varthabharthi


ಅನುಗಾಲ

ಅಪೂರ್ಣ ಓದಿನ ಅವ್ಯಕ್ತ ಭಾವ

ವಾರ್ತಾ ಭಾರತಿ : 8 Apr, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಗಂಭೀರವಾದ, ಮನಮುಟ್ಟುವ, ನೂರಾರು ಕತೆಗಳು, (ಮುಖ್ಯವಾಗಿ ಸಣ್ಣ ಕತೆಗಳು ಮತ್ತು ಅತಿ ಸಣ್ಣಕತೆಗಳು) ವೃತ್ತಾಂತಗಳು, ಕವಿತೆಗಳು ಇರುವ ಅನೇಕ ಕೃತಿಗಳನ್ನು ಓದಿ ಮುಗಿಸಿದಾಗ ಅವೆಲ್ಲವೂ ನೆನಪಿನಲ್ಲಿರುವುದಿಲ್ಲ. ಅವನ್ನು ಉಲ್ಲೇಖಿಸಬೇಕೆಂದರೆ ಮತ್ತೆ ಪುಟ ತಿರುವಬೇಕಾಗುತ್ತದೆ. ಯಾವುದನ್ನು ಓದಿದ್ದೇನೆ ಯಾವುದನ್ನು ಓದಿಲ್ಲ ಎಂಬುದು ಮರೆತುಹೋಗಿರುತ್ತದೆ. ಪ್ರತಿಯೊಂದು ಕವಿತೆಯನ್ನು ಬರೆಯುವಾಗಲೂ ಅದರ ಲೇಖಕನಿಗೆ ಅದೇ ಆ ಕ್ಷಣದ ಜಗತ್ತಾಗಿರುತ್ತದೆ. ಓದುಗನೂ ಅಷ್ಟೇ: ಆ ಜಗತ್ತಿನಲ್ಲಿರುವವರೆಗೆ ಅದರಲ್ಲಿ ಮೈಮರೆಯುತ್ತಾನೆ. ಹೊರಬಂದಾಗ ಅದೊಂದು ಕನಸಿನಂತಿರುತ್ತದೆ. ಇದಕ್ಕೆ ಕಾರಣವೇನೋ ತಿಳಿಯದು.


