varthabharthi


ವಿಶೇಷ-ವರದಿಗಳು

ಪ್ರೊ. ಸಿದ್ದೀಕ್ ಹಸನ್ : ಹೇಳಿದ್ದಕ್ಕಿಂತ ಹೆಚ್ಚು ಸಾಧಿಸಿ ತೋರಿಸಿದ ಅನನ್ಯ ನಾಯಕ

ವಾರ್ತಾ ಭಾರತಿ : 9 Apr, 2021
ಮೆಹ್ತಾಬ್ ಆಲಂ

ಮಂಗಳವಾರ ಕೇರಳದ ಕೋಝಿಕೋಡ್ ನಲ್ಲಿ ನಿಧನರಾದ ಪ್ರೊ. ಕೆ.ಎ.ಸಿದ್ದಿಕ್ ಹಸನ್ ಅವರು ಹಲವಾರು ಕಾರಣಗಳಿಂದಾಗಿ ಬಹಳಷ್ಟು ಜನರ ನೆನಪಿನಲ್ಲಿರಲಿದ್ದಾರೆ.

ಕೆಲವರ ಪಾಲಿಗೆ ಹಸನ್ ಅವರು ಜಮಾತೆ ಇಸ್ಲಾಮಿ ಹಿಂದ್ (ಜೆಐಎಚ್)ನ ಕೇರಳ ಅಧ್ಯಕ್ಷ ಮತ್ತು ರಾಷ್ಟ್ರೀಯ ಉಪಾಧ್ಯಕ್ಷರಂತಹ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದ ಹಿರಿಯ ನಾಯಕರಾಗಿದ್ದರೆ, ಇತರರ ಪಾಲಿಗೆ ಧರ್ಮ ಮತ್ತು ಅರೆಬಿಕ್ ಭಾಷೆಯ ಬಗ್ಗೆ ಆಳವಾದ ತಿಳುವಳಿಕೆ ಹೊಂದಿದ್ದ ಇಸ್ಲಾಮಿಕ್ ವಿದ್ವಾಂಸರಾಗಿದ್ದಾರೆ. ಇನ್ನೂ ಕೆಲವರ ಪಾಲಿಗೆ ಅವರು ಮಾಧ್ಯಮಂ, ವಿಝನ್ 2016(ಈಗ 2026) ಮತ್ತು ಸೆಂಟರ್ ಫಾರ್ ಇನ್ಫಾರ್ಮೇಷನ್ ಆ್ಯಂಡ್ ಗೈಡನ್ಸ್ ಇಂಡಿಯಾ (ಸಿಐಜಿಐ )ದಂತಹ ಹಲವಾರು ಪ್ರಮುಖ ಯೋಜನೆಗಳ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದ ದೂರದೃಷ್ಟಿಯ ಮುಸ್ಲಿಂ ನಾಯಕರಾಗಿದ್ದರು.

ಅವರ ಕುರಿತ ಈ ಎಲ್ಲ ಬಣ್ಣನೆಗಳು ಸರಿಯಾಗಿಯೇ ಇದ್ದರೂ ನಾನು ಅವರೊಂದಿಗೆ ಕಾರ್ಯ ನಿರ್ವಹಿಸಿದ್ದ ಎರಡು ವರ್ಷಗಳಲ್ಲಿ ಅವರು ನಾನು ಭೇಟಿಯಾದ ಅತ್ಯಂತ ಒಳ್ಳೆಯ ವ್ಯಕ್ತಿಗಳಲ್ಲೊಬ್ಬರಾಗಿದ್ದರು ಎನ್ನುವುದನ್ನು ನಾನು ಕಂಡುಕೊಂಡಿದ್ದೆ. 2018 ಆಗಸ್ಟ್ ಮತ್ತು 2010 ಜುಲೈ ನಡುವೆ ನಾನು ಹಸನ್ ಸಾಹಬ್ ಜೊತೆ ಕೆಲಸ ಮಾಡಿದ್ದಾಗ ಅವರು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್)ನ ಕಾರ್ಯದರ್ಶಿಯಾಗಿದ್ದರು. ಅವರು ನನ್ನ ನೇರ ಮೇಲಧಿಕಾರಿಯಾಗಿರದಿದ್ದರೂ ಅವರೊಂದಿಗೆ ಸಂವಾದಕ್ಕೆ ಆಗಾಗ್ಗೆ ನನಗೆ ಅವಕಾಶ ದೊರೆಯುತ್ತಿತ್ತು.

