varthabharthi


ಸಂಪಾದಕೀಯ

ಸಾಮಾಜಿಕ ಸುರಕ್ಷತೆಯನ್ನು ಉಲ್ಲಂಘಿಸಿದವರಿಗೆ ಲಾಕ್‌ಡೌನ್ ಹೇರುವ ನೈತಿಕತೆಯಿದೆಯೇ?

ವಾರ್ತಾ ಭಾರತಿ : 9 Apr, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಲಾಕ್‌ಡೌನ್ ಗುಮ್ಮ ಮತ್ತೆ ದೇಶವನ್ನು ಕಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಟಿವಿಯಲ್ಲಿ ಕಾಣಿಸಿಕೊಂಡು ‘ಕಠಿಣ ನಿಯಮವನ್ನು ಅನುಸರಿಸಬೇಕು’ ಎಂದು ದೇಶದ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಮುಂಬೈ, ಅಹ್ಮದಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಭಾಗಶಃ ಲಾಕ್‌ಡೌನ್ ಹೇರಲಾಗಿದೆ. ನಗರಗಳಲ್ಲಿ ಅಂಗಡಿ ಹೊಟೇಲುಗಳು ತೆರೆಯಬೇಕು ಎನ್ನುವಷ್ಟರಲ್ಲಿ, ಸರಕಾರದಿಂದ ಬಾಗಿಲು ಹಾಕಿ ಎನ್ನುವ ಆದೇಶ ಹೊರಟಿದೆ. ಮುಂಬೈ ನಗರದಲ್ಲಿ ಕರಾವಳಿಯ ಹೊಟೇಲ್ ಉದ್ಯಮಿಗಳ ಸ್ಥಿತಿ ಇನ್ನಷ್ಟು ಚಿಂತಾಜನಕವಾಗಿದೆ. ಮಾರ್ಚ್ 31ರ ಒಳಗೆ ಹೊಸದಾಗಿ ಪರವಾನಿಗೆಗೆ ಬೇಕಾಗಿರುವ ದುಡ್ಡನ್ನು ಹೊಟೇಲ್ ಉದ್ಯಮಿಗಳಿಂದ ಬಲವಂತವಾಗಿ ವಸೂಲಿ ಮಾಡಿದ ಸರಕಾರ, ಈಗ ಹೊಟೇಲ್‌ಗಳಿಗೆ ನಿರ್ಬಂಧಗಳನ್ನು ಹೇರಿದೆ. ಇತ್ತ ಕಟ್ಟಿದ ದುಡ್ಡೂ ಇಲ್ಲ, ಅತ್ತ ವ್ಯವಹಾರವೂ ಇಲ್ಲ ಎನ್ನುವ ಸ್ಥಿತಿ ಉದ್ಯಮಿಗಳದ್ದು. ಸಾಲಸೋಲಗಳಿಂದ ತತ್ತರಿಸಿರುವ ಈ ಉದ್ಯಮಿಗಳು ಹೊಟೇಲ್‌ಗಳನ್ನು ಮಾರಲೇಬೇಕಾದಂತಹ ಸ್ಥಿತಿಗೆ ಬಂದು ನಿಂತಿದ್ದಾರೆ.

ಊರು ಸೇರಿರುವ ಹೊಟೇಲ್ ಕಾರ್ಮಿಕರು ಮರಳಿ ಮುಂಬೈಗೂ ತೆರಳಲಾಗದೆ, ಊರಲ್ಲೂ ಇರಲಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಮತ್ತೆ ಹೊಟೇಲ್ ತೆರೆಯುತ್ತದೆ ಎಂದು ಮುಂಬೈ ದಾರಿ ಹಿಡಿದವರು, ಹೊಸದಾಗಿ ಹೇರಿರುವ ನಿರ್ಬಂಧಗಳಿಂದ ಊರಿನ ದಾರಿ ಹಿಡಿಯುವ ಸ್ಥಿತಿಯಲ್ಲಿದ್ದಾರೆ. ಹಳ್ಳಿಗಳಿಂದ ಮರಳಿ ನಗರದೆಡೆಗೆ ಆಗಮಿಸಿರುವ ವಲಸೆ ಕಾರ್ಮಿಕರ ಸ್ಥಿತಿಯೂ ದಯನೀಯವಾಗಿದೆ. ಮಹಾರಾಷ್ಟ್ರದಲ್ಲಿ ಕೊರೋನ ಹರಡಲು ವಲಸೆ ಕಾರ್ಮಿಕರು ಕಾರಣ ಎಂದು ಅಲ್ಲಿನ ಮುಖ್ಯಮಂತ್ರಿಯೇ ಹೇಳಿಕೆಯು, ಕಾರ್ಮಿಕರೊಳಗೆ ಭೀತಿ ಹುಟ್ಟಿಸಿದೆ. ವಲಸೆ ಕಾರ್ಮಿಕರು ಹಳ್ಳಿಗಳಿಂದ ನಗರಗಳಿಗೆ ವಲಸೆ ಬರಲು ಮೂರು ಮುಖ್ಯ ಕಾರಣಗಳಿವೆ. ಒಂದು, ಈ ಕಾರ್ಮಿಕರಲ್ಲಿ ಬಹುತೇಕರು ರೈತ ಕಾರ್ಮಿಕರು. ಬರ ಮೊದಲಾದ ಕಾರಣಗಳಿಂದ ಕೃಷಿಯಲ್ಲಿ ವಿಫಲರಾಗಿರುವ ರೈತರು ಅನಿವಾರ್ಯವಾಗಿ ನಗರದ ಹಾದಿ ಹಿಡಿಯುತ್ತಾರೆ. ಇವರಲ್ಲಿ ತಳಸ್ತರದ ಜಾತಿಗೆ ಸೇರಿದ ಜನರೇ ಅಧಿಕ.