ಒಂದೇ ಕಥಾವಸ್ತುವನ್ನು ಬೆಳೆಸಿಕೊಂಡು ಹೋಗುವ ದೀರ್ಘ ಕಾದಂಬರಿಯ ಓದಿನಂತಲ್ಲ ಇತರ ಕೃತಿಗಳು. ನಾಟಕ ಕೃತಿಗಳು ಪ್ರಯೋಗದಲ್ಲೂ ಸಂವಹಿಸುತ್ತವಾದ್ದರಿಂದ ಅವುಗಳನ್ನು ಸಾಹಿತ್ಯದ ಇತರ ಪ್ರಕಾರಗಳೊಂದಿಗೆ ಹೋಲಿಸಿ ಮಾತನಾಡುವುದು ತಪ್ಪಾಗುತ್ತದೆ. ಇನ್ನುಳಿದ ಪ್ರಕಾರಗಳಾದ ಕಾವ್ಯ ಮತ್ತು ಕಥೆಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ಒಂದೊಂದು ಕವಿತೆ, ಕಥೆಗಳು ನೆನಪಿನಲ್ಲುಳಿಯುತ್ತವೆ. ಆದರೆ ಕವನ ಸಂಕಲನವಾಗಲೀ, ಕಥಾ ಸಂಕಲನವಾಗಲೀ ಪೂರ್ಣ ಓದಿನ ಆನಂತರ ಅವುಗಳ ಕುರಿತು ಓದುಗನಾಗಿ ಬರೆಯುವುದು ನನಗೆ ಕಷ್ಟದ ಕೆಲಸ. ಇಷ್ಟವಾಯಿತು ಎನ್ನಬಹುದು. ಆದರೆ ವಿವರವಾಗಿ ಹೇಳುವುದು ತ್ರಾಸದಾಯಕ. ಇಡೀ ಗುಡ್ಡ ಸುತ್ತಿ ಅದರ ಬಗ್ಗೆ ಬರೆದ ಹಾಗೆ. ಅಲ್ಲಿನ ಸೂಕ್ಷ್ಮಗಳು ದೃಷ್ಟಿಯಿಂದ ಮರೆಯಾಗಿ ಒಟ್ಟಾರೆ ಗಾತ್ರವಷ್ಟೇ ನೆನಪಿನಲ್ಲಿ ಉಳಿಯುತ್ತದೆ. ಇನ್ನು ಹಾಸ್ಯ ಚುಟುಕಗಳ, ಪ್ರಸಂಗಗಳ ಸಂಕಲನಗಳನ್ನು ಓದಿದ ಮೇಲೆ ಪ್ರತ್ಯೇಕವಾಗಿ ಯಾವುವೂ ನೆನಪಿನಲ್ಲುಳಿಯುವುದಿಲ್ಲ. ಯಾರಾದರೂ ನೀವು ಓದಿದ ಪುಸ್ತಕದಿಂದ ಒಂದೆರಡು ಹಾಸ್ಯ ಪ್ರಸಂಗಗಳನ್ನೋ, ಚುಟುಕು ಕವನಗಳನ್ನೋ ಹೇಳಿ ಎಂದರೆ ತಕ್ಷಣ ನೆನಪಾಗದು. ನಾವು ವಿದ್ಯಾರ್ಥಿಗಳಾಗಿದ್ದಾಗ ಹಿಮಾಲಯನ್ ಡ್ರಗ್ ಹೌಸ್‌ನವರು ವ್ಯಂಗ್ಯ ಚಿತ್ರಗಳನ್ನೊಳಗೊಂಡ ಹಾಸ್ಯಪ್ರಸಂಗಗಳನ್ನು ಪುಸ್ತಕ ರೂಪದಲ್ಲಿ ಔಚ್ಠಜಠಿಛ್ಟಿ ಠಿಛಿ ಚಿಛಿಠಿ ಞಛಿಜ್ಚಿಜ್ಞಿಛಿ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸುತ್ತಿದ್ದರು. ಅವನ್ನು ಒಂದೇ ಬಾರಿಗೆ ಓದಿ ಆನಂದಿಸುತ್ತಿದ್ದೆ. ಆದರೆ ಯಾರಿಗಾದರೂ ಹೇಳಿ ಭೇಷ್ ಅನ್ನಿಸಿಕೊಳ್ಳೋಣವೆಂದರೆ ಮತ್ತೆ ಯಾವ ನಗೆಹನಿಯೂ ನೆನಪಾಗದು. ದುಂಡಿರಾಜ್ ಮತ್ತಿತರರ ಚುಟುಕು ಕವಿತೆಗಳನ್ನು ಓದಿ ಆನಂದಿಸಿ ಅದರ ರುಚಿಯನ್ನು ಹೇಳಿಕೊಳ್ಳೋಣವೆಂದರೆ ಅರೆ! ನೆನಪಾಗದು. ಇನ್ಯಾರೋ ಅವನ್ನು ಹೇಳಿದಾಗ ಮತ್ತೆ ನೆನಪಾಗಿ ಮೆಚ್ಚುಗೆಯಿಂದ ನಗುತ್ತೇವೆ, ಅಷ್ಟೇ. (ನೆನಪಿಡುವವರೂ ಇರಬಹುದು. ಅವರಿಗೆ ಎಲ್ಲ ಜನಸಾಮಾನ್ಯರ ಪರವಾಗಿ ಅಭಿನಂದನೆಗಳು.)

ವೃತ್ತಿಪರ ವಿಮರ್ಶಕರು ಸಾಮಾನ್ಯವಾಗಿ ಯಾವುದೇ ಕೃತಿಯನ್ನು ಓದಿ ಆನಂದಿಸುವ ಬದಲು ಅದರ ವಿವರಗಳನ್ನು ಗುರುತಿಸಿಕೊಂಡೇ ಹೋಗುವುದರಿಂದ ಅವರ ದೃಷ್ಟಿಕೋನ ಸಾಮಾನ್ಯ ಓದುಗನಿಂದ ಭಿನ್ನವಾಗಿರುತ್ತದೆ. ಕಾಡನ್ನು ಆನಂದಿಸುವ ಪ್ರಕೃತಿಪ್ರಿಯರಿಗೂ ಅಲ್ಲಿನ ಮರಗಳ ಗಣತಿಗಾಗಿ ಹೋಗುವ ಅರಣ್ಯ ಇಲಾಖಾ ನೌಕರನಿಗೂ ಇರಬಹುದಾದ ವ್ಯತ್ಯಾಸ; ಅಥವಾ ಹೂವನ್ನು ನೋಡಿ ಖುಷಿಪಡುವವನಿಗೂ ಅದರ ಎಸಳುಗಳನ್ನು ಭಂಜಿಸಿ ಪರೀಕ್ಷೆಮಾಡುವ ಸಸ್ಯಶಾಸ್ತ್ರಜ್ಞನಿಗೂ ಇರುವ ವ್ಯತ್ಯಾಸ. ಸುಂದರ (ವ್ಯಕ್ತಿಯ) ಭಾವಚಿತ್ರವನ್ನು ಅಂಟಿಸಿದ ಅರ್ಜಿ ನಮೂನೆಗೆ ಸರಕಾರಿ ಕಚೇರಿಯಲ್ಲಿ ಮುಖವೇ ಗುರುತಾಗದ ಹಾಗೆ ಬಲವಾದ ಮೊಹರು ಹಾಕುವುದನ್ನು ಗಮನಿಸಿ. ಭಾವ ಮತ್ತು ವಿಚಾರದ ಅಂತರ ಇದೇ ಇರಬಹುದು. ಹೀಗೆ ಬದುಕಿನ ಎಲ್ಲ ರಂಗಗಳಲ್ಲೂ ಇಂತಹ ವ್ಯತ್ಯಾಸಗಳಿರುತ್ತವೆ.