ನನ್ನ ನೇರ ಮೇಲಧಿಕಾರಿ ಹಾಗೂ ಎಪಿಸಿಆರ್  ನಿರ್ದೇಶಕ ಡಾ.ಶಕೀಲ್ ಅಹ್ಮದ್ ಅವರು ಅಹ್ಮದಾಬಾದ್ ನಲ್ಲಿ ಇರುತ್ತಿದ್ದುದು ಇದಕ್ಕೆ ಪೂರಕ ವಾತಾವರಣವನ್ನು ಕಲ್ಪಿಸಿತ್ತು. ಸಿದ್ದೀಕ್ ಹಸನ್  ಅವರು ಯುವಜನರ ಬಗ್ಗೆ ಪ್ರೀತಿ ಹೊಂದಿದ್ದು, ಸ್ವತಃ ವಿಷಯಗಳ ಅರಿವು ಹೊಂದಿರಲು ಅವರೊಂದಿಗೆ ನಿಯಮಿತವಾಗಿ ತೊಡಗಿಕೊಳ್ಳುವುದನ್ನು ರೂಢಿಸಿಕೊಂಡಿದ್ದರು. ಹೀಗಾಗಿ ಮರ್ಕಝ್ ನಲ್ಲಿರುವ ಅವರ ಕಚೇರಿಯು ಯುವಕರು ಮತ್ತು ಯುವತಿಯರಿಂದ ತುಂಬಿರುತ್ತಿದ್ದುದು ಆಶ್ಚರ್ಯ  ಮೂಡಿಸುತ್ತಿರಲಿಲ್ಲ.

ತನ್ನ ವ್ಯಸ್ತ ಕಾರ್ಯಕ್ರಮಗಳ ನಡುವೆಯೂ ಆರ್ಥಪೂರ್ಣ ಕಾರ್ಯಗಳಿಗಾಗಿ ಸದಾ ಅವರು ಬಿಡುವು ಮಾಡಿಕೊಳ್ಳುತ್ತಿದ್ದರು. ಸಲಹೆ, ವೈಯಕ್ತಿಕ ಮಾರ್ಗದರ್ಶನ, ಆರ್ಥಿಕ ನೆರವು ಅಥವಾ ಇಸ್ಲಾಮಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಹೀಗೆ ಜನರ ಅಗತ್ಯಗಳಿಗೆ ಅವರು ಸದಾ ಕಾಲ ಒದಗುವ ವ್ಯಕ್ತಿಯಾಗಿದ್ದರು. ಅತ್ಯಂತ ಧಾರ್ಮಿಕರಾಗಿದ್ದ ಅವರು ಎಲ್ಲ ಇಸ್ಲಾಮಿಕ್ ಕರ್ತವ್ಯಗಳನ್ನು ಚಾಚೂತಪ್ಪದೆ ನಿರ್ವಹಿಸುತ್ತಿದ್ದರು. ಆದರೆ ಅವುಗಳನ್ನೆಂದೂ ತನ್ನ ಅಧೀನರು ಅಥವಾ ಸಹೋದ್ಯೋಗಿಗಳ ಮೇಲೆ ಹೇರುತ್ತಿರಲಿಲ್ಲ.

ನನ್ನ ಅಂದಾಜಿನ ಪ್ರಕಾರ, ಅವರಿಗೆ ಅಷ್ಟು ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಗಿದ್ದು ಅವರ ಕೆಲಸದ ವಿಧಾನದಿಂದ. ಅವರು ನಾಯಕರಾಗಿ ಉಳಿದವರಿಗೆ ಅವರವರ ಅರ್ಹತೆಗೆ ತಕ್ಕಂತೆ ಜವಾಬ್ದಾರಿ ವಹಿಸಿ ಕೊಡುತ್ತಿದ್ದರು. ಹಾಗಾಗಿ ಅವರು ಯಾವತ್ತೂ ಇಂತಹ ಅರ್ಹ ವ್ಯಕ್ತಿಗಳಿಗಾಗಿ ಹುಡುಕಾಟದಲ್ಲಿರುತ್ತಿದ್ದರು, ಅಂತಹವರ ಜೊತೆ ಚರ್ಚಿಸುತ್ತಿದ್ದರು ಹಾಗು ಅವರ ಜೊತೆ ಸೇರಿ ಕೆಲಸ ಮಾಡಲು ವೇದಿಕೆ ರೂಪಿಸುತ್ತಿದ್ದರು. ಒಮ್ಮೆ ಒಬ್ಬ ವ್ಯಕ್ತಿ ಒಂದು ಕೆಲಸ ಮಾಡಬಲ್ಲ ಎಂದು ಅವರಿಗೆ ಮನವರಿಕೆಯಾದರೆ ಆತನಿಗೆ ಅದನ್ನು ವಹಿಸುತ್ತಿದ್ದರು ಮಾತ್ರವಲ್ಲ ಆತ ಆತನ ಶೈಲಿಯಲ್ಲೇ ಅದನ್ನು ಮಾಡುವ ಸ್ವಾತಂತ್ರ್ಯವನ್ನೂ ನೀಡುತ್ತಿದ್ದರು. ಇದನ್ನು ನಾನೇ ನೋಡಿ ಅನುಭವಿಸಿದ್ದೇನೆ ಹಾಗು ಇನ್ನೂ ಹಲವರು ಇದನ್ನು ಗಮನಿಸಿದ್ದಾರೆ.  

