜೀವನ ಕ್ರಮದಿಂದಾಗಿ ಯಾರಿಗೂ ಆರೋಗ್ಯದ ಬಗ್ಗೆ ಗಮನ ಹರಿಸಲು ಸಮಯವಿಲ್ಲದಿರುವುದೇ ಬಹುದೊಡ್ಡ ದುರಂತ. ಮೇಲೆ ತಿಳಿಸಿದ ಈ ಎಲ್ಲಾ ಹೆಚ್ಚಿನ ಹೊಸ ರೋಗಗಳನ್ನು ಜೀವನ ಶೈಲಿಯ ಬದಲಾವಣೆಯಿಂದಲೇ ಸರಿಪಡಿಸಿಕೊಳ್ಳಬಹುದು. ಆಹಾರ ಪದ್ಧತಿಯ ಬದಲಾವಣೆಯಿಂದ ಹೆಚ್ಚಿನ ರೋಗಗಳನ್ನು ಔಷಧಿ ಇಲ್ಲದೆ ನಿಯಂತ್ರಿಸಬಹುದು ಎಂದು ನಮಗೆ ತಿಳಿದಿದೆ. ಆದರೂ ಆಹಾರಕ್ಕಿಂತ ಜಾಸ್ತಿ ಔಷಧಿ ತಿನ್ನುವ ವರ್ಗದವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
ಹಾಗಾಗಿ...
* ಒತ್ತಡದ ಜೀವನ ಶೈಲಿಗೆ ತಿಲಾಂಜಲಿ ನೀಡೋಣ. ಈಗಿನ ಶೇ. 50 ಮಂದಿ ಯುವಜನರು ವೃತ್ತಿ ಸಂಬಂಧಿತವಾದ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಅಂಕಿ-ಅಂಶಗಳಿಂದ ಸಾಬೀತಾಗಿದೆ. ಈ ಕಾರಣದಿಂದ ಆತ್ಮಹತ್ಯೆಯಂತಹ ಘಟನೆ ಪ್ರತಿದಿನ ನಾವು ನೋಡುತ್ತೇವೆ, ಕೇಳುತ್ತೇವೆ ಮತ್ತು ಮರೆಯುತ್ತೇವೆ. ನೆನಪಿರಲಿ ಎಷ್ಟು ಹಣ ನೀವು ಕೂಡಿಟ್ಟರೂ ಒಂದು ಕಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆಯುವಷ್ಟರಲ್ಲಿ ನಿಮ್ಮ ಕೂಡಿಟ್ಟ ಹಣ ಕರಗಿ ಹೋಗಬಹುದು.

* ಧೂಮಪಾನ, ಮದ್ಯಪಾನಕ್ಕೆ ತಿಲಾಂಜಲಿ ಇಡಿ. ಕ್ಯಾನ್ಸರ್‌ನಂತಹ ಮಾರಕ ರೋಗಗಳು ಈ ದುಶ್ಚಟಗಳಿಂದಲೇ ಬರುತ್ತವೆ.

* ದೈನಂದಿನ ಜೀವನದಲ್ಲಿ ಯೋಗ, ಬಿರುಸು ನಡಿಗೆ, ವ್ಯಾಯಾಮ, ಸ್ವಿಮ್ಮಿಂಗ್, ಸೈಕ್ಲಿಂಗ್ ಮುಂತಾದವುಗಳನ್ನು ಅಳವಡಿಸಿಕೊಂಡಲ್ಲಿ ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತ ನಮ್ಮ ಹತ್ತಿರ ಸುಳಿಯಲಾರದು.

* ಆದಷ್ಟು ಹಸಿ ತರಕಾರಿ, ಹಸಿರು ಸೊಪ್ಪು, ಕಾಳು, ಬೇಳೆ ಇರುವ ಆಹಾರ ಸೇವಿಸಿ. ಮೂಲಹಾರಕ್ಕೆ ಹೆಚ್ಚು ಒತ್ತು ಕೊಡಿ. ನಾರಿನಂಶ ಮತ್ತು ಪೌಷ್ಠಿಕಾಂಶ ಇರುವ ಆಹಾರ ಜಾಸ್ತಿ ಸೇವಿಸಿ.