ಗಂಭೀರವಾದ, ಮನಮುಟ್ಟುವ, ನೂರಾರು ಕತೆಗಳು, (ಮುಖ್ಯವಾಗಿ ಸಣ್ಣ ಕತೆಗಳು ಮತ್ತು ಅತಿ ಸಣ್ಣಕತೆಗಳು) ವೃತ್ತಾಂತಗಳು, ಕವಿತೆಗಳು ಇರುವ ಅನೇಕ ಕೃತಿಗಳನ್ನು ಓದಿ ಮುಗಿಸಿದಾಗ ಅವೆಲ್ಲವೂ ನೆನಪಿನಲ್ಲಿರುವುದಿಲ್ಲ. ಅವನ್ನು ಉಲ್ಲೇಖಿಸಬೇಕೆಂದರೆ ಮತ್ತೆ ಪುಟ ತಿರುವಬೇಕಾಗುತ್ತದೆ. ಯಾವುದನ್ನು ಓದಿದ್ದೇನೆ ಯಾವುದನ್ನು ಓದಿಲ್ಲ ಎಂಬುದು ಮರೆತುಹೋಗಿರುತ್ತದೆ. ಪ್ರತಿಯೊಂದು ಕವಿತೆಯನ್ನು ಬರೆಯುವಾಗಲೂ ಅದರ ಲೇಖಕನಿಗೆ ಅದೇ ಆ ಕ್ಷಣದ ಜಗತ್ತಾಗಿರುತ್ತದೆ. ಓದುಗನೂ ಅಷ್ಟೇ: ಆ ಜಗತ್ತಿನಲ್ಲಿರುವವರೆಗೆ ಅದರಲ್ಲಿ ಮೈಮರೆಯುತ್ತಾನೆ. ಹೊರಬಂದಾಗ ಅದೊಂದು ಕನಸಿನಂತಿರುತ್ತದೆ. ಇದಕ್ಕೆ ಕಾರಣವೇನೋ ತಿಳಿಯದು. ಮರೆವಂತೂ ಅಲ್ಲ. ಏಕೆಂದರೆ ಮಕ್ಕಳಿಗೆ ಹೇಳುವ ಅನೇಕ ಕತೆಗಳು ಸದಾ ನೆನಪಿನಲ್ಲಿರುತ್ತವೆ. ಈ ಎಲ್ಲ ಪುಟ್ಟ ಸೃಷ್ಟಿಗಳು ತಮ್ಮದೇ ಜಗತ್ತನ್ನು ರಚಿಸಿಕೊಂಡು ಅಲ್ಲಿ ನಮಗೆ ಮುದನೀಡುತ್ತವೆ. ಅಲ್ಲಿಂದ ಹೊರಟು ಇನ್ನೊಂದು ಗ್ರಹವನ್ನು ತಲುಪಿದಾಗ ಹಿಂದಿನದನ್ನು ಮರೆತು ಹೊಸದಕ್ಕೆ ಹೊಂದಿಕೊಂಡು ಹೋಗುತ್ತೇವೆ. ವರ್ಗಾವಣೆಯ ಉದ್ಯೋಗದ ಹಾಗೆ; ‘ಪುಟ್ಟ ರಾಜಕುಮಾರ’ ಎಂಬ ಆಂಗ್ಲ ಮೂಲದ ಒಂದು ಮುದ್ದಾದ ಪುಸ್ತಕದಲ್ಲಿನ ಪಯಣದ ಹಾಗೆ. ನನ್ನ ಅನೇಕ ಪ್ರೀತಿಯ ಕವಿಗಳ ಕವಿತಾ ಸಂಕಲನಗಳನ್ನು ಓದಿ ಹೀಗೆ ಗುರುತು ಮಾಡಿಕೊಂಡಿದ್ದೇನೆ. ‘ಸಮಗ್ರ’ ಬಂದಾಗಲಂತೂ ಅದರಲ್ಲಿ ಇಂತಹ ಹತ್ತಾರು ಪುಟಗುರುತುಗಳನ್ನು ಹಾಕಿರುತ್ತೇನೆ. ಕಂಠಪಾಠ ಮಾಡಿದರೆ ಇವು ಉಳಿಯಬಹುದೇನೋ ಎಂದು ಪ್ರಯತ್ನಿಸಿದೆನಾದರೂ ಎಲ್ಲವೂ ನನ್ನ ತೆಕ್ಕೆಯಲ್ಲಿ ಉಳಿಯಲಿಲ್ಲ. ಇನ್ಯಾರೋ ಒಬ್ಬರು ಓದುವಾಗ ಇವೆಲ್ಲ ನನಗೆ ನೆನಪಿವೆಯೆಂಬ ಅಂಶ ಜಾಗೃತವಾಗುತ್ತದೆ. ಆದರೆ ಈ ನೆನಪು ಇನ್ನೊಬ್ಬರು ಓದುವಾಗ; ನನ್ನ ಒಳಕೊಠಡಿಯಲ್ಲಿ ಅಲ್ಲ.