ಹಸನ್ ದೂರದೃಷ್ಟಿಯುಳ್ಳ ನಾಯಕರಾಗಿದ್ದರು ಎನ್ನುವುದರಲ್ಲಿ ಯಾವುದೇ ಶಂಕೆಯಿಲ್ಲವಾದರೂ ಅವರು ಕ್ರಿಯಾಶೀಲ ವ್ಯಕ್ತಿಯಾಗಿದ್ದರು ಎನ್ನುವುದೂ ಅಷ್ಟೇ ಮಹತ್ವದ್ದಾಗಿದೆ. ಅವರು ಕೇವಲ ಮಾತಿನ ಮಲ್ಲರಾಗಿರಲಿಲ್ಲ, ಅವರು ಕೆಲಸ  ಮತ್ತು ಕ್ರಿಯೆಯ ವ್ಯಕ್ತಿಯಾಗಿದ್ದರು.  ಅವರು ಕೇವಲ ನಾಯಕತ್ವಕ್ಕೆ ತನ್ನನ್ನು ಸೀಮಿತಗೊಳಿಸಿಕೊಳ್ಳದೆ ಸಾಮಾನ್ಯ ಕಾರ್ಯಕರ್ತರೊಂದಿಗೆ ಹೆಗಲಿಗೆ ಹೆಗಲು ನೀಡಿ ಶ್ರಮಿಸುತ್ತಿದ್ದರು. ಅವರು ಮಾತಿನಂತೆ ನಡೆಯುವ ವ್ಯಕ್ತಿಯಾಗಿದ್ದರು.

2008ರಲ್ಲಿ ನಾನು ಎಪಿಸಿಆರ್ಗೆ ಸೇರಿದ ಒಂದು ತಿಂಗಳಲ್ಲೇ ಭಾರೀ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ ಬಿಹಾರದ ಕೋಸಿ ಪ್ರದೇಶಕ್ಕೆ ಅವರೊಂದಿಗೆ ಪ್ರಯಾಣಿಸಿದ್ದೆ. ಅಲ್ಲಿ ತಲುಪಿದ ಬಳಿಕ ಹಸನ್ ಅವರು ಪರಿಹಾರ ಮತ್ತು ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿಕೊಂಡಿದ್ದಲ್ಲದೆ, ಮುಂದಿನ ಕ್ರಿಯಾ ಯೋಜನೆಯನ್ನು ರೂಪಿಸಿದ್ದರು. ನೀರಿನಲ್ಲಿ ಮುಳುಗಿದ್ದ ದುರ್ಗಮ ಪ್ರದೇಶಗಳಿಗೂ ತೆರಳಿ ಸಂತ್ರಸ್ತರನ್ನು ಭೇಟಿಯಾಗಿದ್ದರು. ಬಹುಶಃ ಜಮಾತ್ ನ  ಹಿರಿಯ ನಾಯಕರೋರ್ವರು ಈ ರೀತಿಯಾಗಿ ಕೆಲಸ ಮಾಡಿದ್ದು ಅದೇ ಪ್ರಥಮ.

