varthabharthi


ಕ್ರೀಡೆ

ಆಫ್ರಿಕಾ ನಾಯಕ ಬಾವುಮಾ ಪಾಕ್ ಟ್ವೆಂಟಿ-20 ಸರಣಿಗೆ ಅಲಭ್ಯ

ವಾರ್ತಾ ಭಾರತಿ : 10 Apr, 2021

ಜೋಹಾನ್ಸ್‌ಬರ್ಗ್, ಎ.10: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ತೆಂಬಾ ಬಾವುಮಾ ಅವರು ತವರಿನಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ನಾಲ್ಕು ಪಂದ್ಯಗಳ ಟ್ವೆಂಟಿ -20 ಅಂತರ್‌ರಾಷ್ಟ್ರೀಯ ಸರಣಿಯಿಂದ ಗಾಯದ ಕಾರಣದಿಂದ ಹೊರಗುಳಿ ಯಲಿದ್ದಾರೆ.

ಈಗಾಗಲೇ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ದುರ್ಬಲಗೊಂಡಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಮತ್ತಷ್ಟು ಹೊಡೆತ ಬಿದ್ದಿದೆ.

ಪ್ರಿಟೋರಿಯಾದಲ್ಲಿ ಬುಧವಾರ ಪಾಕಿಸ್ತಾನ ವಿರುದ್ಧ ಮೂರನೇ ಹಾಗೂ ಅಂತಿಮ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಬಾವುಮಾ ಅವರಿಗೆ ಗಾಯವಾಗಿತ್ತು. ಮೊದಲ ಟ್ವೆಂಟಿ-20 ಪಂದ್ಯವು ಶನಿವಾರ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ. ಬ್ಯಾಟ್ಸ್‌ಮನ್‌ಗಳಾದ ಕ್ವಿಂಟನ್ ಡಿ ಕಾಕ್ ಹಾಗೂ ಡೇವಿಡ್ ಮಿಲ್ಲರ್ ಮತ್ತು ವೇಗದ ಬೌಲರ್ ಕಾಗಿಸೊ ರಬಾಡಾ ಸೇರಿದಂತೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಈಗಾಗಲೇ ಐದು ಪ್ರಮುಖ ಆಟಗಾರರಿಲ್ಲ.ಅವರೆಲ್ಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡಲು ತೆರಳಿದ್ದಾರೆ.

ಅನುಭವಿ ರೀಝಾ ಹೆಂಡ್ರಿಕ್ಸ್ ವೈಯಕ್ತಿಕ ಕಾರಣದಿಂದಾಗಿ ತಂಡದ ಸೇವೆಗೆ ಲಭ್ಯರಿಲ್ಲ. ಉತ್ತಮ ಫಾರ್ಮ್‌ನಲ್ಲಿರುವ ರಾಸ್ಸಿ ವಾನ್ ಡೆರ್ ಡುಸೆನ್ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಆರಂಭಿಕ ಬ್ಯಾಟ್ಸ್‌ಮನ್ ಏಡೆನ್ ಮಾರ್ಕ್ರಮ್, ಆಲ್‌ರೌಂಡರ್‌ಗಳಾದ ಆಂಡಿಲೆ ಫೆಹ್ಲುಕ್ವಾಯೊ ಮತ್ತು ವಿಯಾನ್ ಮುಲ್ಡರ್, ಮತ್ತು ವೇಗಿ ಡ್ಯಾರಿನ್ ಡುಪವಿಲನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)