ಕತೆಗಳೂ ಹೀಗೆಯೇ. ಒಬ್ಬ ಕತೆಗಾರನ ಎಲ್ಲ ಕೃತಿಗಳನ್ನೂ ಓದಿರುತ್ತೇವೆಂದುಕೊಳ್ಳಿ: ಅವುಗಳಲ್ಲಿ ಸಾಹಿತ್ಯಪ್ರೇಮಿಗಳು ನೆನಪಿಡುವ ಅನೇಕ ಕತೆಗಳಿರುತ್ತವೆ. ಹೆಮಿಂಗ್‌ವೇ ಬರೆದ ಒಂದು ಪುಟ್ಟ ಕತೆ: ‘ಮಾರಾಟಕ್ಕಿವೆ. ಮಗುವಿನ ಬೂಟುಗಳು. ಬಳಸದೇ ಇದ್ದದ್ದು.’ ಅವುಗಳು ಯಾವುದೋ ಸಂದರ್ಭಗಳಲ್ಲಿ ನೆನಪಿನಲ್ಲಿ ಮರುಕಳಿಸುತ್ತವೆ. ಅವರ ಬಗ್ಗೆ ಮಾತನಾಡಬೇಕೆಂದಾಗ ಎಲ್ಲವೂ ನೆನಪಾಗವು. ಬರೆಯಬೇಕೆಂದರೆ ಪುಸ್ತಕಗಳ ಪರಿವಿಡಿಯನ್ನು ನೋಡಿಕೊಂಡಾದರೂ ಪಟ್ಟಿಮಾಡಬಹುದು. ಶೀರ್ಷಿಕೆ ಓದಿದರೂ ಕೆಲವು ಬಾರಿ ಕಥಾವಸ್ತು ಏನೆಂದು ನೆನಪಾಗದು. ಮಾಸ್ತಿಯವರು ಹೆಸರಿಟ್ಟಂತೆ ವೆಂಕಟಿಗನ ಹೆಂಡತಿ ಹೀಗೆಲ್ಲ ಹೆಸರುಗಳಿದ್ದರೆ ಕಥಾವಸ್ತು ನೆನಪಿಡಲು ಸುಲಭ. ರೂಪಕ ಶೀರ್ಷಿಕೆಗಳಿದ್ದಾಗ ಕಥಾವಸ್ತು ನೆನಪಿನಿಂದ ಮರೆಯಾಗುತ್ತಿರುತ್ತದೆ. ಇನ್ನು ಕೆಲವು ಬಾರಿ ಕಥಾವಸ್ತು ನೆನಪಾದರೂ ಶೀರ್ಷಿಕೆ ನೆನಪಾಗದು. ನಾವು ಯಾವುದೋ ಸಂದರ್ಭಕ್ಕೆ ಇಂತಹವರ ಒಂದು ಕತೆಯಲ್ಲಿ ಈ ಪ್ರಸಂಗವಿದೆ ಎಂದಾಗ ಕತೆಯ ಹೆಸರು ನೆನಪಾಗದೆ ಹುಡುಕಿದರೂ ಫಕ್ಕನೆ ಸಿಗದೆ ಕೊನೆಗೆ ಯಾರೋ ಒಬ್ಬ ಸಹೃದಯರು ನೆನಪಿಸಬೇಕಾಗುತ್ತದೆ. ‘‘ಆಹ್, ಅದೇ..’’ ಎಂದು ಉತ್ತರಿಸಬೇಕಾಗುತ್ತದೆ. ನಮ್ಮಲ್ಲಿ ಕೆಲವು ಬಾರಿ ಯಾವುದೋ ಗಾದೆಯನ್ನು ನೆನಪಿಸಬೇಕಾದರೆ ಅದು ನೆನಪಾಗದೆ ‘‘ಗಂಟಲಲ್ಲಿದೆ, ಬಾಯಿಗೆ ಬಾರದು’’ ಎನ್ನುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಅನೇಕ ಹಳಬರು ‘‘ಗಾದೆ ಹೇಳಿದ ಹಾಗೆ’’ ಎಂಬ ಸುಲಭ ಸರ್ವ ಸೂತ್ರವನ್ನು ತಂದಿರುವುದರಿಂದ ಎಲ್ಲರೂ ಕ್ಷೇಮ.

