varthabharthi


ನಿಮ್ಮ ಅಂಕಣ

ಕೆ. ಸಿ. ವ್ಯಾಲಿ ನೀರು ಭವಿಷ್ಯದಲ್ಲಿ ಮಾರಕವಾಗಲಿದೆಯೇ?

ವಾರ್ತಾ ಭಾರತಿ : 10 Apr, 2021
ಡಾ. ಎಂ. ವೆಂಕಟಸ್ವಾಮಿ

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನೀರು ಹರಿಯುವ ಒಂದು ನದಿಯೂ ಇಲ್ಲ ಎಂದೇ ಹೇಳಬಹುದು. ಹೆಚ್ಚಿದ ಜನಸಂಖ್ಯೆ ಮತ್ತು ಅಂತರ್ಜಲದ ಅವೈಜ್ಞಾನಿಕ ಶೋಷಣೆಯಿಂದ ಕಳೆದ ಮೂರುನಾಲ್ಕು ದಶಕಗಳಿಂದಲೂ ಎರಡೂ ಜಿಲ್ಲೆಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಬೆಂಗಳೂರಿನ ಕೋರಮಂಗಲ-ಚಲ್ಲಘಟ್ಟ (ಕೆ.ಸಿ.ವ್ಯಾಲಿ) ಕಣಿವೆಯಲ್ಲಿ ಹರಿದು ಬರುವ ಚರಂಡಿ ನೀರನ್ನು ಬೆಂಗಳೂರು ಜಲಮಂಡಲಿ ಸಂಸ್ಕರಿಸಿ ಎರಡೂ ಜಿಲ್ಲೆಗಳ 134 ಕೆರೆಗಳಿಗೆ ಹರಿಸುವ ಮೊದಲ ಹಂತದ ಯೋಜನೆಯನ್ನು 2016ರಲ್ಲಿ ಕೈಗೆತ್ತಿಕೊಂಡಿತು. 1,342 ಕೋಟಿ ರೂಪಾಯಿಗಳ ಕೆ.ಸಿ.ವ್ಯಾಲಿ ಏತ ನೀರಾವರಿ ಯೋಜನೆ 124 ಕಿ.ಮೀ.ಗಳ ದೂರ 134 ಕೆರೆಗಳಿಗೆ ನೀರು ಹರಿಸುವ ಯೋಜನೆಯಾಗಿದೆ. ತಾಲೂಕುವಾರು ಮಾಲೂರು 23, ಬಂಗಾರಪೇಟೆ 10, ಕೆಜಿಎಫ್ 2, ಮುಳಬಾಗಿಲು 31, ಕೋಲಾರ 41, ಶ್ರೀನಿವಾಸಪುರ 22 ಮತ್ತು ಚಿಂತಾಮಣಿಯ 5 ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಬೆಂಗಳೂರಿನಲ್ಲಿರುವ ಮೂರು ಸಂಸ್ಕರಣೆ ಘಟಕಗಳಲ್ಲಿ ದಿನಕ್ಕೆ 440 ದಶಲಕ್ಷ ಲೀಟರುಗಳ ನೀರನ್ನು ಸಂಸ್ಕರಿಸುವ ಈ ಯೋಜನೆಯಲ್ಲಿ 6 ಪಂಪ್ ಮನೆಗಳ ಮೂಲಕ ನೀರಿನ್ನು ಏತ ಮತ್ತು ಗ್ರ್ಯಾವಿಟಿ ಮೂಲಕ ಹರಿಸಲಾಗುತ್ತದೆ. 2018ರಲ್ಲಿ ಕೆರೆಗಳಿಗೆ ನೀರು ಹರಿಯುವುದು ಪ್ರಾರಂಭವಾದಾಗ ಜನರು, ಜಾನುವಾರಗಳ ಆರೋಗ್ಯಕ್ಕೆ ತೊಂದರೆ ಮತ್ತು ಅಂತರ್ಜಲದ ಗುಣಮಟ್ಟ ಹಾಳಾಗುತ್ತದೆ ಎಂಬುದಾಗಿ ನಾಗರಿಕರು ಮತ್ತು ಪರಿಸರ ವಾದಿಗಳು ವಿರೋಧ ವ್ಯಕ್ತಪಡಿಸಿದರು.

