varthabharthi


ಕ್ರೀಡೆ

ಐಪಿಎಲ್ 2021

ಡೆಲ್ಲಿಗೆ ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು

ವಾರ್ತಾ ಭಾರತಿ : 7 Apr, 2021

  ಹೊಸದಿಲ್ಲಿ: ನಾಯಕನಾಗಿ ಬದಲಾಗಿರುವ ರಿಷಭ್ ಪಂತ್ ಹೆಗಲ ಮೇಲೆ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಯಾಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಯುಎಇಯ ಕೊನೆಯ ಆವೃತ್ತಿಯ ಯಶಸ್ಸನ್ನು ಮುಂದುವರಿಸುವ ಗುರಿಯನ್ನು ಹೊಂದಿದೆ. ಕಳೆದ ವರ್ಷ ಡೆಲ್ಲಿ ದ್ವಿತೀಯ ಸ್ಥಾನದೊಂದಿಗೆ ಐಪಿಎಲ್ ಅಭಿಯಾನ ಕೊನೆಗೊಳಿಸಿತ್ತು.

   ಬಲಿಷ್ಠ ಬ್ಯಾಟಿಂಗ್ ಮತ್ತು ಪ್ರಬಲವಾದ ವೇಗದ ದಾಳಿ ವಿಭಾಗವನ್ನು ಹೊಂದಿರುವ ಡಿಸಿ ಈ ವರ್ಷವೂ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಂಡಿದೆ.

 ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭುಜದ ನೋವಿನಿಂದಾಗಿ ಶ್ರೇಯಸ್ ಅಯ್ಯರ್ ಹೊರಗುಳಿದಿದ್ದರು. ಇದೀಗ ಅವರ ಕೈಯಲ್ಲಿದ್ದ ಡಿಸಿ ನಾಯಕತ್ವವನ್ನು ಪಂತ್ ಅವರಿಗೆ ವರ್ಗಾಯಿಸಲಾಗಿದೆ.

 2019ರಲ್ಲಿ ಕ್ವಾಲಿಫೈಯರ್ ಎರಡರಲ್ಲಿ ಸೋಲು ಅನುಭವಿಸಿತ್ತು. 2020ರಲ್ಲಿ ಎರಡನೇ ಸ್ಥಾನ ಗಳಿಸಿತು. ಸಾಮರ್ಥ್ಯ:   ಶಿಖರ್ ಧವನ್, ಪೃಥ್ವಿ ಶಾ ಮತ್ತು ಅಜಿಂಕ್ಯ ರಹಾನೆ ಒಳಗೊಂಡು ಡೆಲ್ಲಿಯಲ್ಲಿ ಅಗ್ರ ಸರದಿ ಬಲಿಷ್ಠವಾಗಿ ಇದೆ. ಪಂತ್ ಜೊತೆಗೆ ಮಾರ್ಕಸ್ ಸ್ಟೊಯಿನಿಸ್ ಮತ್ತು ಶಿಮ್ರಾನ್ ಹೆಟ್ಮಯರ್ ಅಥವಾ ಸ್ಯಾಮ್ ಬಿಲ್ಲಿಂಗ್ಸ್ ಮಧ್ಯಮ ಕ್ರಮದಲ್ಲಿ ಅಯ್ಯರ್ ಅನುಪಸ್ಥಿತಿಯಲ್ಲಿ ಅವರ ಸ್ಥಾನವನ್ನು ತುಂಬಲು ನೋಡುತ್ತಿದ್ದಾರೆ.

ಸ್ಟೀವ್ ಸ್ಮಿತ್ ಸೇರ್ಪಡೆ ಅವರ ಬ್ಯಾಟಿಂಗ್ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಧವನ್ (618) 2020ರಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅವರು 98 ಮತ್ತು 67 ರನ್ ಗಳಿಸಿದರು.

