varthabharthi


ನಿಮ್ಮ ಅಂಕಣ

ಮರಗಳ ಮಾರಣ ಹೋಮ

ವಾರ್ತಾ ಭಾರತಿ : 7 Apr, 2021
-ರಾಜೇಂದ್ರ ಅಪುರಾ, ಅಗತಗೌಡನಹಳ್ಳಿ, ಗುಂಡ್ಲುಪೇಟೆ

ಮಾನ್ಯರೇ,

ಸರಕಾರ ಹೆಲಿ ಟೂರಿಸಂನ ಹೆಸರಲ್ಲಿ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್‌ನ ಸುತ್ತ ಮುತ್ತಲಿನ ಪ್ರದೇಶಗಳಲ್ಲಿರುವ ಗಿಡ, ಮರಗಳನ್ನು ಕಡಿಯುವ ಮೂಲಕ ಅಲ್ಲಿನ ಜೀವ ಸಂಕುಲದ ಮೇಲೆ ಗದಾ ಪ್ರಹಾರ ಮಾಡಲು ಹೊರಟಂತಿದೆ. ಹಲವಾರು ವರ್ಷಗಳಿಂದ ಬೆಳೆದು ನಿಂತಿರುವ ನೂರಾರು ಬೃಹತ್ ಗಾತ್ರದ ಮರಗಳನ್ನು ಪ್ರವಾಸೋದ್ಯಮದ ಹೆಸರಲ್ಲಿ ಸರಕಾರವೇ ನಾಶ ಮಾಡಲು ಹೊರಟಿದ್ದು, ಈಗಾಗಲೇ ಮರಗಳಿಗೆ ಸಂಖ್ಯೆಗಳನ್ನು ಕೊಟ್ಟು ಗುರುತು ಮಾಡಿಕೊಂಡು ಅವುಗಳ ಮಾರಣಹೋಮ ಮಾಡಲು ಅವಸರವಸರವಾಗಿ ಯೋಜನೆಯೊಂದನ್ನು ಸಿದ್ಧ ಪಡಿಸಿಕೊಂಡು ಕುಳಿತಿದೆ. ಇದನ್ನು ಅರಿತ ಮೈಸೂರಿನ ಪರಿಸರವಾದಿಗಳು ಮರಗಳಿಗೆ ಕೊಟ್ಟಿರುವ ಸಂಖ್ಯೆಗಳ ಮೇಲೆ ಕಪ್ಪುಬಣ್ಣ ಬಳಿದು ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.

ಪ್ರಕೃತಿಯಲ್ಲಿ ಭಾರೀ ಅಸಮತೋಲನ ಉಂಟಾಗಿ ಅದರ ದುಷ್ಪರಿಣಾಮವನ್ನು ಈಗಾಗಲೇ ನಾವೆಲ್ಲ ಅನುಭವಿಸುತ್ತಿದ್ದೇವೆ. ಅದರಲ್ಲೂ ಈ ಸಲದ ಬೇಸಿಗೆಯ ಆರಂಭದ ದಿನಗಳಲ್ಲೇ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಬಿಸಿಲಿನ ತಾಪ ಏರುತ್ತಿದ್ದು, ಜನ ತತ್ತರಿಸಿ ಹೋಗುತ್ತಿದ್ದಾರೆ. ಅಷ್ಟೇ ಅಲ್ಲದೆ ಹನಿ ಹನಿ ನೀರಿಗೂ, ಉಸಿರಾಡುವ ಗಾಳಿಗೂ ಜನ ಇಂದು ಪರಿತಪಿಸುವಂತಾಗಿ ಬಿಟ್ಟಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮರಗಳನ್ನು ಉಳಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಸರಕಾರವೇ ಇಂದು ಮರಗಳ ಮಾರಣ ಹೋಮ ಮಾಡ ಹೊರಟಿರುವುದು ಎಷ್ಟು ಸರಿ..?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)