ಪ್ರಸ್ತುತ 83 ಕರೆಗಳಿಗೆ ಶೇ. 50 ಸಾಮರ್ಥ್ಯದ ನೀರನ್ನು ಹರಿಸಲಾಗಿ ಮುಂದಿನ ದಿನಗಳಲ್ಲಿ ನೀರು ಎಲ್ಲಾ ಕೆರೆಗಳನ್ನು ತಲುಪಿದ ಮೇಲೆ ನೀರಿನ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ. ಈ ಕೆರೆಗಳ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲದ ಮಟ್ಟ ಹೆಚ್ಚಿ ಈಗ ರೈತರು ಸಾಕಷ್ಟು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಎರಡನೇ ಹಂತದ ಯೋಜನೆಗೆ 455 ಕೋಟಿ ರೂಪಾಯಿಗಳ ಆಡಳಿತ ಅನುಮೋದನೆ ದೊರಕಿದ್ದು ಮುಂದಿನ ದಿನಗಳಲ್ಲಿ ಎರಡು ಜಿಲ್ಲೆಗಳಲ್ಲಿ ಒಟ್ಟು 257 ಕರೆಗಳಿಗೆ ನೀರನ್ನು ಹರಿಸಲಾಗುತ್ತದೆ. ಕೆ.ಸಿ. ಕಣಿವೆಯ ಜೊತೆಗೆ ಹೆಬ್ಬಾಳ-ನಾಗಾವಾರ ಕಣಿವೆ ಯೋಜನೆಯೂ ತಯಾರಾಗುತ್ತಿದೆ. ಇದರ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾತ್ರ ಮೀಸಲಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಕೆ.ಸಿ.ವ್ಯಾಲಿಯಿಂದ ಹರಿದು ಬರುವ ನೀರು ನರಸಾಪುರದ ಲಕ್ಷ್ಮೀಸಾಗರ ಕೆರೆ ತಲುಪಿದಂತೆ ನೀರಾವರಿ ಹೋರಾಟ ಸಮಿತಿಯ ಆರ್. ಆಂಜನೇಯ ರೆಡ್ಡಿ ಅವರು ಹೈಕೋರ್ಟ್ ಮೆಟ್ಟಿಲು ಹತ್ತಿ ಈ ನೀರಿನ ಗುಣಮಟ್ಟ ಸರಿ ಇಲ್ಲ ಇದನ್ನು ಪರಿಶೀಲಿಸಬೇಕಿದೆ ಎಂಬುದಾಗಿ ನ್ಯಾಯಾಲಯಕ್ಕೆ ಮೊರೆ ಇಟ್ಟರು. ನ್ಯಾಯಾಲಯ ನೀರನ್ನು ಪರಿಶೀಲಿಸಿ ವರದಿ ಮಾಡುವಂತೆ ಸರಕಾರಕ್ಕೆ ಆಜ್ಞೆ ಮಾಡಿತು. ಇದರ ನಡುವೆ ಜುಲೈ 2018ರಂದು ಲಕ್ಷ್ಮೀಸಾಗರ ಕೆರೆಯ ನೀರಿನಲ್ಲಿ ಅಗಾಧವಾದ ನೊರೆ ಕಾಣಿಸಿಕೊಂಡು ನೀರು ಪಂಪ್ ಮಾಡುವುದನ್ನು ನಿಲ್ಲಿಸಲಾಯಿತು. ನೀರಿನಲ್ಲಿ ರಾಸಾಯನಿಕ ಮಾಲಿನ್ಯಕಾರಕಗಳು ಕಂಡುಬಂದವು. ನೀರು ಮಾದರಿಗಳ ವಿಶ್ಲೇಷಣೆಯಲ್ಲಿ ಜೀವರಾಸಾಯನಿಕ ಮಾಲಿನ್ಯಕಾರಕಗಳು