varthabharthi


ವಿಶೇಷ-ವರದಿಗಳು

ಒಬಿಸಿ ಗಣತಿಗೆ ಕೇಂದ್ರದ ನಿರಾಸಕ್ತಿ; ಕಾರಣವೇನು?

ವಾರ್ತಾ ಭಾರತಿ : 10 Apr, 2021
ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್

ಒಬಿಸಿ ಜನಗಣತಿಯು ನಡೆದಲ್ಲಿ ಒಬಿಸಿ ಜನಸಂಖ್ಯೆಯ ಗಾತ್ರದ ಕುರಿತಾಗಿ ಹರಡಿಕೊಂಡಿರುವ ಅನವಶ್ಯಕ ನಿಗೂಢತೆಯನ್ನು ಬಗೆಹರಿಸುವ ಜೊತೆಗೆ ದೇಶದ ಈ ಶ್ರೇಣಿಯ ಜನಸಂಖ್ಯಾ ಸಂಪತ್ತಿನ (ಲಿಂಗಾನುಪಾತ, ಸಾವಿನ ದರ, ನಿರೀಕ್ಷಿತ ಜೀವಿತಾವಧಿ) ಕುರಿತಾದ ಮಾಹಿತಿಯನ್ನು ಹಾಗೂ ಆರ್ಥಿಕ ಪರಿಸ್ಥಿತಿಗಳ ಕುರಿತಾದ ಮಾಹಿತಿ (ಮನೆಯ ನಮೂನೆ, ಆಸ್ತಿ, ವೃತ್ತಿ ಇತ್ಯಾದಿ), ಶೈಕ್ಷಣಿಕ ದತ್ತಾಂಶ (ಪುರುಷ ಹಾಗೂ ಸ್ತ್ರೀ ಸಾಕ್ಷರತೆ, ಶಾಲೆಗೆ ಹೋಗುವವರ ಜನಸಂಖ್ಯಾ ಅನುಪಾತ, ಪದವೀಧರರ ಸಂಖ್ಯೆ) ಮಾಹಿತಿಯನ್ನು ಒದಗಿಸಲಿದೆ. ಈ ಎಲ್ಲಾ ಮಾಹಿತಿಯು ಒಬಿಸಿ ಶ್ರೇಣಿಯಡಿ ಬರುವ ಎಲ್ಲಾ ಜಾತಿಗಳಿಗೂ ಲಭ್ಯವಾಗುವಂತೆ ಮಾಡಬೇಕಾಗಿದೆ. ಈ ಮಾಹಿತಿಯಿಂದ ಪುರಾವೆ ಆಧಾರಿತ ಸಾಮಾಜಿಕ ನೀತಿಗಳನ್ನು ಸುಲಲಿತವಾಗಿ ರೂಪಿಸುವ ನಿಟ್ಟಿನಲ್ಲಿ ಬಹುದೂರದವರೆಗೂ ಸಾಗಲು ಸಾಧ್ಯವಿದೆ. 

‘ವಾಟ್ ಡಸ್ ದಿ ರೂಲಿಂಗ್ ಕ್ಲಾಸ್ ಡು ವೆನ್ ಇಟ್ ರೂಲ್ಸ್?’ (ಆಳುವ ವರ್ಗವು, ತನ್ನ ಆಳ್ವಿಕೆಯ ಅವಧಿಯಲ್ಲಿ ಏನು ಮಾಡುತ್ತದೆ?). ಸ್ವೀಡನ್‌ನ ರಾಜಕೀಯ ವಿಜ್ಞಾನಿ ಗೊರಾನ್ ಥರ್ಬರ್ನ್ ಅವರು ಮಾರ್ಕ್ಸಿಸ್ಟ್ ಸಿದ್ಧಾಂತದ ಕುರಿತ ಬರೆದ ಮಹಾನ್ ಕೃತಿಯ ಶೀರ್ಷಿಕೆ ಇದಾಗಿದೆ. ಈ ಕೃತಿಯ ಉಪಶೀರ್ಷಿಕೆ ಕೂಡಾ ಅಷ್ಟೇ ಪರಿಣಾಮಕಾರಿಯಾಗಿದೆ. ‘‘ಸ್ಟೇಟ್ ಅಪ್ಪಾರಾಟಸ್ ಆ್ಯಂಡ್ ಸ್ಟೇಟ್ ಪವರ್ ಅಂಡರ್ ಫ್ಯೂಡಲಿಸಂ, ಕ್ಯಾಪಿಟಲಿಸಂ ಆ್ಯಂಡ್ ಸೋಶಿಯಲಿಸಂ’’ (ಊಳಿಗಮಾನ್ಯ, ಬಂಡವಾಳಶಾಹಿ ಹಾಗೂ ಸಮಾಜವಾದದ ಅಡಿಯಲ್ಲಿ ದೇಶದ ಆಡಳಿತ ಯಂತ್ರ ಹಾಗೂ ಸರಕಾರದ ಅಧಿಕಾರ) ಎಂಬ ಉಪಶೀರ್ಷಿಕೆಯನ್ನು ಅದು ಹೊಂದಿದೆ. ಆದರೆ ನನಗೆ ಇಡೀ ಪುಸ್ತಕವನ್ನು ಓದಲಾಗದಿದ್ದರೂ, ಅದರ ಶೀರ್ಷಿಕೆಯು ನನ್ನ ಬಾಯಿಯಲ್ಲಿ ನಲಿದಾಡುತ್ತಿದೆ.

