varthabharthi


ವಿಶೇಷ-ವರದಿಗಳು

ಕಾರ್ಪೊರೇಟ್ ಪರ ಕೇಂದ್ರ; ಬೆಲೆ ಏರಿಕೆ ನರಕದಲ್ಲಿ ಜನರು

ವಾರ್ತಾ ಭಾರತಿ : 8 Apr, 2021
ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ಭಾಗ-2

ಪ್ರಧಾನಮಂತ್ರಿಯವರು ಮಾರ್ಚ್ 2015ರಲ್ಲಿ ಕೊಚ್ಚಿಯಲ್ಲಿ ‘‘ದೇಶವು ಶೇ. 78.6ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಆಮದನ್ನು ಶೇ. 10ರಷ್ಟು ಕಡಿಮೆ ಮಾಡಿ ದೇಶವನ್ನು 2022ರ ಒಳಗೆ ಉದ್ಧಾರ ಮಾಡಿಬಿಡುತ್ತೇವೆ’’ ಎಂದು ಭಾಷಣ ಮಾಡಿದ್ದರು. ಅವರು ಹಾಗೆ ಹೇಳುವಾಗ ದೇಶದಲ್ಲಿ 37,788 ಸಾವಿರ ಟನ್‌ಗಳಷ್ಟು ಕಚ್ಚಾ ತೈಲ ಉತ್ಪಾದನೆಯಾಗುತ್ತಿತ್ತು. ಆದರೆ 2019-20ಕ್ಕೆ ಬರುವ ಹೊತ್ತಿಗೆ ಉತ್ಪಾದನೆಯ ಪ್ರಮಾಣ 32,173 ಸಾವಿರ ಟನ್‌ಗಳಿಗೆ ಕುಸಿಯಿತು. ಅಂದರೆ 5,615 ಸಾವಿರ ಟನ್‌ಗಳಷ್ಟು ಕಚ್ಚಾ ತೈಲದ ಉತ್ಪಾದನೆ ಕಡಿಮೆಯಾಯಿತು. ಯಾಕೆ ಕಡಿಮೆಯಾಯಿತು? ಉತ್ಪಾದನೆ ಕಡಿಮೆ ಮಾಡಿ ಎಂದು ಅವರಿಗೆ ಆಜ್ಞೆ ಮಾಡಿದವರು ಯಾರು?

ಈಗ ದೇಶದಲ್ಲಿ ಅತ್ಯುತ್ತಮ ಪ್ರಗತಿ ತೋರಿಸುತ್ತಿರುವ, ದೇಶದ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಹಿಂದೂಸ್ತಾನ್ ಪೆಟ್ರೋಲಿಯಮ್, ಭಾರತ್ ಪೆಟ್ರೋಲಿಯಮ್ ಮುಂತಾದ ತೈಲ ಕಂಪೆನಿಗಳನ್ನು ಖಾಸಗೀಕರಿಸುವ ಯೋಜನೆ ಪ್ರಾರಂಭಿಸಿದ್ದಾರೆ. ಈ ಕಂಪೆನಿಗಳನ್ನು ಕೊಂಡುಕೊಳ್ಳಲು ಅಂಬಾನಿಯವರ ರಿಲಯನ್ಸ್, ಸೌದಿ ದೇಶದ ಆರಾಮ್ಕೋ ಮತ್ತು ಬ್ರಿಟಿಷ್ ಪೆಟ್ರೋಲಿಯಮ್ ಕಂಪೆನಿಗಳು ಇನ್ನಿಲ್ಲದ ಹುನ್ನಾರ ಮಾಡುತ್ತಿವೆ.