ಯಾರೋ ಒಬ್ಬ ಲೇಖಕನ ದೊಡ್ಡ ಅಭಿಮಾನಿಗಳೋ, ಅವರನ್ನೇ ಕುರಿತು ಹಲವಾರು ವರ್ಷಗಳಿಂದ ಅಧ್ಯಯನ, ಸಂಶೋಧನೆ, ಧ್ಯಾನ, ಆರಾಧನೆ ಮಾಡುವವರೋ ಆದರೆ ಅವರ ಎಲ್ಲ ಕೃತಿಗಳನ್ನೂ ನೆನಪಿನಲ್ಲಿಟ್ಟುಕೊಂಡಾರು. ಡಿ.ವಿ.ಜಿ., ಬೇಂದ್ರೆ, ಅಡಿಗರ ಕುರಿತು ಅನೇಕರು ನಿರರ್ಗಳವಾಗಿ ಉಲ್ಲೇಖಿಸುತ್ತ ಮಾತನಾಡುವುದನ್ನು ಕೇಳಿದ್ದೇನೆ. ಆದರೂ ಅವರಿಗೂ ನೆನಪಾಗದ ಪದ್ಯಗಳಿವೆಯೆಂಬುದು ಅವರ ಮಾತುಗಳು ಪುನರಾವರ್ತನೆಯಾಗುವಾಗ ಅರ್ಥವಾಗುತ್ತದೆ. ಕುಮಾರವ್ಯಾಸ ಭಾರತದ ಪ್ರಸಿದ್ಧ ಪದ್ಯಗಳು ಎಂಬ ಅಭಿದಾನ ಮತ್ತು ನಾಮಧೇಯ ಕೆಲವೇ ಪದ್ಯಗಳಿಗೆ ಬಂದಿರುವುದು ಈ ಕಾರಣದಿಂದ. ಅವೇ ಶ್ರೇಷ್ಠವೆಂದಲ್ಲ; ಅವು ಹೆಚ್ಚು ಓದುಗರಿಗೆ ನೆನಪಿವೆಯೆಂಬ ಕಾರಣದಿಂದ.