ಈ ಕೃತಿಯ ಮುಂದುವರಿದ ಭಾಗದ ಭಾರತೀಯ ಆವೃತ್ತಿಯನ್ನು ಯಾರಾದರೂ ಬರೆಯುವುದಿದ್ದರೆ, ಆದರ ಶೀರ್ಷಿಕೆಯು ‘ವಾಟ್ ಡಸ್ ದಿ ರೂಲಿಂಗ್ ಕ್ಲಾಸ್ ಡು ವೆನ್ ಇಟ್ ರೂಲ್ಸ್? ಸ್ಟೇಟ್ ಅಪ್ಪಾರಾಟ್ಯುಸಸ್ ಆ್ಯಂಡ್ ಸ್ಟೇಟ್ ಪವರ್ ಅಂಡರ್ ಬ್ರಾಹ್ಮನಿಸಂ ಇನ್ ಎ ಕಾನ್ಸ್ಟಿಟ್ಯೂಶನಲ್ ಡೆಮಾಕ್ರಸಿ’ (ಆಳುವ ವರ್ಗವು, ತನ್ನ ಆಳ್ವಿಕೆಯ ಅವಧಿಯಲ್ಲಿ ಏನು ಮಾಡುತ್ತದೆ?. ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಬ್ರಾಹ್ಮಣಿಕೆಯಡಿಯಲ್ಲಿ ಆಡಳಿತಯಂತ್ರ ಹಾಗೂ ಆಡಳಿತಾಧಿಕಾರ) ಆಗಲಿದೆ. ಭಾರತದಲ್ಲಿ ಈಗಲೂ ಜಾತಿ ವ್ಯವಸ್ಥೆಯು ವಿವಿಧ ರೂಪಗಳಲ್ಲಿ ಮುಂದುವರಿದಿರುವುದರ ಕುರಿತು ಅದೊಂದು ಅಧ್ಯಯನ ಕೃತಿಯಾಗಬಹುದಾಗಿದೆ. ಇತರ ಹಿಂದುಳಿದ ವರ್ಗಗಳ (ಒಬಿಸಿ)ನ್ನು ಜನಗಣತಿಯಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳದಿರಲು ವಿವಿಧ ರಾಜಕೀಯ ಪಕ್ಷಗಳು ಹೇಗೆ ಸಂಚು ಹೂಡಿದ್ದವು ಎಂಬ ಕಥೆಯು ಈ ಪುಸ್ತಕದಲ್ಲಿ ಸ್ಥಾನವನ್ನು ಪಡೆದುಕೊಳ್ಳಬಹುದಾಗಿದೆ.