ಆಹಾರ, ಇಂಧನ, ಸಾರಿಗೆ, ಬಂದರು, ರಕ್ಷಣೆ, ವಿದ್ಯುತ್ ಮುಂತಾದವುಗಳನ್ನು ಪ್ರಜ್ಞೆ ಇರುವ ಯಾವುದಾದರೂ ದೇಶವೊಂದು ಖಾಸಗಿಯವರಿಗೆ ವಹಿಸಿಕೊಡಲು ಸಾಧ್ಯವೇ? ಈಗ ಪ್ರಮುಖ ಶಕ್ತಿ ಎನ್ನಿಸಿದ ಇಂಧನವನ್ನು ಖಾಸಗಿಯವರಿಗೆ ಕೊಡಲು ಹೊರಟಿದ್ದಾರೆ. ಇದರಿಂದ ಇಡೀ ದೇಶದ ವ್ಯವಸ್ಥೆಯೇ ಅಲುಗಾಡತೊಡಗುತ್ತದೆ. ಇವೆಲ್ಲವುಗಳನ್ನು ಸೂಕ್ಷ್ಮವಾಗಿ ನಾನು ಗಮನಿಸುವುದರಿಂದಲೇ ಪ್ರಧಾನಿಯವರ ಮಾತುಗಳನ್ನು ನೇರವಾಗಿ ನಂಬಬೇಡಿ. ಅವರು ಹೇಳಿದ್ದಕ್ಕೆ ವಿರುದ್ಧವಾದದ್ದರಲ್ಲಿ ಸತ್ಯ ಅಡಗಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳಿ ಎಂದು ಯುವಕರಿಗೂ, ಜನರಿಗೂ ಹೇಳುತ್ತಿದ್ದೇನೆ. ನರೇಂದ್ರ ಮೋದಿಯವರ ಕಾಲದಲ್ಲಿ ಕಚ್ಚಾ ತೈಲದ ಆಮದೂ ಹೆಚ್ಚಾಗಿದೆ. ಆಂತರಿಕ ಉತ್ಪತ್ತಿಯನ್ನೂ ಕಡಿಮೆ ಮಾಡಿದ್ದಾರೆ. ಆದರೆ ಈಗಿನ ಬೆಲೆಯೇರಿಕೆಗೆ ಹಿಂದಿನ ಸರಕಾರಗಳ ತೈಲ ಆಮದು ಕಾರಣ ಎಂದು ಜನರ ಕಿವಿಯ ಮೇಲೆ ಹೂ ಇಡುತ್ತಿದ್ದಾರೆ.

ಹಿಂದೆ ಯುಪಿಎ ಸರಕಾರದ ಅವಧಿಯಲ್ಲಿ ಕೃಷ್ಣ, ಗೋದಾವರಿ ನದಿ ಮುಖಜ ಭೂಮಿಗಳಲ್ಲಿ ವ್ಯಾಪಕ ಪ್ರಮಾಣದ ತೈಲ ನಿಕ್ಷೇಪಗಳಿವೆ ಎಂಬುದನ್ನು ಪತ್ತೆ ಹಚ್ಚಲಾಗಿತ್ತು. ಇದರ ಮೇಲೂ ಅಂಬಾನಿಯ ಕಣ್ಣು ಬಿದ್ದಿದೆ ಎಂಬ ಮಾಹಿತಿ ಇದೆ. ಹಾಗಾಗಿ ಮೋದಿಯವರು ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸಲು ಪ್ರಾರಂಭಿಸಿದ್ದಾರೆ. ಇಡೀ ದೇಶವನ್ನು ಮೋದಿಯವರು ಮಾರಿಯಾದ ಮೇಲೆ ಬಿಜೆಪಿಯವರಿಗೆ ಪ್ರಜ್ಞಾವಂತರು ಹೇಳಿದ್ದು ಸತ್ಯ ಎಂದು ಅರಿವಿಗೆ ಬರುತ್ತದೋ ಇಲ್ಲವೋ ನೋಡಬೇಕು. ದಿನೇ ದಿನೇ ಏರಿಕೆಯಾಗುತ್ತಿರುವ ಇಂಧನ ದರಗಳಿಂದಾಗಿ ಜನರ ಬದುಕು ಅತ್ಯಂತ ದುರ್ಬರವಾಗುತ್ತಿದೆ. ಪತ್ರಿಕೆಯೊಂದು 21-02-2021ರಂದು ವರದಿ ಮಾಡಿದ ಹಾಗೆ ಟ್ರಕ್‌ಗಳ ಬಾಡಿಗೆ ಒಂದೂವರೆ ತಿಂಗಳಲ್ಲಿ ಶೇ.13ರಷ್ಟು ಹೆಚ್ಚಾಗಿದೆ. ದಿಲ್ಲಿಯಿಂದ ಚೆನ್ನೈಗೆ ಜನವರಿ-2020ರ ಮೊದಲ ವಾರದಲ್ಲಿ ಟ್ರಕ್‌ವೊಂದರ ಬಾಡಿಗೆ ರೂ. 1.2 ಲಕ್ಷಗಳಿದ್ದದ್ದು, ಫೆಬ್ರವರಿ 16ಕ್ಕೆ ರೂ. 1.4 ಲಕ್ಷಗಳಿಗೆ ಏರಿಕೆಯಾಗಿದೆಯಂತೆ. ಈಗ ರೂ. 1.5 ಲಕ್ಷಗಳಿಗೆ ಏರಿಕೆಯಾಗಿರಬೇಕು. ಒಂದು ಟ್ರಿಪ್ ಸರಕು ಸಾಗಣೆಗೆ ಈ ಮಟ್ಟದ ಬೆಲೆ ಹೆಚ್ಚಾದರೆ ಇನ್ನುಳಿದಂತೆ ಅಗತ್ಯ ವಸ್ತುಗಳ ಬೆಲೆ ಎಷ್ಟು ಹೆಚ್ಚಾಗಬಹುದು ಎಂಬುದನ್ನು ನಾವು ಊಹಿಸಬಹುದಾಗಿದೆ. ಡೀಸೆಲ್ ಬೆಲೆ ಲೀಟರ್‌ಗೆ ರೂ. 100ಕ್ಕೆ ಹತ್ತಿರ ಬಂದಿರುವುದರಿಂದ 50,000ಕ್ಕೂ ಹೆಚ್ಚು ಸಣ್ಣ ಟ್ರಕ್‌ಗಳು ಸರಕು ಸಾಗಣೆ ಉದ್ಯಮದಿಂದ ಹೊರಗೆ ಉಳಿಯುವ ಅಪಾಯವನ್ನು ಎದುರಿಸುತ್ತಿವೆ. ಪೆಟ್ರೋಲ್, ಡೀಸೆಲ್‌ಗಳ ಮೇಲೆ ಸುಂಕ ಕಡಿಮೆ ಮಾಡಿದರೂ ಸರಕಾರಕ್ಕೆ ನಷ್ಟವಾಗುವುದಿಲ್ಲವೆಂದು ತಜ್ಞರ ಸಮಿತಿಗಳು ಹೇಳುತ್ತಿವೆ. ಆದರೂ ಕಡಿಮೆ ಮಾಡುತ್ತಿಲ್ಲ. ಲಕ್ಷಾಂತರ ಕ್ಯಾಬ್‌ಗಳು, ಆಟೊಗಳಿಗೆ ದುಡಿಮೆಯಾಗದೆ ಅವುಗಳನ್ನು ನಂಬಿಕೊಂಡ ಕುಟುಂಬಗಳು ಬೀದಿ ಪಾಲಾಗುತ್ತವೆ.