ಕೆಲವು ಇಂತಹ ಒಳ್ಳೆಯ ಪುಸ್ತಕಗಳಿವೆ: ಇವನ್ನು ಯಾಕಾದರೂ ಮರೆಯುತ್ತೇನೆ ಎಂಬ ದುಃಖವಿದೆ. ಆದರೆ ಅವನ್ನು ಓದಿ ಆನಂದಿಸಿದ ಅನುಭವ ಸದಾ ಇದ್ದಾಗಲೂ ಯಾವುದೋ ಒಂದು ಕತೆಯೋ, ಕವಿತೆಯೋ, ಪ್ರಸಂಗವೋ ಬೇಕೆಂದಾಗ ನೆನಪಾಗುವುದಿಲ್ಲವೆಂಬ ವಿಷಾದ. ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು ಬರೆದ ‘ಉದಾರಚರಿತರು ಉದಾತ್ತ ಪ್ರಸಂಗಗಳು’ ಎಂಬ ಪುಸ್ತಕವನ್ನು ಓದಿ ಬಹಳಷ್ಟು ಪ್ರಭಾವಕ್ಕೊಳಗಾದ ನಾನು ಭಾರೀ ಸಭೆಗಳಲ್ಲಿ ಕೆಲವೊಂದು ಪ್ರಸಂಗಗಳನ್ನು ಹೇಳಿ ಮೈನವಿರೇಳಿಸಬೇಕೆಂದು ಪ್ರಯತ್ನಿಸಿದೆನಾದರೂ ಅವು ನನ್ನ ನೆನಪಿಗೆ ಫಕ್ಕನೇ ದಕ್ಕಲಿಲ್ಲ. ಸರ್ವಜ್ಞನ ತ್ರಿಪದಿಗಳು, ಡಿವಿಜಿಯವರ ಮಂಕುತಿಮ್ಮನ ಕಗ್ಗದ ಅನೇಕ ಅಷ್ಟೇನೂ ಜನಪ್ರಿಯವಲ್ಲದ ಆದರೆ ಒಳ್ಳೆಯ ಪದ್ಯಗಳು ಈಗಲೂ ನೆನಪಾಗವು. ಪುಟ ಹುಡುಕಿ ಓದಿ ಆಸ್ವಾದಿಸುತ್ತೇನೆ, ಅಷ್ಟೇ. ಓದಿ ಸಂತೋಷಪಟ್ಟ ವಿ.ಜಿ.ಭಟ್ಟರ ಅನೇಕ ಸಣ್ಣಪದ್ಯಗಳು, ಬೇಕೆಂದರೆ ನೆನಪಾಗವು. ಈಚೆಗೆ ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿದ ‘ಜಿಪುಣರ ಕತೆಗಳು’ ಎಂಬ ಕೃತಿಯೂ ಈ ಸಾಲಿನಲ್ಲಿದೆ. ಈ ಲೋಪಕ್ಕೆ ನಾನೇ ಹೊಣೆ ಹೊರತು ಬರೆದವರಲ್ಲವೆಂಬುದು ನನಗೆ ಗೊತ್ತಿದೆಯಾದರೂ ಯಾಕೆ ಹೀಗೆ ಎಂದುಕೊಳ್ಳುತ್ತೇನೆ. ಈ ಮತ್ತು ಇಂತಹ ಹಲವು ಕಾರಣಗಳಿಗಾಗಿ ನಾನು ಇಂತಹ ಅನೇಕ ಕೃತಿಗಳನ್ನು ನನ್ನ ಮೇಜಿನೆದುರು ಇರಿಸಿಕೊಂಡು ಆಗಾಗ ಪುಟ ತಿರುವುತ್ತಿರುತ್ತೇನೆ. ಓದಿ ನಿಲ್ಲಿಸಿದೆಡೆ ಪುಟಗುರುತನ್ನಿಟ್ಟುಕೊಂಡಿರುತ್ತೇನೆ. ಈ ಅಪೂರ್ಣ ಓದು ಪುಸ್ತಕವನ್ನು ಅರ್ಧ ಓದಿದಂತಲ್ಲ. ಓದುತ್ತಲೇ ಇರುವ ಒಂದು ಕಾಯಕ. ದೃಷ್ಟಿಪಟಲಕ್ಕೊಂದು ಮಿತಿ; ಒಂದು ಪರಿಧಿ.