ಇರುವುದನ್ನು ಗಮನಿಸಿದ ನ್ಯಾಯಾಲಯ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಇದು ಅಪಾಯಕಾರಿ ಎಂದಿತು. ಇದಕ್ಕೆ ಉತ್ತರವಾಗಿ ಸರಕಾರಿ ವಕೀಲರು ಈ ಯೋಜನೆಯ ಉದ್ದೇಶ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದೇ ಹೊರತು ಕೃಷಿಗಾಗಿ ಬಳಸುವ ನೀರಲ್ಲ ಎಂಬ ಆಶ್ಚರ್ಯಕರವಾದ ಉತ್ತರ ನೀಡಿದರು. ಅರ್ಜಿದಾರರ ಪರ ವಕೀಲರು, ಈ ನೀರು ಕೃಷಿಗಾಗಿ ಅಥವಾ ಕುಡಿಯುವುದಕ್ಕಾಗಿ ಎಂದು ಪ್ರತ್ಯೇಕತೆಯಿಂದ ಕೂಡಿಲ್ಲ. ಜೊತೆಗೆ ಮಾನವ ವಿಸರ್ಜನೆಯ ಬ್ಯಾಕ್ಟೀರಿಯಾಗಳು ನೀರಿನಲ್ಲಿ ಬಿಐಎಸ್ ಮಿತಿಗಿಂತ ಹೆಚ್ಚು ಕಂಡುಬಂದಿವೆ ಎಂದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೆರೆಗಳಿಗೆ ಸರಬರಾಜು ಮಾಡುತ್ತಿರುವ ನೀರಿನಲ್ಲಿ ಬಹುಪಾಲು ಖನಿಜಾಂಶಗಳು 1986ರ ಪರಿಸರ ಸಂರಕ್ಷಣಾ ಕಾಯ್ದೆ ಮಾನದಂಡಗಳ ಮಿತಿಯ ಒಳಗೆಯೇ ಇದೆ ಎಂದು ನ್ಯಾಯಾಲಯಕ್ಕೆ ವರದಿಯನ್ನು ಒಪ್ಪಿಸಿತು. ಜೊತೆಗೆ ನೈಟ್ರೇಟ್ಸ್ ಮಾತ್ರ ಮಾನದಂಡಕ್ಕಿಂತ ಹೆಚ್ಚಿದ್ದು ಅವು ಕೃಷಿಗೆ ಸಹಾಯಕವಾಗಲಿದೆ ಎಂದಿತು. ಆದರೆ ಮುಖ್ಯವಾಗಿ ನೀರಿನಲ್ಲಿರುವ ಇತರ ಮಾಲಿನ್ಯಕಾರಕ ಮಾನದಂಡಗಳ ಬಗ್ಗೆ ಯಾವುದೇ ವಿವರಗಳನ್ನೂ ಕೊಡಲಿಲ್ಲ. ಉದಾ: ನೀರಿನಲ್ಲಿ ಜಲಚರಗಳು ಬದುಕಿ ಉಳಿದುಕೊಳ್ಳಬೇಕಾದರೆ ಒಂದು ಲೀಟರ್ ನೀರಿನಲ್ಲಿ ಕನಿಷ್ಠ 2.5-3.5 ಮಿಲಿ ಗ್ರಾಂ ಆಮ್ಲಜನಕದ ಸಾಂದ್ರತೆ ಇರಬೇಕು (ಸಂಸ್ಕರಿಸಿ ಹರಿಸುವ ಚರಂಡಿ ನೀರಿನಲ್ಲಿ ಜಲಚರಗಳ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ). ಇನ್ನು ಭಾರೀ ಲೋಹಗಳು, ಪಾದರಸ, ಜೀವರಾಸಾಯನಿಕ, ಕೈಗಾರಿಕಾ ಮಾಲಿನ್ಯ, ಬ್ಯಾಕ್ಟೀರಿಯಾ-ವೈರಸ್‌ಗಳ ಉಪಸ್ಥಿತಿಯ ಬಗ್ಗೆ ಯಾವ ವಿವರಣೆಗಳನ್ನೂ ಹೇಳಲಿಲ್ಲ.