ಗ್ಯಾಸ್ ಸಿಲಿಂಡರ್ ಅಥವಾ ಅಡುಗೆ ಅನಿಲದ ಬೆಲೆ ಏರಿಕೆ:
19-02-2021ರಂದು ಕರ್ನಾಟಕ ರಾಜ್ಯದವರೇ ಆದ ಈಗ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯವರು ಟ್ವೀಟ್ ಮಾಡಿ ಸಬ್ಸಿಡಿ ರಹಿತ ಎಲ್.ಪಿ.ಜಿ. ಸಿಲಿಂಡರ್‌ಗಳ ಬೆಲೆಯನ್ನು 2011ರಿಂದ 2021ರವರೆಗೆ ಲಗತ್ತಿಸಿದ್ದರು. ಆದರೆ ಮನಮೋಹನ ಸಿಂಗ್‌ರವರು ಪ್ರಧಾನಿಯಾಗಿದ್ದಾಗ ವಾಣಿಜ್ಯ ಉದ್ದೇಶಕ್ಕೆ ಹೊಟೇಲ್ ಮುಂತಾದ ಕಡೆ ಬಳಸುವ ಸಿಲಿಂಡರ್‌ಗಳಿಗೆ ಸಬ್ಸಿಡಿ ಇರಲಿಲ್ಲ. ಉಳಿದಂತೆ ಸಿ.ಟಿ.ರವಿಯವರು, ಯಡಿಯೂರಪ್ಪನವರಾದಿಯಾಗಿ ಎಲ್ಲರೂ ಮನಮೋಹನಸಿಂಗ್‌ರವರು ನೀಡುತ್ತಿದ್ದ ಸಬ್ಸಿಡಿ ಸಿಲಿಂಡರ್‌ಗಳನ್ನು ಬಳಸಿಯೇ ಅನ್ನ ಬೇಯಿಸಿ ತಿಂದಿದ್ದಾರೆ. ಸಿ.ಟಿ. ರವಿಯವರಿಗೆ ಈ ಕುರಿತು ಗೊಂದಲಗಳಿದ್ದರೆ ಹಿಂದಿನ ಬಿಲ್ಲುಗಳನ್ನೊಮ್ಮೆ ಪರಿಶೀಲಿಸಿದರೆ ತಿಳಿಯುತ್ತದೆ. ಮೋದಿಯವರು ಕೂಡ ಅದೇ ಸಬ್ಸಿಡಿ ದರದ ಸಿಲಿಂಡರ್‌ಗಳನ್ನೇ ಬಳಸಿ ಅಡುಗೆ ಮಾಡಿಸಿ ಊಟ ಮಾಡಿರಬೇಕು. ಅಂದರೆ ಅದರ ಅರ್ಥ ಕಮರ್ಷಿಯಲ್ ಉದ್ದೇಶದ ಸಿಲಿಂಡರ್‌ಗಳನ್ನು ಹೊರತುಪಡಿಸಿ ಉಳಿದಂತೆ ಪ್ರತಿಯೊಬ್ಬರು ಸಬ್ಸಿಡಿ ಸಹಿತವಾದ ಸಿಲಿಂಡರ್‌ಗಳನ್ನೇ ಬಳಸಿದ್ದರು. ಮನಮೋಹನ ಸಿಂಗ್ ಅವರು ಅಧಿಕಾರದಿಂದ ಇಳಿದಾಗ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 1,241 ರೂ. ಇದ್ದರೆ, ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ 414 ರೂ. ಇತ್ತು. ಕೇಂದ್ರ ಸರಕಾರ 827 ರೂಪಾಯಿಯನ್ನು ಪ್ರತಿ ಸಿಲಿಂಡರ್ ಮೇಲೆ ಸಬ್ಸಿಡಿ ರೂಪದಲ್ಲಿ ನೀಡುತ್ತಿತ್ತು. ಹೊಟೇಲ್ ಮುಂತಾದ ಕಡೆ ಬಿಟ್ಟು ಮನೆಗಳಲ್ಲಿ ಬಳಸುತ್ತಿದ್ದ ಪ್ರತಿ ಸಿಲಿಂಡರ್‌ಗೂ ಸಬ್ಸಿಡಿ ನೀಡಲಾಗಿದೆ.