 ಇತ್ತೀಚೆಗೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು ನರೇಂದ್ರ ಮೋದಿ ಸರಕಾರಕ್ಕೆ ಮನವಿ ಮಾಡಿ 2021ರ ಜನಗಣತಿಯಲ್ಲಿ ಒಬಿಸಿಗಳ ಏಣಿಕೆ ಮಾಡುವಂತೆ ಮನವಿ ಸಲ್ಲಿಸಿತ್ತು. ಒಂದು ಸಾಮಾನ್ಯ ಜನಗಣತಿಯಲ್ಲಿ ಒಬಿಸಿಗಳ ಎಣಿಕೆಯ ವಿರುದ್ಧ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಕೆಯಾದಲ್ಲಿ ಅದರ ವಿರುದ್ಧ ಅಫಿಡವಿಟ್ ಸಲ್ಲಿಸುವಂತೆಯೂ ಸರಕಾರಕ್ಕೆ ಸಲಹೆ ನೀಡಿತ್ತು. ಆದರೆ ಆಯೋಗದ ಈ ಮಧ್ಯಪ್ರವೇಶವು ತುಂಬಾ ತಡವಾಗಿತ್ತು. ಒಬಿಸಿಗಳ ಎಣಿಕೆಯ ತನ್ನ ನಿರ್ಧಾರದಿಂದ ಸರಕಾರವು ಈಗಾಗಲೇ ಹಿಂದೆ ಸರಿದಿದೆ ಮತ್ತು ಆ ವಿಷಯವನ್ನು ಕೈಗೊಳ್ಳುವ ಸಾಧ್ಯತೆ ಕಡಿಮೆ. ನಾವು ಈಗಾಗಲೇ ಕನಿಷ್ಠ 10 ವರ್ಷಗಳ ಮಟ್ಟಿಗಾದರೂ ಅವಕಾಶ ಕಳೆದುಕೊಂಡಿದ್ದೇವೆ.

ಒಬಿಸಿ ಗಣತಿ ಎಂದರೇನು?

  ಜನಗಣತಿಯಲ್ಲಿ ಒಬಿಸಿಗಳ ಎಣಿಕೆ ಮಾಡುವುದು ಅತ್ಯಂತ ಸುಲಭವಾದ ಚಿಂತನೆ. ಅದು 10 ವರ್ಷಗಳಿಗೊಮ್ಮೆ ನಡೆಯುವ ಸಾಮಾನ ಜನಗಣತಿಯು ಕೇವಲ ತಲೆ ಎಣಿಕೆ ಮಾತ್ರವಲ್ಲ. ಅದು ವಿವಿಧ ವರ್ಗಗಳ ಎಲ್ಲಾ ವ್ಯಕ್ತಿಗಳನ್ನು ಹಾಗೂ ಕುಟುಂಬಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ವಯಸ್ಸು, ಲಿಂಗ, ಶಿಕ್ಷಣ ಹಾಗೂ ಉದ್ಯೋಗವನ್ನು ಅದು ದಾಖಲಿಸುತ್ತದೆ. ಪ್ರತಿಯೊಂದು ಕುಟುಂಬದ ಭಾಷೆ, ಧರ್ಮ, ಮನೆಯ ನಮೂನೆ ಹಾಗೂ ಪ್ರಮುಖ ಆಸ್ತಿಗಳನ್ನು ಅದು ದಾಖಲಿಸುತ್ತದೆ. ಜಾತಿ ಆಧಾರದಲ್ಲಿ ಹೇಳುವುದಾದರೆ ಅದು ಮೂರು ಶ್ರೇಣಿಗಳನ್ನು ಬಳಸಿಕೊಳ್ಳುತ್ತದೆ. ಪರಿಶಿಷ್ಟಜಾತಿಗಳು (ಎಸ್ಸಿ), ಪರಿಶಿಷ್ಟ ಪಂಗಡ (ಎಸ್ಟಿ) ಹಾಗೂ ಸಾಮಾನ್ಯ ಆ ಮೂರು ಶ್ರೇಣಿಗಳಾಗಿವೆ. ಒಂದು ಕುಟುಂಬವು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಬುಡಕಟ್ಟು ಶ್ರೇಣಿಯಡಿ ಬಂದರೆ, ಜನಗಣತಿದಾರರು ಅಧಿಕೃತಪಟ್ಟಿಯಿಂದ ಅಥವಾ ಶೆಡ್ಯೂಲ್‌ನಿಂದ ಜಾತಿಯ ಹೆಸರನ್ನು ನಿಖರವಾಗಿ ದಾಖಲಿಸುತ್ತಾರೆ.