*

ಇವೆಲ್ಲ ನೆನಪಾದದ್ದು ಮೊನ್ನೆ ಮಂಗಳೂರಿನ ಎ.ಕೆ.ಕುಕ್ಕಿಲ ಅವರ ‘ಅಮ್ಮನ ಕೋಣೆಗೆ ಏ.ಸಿ.’ ಎಂಬ 128 ಕತೆಗಳ ಕೇವಲ 144 ಪುಟಗಳ ಕೃತಿಯನ್ನು ಓದುತ್ತಿದ್ದಾಗ. ಕತೆಗಳ ಮತ್ತು ಪುಟಗಳ ಸಂಖ್ಯೆಯನ್ನು ಗಮನಿಸಿದರೆ ಇಲ್ಲಿನ ಕತೆಗಳ ಗಾತ್ರದ ಅರಿವಾದೀತು. ಕುಕ್ಕಿಲರು ಕತೆಗಾರರೂ ಹೌದು; ಪತ್ರಕರ್ತರೂ ಹೌದು. ಹೀಗೆ ಎರಡು ದೊಣಿಯಲ್ಲಿ ಕಾಲಿಟ್ಟವರು ಬೇಗ ಜನಪ್ರಿಯರಾಗುತ್ತಾರಾದರೂ ಅವರ ಅಂತರಂಗದ ತಳಮಳ ಅವರಿಗೇ ಗೊತ್ತು. ಪತ್ರಿಕೆಗಳಲ್ಲಿ ಸಾಪ್ತಾಹಿಕವೋ ಸಾಹಿತ್ಯ ವಿಭಾಗವೋ, ಅಥವಾ ನಿಯತಕಾಲಿಕಗಳಲ್ಲಿ ಸಾಹಿತ್ಯವನ್ನೇ ಧೇನಿಸುವ ಹೊಣೆಯ ಪತ್ರಕರ್ತರಿಗೆ ಸಾಹಿತ್ಯದ ರುಚಿ ಕೆಟ್ಟಿರುವುದಿಲ್ಲ. ಅದಲ್ಲದೆ ಪೂರ್ಣ ಪತ್ರಿಕೆಯ ಹೊಣೆಯಿದ್ದವರು ಸಾಹಿತ್ಯದ ತಮ್ಮ ಭೂಮಿಕೆಯನ್ನು, ಪಾತ್ರಸಂಚಲನವನ್ನು ಉಳಿಸಿಕೊಳ್ಳುವುದು ಕಷ್ಟ; ಆದರೆ ಕಷ್ಟಸಾಧ್ಯ. ಕನ್ನಡದ ಅನೇಕ ಪತ್ರಕರ್ತರು ಒಳ್ಳೆಯ ಲೇಖಕರಾಗಿ ಉಳಿದಿದ್ದರೆ ಅದು ಸಾಹಿತ್ಯದ ಪುಣ್ಯ.

ಕುಕ್ಕಿಲರು ಇವನ್ನು ಕತೆಗಳೆಂದೇ ಕರೆದಿದ್ದಾರೆ. ಕೆಲವು ಕತೆಗಳಾದರೂ ಸಾದತ್ ಹಸನ್ ಮಾಂಟೋವಿನ ಕತೆಗಳಂತಿವೆ. ಕತೆಗಾರ ಮತ್ತು ಪತ್ರಕರ್ತನ ನಡುವಣ ದ್ವಂದ್ವದಲ್ಲಿ ಕತೆಗಾರ ಪೂರ್ಣ ಜಯಿಸಿದ್ದಾನೆಂದುಕೊಳ್ಳುವಂತಿಲ್ಲ. ಇವೆಲ್ಲ ಫಳಕ್ಕನೆ ಹೊಳೆಯುವ ಬೆಳಕಿನ ಕಿಡಿಗಳಂತಿವೆ ಅಥವಾ ಅತಿಸಣ್ಣ ಕತೆಗಳು ಎಂಬ ಪ್ರಕಾರದಲ್ಲಿವೆ. ಪ್ರಾಯಃ ಪತ್ರಕರ್ತನ ದೈನಿಕ ಹೊಣೆಯ ಒತ್ತಡವಿಲ್ಲದಿರುತ್ತಿದ್ದರೆ ಇಲ್ಲಿನ ಅನೇಕ ಅನುಭವಗಳು, ಪ್ರಸಂಗಗಳು ಇವಕ್ಕಿಂತ ದೀರ್ಘ ಮತ್ತು ಹೆಚ್ಚು ಆಯಾಮಗಳನ್ನೊಳಗೊಂಡ ಕತೆಗಳಾಗುತ್ತಿದ್ದವೇನೋ? ಆದರೆ ಇಲ್ಲಿ ಕತೆಯ ಒಡಲಿದೆ; ಉಸಿರಿದೆ. ಇಲ್ಲಿ ಭಾವನೆಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ಇತರರು ಅರ್ಥೈಸುವ ವಿಧಾನದ ಭಿನ್ನತೆಯೇ ಒಂದು ರೂಪಕವಾಗಿದೆ. ಇಲ್ಲಿ ಮಳೆ, ಹಾಸಿಗೆ, ಪಾಯಸ ನಗುತ್ತವೆ. ವ್ಯಂಗ್ಯ ಎಂಬ ಒಂದು ಪುಟ್ಟ ಪ್ರಸಂಗ ಹೀಗಿದೆ: 10 ವರ್ಷಗಳಿಂದ ವಿಚಾರಣಾಧೀನ ಕೈದಿಯಾಗಿ ಜೈಲಲ್ಲಿ ಕೊಳೆತ ಆತನನ್ನು ನ್ಯಾಯಾಲಯ ಕೊನೆಗೂ ದೋಷಮುಕ್ತಗೊಳಿಸಿತು. ನ್ಯಾಯಾಲಯದಲ್ಲಿ ಸಾಸಿವೆ ಬಿದ್ದರೂ ಕೇಳುವಷ್ಟು ಮೌನ. ಕಣ್ಣೀರಾದ.

