varthabharthi


ವಿಶೇಷ-ವರದಿಗಳು

Scroll.in ವರದಿ

ಕಾಶಿ-ಜ್ಞಾನವಾಪಿ ಮಸೀದಿ ಸಂಕೀರ್ಣದ ಸರ್ವೆ ನಡೆಸುವಂತೆ ವಾರಣಾಸಿ ನ್ಯಾಯಾಲಯದ ನಿರ್ದೇಶ ಕಾನೂನು ಸಮ್ಮತವಲ್ಲ ಏಕೆ?

ವಾರ್ತಾ ಭಾರತಿ : 10 Apr, 2021

ಹೊಸದಿಲ್ಲಿ,ಎ.10: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ಮಂದಿರಕ್ಕೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿಯು ನಿರ್ಮಾಣಗೊಳ್ಳುವುದಕ್ಕಿಂತ ಮೊದಲು ಅಲ್ಲಿ ದೇವಸ್ಥಾನವೊಂದು ಅಸ್ತಿತ್ವದಲ್ಲಿತ್ತೇ ಎನ್ನುವುದನ್ನು ನಿರ್ಧರಿಸಲು ಮಸೀದಿ ಸಂಕೀರ್ಣದ ಸರ್ವೆಯನ್ನು ನಡೆಸುವಂತೆ ಅಲ್ಲಿಯ ಸಿವಿಲ್ ನ್ಯಾಯಾಲಯವೊಂದು ಗುರುವಾರ ಭಾರತೀಯ ಪುರಾತತ್ವ ಸರ್ವೇಕ್ಷಣೆ (ಎಎಸ್ಐ)ಗೆ ನಿರ್ದೇಶ ನೀಡಿದೆ. 

ಇದೀಗ ನ್ಯಾಯಾಲಯದ ಈ ನಿರ್ದೇಶವು ಕಾನೂನಿಗೆ ಅನುಗುಣವಾಗಿದೆಯೇ ಎಂಬ ಪ್ರಶ್ನೆಯೆದ್ದಿದೆ ಮತ್ತು ಅದು ಕಾನೂನು ಸಮ್ಮತವಾಗಿರಲಿಲ್ಲ ಎನ್ನುವುದಕ್ಕೆ ಕಾರಣಗಳಿಲ್ಲಿವೆ. ‘ಸ್ವಯಂಭು ವಿಶ್ವೇಶ್ವರ’ನ ಪರವಾಗಿ 1991ರಲ್ಲಿ ವಕೀಲ ವಿಜಯಶಂಕರ ರಸ್ತೋಗಿ ಮತ್ತು ಇತರ ನಾಲ್ವರು ದಾಖಲಿಸಿದ್ದ ಪ್ರಾತಿನಿಧಿಕ ದಾವೆಗೆ ಸಂಬಂಧಿಸಿದಂತೆ ನ್ಯಾಯಾಧೀಶ ಅಶುತೋಷ ತಿವಾರಿ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಮಸೀದಿಯಿದ್ದ ಜಾಗದಲ್ಲಿ ಮೊದಲು ಜ್ಯೋತಿರ್ಲಿಂಗ ಸಹಿತ ಪುರಾತನ ದೇವಸ್ಥಾನವೊಂದಿತ್ತು ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

1669ರಲ್ಲಿ ಮುಘಲ್ ಚಕ್ರವರ್ತಿ ಔರಂಗಝೇಬ್ ದೇವಸ್ಥಾನವನ್ನು ನೆಲಸಮಗೊಳಿಸುವಂತೆ ಆದೇಶಿಸಿದ್ದ ಮತ್ತು ಆ ಜಾಗದಲ್ಲಿ ನೆಲಸಮಗೊಂಡಿದ್ದ ದೇವಸ್ಥಾನದ ಕಲ್ಲು ಇತ್ಯಾದಿಗಳನ್ನು ಬಳಸಿಕೊಂಡು ಮಸೀದಿಯನ್ನು ನಿರ್ಮಿಸಲಾಗಿದೆ. ಮಸೀದಿಯಡಿ ಈಗಲೂ ಜ್ಯೋತಿರ್ಲಿಂಗವಿದೆ ಎನ್ನುವುದು ಹಿಂದುಗಳ ನಂಬಿಕೆಯಾಗಿದೆ ಎಂದು ವಾದಿಸಿರುವ ಅರ್ಜಿದಾರರು,ಮಸೀದಿಯಿರುವ ಜಾಗವನ್ನು ಹಿಂದುಗಳಿಗೆ ಮರಳಿಸಬೇಕು ಎಂದು ಕೋರಿದ್ದಾರೆ.