ಉಳಿದಂತೆ ಹಳ್ಳಿಗಳಲ್ಲಿ ಜಮೀನ್ದಾರರಿಂದ ಅಲ್ಪ ಕೂಲಿಗೆ ದುಡಿಯುತ್ತಿರುವ ರೈತರು ಹೆಚ್ಚಿನ ವೇತನದ ಆಸೆಗೆ ನಗರದ ಕಡೆಗೆ ಮುಖ ಮಾಡುತ್ತಾರೆ. ಮೂರನೆಯ ವರ್ಗ, ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಿಸಿರುವ ಜಾತಿ ಕ್ರೌರ್ಯಗಳಿಂದ ಬೇಸತ್ತು ನಗರವನ್ನು ಸೇರುತ್ತಾರೆ. ಈ ಕಾರ್ಮಿಕರು ನಗರದ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಾರೆ. ಸರಕಾರವಿಂದು ಯಾವುದನ್ನು ಅಭಿವೃದ್ಧಿ ಎಂದು ಕರೆಯುತ್ತಿದೆಯೋ ಆ ನಗರಗಳ ರಸ್ತೆ, ಸೇತುವೆ, ಕಟ್ಟಡಗಳಲ್ಲಿ ಈ ಕಾರ್ಮಿಕರ ಬೆವರು, ರಕ್ತ ಬೆರೆತಿದೆ. ಕಳೆದ ಲಾಕ್‌ಡೌನ್ ಸಂದರ್ಭದಲ್ಲಿ ಸಾವಿರಾರು ವಲಸೆ ಕಾರ್ಮಿಕರು ಅನ್ನಾಹಾರವಿಲ್ಲದೆ, ಅನಿವಾರ್ಯವಾಗಿ ಮರಳಿ ಊರಿನೆಡೆಗೆ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ಉಂಟಾದ ಸಾವುನೋವುಗಳು ಇನ್ನೂ ಹಸಿಯಾಗಿವೆ. ಊರಿಗೆ ತಲುಪಿದಾಕ್ಷಣ ಇವರ ಸಮಸ್ಯೆಗಳೇನೂ ಪರಿಹಾರವಾಗಿಲ್ಲ.