ಈಗಿನ ಪ್ರಧಾನಿಯವರು ಅಧಿಕಾರಕ್ಕೆ ಏರಿದ ಕೂಡಲೇ ಸಬ್ಸಿಡಿ ನೀಡಿದ ಪ್ರಮಾಣ 2015ರಲ್ಲಿ 154ರೂ. ಆನಂತರ ಮೋದಿಯವರು ಸಬ್ಸಿಡಿ ಬಿಟ್ಟುಕೊಡುವುದು ದೇಶ ಪ್ರೇಮ ಎಂದು ಹೇಳಿದ್ದರಿಂದ ಅನೇಕರು ಸಬ್ಸಿಡಿ ಬಿಟ್ಟುಕೊಟ್ಟರು. ಆದರೂ ದೇಶದಲ್ಲಿ ಗಣನೀಯ ಉತ್ಸಾಹವೇನು ತೋರಿಬರಲಿಲ್ಲ. ಆದುದರಿಂದ, 2020ರ ನಂತರ ಸಬ್ಸಿಡಿ ನೀಡುವುದನ್ನೇ ನಿಲ್ಲಿಸಿ ಬಿಟ್ಟರು. ಈಗ ದೇಶದ ಅನೇಕ ರಾಜ್ಯಗಳಲ್ಲಿ ಜನರು ಪ್ರತಿ ಸಿಲಿಂಡರ್‌ಗೆ ರೂ. 900ಕ್ಕೂ ಅಧಿಕ ನೀಡಿ ಖರೀದಿಸುತ್ತಿದ್ದಾರೆ. ರಾಜ್ಯದಲ್ಲಿ 1 ಕೋಟಿ 46 ಲಕ್ಷ ಗ್ರಾಹಕರು ಎಲ್.ಪಿ.ಜಿ. ಸಂಪರ್ಕ ಹೊಂದಿದ್ದಾರೆ. ಇವುಗಳಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಐಒಸಿಎಲ್‌ನ 13,93,748, ಬಿಪಿಸಿಎಲ್ 7,40,897 ಹಾಗೂ ಎಚ್‌ಪಿಸಿಎಲ್‌ನ 10,11,042 ಸೇರಿ ಒಟ್ಟು 31,45,687 ಗ್ರಾಹಕರಿದ್ದಾರೆ. ಈ ಎಲ್ಲ ಗ್ರಾಹಕರು ಈಗ 850 ರೂ.ಗಳಷ್ಟು ದುಬಾರಿ ಬೆಲೆಯನ್ನು ನೀಡಿಯೇ ಸಿಲಿಂಡರ್‌ಗಳನ್ನು ಖರೀದಿಸಬೇಕಾಗಿದೆ. ಸಿಲಿಂಡರ್‌ಗಳ ಬೆಲೆ ಏರಿಕೆಯಿಂದಾಗಿ ಉಜ್ವಲ ಯೋಜನೆಯಲ್ಲಿ ಸಂಪರ್ಕ ಪಡೆದವರೂ ರೀಫಿಲ್ ಮಾಡಿಸಲಾಗದೆ ಮತ್ತೆ ಸೌದೆ, ಬೆರಣಿಗಳ ಮೂಲಕ ಅಡುಗೆ ಮಾಡಲಾರಂಭಿಸಿದ್ದಾರೆ. ಇದರಿಂದಾಗಿ ಹೊಟೇಲ್‌ನ ತಿನಿಸುಗಳ ಬೆಲೆಯೂ ಶೇ.15 ರಿಂದ ಶೇ 20ರಷ್ಟು ಹೆಚ್ಚಾಗಿದೆ ಎಂದು ಪತ್ರಿಕೆಗಳು ವರದಿ ಮಾಡುತ್ತಿವೆ.