                                                                                  ***

ಎತ್ತಿನಹೊಳೆ ಯೋಜನೆ 10 ವರ್ಷಗಳಿಂದಲೂ ಕುಂಟುತ್ತಲೇ ನಡೆಯುತ್ತಿದೆ. ಒಂದು ಲೆಕ್ಕಾಚಾರದ ಪ್ರಕಾರ ಮಳೆಗಾಲದಲ್ಲಿ ಪೂರ್ವಕ್ಕೆ ಹರಿಯುವ ಮಳೆನೀರು ಕೇವಲ 24 ಟಿಎಂಸಿಗಳು ಎನ್ನುವ ಮಾತುಗಳಿವೆ. ಅದೂ ಕೂಡ ಸಾಮಾನ್ಯ ಅಥವಾ ಹೆಚ್ಚು ಮಳೆಯಾದರೆ. ಆ ಮಳೆನೀರು ಹಾಸನ ಮತ್ತು ತುಮಕೂರು ಜಿಲ್ಲೆಗಳನ್ನು ದಾಟಿ ಬರುವ ಯಾವ ಗ್ಯಾರಂಟಿಯೂ ಇಲ್ಲದೆ ಇರುವಾಗ ದೂರದ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಈ ನೀರನ್ನು ಹರಿಸುವ ಯೋಜನೆ ದೂರವೇ ಉಳಿದುಕೊಂಡಿದೆ ಎನ್ನಲಾಗಿದೆ. ಪ್ರೊ.ಬಿ.ಆರ್. ಶ್ರೀನಿವಾಸ ಮೂರ್ತಿ ಅವರು ನೀಡಿರುವ ತಾಂತ್ರಿಕ-ಕಾನೂನಾತ್ಮಕ ವರದಿಯ ಪ್ರಕಾರ ಎತ್ತಿನಹೊಳೆಯಿಂದ ದೊರಕುವ ನೀರು ಕೇವಲ 13 ಟಿಎಂಸಿಗಳು ಮಾತ್ರ. ಆ ನೀರು ನಿರ್ದೇಶಿತ ಪ್ರದೇಶ ತಲುಪುವುದರೊಳಗೆ ಉಳಿಯುವುದು ಕೇವಲ 7-8 ಟಿಎಂಸಿಗಳು ಎಂಬ ಲೆಕ್ಕಾಚಾರವಿದೆ.

ಇನ್ನು ಬಂಗಾರಪೇಟೆಗೆ 24 ಕಿ.ಮೀ. ದೂರದಲ್ಲಿ ಯರ್ರಗೋಳ ಹತ್ತಿರ 240 ಕೋಟಿ ವೆಚ್ಚದ ಯೋಜನೆಯೊಂದು ಎಲ್ಲಾ ಯೋಜನೆಗಳಂತೆ ಕುಂಟುತ್ತಲೇ ನಡೆದು ಕೊನೆಗೂ ಅಣೆಕಟ್ಟು ಪೂರ್ಣವಾಗಿದೆ ಎಂದು ತಿಳಿದುಬಂದಿದೆ. ಈ ಅಣೆಕಟ್ಟೆಯನ್ನು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದು ಯೋಜನೆಯ ಪ್ರಕಾರ ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ಪಟ್ಟಣಗಳನ್ನು ಸೇರಿಸಿಕೊಂಡು 45 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ. ಈ ಅಣೆಕಟ್ಟೆಯಲ್ಲಿ 500 ದಶಲಕ್ಷ ಘನ ಅಡಿಗಳ ನೀರು ಶೇಖರಣೆಯಾಗಿ ಆ ನೀರು ಮೇಲಿನ ಯೋಜನೆಗೆ ಸರಿಹೋಗುತ್ತದೆ ಎಂಬ ಲೆಕ್ಕಾಚಾರಗಳಿವೆ. ಆದರೆ ಈ ಮೂರೂ ಪಟ್ಟಣಗಳು ಮತ್ತು 45 ಹಳ್ಳಿಗಳಿಗೆ ನೀರು ಹರಿಸಬೇಕಾದ ಪೈಪ್‌ಗಳು ಮತ್ತು ಹೆಡ್ ಟ್ಯಾಂಕ್‌ಗಳು ತಯಾರಾದಂತೆ ಕಾಣಿಸುತ್ತಿಲ್ಲ!