ಒಬಿಸಿ ಗಣತಿಯ ಕುರಿತಾದ ದೀರ್ಘಕಾಲದ ಬೇಡಿಕೆಯ ಹಿಂದಿರುವ ಕಾರಣ ತುಂಬಾ ಸರಳವಾಗಿದೆ. ಎಸ್ಸಿ, ಎಸ್ಟಿ ಜೊತೆಗೆ, ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದ ವರ್ಗಗಳ ಅಂಕಣ ಅಥವಾ ಎಸ್‌ಇಬಿಸಿ (ಜನಗಣತಿ ಫಾರಂನಲ್ಲಿ ಒಬಿಸಿಗೆ ಇರುವ ಅಧಿಕೃತ ಹೆಸರು). ಎಸ್ಸಿ, ಎಸ್ಟಿ ಗಣತಿಯಲ್ಲಿರುವಂತೆ, ಎಸ್‌ಇಬಿಸಿ ಶ್ರೇಣಿಯಲ್ಲಿ ಬರುವವರ ಜಾತಿಯ ಹೆಸರನ್ನು ನಿಖರವಾಗಿ ದಾಖಲಿಸಬೇಕು. ನೆನಪಿಡಿ, ಎಲ್ಲಾ ಜಾತಿಗಳನ್ನು ಶ್ರೇಣೀಕರಿಸುವ ಸಂಕೀರ್ಣವಾದ ಪ್ರಕ್ರಿಯೆಯನ್ನು ಒಳಗೊಂಡ ಪೂರ್ಣ ಪ್ರಮಾಣದ ಜಾತಿಗಣತಿಯಾಗಿದೆ. ಹೀಗಾಗಿ, ಒಬಿಸಿ ಗಣತಿಯು ನ್ಯಾಯಯುತ ಹಾಗೂ ಸರಳವಾದ ಪ್ರಕ್ರಿಯೆಯಾಗಿದೆ. ಕೇಂದ್ರ ಸರಕಾರದಡಿ ಮೀಸಲಾತಿಗೆ ಅರ್ಹವಾದ ಅಖಿಲ ಭಾರತ ಮಟ್ಟದ ಒಬಿಸಿಗಳ ಪಟ್ಟಿಯಲ್ಲಿ ಅದು ಈಗಾಗಲೇ ಅಸ್ತಿತ್ವದಲ್ಲಿದೆ.

ಒಬಿಸಿ ಗಣತಿ ಯಾಕೆ?.

  ಇದರ ಹಿಂದಿರುವ ತರ್ಕ ತೀರಾ ಸರಳವಾಗಿದೆ. ಒಂದು ಆಧುನಿಕ ದೇಶವು ಯಾವುದೇ ಸಾಮಾಜಿಕ ನೀತಿಯ ಉದ್ದೇಶಕ್ಕೆ ಮಾನ್ಯತೆ ನೀಡುವ ನಾಗರಿಕರ ಶ್ರೇಣಿಯ ಜನರನ್ನು ಗಣತಿ ಮಾಡುತ್ತದೆ. ಬಹುತೇಕ ಬಹುಜನಾಂಗೀಯ ಸಮುದಾಯಗಳ ಹಾಗೆ ಅಮೆರಿಕ ಕೂಡಾ ಜನಗಣತಿಯಲ್ಲಿ ಜನಾಂಗೀಯ ಮೂಲವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಬ್ರಿಟನ್ ದೇಶವೂ ತನ್ನ ಮೂಲಜನಾಂಗಕ್ಕೆ ಸೇರಿದ ವಲಸಿಗರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಒಬಿಸಿ ಗಣತಿಯ ಪರ ಹಾಗೂ ವಿರುದ್ಧವಾದ ವಾದಗಳಿವೆ. 1990ರಲ್ಲಿ ರಾಷ್ಟ್ರವ್ಯಾಪಿಯಾಗಿ ಒಬಿಸಿ ಮೀಸಲಾತಿಯನ್ನು ಜಾರಿಗೊಳಿಸುವ ಮೊದಲು ಒಬಿಸಿ ಪರ ಅಥವಾ ವಿರುದ್ಧ ವಾದಗಳಿದ್ದವು. ಆದರೆ ಪ್ರಮುಖ ದೃಢವಾದ ಕ್ರಿಯಾ ಯೋಜನೆಗಳನ್ನು ಸರಕಾರವು ಒಬಿಸಿ ಸಮುದಾಯಕ್ಕೆ ಪ್ರಕಟಿಸಿದ್ದರೂ, ಒಬಿಸಿಗಳ ಗಣತಿ ಮಾಡದಿರುವುದು ಅಸಂಬದ್ಧವೆನಿಸುತ್ತದೆ.