ಕೊರೋನದ ದುಷ್ಪರಿಣಾಮ ಹಳ್ಳಿಗಳನ್ನೂ ತಲುಪಿದೆ. ನಗರದಿಂದ ಮರಳಿ ಬಂದ ಕಾರ್ಮಿಕರನ್ನು ಊರು ಅಸ್ಪಶ್ಯವಾಗಿ ನೋಡಿದೆ. ಅವರನ್ನು ಊರು ಸ್ವೀಕರಿಸದ ಕಾರಣ ಮರಗಳ ಮೇಲೆ, ಬಯಲುಗಳಲ್ಲಿ ಕ್ವಾರಂಟೈನ್ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಯಿತು. ಊರಿನಲ್ಲೇ ಅಸ್ವಸ್ಥಗೊಂಡು ಮೃತಪಟ್ಟವರ ಬಗ್ಗೆ ಯಾವುದೇ ವಿವರಗಳು ಮಾಧ್ಯಮಗಳಲ್ಲಿ ಪ್ರಕಟವಾಗಲಿಲ್ಲ. ಊರಿಗೆ ತೆರಳಿದ ಕಾರ್ಮಿಕರಲ್ಲಿ ಅಲ್ಲೇ ಬೇರೂರಿದವರು ಬಹಳ ಕಡಿಮೆ. ಕೃಷಿ ಭೂಮಿ ಇದ್ದವರು ಮತ್ತೆ ನಗರ ಸೇರುವ ಸಹವಾಸ ಮಾಡಲಿಲ್ಲ. ಆದರೆ ಕೂಲಿಯನ್ನೇ ನೆಚ್ಚಿಕೊಂಡವರು, ಊರಿಗೆ ತಲುಪಿದ ಕೆಲವೇ ದಿನಗಳಲ್ಲಿ ಮರಳಿ ನಗರಗಳಿಗೆ ಪ್ರಯಾಣ ಮಾಡಬೇಕಾದ ಸ್ಥಿತಿ ನಿರ್ಮಾಣವಾಯಿತು. ಸಹಸ್ರಾರು ಕಾರ್ಮಿಕರು ಒಮ್ಮೆಲೆ ತಮ್ಮ ತಮ್ಮ ಊರುಗಳನ್ನು ತಲುಪಿದ ಕಾರಣದಿಂದ, ಇವರಿಗೆ ಬೇಕಾಗುವಷ್ಟು ಕೂಲಿ ಕೆಲಸಗಳು ಊರಲ್ಲಿ ಇದ್ದಿರಲಿಲ್ಲ. ಹಳ್ಳಿ ಇವರನ್ನು ಇನ್ನಷ್ಟು ಕ್ರೂರವಾಗಿ ನಡೆಸಿಕೊಂಡಿತು. ಯಾವಾಗ ಲಾಕ್‌ಡೌನ್ ತುಸು ಸಡಿಲವಾಯಿತೋ, ಈ ಕಾರ್ಮಿಕರೆಲ್ಲ ಮತ್ತೆ ನಗರಗಳಿಗೆ ಮತ್ತೆ ವಲಸೆ ಹೋದರು. ಆದರೆ ಇದೀಗ ಅಹ್ಮದಾಬಾದ್, ಮುಂಬೈಯಂತಹ ಶಹರಗಳಲ್ಲಿ ಲಾಕ್‌ಡೌನ್ ವದಂತಿಗಳು ಹರಡತ್ತಿರುವುದರಿಂದ, ಅವರು ಬೆದರಿ ಊರಿನ ಕಡೆಗೆ ಮುಖ ಮಾಡುತ್ತಿದ್ದಾರೆ. ಸಾರಿಗೆ ಸಂಪರ್ಕಗಳು ಸ್ಥಗಿತಗೊಳ್ಳುವ ಮೊದಲೇ ಊರನ್ನು ತಲುಪಿ ಬಿಡುವ ಆತುರದಲ್ಲಿ ಗಂಟು ಮೂಟೆ ಕಟ್ಟುತ್ತಿದ್ದಾರೆ.

