varthabharthi


ಸಂಪಾದಕೀಯ

ಗವಾಕ್ಷಿಯಿಂದ ಮತ್ತೆ ಇಣುಕಿದ ರಫೇಲ್ ಹಗರಣ

ವಾರ್ತಾ ಭಾರತಿ : 7 Apr, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

 ‘ಹೋದೆಯಾ ಪಿಶಾಚಿ ಎಂದರೆ, ಬಂದೆಯಾ ಗವಾಕ್ಷಿಯಿಂದ’ ಎಂಬಂತೆ, ರಫೇಲ್ ಹಗರಣ ಚುನಾವಣೆಯ ಹೊತ್ತಿನಲ್ಲೇ ಕೇಂದ್ರ ಸರಕಾರವನ್ನು ಮತ್ತೆ ಬೆನ್ನು ಹತ್ತಿದೆ. ಇಡೀ ದೇಶವನ್ನು ಬೆಚ್ಚಿ ಬೀಳಿಸಬೇಕಾಗಿದ್ದ, ಬೋಫೋರ್ಸ್ ಹಗರಣಕ್ಕಿಂತ ಹಲವು ಪಟ್ಟು ದೊಡ್ಡದಾಗಿರುವ ರಫೇಲ್ ಹಗರಣವನ್ನು ವಿರೋಧ ಪಕ್ಷಗಳೇ ಮರೆತಿರುವ ಹೊತ್ತಿನಲ್ಲಿ, ಫ್ರೆಂಚ್ ಮಾಧ್ಯಮವೊಂದು ಇದರ ವಿರುದ್ಧ ಧ್ವನಿಯೆತ್ತಿದೆ. ಭಾರತಕ್ಕೆ 36 ರಫೇಲ್ ಯುದ್ಧ ವಿಮಾನಗಳ ಪೂರೈಕೆಗಾಗಿ 2016ರಲ್ಲಿ ಒಪ್ಪಂದವನ್ನು ಮಾಡಿಕೊಂಡಿರುವ ಫ್ರಾನ್ಸ್‌ನ ಪ್ರಮುಖ ವೈಮಾನಿಕ ಕಂಪೆನಿ ಡಸಾಲ್ಟ್ ಅದಕ್ಕಾಗಿ ಭಾರತೀಯ ಮಧ್ಯವರ್ತಿಗೆ 1.1 ಮಿಲಿಯನ್ ಯುರೋಗಳನ್ನು ಪಾವತಿಸಿತ್ತು ಎಂದು ಫ್ರಾನ್ಸ್‌ನ ಎಎಫ್‌ಎ ತನಿಖೆಯನ್ನು ಆಧರಿಸಿ ಆನ್‌ಲೈನ್ ಮಾಧ್ಯಮ ‘ಮೀಡಿಯಾ ಪಾರ್ಟ್’ ಆರೋಪಿಸಿದೆ. ‘ಗ್ರಾಹಕರಿಗೆ ಉಡುಗೊರೆಗಳು’ ಎಂದು ಈ ಹಣವನ್ನು ಡಸಾಲ್ಟ್ ಕಂಪೆನಿ ನಮೂದಿಸಿತ್ತು. ಇಡೀ ರಫೇಲ್ ಹಗರಣವನ್ನು ತೆಗೆದುಕೊಂಡರೆ, ಈ ‘ಉಡುಗೊರೆ’ ಏನೇನೂ ಅಲ್ಲ. ಯಾಕೆಂದರೆ, ಕೇಂದ್ರ ಸರಕಾರದ ಮೇಲೆ ಅದಕ್ಕಿಂತಲೂ ದೊಡ್ಡದೊಂದು ಆರೋಪವಿದೆ. ರಫೇಲ್ ಒಪ್ಪಂದದಲ್ಲಿ ನಿಜಕ್ಕೂ ಪಾಲುದಾರನಾಗಿರಬೇಕಾದುದು ಹಿಂದೂಸ್ತಾನ್ ಏರೋನಾಟಿಕ್ಸ್. ಆದರೆ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಾಕ್ಷಣ, ಈ ಒಪ್ಪಂದದಿಂದ ‘ಹಾಲ್’ನ್ನು ಹೊರಹಾಕಲಾಯಿತು. ಈವರೆಗೆ ರಕ್ಷಣಾ ಇಲಾಖೆಗೆ ಸಂಬಂಧಪಟ್ಟು ಒಂದು ಸಣ್ಣ ಸೂಜಿಯನ್ನು ಉತ್ಪಾದಿಸದ ರಿಲಯನ್ಸ್ ಕಂಪೆನಿ ಈ ಒಪ್ಪಂದದಲ್ಲಿ ಪಾಲುಗೊಂಡಿತು. ಇಡೀ ಒಪ್ಪಂದವನ್ನೇ ಸರಕಾರ ತನ್ನ ಗೆಳೆಯನಾಗಿರುವ ಅಂಬಾನಿಗೆ ಉಡುಗೊರೆ ರೂಪದಲ್ಲಿ ನೀಡಿತು. ಹೀಗಿರುವಾಗ, ಒಬ್ಬ ಭಾರತೀಯ ಮಧ್ಯವರ್ತಿಗೆ ಡಸಾಲ್ಟ್ ಕಂಪೆನಿ ಸುಮಾರು 10 ಕೋಟಿ ರೂಪಾಯಿ ಉಡುಗೊರೆಯನ್ನು ಕೊಟ್ಟರೆ ಅದೇನು ಮಹಾ?