    ಈ ಮಾಹಿತಿ ಶೂನ್ಯತೆಯ ಪರಿಣಾಮಗಳ ಬಗ್ಗೆ ಪರಿಶೀಲಿಸೋಣ. ನಮ್ಮ ದೇಶದ ಅತಿ ದೊಡ್ಡ ಸಾಮಾಜಿಕ ಶ್ರೇಣಿ (ಒಬಿಸಿ)ಯೊಂದಕ್ಕೆ ಸೇರಿದ ಪೌರರ ಜನಸಂಖ್ಯಾಗಾತ್ರವು ನಮಗೆ ತಿಳಿದಿಲ್ಲ. ಮಂಡಲ್ ಆಯೋಗವು ದೇಶದ ಒಬಿಸಿಗಳ ಒಟ್ಟು ಶೇ.52ರಷ್ಟಿರಬಹುದೆಂದು ಅಂದಾಜು ಮಾಡಿತ್ತು. ಇನ್ನು ಕೆಲವರು ಒಬಿಸಿ ಜನಸಂಖ್ಯೆಯ ಗಾತ್ರವು ಶೇ.36ರಿಂದ ಶೇ.65ರಷ್ಟಿರಬಹುದೆಂದು ಅಂದಾಜಿಸಿದ್ದರು. ಒಬಿಸಿ ಜನಗಣತಿಯು ನಡೆದಲ್ಲಿ ಒಬಿಸಿ ಜನಸಂಖ್ಯೆಯ ಗಾತ್ರದ ಕುರಿತಾಗಿ ಹರಡಿಕೊಂಡಿರುವ ಅನವಶ್ಯಕ ನಿಗೂಢತೆಯನ್ನು ಬಗೆಹರಿಸುವ ಜೊತೆಗೆ ದೇಶದ ಈ ಶ್ರೇಣಿಯ ಜನಸಂಖ್ಯಾ ಸಂಪತ್ತಿನ (ಲಿಂಗಾನುಪಾತ, ಸಾವಿನ ದರ, ನಿರೀಕ್ಷಿತ ಜೀವಿತಾವಧಿ) ಕುರಿತಾದ ಮಾಹಿತಿಯನ್ನು ಹಾಗೂ ಆರ್ಥಿಕ ಪರಿಸ್ಥಿತಿಗಳ ಕುರಿತಾದ ಮಾಹಿತಿ (ಮನೆಯ ನಮೂನೆ, ಆಸ್ತಿ, ವೃತ್ತಿ ಇತ್ಯಾದಿ), ಶೈಕ್ಷಣಿಕ ದತ್ತಾಂಶ (ಪುರುಷ ಹಾಗೂ ಸ್ತ್ರೀ ಸಾಕ್ಷರತೆ, ಶಾಲೆಗೆ ಹೋಗುವವರ ಜನಸಂಖ್ಯಾ ಅನುಪಾತ, ಪದವೀಧರರ ಸಂಖ್ಯೆ) ಮಾಹಿತಿಯನ್ನು ಒದಗಿಸಲಿದೆ. ಈ ಎಲ್ಲಾ ಮಾಹಿತಿಯು ಒಬಿಸಿ ಶ್ರೇಣಿಯಡಿ ಬರುವ ಎಲ್ಲಾ ಜಾತಿಗಳಿಗೂ ಲಭ್ಯವಾಗುವಂತೆ ಮಾಡಬೇಕಾಗಿದೆ. ಈ ಮಾಹಿತಿಯಿಂದ ಪುರಾವೆ ಆಧಾರಿತ ಸಾಮಾಜಿಕ ನೀತಿಗಳನ್ನು ಸುಲಲಿತವಾಗಿ ರೂಪಿಸುವ ನಿಟ್ಟಿನಲ್ಲಿ ಬಹುದೂರದವರೆಗೂ ಸಾಗಲು ಸಾಧ್ಯವಿದೆ. ಈ ಮಾಹಿತಿಯಿಂದಾಗಿ ಯಾವ ಜಾತಿಗೆ ಮೀಸಲಾತಿ ಬೇಕು, ಯಾರಿಗೆ ನೀಡಕೂಡದು ಎಂಬ ಕುರಿತಾಗಿ ಉಂಟಾಗುವಂತಹ ಬೀದಿಜಗಳವನ್ನು ಕಡಿಮೆಗೊಳಿಸಲಿದೆ.