ರಾಜ್ಯದ ಸಾರಿಗೆ ನಿಗಮಗಳು ಕೂಡ 2,566.71 ರೂ. ಕೋಟಿಗಿಂತ ಹೆಚ್ಚು ನಷ್ಟ ಅನುಭವಿಸಿವೆ ಎಂದು ಸಚಿವರೇ ಹೇಳುತ್ತಿದ್ದಾರೆ (ಇದರಲ್ಲಿ ಲಾಕ್‌ಡೌನ್ ಅವಧಿ ಕೂಡ ಸೇರಿದೆ). ಬೆಲೆ ಏರಿಕೆಯ ನಡುವೆ ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ಬಂದರೆ ಬೆಲೆ ಇಳಿಕೆಯಾಗುತ್ತದೆ ಎಂಬ ಸುಳ್ಳು ಅಭಿಪ್ರಾಯವನ್ನು ತೇಲಿ ಬಿಟ್ಟಿದೆ. ಅಂದರೆ ಅದರ ಅರ್ಥ ಮೊದಲು ಜಿಎಸ್‌ಟಿಯನ್ನು ಜಾರಿಗೆ ತಂದು ಆನಂತರ ತೈಲ ಉತ್ಪಾದನೆ ಮತ್ತು ಮಾರಾಟವನ್ನು ಅಂಬಾನಿ ಮುಂತಾದವರಿಗೆ ನೀಡುವ ಹುನ್ನಾರ ಇದರ ಹಿಂದೆ ಇದೆ.