ಬೋಫೋರ್ಸ್ ಹಗರಣ ಬಹಿರಂಗವಾಗಲು ಪ್ರಮುಖ ಕಾರಣಕರ್ತರಾಗಿದ್ದ ಅರುಣ್ ಶೌರಿ, ರಫೇಲ್ ಹಗರಣದ ಕುರಿತಂತೆಯೂ ಧ್ವನಿಯೆತ್ತಿದ್ದರು. ರಫೇಲ್‌ಗೆ ಹೋಲಿಸಿದರೆ ಬೋಫೋರ್ಸ್ ಹಗರಣ ಏನೇನೂ ಅಲ್ಲ ಎಂದಿದ್ದರು. ಸಾಮಾಜಿಕ ಹೋರಾಟಗಾರರು ರಫೇಲ್ ಹಗರಣದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಒಂದು ವೇಳೆ ಈ ಹಗರಣದ ಕುರಿತಂತೆ ವಿರೋಧ ಪಕ್ಷಗಳು ಒಂದಾಗಿ ದೊಡ್ಡ ಧ್ವನಿಯಲ್ಲಿ ಪ್ರಶ್ನಿಸಿದ್ದರೆ, ತನಿಖೆಗಾಗಿ ಆಗ್ರಹಿಸಿದ್ದರೆ ಹಲವು ತಲೆಗಳು ಉರುಳುತ್ತಿದ್ದವೇನೋ. ವಿಪರ್ಯಾಸವೆಂದರೆ, ರಫೇಲ್ ಹಗರಣದ ಬಗ್ಗೆ ಸಿಬಿಐ ಮುಖ್ಯಸ್ಥರೊಬ್ಬರು ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಂತೆಯೇ ಅವರನ್ನು ವಜಾಗೊಳಿಸಲಾಯಿತು. ಮಾತ್ರವಲ್ಲ, ಇಡೀ ಸಿಬಿಐಯನ್ನೇ ನಿಷ್ಕ್ರಿಯಗೊಳಿಸಿ, ತನ್ನ ಮೂಗಿನ ನೇರಕ್ಕಿರುವ ಅಧಿಕಾರಿಯನ್ನು ಅಲ್ಲಿಗೆ ನೇಮಿಸಲಾಯಿತು. ಇತ್ತ ಸುಪ್ರೀಂಕೋರ್ಟ್ ಕೂಡ ಸರಕಾರದ ಪರವಾಗಿಯೇ ಮಾತನಾಡಿತು. ಯಾವುದೇ ತನಿಖೆ ನಡೆಯುವ ಮುನ್ನವೇ ‘ರಫೇಲ್ ಹಗರಣ’ದ ತನಿಖೆ ನಡೆಯುವ ಅಗತ್ಯವೇ ಇಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತು.