 ಕಳೆದ ಮೂರು ದಶಕಗಳಲ್ಲಿ ಅಧಿಕಾರ ನಡೆಸಿರುವ ಸರಕಾರಗಳು ಈ ತಾರ್ಕಿಕತೆಯನ್ನು ಉಲ್ಲಂಘಿಸಲು ಎಲ್ಲಾ ರೀತಿಯ ತಂತ್ರಗಾರಿಕೆ ಅನುಸರಿಸಿದ್ದವು. ದೇಶದಲ್ಲಿ ಜಾತಿವಾದ ಹೆಚ್ಚುತ್ತಿರುವುದಾಗಿ ಬುದ್ಧಿಜೀವಿಗಳು ಭ್ರಾಂತಿಯನ್ನು ಹರಡುತ್ತಿದ್ದಾರೆ. ಇದೇ ವೇಳೆ ಅಧಿಕಾರಶಾಹಿಯು ಕಾರ್ಯನಿರ್ವಹಣಾ ಅಡಚಣೆಗಳನ್ನು ನೆಪವಾಗಿರಿಸಿಕೊಂಡು ಒಬಿಸಿಗಳ ಗಣತಿಗೆ ಹಿಂದೇಟು ಹಾಕುತ್ತಿದೆ. ಆದರೆ ಎಸ್ಸಿ, ಎಸ್ಟಿಗಳ ಅಥವಾ ಧರ್ಮ ಮತ್ತು ಭಾಷಾ ಗಣತಿಗಿಂತ ಒಬಿಸಿ ಗಣತಿಯು ಹೆಚ್ಚು ಕಷ್ಟವಾಗಿರಲು ಕಾರಣವೇನೆಂಬುದಕ್ಕೆ ನಿರ್ದಿಷ್ಟವಾಗಿ ಯಾವುದೇ ವಿವರಣೆ ನೀಡಿಲ್ಲ. ಒಬಿಸಿ ಗಣತಿಯನ್ನು ನಿರಾಕರಿಸಲು ಮೋದಿ ಸರಕಾರವು ಇದೀಗ ನೀಡಿರುವ ಕಾರಣವು ಅಧಿಕಾರಶಾಹಿಯ ಅವಿವೇಕತನದ ಹೊಸ ‘ರತ್ನ’ವಾಗಿದೆ. ಜನಗಣತಿ ಪ್ರಕ್ರಿಯೆಯ ಸಮಗ್ರತೆಯ ಮೇಲೆ ಒಬಿಸಿ ಗಣತಿಯು ಪ್ರತಿಕೂಲ ಪರಿಣಾಮವನ್ನು ಬೀರಲಿದೆ ಎಂದು ಅದು ಸಬೂಬು ನೀಡುತ್ತಿದೆ.

 ಒಬಿಸಿ ಮೀಸಲಾತಿ ಜಾರಿಗೆ ಬಂದ ಸಮಯದಲ್ಲಿ, 1991ರ ಜನಗಣತಿಗೆ ಅದನ್ನು ಅಳವಡಿಸುವುದಕ್ಕೆ ತುಂಬಾ ತಡವಾಗಿತ್ತು. ಇದಾದ ಒಂದು ದಶಕದ ಆನಂತರ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರವು ರಿಜಿಸ್ಟ್ರಾರ್ ಜನರಲ್ ಹಾಗೂ ಜನಗಣತಿ ಆಯುಕ್ತರ ಸ್ಪಷ್ಟ ಮನವಿಯ ಹೊರತಾಗಿಯೂ 2001ರ ಜನಗಣತಿಯಲ್ಲಿ ಒಬಿಸಿ ಗಣತಿಯನ್ನು ಮಾಡುವ ಚಿಂತನೆಗೆ ಕೊಡಲಿಯೇಟು ನೀಡಿತ್ತು. 2010ರಲ್ಲಿ ಲೋಕಸಭೆಯಲ್ಲಿ ಒಬಿಸಿ ಗಣತಿ ವಿಚಾರಕ್ಕೆ ಸಂಬಂಧಿಸಿ ಲೋಕಸಭೆಯಲ್ಲಿ ಕೋಲಾಹಲವುಂಟಾದ ಹಿನ್ನೆಲೆಯಲ್ಲಿ ಯುಪಿಎ ಸರಕಾರ ಕೂಡಾ ಆ ಚಿಂತನೆಯಿಂದ ದೂರ ಸರಿದಿತ್ತು. ಆನಂತರ ಕೇಂದ್ರ ಸರಕಾರವು ಜಾತಿ ಗಣತಿಯ ಕುರಿತಾದ ಅವಿರೋಧ ಬೇಡಿಕೆಗೆ ಮಣಿಯಬೇಕಾಯಿತು. ಆದಾಗ್ಯೂ ಜಾತಿ ಸುವ್ಯವಸ್ಥೆಯು ಮುಖ್ಯ ಜನಗಣತಿ ಕಾರ್ಯನಿರ್ವಹಣೆಯ ಹೊರ ವ್ಯಾಪ್ತಿಯಲ್ಲಿ ಜಾತಿಗಣತಿ ಪ್ರಕ್ರಿಯೆಯನ್ನು ವರ್ಗಾಯಿಸುವ ಮೂಲಕ ಶ್ರೇಣೀಕೃತ ಜಾತಿ ವ್ಯವಸ್ಥೆಯು ಈ ನಿರ್ಧಾರವನ್ನು ಬುಡಮೇಲುಗೊಳಿಸುವಲ್ಲಿ ಸಫಲವಾಯಿತು. ಕೆಲವು ಕುಶಾಗ್ರಮತಿ ಅಧಿಕಾರಿಗಳು ಸಾಮಾಜಿಕ-ಆರ್ಥಿಕ ಜಾತಿ ಗಣತಿ (ಎಸ್‌ಇಸಿಸಿ)ಯ ಚಿಂತನೆಯನ್ನು ಮಂಡಿಸಿದರು. ಆದರೆ ಈ ಬೃಹತ್ ಪ್ರಕ್ರಿಯೆಯಿಂದ ಸಂಗ್ರಹಿಸಲಾದ ದತ್ತಾಂಶವನ್ನು ವರ್ಗೀಕರಿಸಲು ಹಾಗೂ ಬಳಸಿಕೊಳ್ಳಲು ಸಾಧ್ಯವಿಲ್ಲವೆಂದು ಅವರು ವರದಿ ಮಾಡಿದರು. ಎಸ್‌ಇಸಿಸಿ ಗಣತಿ ನಡೆದು ಮೂರು ದಶಕಗಳು ಕಳೆದರೂ ಯಾವುದೇ ದತ್ತಾಂಶ ಲಭ್ಯವಾಗಲಿಲ್ಲ,