ಈ ಹಿಂದೆ ಜಿಎಸ್‌ಟಿ ತಂದಾಗಲೂ ಬಹುಶಃ ಇದೇ ಶಕ್ತಿಗಳು ಪ್ರಭಾವಿಸಿದ್ದವು ಎಂದು ಕಾಣುತ್ತದೆ. ಅದರಿಂದಾಗಿಯೇ ಜಿಎಸ್‌ಟಿ ಮೂಲಕ ಪರೋಕ್ಷ ತೆರಿಗೆಯನ್ನು ಹೆಚ್ಚಿಸಿ ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆಗಳನ್ನು ಕಡಿಮೆ ಮಾಡಿ ಸಂಪತ್ತಿನ ಮೇಲಿನ ತೆರಿಗೆಯನ್ನು ನಿಲ್ಲಿಸಿ ಅವರಿಗೆ ಅನುಕೂಲ ಮಾಡಿಕೊಟ್ಟಿರುವುದು. ಈ ವಿಚಾರ ಇಂದು ಗುಟ್ಟಾಗಿ ಏನೂ ಉಳಿದಿಲ್ಲ. ಜಿಎಸ್‌ಟಿ ವ್ಯಾಪ್ತಿಗೆ ತೈಲ ದರವು ಸೇರಿ ಬಿಟ್ಟರೆ ರಾಜ್ಯಗಳು ಕೈಯಲ್ಲಿ ಚಿಪ್ಪು ಹಿಡಿದು ಭಿಕ್ಷೆ ಬೇಡಬೇಕಾದ ಸ್ಥಿತಿ ಬರುತ್ತದೆ. ಜಿಎಸ್‌ಟಿ ತಂದಿದ್ದರಿಂದ ಈಗಾಗಲೇ ನಾವು ಭಿಕ್ಷೆ ಬೇಡುವ ಸ್ಥಿತಿಗೆ ತಲುಪಿ ಬಿಟ್ಟಿದ್ದೇವೆ. ನಮ್ಮಿಂದ ಸಂಗ್ರಹವಾದ ತೆರಿಗೆಯ ಶೇ. 6ರಿಂದ ಶೇ. 7ರಷ್ಟು ಮಾತ್ರ ನಮಗೆ ವಾಪಸ್ ನೀಡುತ್ತಿದ್ದಾರೆ. ಪರಿಸ್ಥಿತಿ ಉತ್ತಮವಾಗಿದ್ದಾಗ ಶೇ.10ರಿಂದ ಶೇ.12ರಷ್ಟು ಮಾತ್ರ ತೆರಿಗೆ ಹಂಚಿಕೆಯಾಗುತ್ತಿದೆ. ಹೀಗಿರುವಾಗ ಇಂಧನದ ಮೇಲಿನ ತೆರಿಗೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದು ಬಿಟ್ಟರೆ ರಾಜ್ಯಗಳು ಜನರಿಗೆ ಕುಡಿಯುವ, ನೀರು, ರಸ್ತೆ, ವಿದ್ಯುತ್ ಇತ್ಯಾದಿಗಳನ್ನು ನಿಭಾಯಿಸಲಾಗದ ಸ್ಥಿತಿಗೆ ಬಂದು ಬಿಡುತ್ತವೆ. ಕೆಲ ಪತ್ರಿಕೆಗಳು ಮಾಡಿರುವ ಸಮೀಕ್ಷೆಯ ಪ್ರಕಾರ ಪ್ರತಿ ಕುಟುಂಬಕ್ಕೆ ಕಳೆದ ವರ್ಷ ಪ್ರತಿ ತಿಂಗಳಿಗೆ ಬರುತ್ತಿದ್ದ ಖರ್ಚಿಗೆ ಹೋಲಿಸಿದರೆ ಈ ವರ್ಷ 4 ಜನರಿರುವ ಒಂದು ಕುಟುಂಬಕ್ಕೆ 4,000 ರೂ.ಗಿಂತ ಹೆಚ್ಚು ಖರ್ಚು ಬರುತ್ತಿದೆಯಂತೆ. ಅಂದರೆ ಈ ಹಿಂದೆ ಸಾಮಾನ್ಯವಾಗಿ 4,000 ರೂ. ಖರ್ಚು ಬರುತ್ತಿದ್ದರೆ, ಬೆಲೆ ಏರಿಕೆಯಿಂದ 4,000 ರೂ. + 4,000 ರೂ. = 8,000 ರೂ. ಖರ್ಚು ಬರುತ್ತಿದೆ ಎಂದರ್ಥ.

ಬೆಲೆಗಳು ಸದ್ಯಕ್ಕೆ ಕಡಿಮೆಯಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಸೆಪ್ಟಂಬರ್, ಅಕ್ಟೋಬರ್‌ನಲ್ಲಿ ತೊಗರಿ ಬೇಳೆ 80 ರೂ. ರಿಂದ 85 ರೂ. ಇತ್ತು. ಈಗ ರೂ. 125ರಿಂದ 130ರಷ್ಟಾಗಿದೆ. ಕಳೆದ ಮುಂಗಾರಿನಲ್ಲಿ ಇಡೀ ದೇಶದ ಉದ್ದಗಲಕ್ಕೂ ಮಳೆ ಚೆನ್ನಾಗಿದ್ದ ಕಾರಣ ಉತ್ತಮ ಬೆಳೆಯೂ ಬಂದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.16ರಷ್ಟು ತೊಗರಿ ಉತ್ಪಾದನೆ ಹೆಚ್ಚಾಗಿದೆ. ಆದರೂ ಬೆಲೆ ಮಾತ್ರ ಅಸಹಜವಾಗಿ ಏರಿಕೆಯಾಗಿದೆ. ಇದೇ ರೀತಿ ಮುಂದುವರಿದರೆ ತೊಗರಿ ಬೇಳೆಯ ಬೆಲೆ 150-160 ರೂ.ಗೆ ತಲುಪಬಹುದೆಂದು ಅಂದಾಜಿಸಲಾಗಿದೆ.