                                                                    ***

ಕೆ.ಸಿ.ವ್ಯಾಲಿಯ ಮುಖ್ಯ ಸಮಸ್ಯೆಯೆಂದರೆ ಚರಂಡಿ ನೀರನ್ನು ಸರಿಯಾಗಿ ಸಂಸ್ಕರಣೆ ಮಾಡದೆ ಹರಿಸಿ ಅಂತರ್ಜಲದ ಜೊತೆಗೆ ಮಿಶ್ರಣವಾದರೆ ಮುಂದಿನ ದಿನಗಳಲ್ಲಿ ಆ ಪ್ರದೇಶದ ಜನರು ಮತ್ತು ಜಾನುವಾರುಗಳಿಗೆ ಏನೆಲ್ಲ ತೊಂದರೆಗಳಾಗಬಹುದು ಎನ್ನುವ ಪ್ರಶ್ನೆ. ಅಂದರೆ ಮಳೆ ನೀರಿನ ಜೊತೆಗೆ ಚರಂಡಿ ನೀರು ಈಗಾಗಲೇ ಮಿಶ್ರಣವಾಗುತ್ತಿದೆ ಎನ್ನುವುದು ಇದರ ಅರ್ಥ. ಕೆ.ಸಿ.ವ್ಯಾಲಿಯಲ್ಲಿ ಬಳಸುತ್ತಿರುವ ತಂತ್ರಜ್ಞಾನ ಮತ್ತು ಸಂಸ್ಕರಣೆಯ ಬಗ್ಗೆ ಸರಕಾರಿ ವಿಭಾಗಗಳು, ಸಂಬಂಧಪಟ್ಟ ಅಧಿಕಾರಿಗಳು ನ್ಯಾಯಾಲಯದ ಮುಂದೆ ಅನೇಕ ವಿಷಯಗಳನ್ನು ಮುಚ್ಚಿಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದು ಮನುಷ್ಯ ಮತ್ತು ಜಾನುವಾರುಗಳ ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯವಾದ್ದರಿಂದ ಸಂಶೋಧನೆ ಮಾಡಿದ ಎಲ್ಲಾ ವಿಷಯಗಳನ್ನು ಮತ್ತು ವರದಿಗಳನ್ನು ಸಾರ್ವಜನಿಕರ ಮುಂದಿಡಬೇಕಿದೆ. ಜೊತೆಗೆ ಒಂದು ಉನ್ನತ ಸ್ವತಂತ್ರ ವೈಜ್ಞಾನಿಕ ಸಮಿತಿಯನ್ನು ರಚಿಸಿ ಎರಡೂ ಕಣಿವೆಗಳ ನೀರಿನ ನಿರ್ವಹಣೆಯನ್ನು ಅದರ ಕೆಳಗೆ ತರಬೇಕಾಗಿರುವುದು ಅತ್ಯಂತ ಮುಖ್ಯ ಕೆಲಸವಾಗಿದೆ.