‘ಕಠಿಣ ನಿರ್ಬಂಧಗಳನ್ನು ಹೇರಿ’ ಎಂದು ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ. ಈ ಕಠಿಣ ನಿರ್ಬಂಧಗಳು ಪಶ್ಚಿಮಬಂಗಾಳ, ತಮಿಳುನಾಡು, ಕೇರಳದಂತಹ ರಾಜ್ಯಗಳಲ್ಲಿ ಚುನವಣಾ ಪ್ರಚಾರ ಸಂದರ್ಭದಲ್ಲಿ ಯಾಕಿರಲಿಲ್ಲ? ಎಂದು ಜನರು ಮರು ಪ್ರಶ್ನಿಸುತ್ತಿದ್ದಾರೆ. ಲಕ್ಷಾಂತರ ಜನರನ್ನು ಸೇರಿಸಿ, ಸ್ವತಃ ಪ್ರಧಾನಮಂತ್ರಿ ಮೋದಿಯವರೇ ಚುನಾವಣಾ ಪ್ರಚಾರ ನಡೆಸಿದ್ದಾರೆ. ಆಗ ‘ಕಠಿಣ ನಿರ್ಬಂಧ’ಕ್ಕೆ ವಿನಾಯಿತಿ ಸಿಕ್ಕಿದ್ದು ಹೇಗೆ? ಲಕ್ಷಾಂತರ ಜನರು ಒಂದೆಡೆ ಸೇರಿದಾಗ ಕೊರೋನ ಹರಡುವುದಿಲ್ಲವಾದರೆ, ಜನಸಾಮಾನ್ಯರು ತಮ್ಮ ದೈನಂದಿನ ಕಾಯಕಗಳಿಗಾಗಿ ನಗರ ಪ್ರದೇಶಗಳಲ್ಲಿ ಓಡಾಡಿದರೆ ಕೊರೋನ ಹರಡುವುದು ಹೇಗೆ? ಸ್ವತಃ ಎಲ್ಲ ನಿರ್ಬಂಧಗಳನ್ನು ಗಾಳಿಗೆ ತೂರಿ ಹಲವು ದಿನಗಳಿಂದ ಜನರನ್ನು ಸೇರಿಸಿ ಸಭೆ ಸಮಾರಂಭಗಳನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ‘ನಿರ್ಬಂಧಗಳನ್ನು ಪಾಲಿಸಿ’ ಎಂದು ಆದೇಶ ನೀಡುವ ಯಾವ ನೈತಿಕತೆಯಿದೆ? ಎಂದು ಜನರು ಕೇಳುತ್ತಿದ್ದಾರೆ. ರಾಜಕಾರಣಿಗಳು ಸಭೆ, ಸಮಾವೇಶ ನಡೆಸಿ ಕೊರೋನವನ್ನು ಹರಡುವುದು ಮತ್ತು ಜನಸಾಮಾನ್ಯರು ಲಾಕ್‌ಡೌನ್‌ಗೆ ತಲೆಕೊಟ್ಟು ಬೆಲೆಯನ್ನು ತೆರುವುದು ಎಷ್ಟು ಸರಿ? ಎಲ್ಲಕ್ಕಿಂತ ದೊಡ್ಡ ವಿಪರ್ಯಾಸವೆಂದರೆ, ನಿರ್ಬಂಧ, ಲಾಕ್‌ಡೌನ್ ಎಂಬಿತ್ಯಾದಿಯಾಗಿ ನಾಡಿನ ಜನರ ಕುರಿತಂತೆ ಕಾಳಜಿ ವಹಿಸುವ ಸರಕಾರವೇ, ಕೋಟ್ಯಂತರ ಜನರು ಭಾಗವಹಿಸುವ ಕುಂಭ ಮೇಳಕ್ಕೆ ಅನುಮತಿಯನ್ನು ನೀಡಿದೆ. ದೇಶದ ಮೂಲೆ ಮೂಲೆಗಳಿಂದ ಈ ಮೇಳಕ್ಕೆ ಜನರು ಆಗಮಿಸುತ್ತಾರೆ. ಇಲ್ಲಿ ಹರಡದ ಕೊರೋನ, ನಗರಗಳಲ್ಲಿ ಹೊಟೇಲ್‌ಗಳು ತಮ್ಮ ವ್ಯವಹಾರಗಳನ್ನು ಮಾಡುವಾಗ, ಮಾಲ್‌ಗಳು ತೆರೆದಾಗ, ಬಸ್, ವಾಹನಗಳು ಓಡಾಡಿದಾಗ ಹರಡುವುದು ಹೇಗೆ? ಇವುಗಳಿಗೆ ಸ್ಪಷ್ಟೀಕರಣ ನೀಡದೆ, ಅದೆಂತಹ ನಿರ್ಬಂಧಗಳನ್ನು ಹೇರಿದರೂ ಜನರು ಗಂಭೀರವಾಗಿ ಸ್ವೀಕರಿಸುವುದು ಕಷ್ಟ.

ಕರ್ನಾಟಕದಲ್ಲಿ ಮುಖ್ಯಮಂತ್ರಿಯವರು ನಿರ್ಬಂಧಗಳನ್ನು ಘೋಷಿಸುತ್ತಿರುವಾಗಲೇ, ಇತ್ತ ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷರ ಮನೆಯಲ್ಲಿ ಬೃಹತ್ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸರ್ವ ಪಕ್ಷಗಳ ಮುಖಂಡರೂ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ. ಅವರಾರಿಗೂ ಇಲ್ಲದ ನಿರ್ಬಂಧ, ಕರ್ಫ್ಯೂವನ್ನು ಜನಸಾಮಾನ್ಯರಿಗೆ ವಿಧಿಸಲಾಗುತ್ತಿದೆ ಎಂದರೆ, ಸರಕಾರ ಜನರನ್ನು ಅನಗತ್ಯವಾಗಿ ಸಂಕಟಕ್ಕೆ ಸಿಲುಕಿಸುವ ದುರುದ್ದೇಶವನ್ನು ಹೊಂದಿದೆಯೇ ಎಂದು ಶ್ರೀಸಾಮಾನ್ಯನು ತಪ್ಪು ಭಾವಿಸುವ ಸಾಧ್ಯತೆಗಳಿವೆ. ಆದುದರಿಂದ ಮೊದಲು ನಿರ್ಬಂಧಗಳನ್ನು ರಾಜಕಾರಣಿಗಳು ಪಾಲಿಸುವುದಕ್ಕೆ ಮುಂದಾಗಬೇಕು. ಆ ಬಳಿಕ ಅವರು ಜನರಿಗೆ ಆದೇಶವನ್ನು ನೀಡಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)