ದೇಶದಲ್ಲಿ ಸುಮಾರು 50 ಮಿಲಿಯನ್ ಟನ್‌ಗಳಷ್ಟು ತೊಗರಿ ಬೇಳೆಯ ಬಳಕೆಯಿದೆ. ಒಂದು ಕೆ.ಜಿ.ಯ ಮೇಲೆ ರೂ.30ರಷ್ಟು ಬೆಲೆ ಜಾಸ್ತಿಯಾದರೂ ಸುಮಾರು ರೂ.1.50 ಲಕ್ಷ ಕೋಟಿಗಳಷ್ಟು ಹಣ ಜನರ ಜೇಬಿನಿಂದ ಕಾರ್ಪೊರೇಟ್ ಕಂಪೆನಿಗಳ ಜೇಬಿಗೆ ಹೋಗುತ್ತದೆ. 2015-16ರಲ್ಲಿ ಸಹ ಬೆಳೆ ಉತ್ತಮವಾಗಿದ್ದರೂ ತೊಗರಿ ಬೇಳೆಯ ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚಾಗಿತ್ತು. ಆಗ ಆದಾಯ ತೆರಿಗೆ ಇಲಾಖೆಯವರು ಅದಾನಿ, ಜಿಂದಾಲ್, ವಿಲ್‌ಮಾರ್ ಮುಂತಾದ ಕಂಪೆನಿಗಳ ಮೇಲೆ ದಾಳಿ ಮಾಡಿ ಸುಮಾರು 75,000 ಟನ್‌ಗಳಷ್ಟು ಅಕ್ರಮ ದಾಸ್ತಾನು ಮಾಡಿದ್ದ ತೊಗರಿ ಬೇಳೆಯನ್ನು ವಶಪಡಿಸಿಕೊಂಡಿದ್ದರು. ಅಗತ್ಯ ವಸ್ತುಗಳ ಕಾಯ್ದೆ ಇದ್ದ ಕಾರಣಕ್ಕೆ ಹೀಗೆ ದಾಳಿ ಮಾಡಲು ಸಾಧ್ಯವಾಯಿತು. ಅಕ್ರಮ ದಾಸ್ತಾನುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಾಯಿತು. ಅದರಿಂದ ಬೆಲೆಗಳು ಕಡಿಮೆಯಾದವು. ಇದನ್ನು ಮನಗಂಡ ಮೋದಿ ಸರಕಾರವು ಅದಾನಿ ಮುಂತಾದವರಿಗೆ ಅನುಕೂಲ ಮಾಡಿಕೊಡಲು ಈ ಕಾಯ್ದೆಯನ್ನೇ ತಿದ್ದುಪಡಿ ಮಾಡಿ ಯಾರು ಎಷ್ಟು ಬೇಕಾದರೂ ದಾಸ್ತಾನು ಮಾಡಬಹುದು ಎನ್ನುತ್ತದೆ. ಹಾಗಾಗಿಯೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ.