 ಕಳೆದ ಋತುವಿನಲ್ಲಿ ಆಸ್ಟ್ರೇಲಿಯ ಟೆಸ್ಟ್ ಸರಣಿಯಿಂದ ಹೊರಹಾಕಲ್ಪಟ್ಟ ನಂತರ ವಿಜಯ್ ಹಝಾರೆ ಟ್ರೋಫಿಯಲ್ಲಿ 827 ರನ್ ಗಳಿಸಿದ ಶಾ ಕೂಡ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ನೋಡುತ್ತಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಪಂತ್ ಭಾರತದ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಬೌಲಿಂಗ್ ವಿಭಾಗದಲ್ಲಿ, ದಕ್ಷಿಣ ಆಫ್ರಿಕಾದ ವೇಗದ ಜೋಡಿ ಕಾಗಿಸೊ ರಬಡಾ (2020 ಪರ್ಪಲ್ ಕ್ಯಾಪ್ ವಿಜೇತ) ಮತ್ತು ಅನ್ರಿಚ್ ನಾರ್ಟ್ಜೆ ಅವರು ಉತ್ತಮ ಜೋಡಿ ಎಂದು ಸಾಬೀತುಪಡಿಸಿದ್ದಾರೆ. 2020ರಲ್ಲಿ ಒಟ್ಟಿಗೆ 52 ವಿಕೆಟ್‌ಗಳನ್ನು ಗಳಿಸಿದ್ದಾರೆ.

ಈ ಬಾರಿ ಕ್ರಿಸ್ ವೋಕ್ಸ್ ,ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ಕೂಡ ತಂಡದಲ್ಲಿದ್ದಾರೆ. ಡೆಲ್ಲಿ ತಂಡ ವೇಗದ ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಆಯ್ಕೆಗಳನ್ನು ಹೊಂದಿದೆ.

 ದೌರ್ಬಲ್ಯ:  ಡೆಲ್ಲಿ ತಂಡದ ದೌರ್ಬಲ್ಯವೆಂದರೆ ಸಾಗರೋತ್ತರ ಮತ್ತು ದೇಶೀಯ ಕ್ರಿಕೆಟಿಗರಲ್ಲಿ ಸಾಕಷ್ಟು ಗುಣಮಟ್ಟದ ಆಟಗಾರರನ್ನು ಹೊಂದಿಲ್ಲ. ಈಗಿರುವ ಆಟಗಾರರಿಗೆ ಬದಲಿ ಆಟಗಾರರ ಕೊರೆತೆ ಇದೆ. ಈ ಕಾರಣದಿಂದಾಗಿ ಕಾಗಿಸೊ ರಬಡಾ ಮತ್ತು ಅನ್ರಿಕ್ ನಾರ್ಟ್ಜೆ ಅವರಿಗೆ ವಿಶ್ರಾಂತಿ ನೀಡಲು ಸಾಧ್ಯವಾಗುದಿಲ್ಲ. ವಿಕೆಟ್ ಕೀಪಿಂಗ್ ವಿಷಯದಲ್ಲಿ ಸಹ ಪಂತ್ ಅವರಿಗೆ ಉತ್ತಮ ಬದಲಿ ಆಟಗಾರ ಇಲ್ಲ. ಈ ವರ್ಷ ಅವರು ಕೇರಳದ ವಿಷ್ಣು ವಿನೋದ್ ಅವರನ್ನು ಹೊಂದಿದ್ದಾರೆ ಆದರೆ ಅವರು ಅನುಭವಿಯಲ್ಲ. ಇಬ್ಬರು ಪ್ರಧಾನ ವೇಗದ ಬೌಲರ್‌ಗಳಾದ ಇಶಾಂತ್ ಮತ್ತು ಉಮೇಶ್ ಅವರು ಈಗ ರಾಷ್ಟ್ರೀಯ ತಂಡದ ಪರ ಸೀಮಿತ ಓವರ್‌ಗಳ ಕ್ರಿಕೆಟ್ ಆಡದ ಕಾರಣ ಸಮಸ್ಯೆ ಇದೆ.