ಒಂದು ಸಣ್ಣ ತನಿಖೆಯೂ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ನಡೆಯಲಿಲ್ಲ. ಸ್ವತಃ ಸರಕಾರವೇ ತನಗೆ ತಾನೇ ಕ್ಲೀನ್ ಚಿಟ್‌ನ್ನು ಕೊಟ್ಟುಕೊಂಡಿತು. ಬಿಜೆಪಿಯೊಳಗಿರುವ ಹಿರಿಯ ನಾಯಕರು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರು ರಫೇಲ್ ಹಗರಣದ ಕುರಿತಂತೆ ಕೇಂದ್ರ ಸರಕಾರದ ವಿರುದ್ಧ ಬೆಟ್ಟು ಮಾಡುತ್ತಿರುವಾಗ, ಕನಿಷ್ಠ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವುದಕ್ಕಾದರೂ ಈ ಬಗ್ಗೆ ತನಿಖೆಯೊಂದನ್ನು ನಡೆಸುವ ಅಗತ್ಯವಿತ್ತು. ಆದರೆ ಯಾವುದೇ ತನಿಖೆಯನ್ನು ನಡೆಸದೇ, ಆರೋಪ ಮಾಡಿದವರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡಿತು. ‘ದೇಶದ ರಕ್ಷಣಾ ವಿಷಯ’ವೆಂದು ಹೇಳುತ್ತಾ, ‘ಕೆಲವರಿಗೆ ರಫೇಲ್ ವಿಮಾನ ಭಾರತಕ್ಕೆ ಬರುವುದು ಇಷ್ಟವಿಲ್ಲ’ ಎಂದು ಆರೋಪಿಸಿತು. ಸರ್ಜಿಕಲ್ ಸ್ಟ್ರೈಕ್‌ನ ಸಂದರ್ಭದಲ್ಲಿ ‘ರಫೇಲ್ ಯುದ್ಧ ವಿಮಾನವಿದ್ದಿದ್ದರೆ ಪರಿಸ್ಥಿತಿಯೇ ಬೇರೆಯಿತ್ತು’ ಎಂದು ಭಾರತದ ವಾಯು ಸೇನೆಯನ್ನು ಸ್ವತಃ ಪ್ರಧಾನಿಯೇ ಕೀಳಂದಾಜು ಮಾಡಿ ಹೇಳಿಕೆ ನೀಡಿದ್ದರು. ಅಂದರೆ ವಿರೋಧ ಪಕ್ಷಗಳು ಭಾರತದ ಸೇನೆ ಸದೃಢವಾಗಿರಬಾರದು ಎಂದು ಬಯಸುತ್ತವೆ. ಆದುದರಿಂದಲೇ ರಫೇಲ್ ಭಾರತಕ್ಕೆ ತಲುಪದಂತೆ ಮಾಡಲು, ಸರಕಾರದ ಮೇಲೆ ಆರೋಪ ಮಾಡುತ್ತಿವೆ ಎಂದು ಬಿಂಬಿಸುವ ಪ್ರಯತ್ನವನ್ನು ಮೋದಿ ನಡೆಸಿದರು. ಮಾಧ್ಯಮಗಳು ದೇಶದ ಕುರಿತಂತೆ ಯಾವ ಕಾಳಜಿಯೂ ಇಲ್ಲದೆ ಮೋದಿಯ ಪರವಾಗಿ ಮಾತನಾಡತೊಡಗಿದವು. ಮುಂದೆ ಭಾರತಕ್ಕೆ ರಫೇಲ್ ಬಂದಾಗ, ಇನ್ನೇನು ಚೀನಾ ಮತ್ತು ಪಾಕಿಸ್ತಾನ ನಾಶವಾಗಿಯೇ ಬಿಟ್ಟಿತು ಎಂಬಂತೆ ಅವುಗಳನ್ನು ಹಾಡಿಹೊಗಳಲಾರಂಭಿಸಿದವು. ಈ ಹಿಂದೆ ಬೋಫೋರ್ಸ್ ಹಗರಣದ ಆರೋಪ ಬಂದಾಗ, ಅದು ತನಿಖೆಗೊಳಗಾಯಿತು. ಸೇನೆಯ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎನ್ನುವ ಕಾರಣ ಮುಂದೊಡ್ಡಿ ಈ ತನಿಖೆಯನ್ನು ಯಾರೂ ತಡೆದಿರಲಿಲ್ಲ. ಸ್ವತಃ ರಾಜೀವ್‌ಗಾಂಧಿಯವರೂ ಅಂತಹ ಮಾತುಗಳನ್ನು ಆಡಲಿಲ್ಲ. ಅವರು ತನಿಖೆಗೆ ಪೂರಕವಾಗಿ ಸಹಕರಿಸಿದರು. ಮುಂದೆ, ಬೋಪೋರ್ಸ್ ಹಗರಣದಲ್ಲಿ ರಾಜೀವ್ ಗಾಂಧಿಯ ಪಾತ್ರವನ್ನು ಪೂರ್ಣವಾಗಿ ನಿರಾಕರಿಸಲಾಯಿತು.

ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತಕ್ಕೆ ನೆರವಿಗೆ ಬಂದದ್ದು, ಈ ಬೋಫೋರ್ಸ್‌ನಲ್ಲಿ ಖರೀದಿಸಿದ ಶಸ್ತ್ರಾಸ್ತ್ರಗಳು ಎನ್ನುವುದನ್ನೂ ಕೇಂದ್ರ ಸರಕಾರ ಮರೆಯಬಾರದು. ರಫೇಲ್ ಯುದ್ಧ ವಿಮಾನಗಳನ್ನು ತರಿಸಿಕೊಳ್ಳಲು ಅಡಿಗಲ್ಲು ಹಾಕಿದ್ದು ಯುಪಿಎ ಸರಕಾರವೇ ಹೊರತು, ಮೋದಿ ಸರಕಾರವಲ್ಲ. ಯುಪಿಎ ಸರಕಾರ ಭಾರತದ ಹೆಮ್ಮೆಯ ಸಂಸ್ಥೆಯಾಗಿರುವ ಹಾಲ್ ಮೂಲಕ ಈ ಒಪ್ಪಂದವನ್ನು ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಿತ್ತು ಮತ್ತು ತೀರಾ ಕಡಿಮೆ ಬೆಲೆಯಲ್ಲಿ ಹೆಚ್ಚು ವಿಮಾನಗಳನ್ನು ಪಡೆಯುವ ಈ ಒಪ್ಪಂದ ಎಲ್ಲ ರೀತಿಯಲ್ಲೂ ಭಾರತಕ್ಕೆ ಪೂರಕ ಹಾಗೂ ಲಾಭದಾಯಕವಾಗಿತ್ತು. ಈ ಒಪ್ಪಂದಿಂದ ಹಿಂದೂಸ್ತಾನ್ ಏರೋನಾಟಿಕ್ಸ್‌ನ ಹಿರಿಮೆಯೂ ಹೆಚ್ಚಾಗುತ್ತಿತ್ತು. ಆದರೆ ಯಾವಾಗ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂತೋ, ಒಪ್ಪಂದದಲ್ಲಿ ದೊಡ್ಡ ಬದಲಾವಣೆಯಾಯಿತು. ಹಿಂದೂಸ್ತಾನ್ ಏರೋನಾಟಿಕ್ಸ್‌ನ್ನು ಒಪ್ಪಂದದಿಂದ ಹೊರ ಹಾಕಿ, ಆ ಜಾಗಕ್ಕೆ ರಿಲಯನ್ಸ್ ಸಂಸ್ಥೆಯನ್ನು ತರಲಾಯಿತು. ಅಷ್ಟೇ ಅಲ್ಲ, ಈ ಬಾರಿ ದುಬಾರಿ ಬೆಲೆಯಲ್ಲಿ ಕಡಿಮೆ ಯುದ್ಧ ವಿಮಾನಗಳನ್ನು ಕೊಂಡುಕೊಳ್ಳಲು ನಿರ್ಧರಿಸಿತು. ನಿಜಕ್ಕೂ ದೇಶದ ಮೇಲೆ ಯಾರಿಗೆ ಕಾಳಜಿಯಿತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಕಷ್ಟವೇನೂ ಇಲ್ಲ. ಒಂದು ವೇಳೆ ರಫೇಲ್ ಹಗರಣ ಗಂಭೀರವಾಗಿ ತನಿಖೆ ನಡೆಸಿದ್ದರೆ, ಹಲವು ರಾಜಕಾರಣಿಗಳು, ಉದ್ಯಮಿಗಳು ಜೈಲು ಸೇರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿ ಬಿಡುತ್ತಿತ್ತು. ರಕ್ಷಣಾ ಸಚಿವರಾಗಿದ್ದ ಪಾರಿಕ್ಕರ್ ಅವರ ಸಾವಿನೊಂದಿಗೆ ಇಡೀ ಪ್ರಕರಣ ಮೂಲೆ ಸೇರಿತು.

 ಇದೀಗ ಫ್ರಾನ್ಸಿನ ಮಾಧ್ಯಮವೊಂದು ರಫೇಲ್ ಹಗರಣವೆನ್ನುವ ಹೆಬ್ಬಾವಿನ ಬಾಲದ ಕಡೆಗೆ ಬೆರಳು ತೋರಿಸಿದೆ. ಆ ಬಾಲವನ್ನು ಇಟ್ಟುಕೊಂಡು ಇಡೀ ಹಾವನ್ನು ಹೊರಗೆ ತರಬೇಕಾಗಿದೆ. ರಫೇಲ್ ಹಗರಣ ತನಿಖೆಗಾಗಿ ವಿರೋಧ ಪಕ್ಷಗಳು ಮತ್ತೆ ಒಂದಾಗಬೇಕಾಗಿದೆ. ದೇಶದ ರಕ್ಷಣೆಯ ಹೆಸರಿನಲ್ಲಿ ವಂಚನೆಗಳು ನಡೆದಿದ್ದರೆ, ಅದು ದೇಶಕ್ಕೆ ಎಸಗಿದ ದ್ರೋಹವಾಗಿದೆ. ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ. ಈ ಹಿನ್ನೆಲೆಯಲ್ಲಿ ರಫೇಲ್ ಹಗರಣ ತನಿಖೆಗೊಳಗಾಗಿ, ದೇಶಕ್ಕಾದ ನಷ್ಟ, ಕಷ್ಟಗಳಿಗೆ ಕಾರಣರಾರು ಎನ್ನುವುದನ್ನು ಹೊರಗೆಳೆಯುವುದು ಅತ್ಯಗತ್ಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)