ಜಗತ್ತಿನಲ್ಲಿ ಸಾಕಷ್ಟು ದೇಶಗಳಲ್ಲಿ ಚರಂಡಿ ನೀರು ಮತ್ತು ಸಮುದ್ರ ನೀರನ್ನು ಸಂಸ್ಕರಿಸಿ ಕುಡಿಯಲು ಉಪಯೋಗಿಸುತ್ತಿದ್ದರೂ ಕೃಷಿ ಬಳಕೆಗೆ ಹೆಚ್ಚು ಬಳಸುತ್ತಿಲ್ಲ. ಇಸ್ರೇಲ್ ದೇಶ ಮಾತ್ರ ಶೇ. 80 ನೀರನ್ನು ಮರುಬಳಕೆ ಮಾಡುತ್ತಿದ್ದು ಕುಡಿಯಲು ಮತ್ತು ಕೃಷಿಗೆ ಯಶಸ್ವಿಯಾಗಿ ಬಳಸುತ್ತಿದೆ. ಚರಂಡಿ ನೀರನ್ನು ಮೂರು ಹಂತಗಳಲ್ಲಿ ಸಂಪೂರ್ಣವಾಗಿ ಸಂಸ್ಕರಿಸಬೇಕಾಗಿದೆ. ಒಂದು ರಾಸಾಯನಿಕ ವಿಷ ಕಲ್ಮಶಗಳನ್ನು ತೆಗೆಯುವುದು, ಎರಡು ಭಾರ ಧಾತುಗಳನ್ನು ಪ್ರತ್ಯೇಕಿಸುವುದು ಮತ್ತು ಬ್ಯಾಕ್ಟೀರಿಯಾ-ವೈರಸ್ಸುಗಳನ್ನು ಶುದ್ಧೀಕರಿಸುವುದು. ಈಗಾಗಲೇ ನೀರಿನ ಮಾದರಿಗಳಲ್ಲಿ ಭಾರ ಧಾತುಗಳಾದ ಕ್ರೋಮಿಯಮ್, ಕ್ಯಾಡ್ಮಿಯಂ, ನಿಕಲ್ ಇತ್ಯಾದಿಗಳ ಪ್ರಮಾಣ ಹೆಚ್ಚು ಕಂಡುಬಂದಿದ್ದು ಅವು ಬೆಳೆಗಳಲ್ಲೂ ಸೇರಿಕೊಳ್ಳುತ್ತವೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

ನಮ್ಮ ಸಮಸ್ಯೆ ಎಂದರೆ ನಮ್ಮ ಆಡಳಿತ-ರಾಜಕೀಯ-ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲೆಲ್ಲೂ ಭ್ರಷ್ಟತೆ ತಾಂಡವವಾಡುತ್ತಿರುವುದು. ಕೊನೆಯದಾಗಿ ಹೇಳಬೇಕೆಂದರೆ ಭವಿಷ್ಯದಲ್ಲಿ ಈ ಎರಡೂ ಕಣಿವೆಗಳ ಮೂಲಕ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆರೆಗಳಿಗೆ ಹರಿಸುವ ಚರಂಡಿ ನೀರನ್ನು ಸಂಪೂರ್ಣವಾಗಿ ಅಂತರ್‌ರಾಷ್ಟ್ರೀಯ ಗುಣಮಟ್ಟದ ಪ್ರಕಾರ ಸಂಸ್ಕರಿಸಬೇಕಿದೆ. ಹಾಗೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ಪ್ರದೇಶಗಳ ಪರಿಸ್ಥಿತಿ ಏನಾಗಬಹುದು ಎನ್ನುವ ಪ್ರಶ್ನೆಗಳು ಪರಿಸರವಾದಿಗಳು, ವಿಜ್ಞಾನಿಗಳು ಮತ್ತು ಜನರನ್ನು ಕಾಡುತ್ತಿವೆ. ಇದನ್ನು ಸರಿಪಡಿಸದೇ ಹೋದಲ್ಲಿ ಮುಂದಿನ ಪೀಳಿಗೆಗಳಿಗೆ ನಾವು ಅನ್ಯಾಯ ಮಾಡಿ ಹೋದಂತಾಗುತ್ತದೆ! ಇದು ಭವಿಷ್ಯದಲ್ಲಿ ವರದಾನವೊ? ಮಹಾಶಾಪವೊ? ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)