ಗಾಯದ ಮೇಲೆ ಬರೆ ಎಳೆದಂತೆ ಇಂಧನಗಳ ಮೇಲಿನ ದರವೂ ಹೆಚ್ಚಾಗುತ್ತಿದೆ. ಈ ವರ್ಷ ಎಣ್ಣೆ ಕಾಳುಗಳು ಹಾಗೂ ಧಾನ್ಯಗಳ ಉತ್ಪಾದನೆ ಸಹ ಉತ್ತಮವಾಗಿಯೇ ಇದೆ. ಆದರೆ ಬೆಲೆ ಮಾತ್ರ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಇತ್ತ ರೈತರಿಗೂ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಗ್ರಾಹಕರಿಗೂ ನ್ಯಾಯಯುತ ಬೆಲೆಗೆ ಸಿಗುತ್ತಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ದೇಶದ ಜನರಿಗೆ ಎಲ್ಲ ಕಡೆಯಿಂದಲೂ ಆಘಾತವೇ. ಕಳೆದ ವರ್ಷ 90 ರೂ.ಗಳಿದ್ದ ಹೆಸರು ಕಾಳು ಈಗ 140 ರೂ. ಆಗಿದೆ. ಅಡುಗೆ ಎಣ್ಣೆ 85 ರೂ. ಇದ್ದದ್ದು 165-170 ರೂ.ಗೆ ಏರಿಕೆಯಾಗಿದೆ. ಈ ಎಲ್ಲದರ ಪರಿಣಾಮವಾಗಿ ಹೊಟೇಲ್‌ಗಳಲ್ಲಿ ಕಾಫಿ, ಟೀ, ಊಟ, ತಿಂಡಿಗಳ ಬೆಲೆ ಶೇ. 40ರವರೆಗೆ ಏರಿಕೆಯಾಗಿದೆ. ಬಿಜೆಪಿ ಸರಕಾರಗಳ ದುರಾಡಳಿತದಿಂದಾಗಿ ಜನ ಸೋತು ಹೋಗಿದ್ದಾರೆ. ಹಿಂದೆ ಜನಪದರು ಹಾಡುತ್ತಿದ್ದರು ‘‘ಬಡವರು ಸತ್ತರೆ ಸುಡಲಿಕ್ಕೆ ಸೌದೆ ಇಲ್ಲ, ದೇವರೇ ಬಡವರಿಗೆ ಸಾವ ಕೊಡಬ್ಯಾಡ’’ ಅಂತ. ಈಗಲೂ ಅಂತದೇ ಪರಿಸ್ಥಿತಿಯತ್ತ ದೇಶವನ್ನು ಕೊಂಡೊಯ್ಯಲಾಗುತ್ತಿದೆ.

ಆದರೆ ಬೆಲೆ ಏರಿಕೆ, ಕೊರೋನ ಇವುಗಳು ದೇಶವನ್ನು ಭೀಕರವಾಗಿ ಬಾಧಿಸುತ್ತಿರುವ ಸಂದರ್ಭದಲ್ಲೇ ಕಾರ್ಪೊರೇಟ್ ಕಂಪೆನಿಗಳ ಸಂಪತ್ತು ಸುಮಾರು 12 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಮೋದಿಯವರು ಜನಪರವಾಗಿದ್ದರೆ ಈ ಹೆಚ್ಚಾದ 12 ಲಕ್ಷ ಕೋಟಿ ರೂ. ಮೇಲೆ ಶೇ.5ರಷ್ಟು ತೆರಿಗೆ ಹಾಕಿದ್ದರೆ ದೇಶಕ್ಕೆ 60,000 ಕೋಟಿ ರೂ. ಆದಾಯ ಬರುತ್ತಿತ್ತು. ದೇಶದ ಬಂಡವಾಳಿಗರ ಮೇಲೆ ಶೇ.5 ರಷ್ಟು ತೆರಿಗೆ ವಿಧಿಸಿದ್ದರೆ ಡೀಸೆಲ್, ಪೆಟ್ರೋಲ್, ಗ್ಯಾಸ್ ಸಿಲಿಂಡರ್‌ಗಳನ್ನು ಈಗ ಮಾರುತ್ತಿರುವ ದರಗಳ ಅರ್ಧ ದರದಲ್ಲಿ ನೀಡಬಹುದಿತ್ತು. ಆದರೆ ಬಿಜೆಪಿ ಸರಕಾರಗಳು ಜನಸಾಮಾನ್ಯರ ಮೇಲಿನ ತೆರಿಗೆಯನ್ನು ಹೆಚ್ಚಿಸುತ್ತಿವೆ. ಕಾರ್ಪೊರೇಟ್ ಕುಳಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡುತ್ತಿವೆ. ಇದೆಲ್ಲವೂ ಸೇರಿ ಜನಸಾಮಾನ್ಯರ ಬದುಕು ನರಕ ಸದೃಶವಾಗುತ್ತಿದೆ. ಸುಗ್ಗಿಯ ಸಂದರ್ಭದಲ್ಲೇ ಜನರು ಅಡುಗೆ ಎಣ್ಣೆ, ತೊಗರಿ ಬೇಳೆಯನ್ನು ಕೊಂಡು ತಿನ್ನಲಾಗದಂತಹ ಪರಿಸ್ಥಿತಿಯನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಇನ್ನಷ್ಟು ಭೀಕರವಾಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)