ಅವರು ಹೆಚ್ಚಾಗಿ ತಮ್ಮ ಕೆಲಸ ಕಾರ್ಯಗಳಲ್ಲಿ ವ್ಯಸ್ತರಾಗಿರುತ್ತಿದ್ದರು. ರಾತ್ರಿ ಆಹಾರ ಸೇವಿಸಿದ ಬಳಿಕವೂ 10 ಗಂಟೆಯವರೆಗೆ ಕೆಲಸದಲ್ಲಿ ನಿರತರಾಗುತ್ತಿರುವುದನ್ನು ನಾನು ನೋಡಿದ್ದೇನೆ. ಹೆಚ್ಚಿನ ನಮ್ಮ ಭೇಟಿ ಮತ್ತು ಮೀಟಿಂಗ್‌ ಗಳೆಲ್ಲಾ ಇಶಾ ನಮಾಝ್ ಬಳಿಕವೇ ನಡೆಯುತ್ತಿತ್ತು. ಅವರು ಹಲವು ಗಂಟೆಗಳ ಕಾಲ ತಮ್ಮ ಕೆಲಸದಲ್ಲಿ ವ್ಯಸ್ತರಾಗುತ್ತಿದ್ದರೂ, ತಮ್ಮೊಂದಿಗೆ ಕಾರ್ಯನಿರ್ಹಿಸುವ ಇನ್ನಿತರರೂ ಹೇಗೆಯೇ ಇರಬೇಕೆಂದು ಅವರೆಂದೂ ಬಯಸಲಿಲ್ಲ. ಗುರಿಯನ್ನು ತಲುಪಬೇಕಾದರೆ ತಮ್ಮಲ್ಲಿರುವ ಮಾನವೀಯ ಮೌಲ್ಯಗಳನ್ನು ಅವರೆಂದೂ ಮರೆಯಲಿಲ್ಲ.

ಮರ್ಕಝ್‌ ಜಮಾತ್‌ ನಲ್ಲಿ ಸಿದ್ದೀಕ್‌ ಹಸನ್‌ ರವರ ಉಪಸ್ಥಿತಿ  ಜಮಾತೆ ಇಸ್ಲಾಮಿ ಹಿಂದ್‌ ನ ಕೆಲಸ ಕಾರ್ಯಗಳಲ್ಲಿ ಹಲವಾರು ಬದಲಾವಣೆಗಳನ್ನುಂಟು ಮಾಡಿತು. ಕೇಂದ್ರ ಕಚೇರಿಯು ಚೈತನ್ಯಭರಿತವಾಗಿತ್ತು. ಬಹುಸಂಸ್ಕೃತಿ, ಬಹುಭಾಷೆಯ ರಾಯಭಾರಿಯಾಗಿದ್ದರು ಅವರು. ದಿಲ್ಲಿಯಲ್ಲಿ ಅವರಿದ್ದ ಸಂದರ್ಭ, ಕೇವಲ ಮರ್ಕಝ್‌ ನಲ್ಲಿ ಕೂರುವುದು ಮಾತ್ರವಲ್ಲದೇ, ದೇಶದ ಉದ್ದಗಲಕ್ಕೂ ಸಂಚರಿಸಿದರು. ಪತ್ರಿಕೋದ್ಯಮದಲ್ಲಿ ನಮ್ಮೊಂದಿಗೆ ಹೇಳುವಂತೆ ʼಹೇಳುವುದಲ್ಲ, ಮಾಡಿ ತೋರಿಸುʼ ಎಂಬಂತಿತ್ತು ಅವರ ಕಾರ್ಯ ವೈಖರಿ.