* ತಾಜಾ ಹಣ್ಣು-ಹಂಪಲು, ನೈಸರ್ಗಿಕ ಪೇಯ ಮತ್ತು ನೀರನ್ನು ಧಾರಾಳವಾಗಿ ಸೇವಿಸಬೇಕು. ಕೃತಕ ಆಹಾರ ಪದ್ಧತಿ, ಸಿದ್ಧ ಆಹಾರ, ದಿಢೀರ್ ಆಹಾರ, ಕೃತಕ ಪೇಯಗಳನ್ನು ಅನಿವಾರ್ಯವಾದಲ್ಲಿ ಮಾತ್ರ ಬಳಸಿ. ಜಂಕ್ ಪುಡ್ ಬೇಡವೇ ಬೇಡ.

* ‘‘ಬೇಗ ಮಲಗಿ ಬೇಗ ಏಳು’’ ಎಂಬ ಹಿರಿಯರ ಮಾತನ್ನು ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಪಾಲಿಸಿ. ತಡರಾತ್ರಿವರೆಗೆ ಮೋಜು, ಮಸ್ತಿ, ಕುಡಿತ, ಕುಣಿತ ಮಾಡಿ ಪ್ರಾತಃಕಾಲದಲ್ಲಿ ಮಲಗಿ ಸೂರ್ಯ ನಡುನೆತ್ತಿಗೆ ಬಂದಾಗ ಏಳುವ ಹವ್ಯಾಸ ಬಹಳ ಅಪಾಯಕಾರಿ.

* ಅತಿಯಾದ ಮೊಬೈಲ್, ಕಂಪ್ಯೂಟರ್ ಬಳಕೆಯನ್ನು ನಿಯಂತ್ರಿಸಿ. ತಂತ್ರಜ್ಞಾನ ಬೆಳೆದಂತೆಲ್ಲಾ ಹೊಸ ಹೊಸ ಉಪಕರಣ ಬರುವುದು ಸಹಜ. ಆದರೆ ದೈನಂದಿನ ಜೀವನದ ಅತಿ ಅನಿವಾರ್ಯದಲ್ಲಿ ಮಾತ್ರ ಬಳಸಿ.

* ಸ್ವಯಂ ವೈದ್ಯ ಮಾಡಿಕೊಳ್ಳುವುದೇ ಬೇಡ, ಡಾ. ಗೂಗಲ್ ಸಹವಾಸ ಬೇಡವೇ ಬೇಡ. ನಿಮ್ಮ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ವೈದ್ಯರನ್ನು ಸಂಪರ್ಕಿಸಿ.

ಕೊನೆಮಾತು:
ಇತ್ತೀಚೆಗೆ ಕೋವಿಡ್ ಸಾಂಕ್ರಾಮಿಕವು ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಿದ್ದಲ್ಲದೆ, ವಿಶ್ವದ ಜನತೆಯನ್ನು ಬಡತನ, ಆಹಾರ ಅಭದ್ರತೆ ಲಿಂಗ ಮತ್ತು ಸಾಮಾಜಿಕ ಅಸಮಾನತೆಗೆ ತಳ್ಳಿದ್ದನ್ನು ನಾವು ಕಾಣುತ್ತಿದ್ದೇವೆ. ವಿಶ್ವ ಈ ಸ್ಥಿತಿಯಿಂದ ಕೂಡಲೇ ಹೊರಬರಬೇಕಾಗಿದೆ. ಎಲ್ಲ ರೋಗಗಳಿಗೂ ಔಷಧಿ ಇದೆ ಮತ್ತು ಎಲ್ಲ ರೋಗಗಳನ್ನು ವೈದ್ಯರು ಗುಣಪಡಿಸುತ್ತಾರೆ ಎಂಬ ಭ್ರಮಾ ಲೋಕದಿಂದ ಜನತೆ ಹೊರಬರಲೇಬೇಕು. ದಿನಕ್ಕೊಂದರಂತೆ ಹೊಸ ರೋಗಗಳು ಹುಟ್ಟಬಹುದು ಮತ್ತು ಪ್ರತಿಯೊಂದು ರೋಗಕ್ಕೆ ಒಬ್ಬ ತಜ್ಞ ವೈದ್ಯರು ಹುಟ್ಟಿಕೊಳ್ಳಬಹುದೇ ಹೊರತು, ಸುಂದರ ಸದೃಢ ಸಮಾಜದ ನಿರ್ಮಾಣ ಖಂಡಿತ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯೂ ತಮ್ಮ ಹೊಣೆಗಾರಿಕೆ ಅರಿತು ನಿಭಾಯಿಸಿದಲ್ಲಿ ಮಾತ್ರ ಎಲ್ಲೆಲ್ಲಿಯೂ ಎಲ್ಲರಿಗೂ ಆರೋಗ್ಯ ಸಿಗಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)