 ಆದರೆ ಮೋದಿ ಸರಕಾರವು 2018ರಲ್ಲಿ ಒಬಿಸಿ ಗಣತಿಗೆ ಮತ್ತೆ ಯುಟರ್ನ್ ಹೊಡೆಯಿತು. ದೇಶದಲ್ಲಿ ಪ್ರಪ್ರಥಮ ಬಾರಿಗೆ ಜನಗಣತಿಯಲ್ಲಿ ಒಬಿಸಿಗಳ ಎಣಿಕೆ ನಡೆಯಲಿದೆಯೆಂದು ಆಗಿನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಘೋಷಿಸಿದರು. ಆದರೆ 2019ರ ಲೋಕಸಭಾ ಚುನಾವಣೆಯ ಬಳಿಕ ಯಾವುದೇ ಸಾರ್ವಜನಿಕ ಚರ್ಚೆ ಅಥವಾ ಕಾರಣವನ್ನು ನೀಡದೆ ಮೋದಿ ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಿತು. 2021ರ ಜನಗಣತಿ ಪ್ರಕ್ರಿಯೆಯ ಕರಡು ಪಟ್ಟಿ ಬಿಡುಗಡೆಯಾದ ಬಳಿಕವಷ್ಟೇ ಒಬಿಸಿ ಅಂಕಣ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿತ್ತು. ಆನಂತರ ಸಂಬಂಧಪಟ್ಟ ಅನೇಕರು ಒಬಿಸಿ ಗಣತಿಯನ್ನು ನಡೆಸುವಂತೆ ನಿರಂತರ ಮನವಿ ಮಾಡಿದರು. ಈಗ ಸಾಂವಿಧಾನಿಕ ಸಂಸ್ಥೆಯಾಗಿರುವ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು ಅದಕ್ಕೆ ಶಿಫಾರಸು ಮಾಡಿತು. ನಮ್ಮಲ್ಲಿ ಒಬಿಸಿ ಕಲ್ಯಾಣ ಹಾಗೂ ಸಾಮಾಜಿಕ ನ್ಯಾಯ ಸಚಿವಾಲಯವಿದೆ. ರಾಜಸ್ಥಾನ ಸರಕಾರ, ಬಿಹಾರ, ಒಡಿಶಾ ಹಾಗೂ ಮಹಾರಾಷ್ಟ್ರದ ವಿಧಾನಸಭೆಗಳು ಈ ಬೇಡಿಕೆಯನ್ನು ಅನುಮೋದಿಸಿದವು.