ಭಾರತದ ಉತ್ತರ ಮತ್ತು ದಕ್ಷಿಣ ಭಾಗದ ಜಮಾತ್‌ ಸದಸ್ಯರಿಗೆ ಮತ್ತು ಕಾರ್ಯಕರ್ತರಿಗೆ ಸಿದ್ದೀಕ್‌ ಹಸನ್‌ ಸಾಹಬ್‌ ಸಾಮಾಜಿಕ ಕಳಕಳಿಯನ್ನು ಮೈಗೂಡಿಸುವಲ್ಲಿ ಹೆಚ್ಚು ಸಹಕಾರಿಯಾದರು. ಇಂದು ವಿಶನ್‌ 2026ನ ಅಡಿಯಲ್ಲಿ ಒಂದಿಷ್ಟು ಕಾರ್ಯಕರ್ತರು ಶಿಕ್ಷಣ ಕ್ಷೇತ್ರ, ಮಹಿಳಾ ಸಬಲೀಕರಣ, ಸೂಕ್ಷ್ಮ ಹಣಕಾಸು, ಮಾನವ ಹಕ್ಕುಗಳು, ಕಾನೂನು ನೆರವು, ವಿಪತ್ತು ನಿರ್ವಹಣೆ, ಕೌಶಲ್ಯ ಅಭಿವೃದ್ಧಿ, ಮುಂತಾದವುಗಳಲ್ಲಿ ತಮ್ಮ ಗುರಿಯೊಂದಿಗೆ ಸಾಗುತ್ತಿದ್ದಾರೆಂದರೆ ಅದಕ್ಕೆ ಸಿದ್ದೀಕ್‌ ಸಾಹಬ್‌ ಗೆ ಧನ್ಯವಾದ ಸಲ್ಲಿಸಲೇಬೇಕು. ಅವರು ಅಭಿವೃದ್ಧಿ-ಕ್ರಿಯಾಶೀಲತೆಯ ಪ್ರಯತ್ನಗಳನ್ನು ಹಕ್ಕು ಆಧಾರಿತ ವಿಧಾನದೊಂದಿಗೆ ಸಂಯೋಜಿಸಿದರು. ಎನ್‌ಜಿಒಗಳು ಅಥವಾ ಸರ್ಕಾರದ ಕೃಪಾಕಟಾಕ್ಷವನ್ನು ಅವರು ಸಂಪೂರ್ಣವಾಗಿ ಅವಲಂಬಿಸಿಯೂ ಇರಲಿಲ್ಲ.

ಪ್ರಾಥಮಿಕವಾಗಿ ಅವರೋರ್ವ ಜಮಾತೇ ಇಸ್ಲಾಮಿ ಹಿಂದ್‌ ಸದಸ್ಯರಾಗಿದ್ದರೂ, ಸಂಪೂರ್ಣ ಮುಸ್ಲಿಂ ಸಮುದಾಯದ ಸಬಲೀಕರಣ ಅವರ ಗುರಿಯಾಗಿತ್ತು. ಇದು ಮಾತ್ರವಲ್ಲದೇ ಸಾಮಾನ್ಯವಾಗಿ ಇಡೀ ಮಾನವ ಜನಾಂಗದ ಅಭಿವೃದ್ಧಿ ಕುರಿತಾದಂತೆಯೂ ಅವರು ಚಿಂತಿಸುತ್ತಿದ್ದರು. ಅವರ ಚಿಂತನೆಗಳು ಅತ್ಯಂತ  ವಿಶಾಲವಾಗಿದ್ದವು. 

ಮುಂಬರುವ ದಿನಗಳಲ್ಲಿ ಸಿದ್ದೀಕ್‌ ಹಸನ್‌ ಸಾಹಬ್ ‌ ಮತ್ತು ಅವರ ಕಾರ್ಯಗಳು ಪ್ರೀತಿಯಿಂದ ನಮ್ಮ ನೆನಪಿನಲ್ಲಿ ಉಳಿಯುವದರಲ್ಲಿ ಯಾವುದೇ ಸಂದೇಹವಿಲ್ಲ. ಮುಂದಾಲೋಚನೆ ಹೊಂದಿದ, ಪ್ರಗತಿಪರ, ಸಮುದಾಯ ಆಧಾರಿತ ವ್ಯಕ್ತಿತ್ವ ಹೊಂದಿದ್ದ ಮಾನವೀಯ ನಾಯಕನೋರ್ವನನ್ನು ಮತ್ತೊಮ್ಮೆ ಶೀಘ್ರದಲ್ಲೇ ನೋಡುತ್ತೇನೆಂಬ ಭರವಸೆಯ ಬಗ್ಗೆ ನನಗೆ ಅನುಮಾನವಿದೆ. ಇಂತಹಾ ನಾಯಕನೋರ್ವ ಹೊರಹೊಮ್ಮಲು ಶತಮಾನಗಳಲ್ಲದಿದ್ದರೂ ದಶಕಗಳಾದರೂ ಸಂದಬಹುದು. ಆದರೂ ನನ್ನ ಈ ಆತಂಕ ಸುಳ್ಳಾಗಲಿ ಎಂದು ಬಯಸುತ್ತೇನೆ. 

ಮೆಹ್ತಾಬ್ ಆಲಂ ದಿಲ್ಲಿ ಮೂಲದ ಪತ್ರಕರ್ತ ಹಾಗು ಸಂಶೋಧಕ. ಅವರ ಟ್ವಿಟರ್ ಹ್ಯಾಂಡಲ್ @MahtabNama

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)