 ಅವಕಾಶಗಳು: ಪಂತ್‌ಗೆ ಟ್ವೆಂಟಿ-20 ವಿಶ್ವಕಪ್‌ಗೆ ತಯಾರಿ ನಡೆಸುವ ಅವಕಾಶವನ್ನೂ ಲೀಗ್ ಒದಗಿಸಲಿದೆ. ಅಲ್ಲಿ ಅವರು ಭಾರತದ ಬ್ಯಾಟಿಂಗ್ ಸಾಲಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಧವನ್ ಕೂಡ ಆರಂಭಿಕ ಸ್ಲಾಟ್‌ನ್ನು ಭದ್ರಪಡಿಸಲು ನೋಡುತ್ತಿದ್ದಾರೆ. ಆದರೆ ಆರ್.ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಅವರಿಗೂ ವಿಶ್ವಕಪ್‌ಗೆ ತಯಾರಿ ನಡೆಸಲು ಒಂದು ಅವಕಾಶವಾಗಿದೆ.

   ಭಯ: ಪಂತ್ ತನ್ನ ಅಲ್ಪಾವಧಿಯ ವೃತ್ತಿಜೀವನದಲ್ಲಿ ಸ್ಥಿತಿಸ್ಥಾಪಕತ್ವ ಮತ್ತು ತಿಳುವಳಿಕೆಯನ್ನು ಪ್ರದರ್ಶಿಸಿದ್ದಾರೆ. ಆದರೆ ಹೆಚ್ಚುವರಿ ನಾಯಕತ್ವದ ಜವಾಬ್ದಾರಿಯು ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕಾಗಿದೆ.

 ಕಳೆದ ವರ್ಷ ಮೊದಲ 9 ಪಂದ್ಯಗಳ ಪೈಕಿ ಏಳು ಪಂದ್ಯಗಳಲ್ಲಿ ಜಯಗಳಿಸಿದ ನಂತರ ಡೆಲ್ಲಿಯು ಸತತ ನಾಲ್ಕು ಸೋಲುಗಳನ್ನು ಅನುಭವಿಸಿದೆ. ಇದು ಡೆಲ್ಲಿ ತಂಡದ ಪ್ಲೇ-ಆಫ್ ಅವಕಾಶಕ್ಕೆ ತೊಂದರೆಯನ್ನುಂಟು ಮಾಡಿತ್ತು.

ತಂಡ:   ರಿಷಭ್ ಪಂತ್ (ನಾಯಕ), ಶಿಖರ್ ಧವನ್, ಪೃಥ್ವಿ ಶಾ , ಅಜಿಂಕ್ಯ ರಹಾನೆ, ಶಿಮ್ರಾನ್ ಹೆಟ್ಮಯರ್, ಮಾರ್ಕಸ್ ಸ್ಟೋನಿಸ್, ಕ್ರಿಸ್ ವೋಕ್ಸ್, ಆರ್.ಅಶ್ವಿನ್, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ, ಲಲಿತ್ ಯಾದವ್, ಪ್ರವೀಣ್ ದುಬೆ, ಕಾಗಿಸೊ ರಬಡಾ, ಅನ್ರಿಕ್ ನಾರ್ಟ್ಜೆ , ಇಶಾಂತ್ ಶರ್ಮಾ , ಉಮೇಶ್ ಯಾದವ್, ರಿಪಾಲ್ ಪಟೇಲ್, ವಿಷ್ಣು ವಿನೋದ್, ಲುಕ್ಮಾನ್ ಮೆರಿವಾಲಾ, ಎಂ ಸಿದ್ದಾರ್ಥ್, ಟಾಮ್ ಕರ್ರನ್, ಸ್ಯಾಮ್ ಬಿಲ್ಲಿಂಗ್ಸ್.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)