ಸವಲತ್ತುಗಳ ಅನಾವರಣ

ಶ್ರೇಣೀಕೃತ ಜಾತಿ ವ್ಯವಸ್ಥೆಯು ಯಾಕೆ ಒಬಿಸಿ ಗಣತಿಯನ್ನು ವಿಫಲ ಗೊಳಿಸುತ್ತಿದೆ?. ಇಂತಹ ಗಣತಿಯಿಂದ ಒಬಿಸಿಗಳ ಬೃಹತ್ ಸಂಖ್ಯೆಯು ಬೆಳಕಿಗೆ ಬರಬಹುದಾಗಿದೆ. ಈತನಕ ಒಬಿಸಿಗಳ ನಿಖರ ಸಂಖ್ಯೆಯು ತಿಳಿದುಬಂದಿಲ್ಲ. ಒಬಿಸಿ ಸಮುದಾಯಗಳ ದುಸ್ಥಿತಿಯನ್ನು ಅದು ಅನಾವರಣಗೊಳಿಸಬಲ್ಲದು.

   ಒಬಿಸಿ ಗಣತಿಯಿಂದ ಮೇಲ್ಜಾತಿಗಳು ಹೊಂದಿರುವ ಸವಲತ್ತುಗಳು ಅನಾವರಣಗೊಳ್ಳುವ ಸಾಧ್ಯತೆಯಿದೆಯೆಂಬ ಆತಂಕ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಕಾಡುತ್ತದೆ. ಒಮ್ಮೆ ಎಸ್ಸಿ, ಎಸ್ಟಿ ಹಾಗೂ ಒಬಿಸಿ ಗಣತಿ ನಡೆಸಿದ ಬಳಿಕ ತನ್ನಿಂತಾನೆ ನಿಮಗೆ ಬಾಕಿಯುಳಿದಿರುವ ಶ್ರೇಣಿಯಾದ ಮೇಲ್ಜಾತಿಗಳಿಗೆ ಸಂಬಂಧಿಸಿ ಮಾಹಿತಿ ಲಭ್ಯವಾಗುತ್ತದೆ. ಜನಗಣತಿಯು ಧರ್ಮದ ಕುರಿತ ಮಾಹಿತಿಯನ್ನು ಸಂಗ್ರಹಿಸುವುದರಿಂದ ಮೇಲ್ಜಾತಿ ಹಿಂದೂಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸೌಲಭ್ಯಗಳ ಕುರಿತಾದ ನಿಖರವಾದ ದತ್ತಾಂಶವನ್ನು ಪಡೆಯುವುದು ಕಷ್ಟಕರವಲ್ಲ. ಈ ಶ್ರೇಣಿಯು ದೇಶದ ಒಟ್ಟು ಜನಸಂಖ್ಯೆಯ ಶೇ.20ರಷ್ಟಿದ್ದರೂ ಅಧಿಕಾರದ ಶೇ.80 ಸ್ಥಾನಮಾನಗಳನ್ನು ಹಾಗೂ ಸವಲತ್ತುಗಳ್ನು ಅನುಭವಿಸುತ್ತಿದೆ. ಅದು ಸಾಮಾನ್ಯ ಶ್ರೇಣಿಯ ಛತ್ರದಡಿಯಲ್ಲಿ ಅವಿತುಕೊಂಡಿದೆ. ತಾನು ಅನುಭವಿಸುತ್ತಿರುವ ಸವಲತ್ತುಗಳನ್ನು ಹೆಸರಿಸುವ ಹಾಗೂ ಎಣಿಕೆ ಮಾಡುವುದಕ್ಕೆ ಹೆದರಲು ಅದಕ್ಕೆ ಉತ್ತಮ ಕಾರಣಗಳಿವೆ. ಇಷ್ಟಕ್ಕೂ ತಾನು ಅನುಭವಿಸುತ್ತಿರುವ ಜಾತಿ ಸವಲತ್ತುಗಳು ಕಾಣದಂತಿರಲು ಜಾತಿ ರಹಿತವಾಗಿ ಉಳಿದುಕೊಳ್ಳುವುದಾಗಿದೆ, ಆಡಳಿತಶಾಹಿ ಜಾತಿಯು ತಾನು ಆಳುವುದಕ್ಕಾಗಿ ಮಾಡುತ್ತಿರುವುದು ಇದೇ ಆಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)