‘‘ಸರ್, ಕಳೆದು ಹೋದ 10 ವರ್ಷಗಳನ್ನು ನನಗೆ ಮರಳಿಸುವಿರಾ...’’ ಉಕ್ಕಿ ಬರುವ ದುಃಖದೊಂದಿಗೆ ಆತ ನ್ಯಾಯಾಧೀಶರಲ್ಲಿ ವಿನೀತನಾಗಿ ಪ್ರಶ್ನಿಸಿದ.
ನ್ಯಾಯಾಂಗ ನಿಂದೆಯ ಕೇಸು ದಾಖಲಿಸಿಕೊಂಡ ನ್ಯಾಯಾಲಯ ಆತನನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
ತೀರಾ ಸರಳ ನಿರೂಪಣೆಯ ಇದು ಒಂದು ಪತ್ರಿಕಾ ವರದಿಯಾಗುವ ಸಾಧ್ಯತೆಯಿತ್ತು. ಆದರೆ ಅದರ ಧ್ವನಿ ಸಾಮಾಜಿಕವಾದದ್ದು. ಹೇಳದೆಯೇ ಅದು ಅಸಂಖ್ಯ ಇಂತಹ ಸಂತ್ರಸ್ತರನ್ನು ಒಳಗೊಳ್ಳುವಂಥದ್ದು. ಕುಕ್ಕಿಲರ ಪತ್ರಕರ್ತ ಸೋತು ಕತೆಗಾರ ಗೆದ್ದಿದ್ದ.

ಇಂತಹ ಅನೇಕ ಕತೆಗಳನ್ನು ಓದುತ್ತ ಹೋದೆ. ಕುಟುಂಬದ ಒಳಗಿನ ಆಪ್ತ ಅನುಭವಗಳು ಹೆಚ್ಚು ಶಕ್ತವಾಗಿ ಬಂದಿವೆ. ಸಾಮಾಜಿಕವಾದ್ದನ್ನು ಹೇಳಹೊರಟಾಗ ತಡಕಾಡಿದ ಅನುಭವ. ಕುಕ್ಕಿಲರ ಈ ಪುಸ್ತಕ ಒಂದೇ ಏಟಿಗೆ ಮುಗಿಸುವಂಥದ್ದಲ್ಲ. ಆಗಾಗ ಓದುವಂಥದ್ದು.

ಎಲ್ಲವನ್ನು ಓದುವುದಿಲ್ಲವೆಂದು ನಿರ್ಧರಿಸಿದೆ. ಅಲ್ಲಲ್ಲಿ ಓದಿದೆ. ಅನೇಕ ಬಗೆಯ ಖಾದ್ಯಗಳ ಊಟವನ್ನುಂಡವನಿಗೆ ಎಲ್ಲವೂ ನೆನಪಾಗವು. ಈಗ ಈ ಕೃತಿ ನನ್ನ ಇತರ ಇಂತಹ ಕೃತಿಗಳೊಂದಿಗೆ ನನ್ನ ಮೇಜಿನಲ್ಲಿದೆ. ಒಂಟಿಯಾಗಿದ್ದಾಗ, ಅಂತರ್ಮುಖಿಯಾಗಿದ್ದಾಗ, ಬೇಸರವಾದಾಗ ಇವನ್ನು ಓದಬೇಕು. ಇಷ್ಟಲ್ಲದಿದ್ದರೂ ಕುಕ್ಕಿಲರ ಪ್ರಯತ್ನ ಶ್ಲಾಘನೀಯ. ಯಾವ ಕೃತಿಯೇ ಆಗಲಿ, ಕಾಡುವ ನೆನಪಾದರೆ ಒಳ್ಳೆಯದು. ಯಾವುದೇ ಕಾರಣಕ್ಕೆ ಬಳಿಯಿಟ್ಟುಕೊಳ್ಳಬೇಕೆಂದು ಅನಿಸಿದರೆ ಲೇಖಕ ಧನ್ಯ. ಪೂರ್ಣ ಓದಿನ ಅವ್ಯಕ್ತ ಭಾವ ಒಳಗೆಲ್ಲೋ ಸಂಚರಿಸುತ್ತಿದೆ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)