ಸರ್ವೆಗೆ ನ್ಯಾಯಾಲಯದ ಆದೇಶವು ಆರೆಸ್ಸೆಸ್ ಮತ್ತು ವಿಹಿಂಪನಂತಹ ಹಿಂದುತ್ವ ಸಂಘಟನೆಗಳು ಹಾಗೂ ಬಿಜೆಪಿ ತೀವ್ರ ಆಸಕ್ತಿಯನ್ನು ಹೊಂದಿರುವ ಗಹನವಾದ ರಾಜಕೀಯ ವಿಷಯವನ್ನು ಮತ್ತೆ ಬಡಿದೆಬ್ಬಿಸಿದೆ. ಆದರೆ ಈ ಆದೇಶವು ಎರಡು ಕಾರಣಗಳಿಂದಾಗಿ ಕಾನೂನಾತ್ಮಕವಾಗಿ ಪ್ರಶ್ನಾರ್ಹವಾಗಿದೆ.

ಮೊದಲನೆಯದಾಗಿ,ಈ ಆದೇಶವು ಆರಾಧನಾ ತಾಣಗಳ (ವಿಶೇಷ ನಿಯಮಗಳು) ಕಾಯ್ದೆ,1991ನ್ನು ನೇರವಾಗಿ ಉಲ್ಲಂಘಿಸಿರುವಂತೆ ಕಂಡುಬರುತ್ತಿದೆ. ಅಯೋಧ್ಯೆಯ ಬಾಬ್ರಿ ಮಸೀದಿ ನಿವೇಶನದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ರಾಮಜನ್ಮಭೂಮಿ ಆಂದೋಲನದ ಹಿನ್ನೆಲೆಯಲ್ಲಿ 1991ರಲ್ಲಿ ಈ ಕಾಯ್ದೆಯನ್ನು ಅಂಗೀಕರಿಸಲಾಗಿತ್ತು. ದೇಶದಲ್ಲಿಯ ಎಲ್ಲ ಆರಾಧನಾ ತಾಣಗಳು 1947,ಆ.15ರಂದು ಇದ್ದ ಸ್ಥಿತಿಯಲ್ಲಿಯೇ ಇರಲಿವೆ ಮತ್ತು ಆರಾಧನಾ ತಾಣವೊಂದನ್ನು ಇನ್ನೊಂದು ಧರ್ಮದ ಆರಾಧನಾ ತಾಣವನ್ನಾಗಿ ಪರಿವರ್ತಿಸಲು ಕೋರಿರುವ ಪ್ರಕರಣಗಳು ಕಾಯ್ದೆಯ ಜಾರಿಯೊಂದಿಗೆ ರದ್ದುಗೊಳ್ಳುತ್ತವೆ ಎನ್ನುವುದನ್ನು ಈ ಕಾಯ್ದೆಯು ಸ್ಪಷ್ಟಪಡಿಸಿದೆ.

ಎರಡನೆಯದಾಗಿ,ದಾವೆಯ ಸಮರ್ಥನೀಯತೆಯನ್ನೇ ಪ್ರಶ್ನಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ತನ್ನ ಆದೇಶವನ್ನು ಅಲಹಾಬಾದ್ ಉಚ್ಚ ನ್ಯಾಯಾಲಯವು ಕಾಯ್ದಿರಿಸಿ ಇನ್ನೂ ಒಂದು ತಿಂಗಳು ಕೂಡ ಆಗಿಲ್ಲ,ಅಷ್ಟರಲ್ಲಿಯೇ ವಾರಣಾಸಿ ಸಿವಿಲ್ ನ್ಯಾಯಾಲಯದ ಈ ಆದೇಶವು ಹೊರಬಿದ್ದಿದೆ.

ಉಚ್ಚ ನ್ಯಾಯಾಲಯದ ನಿರ್ದೇಶ:

1998ರಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯವು ದಾವೆಗೆ ತಡೆಯಾಜ್ಞೆಯನ್ನು ನೀಡಿತ್ತು. ತಡೆಯಾಜ್ಞೆ ಈಗ ಅನ್ವಯವಾಗುತ್ತಿಲ್ಲವಾದ್ದರಿಂದ ದಾವೆಯ ವಿಚಾರಣೆಯನ್ನು ಆರಂಭಿಸಬಹುದಾಗಿದೆ ಎಂದು ಸಿವಿಲ್ ನ್ಯಾಯಾಲಯವು 2020,ಫೆ.4ರಂದು ನಿರ್ಧರಿಸಿತ್ತು. ಈ ನಿರ್ಧಾರಕ್ಕೆ ಬರಲು ಅದು ಸರ್ವೋಚ್ಚ ನ್ಯಾಯಾಲಯದ 2018ರ ತೀರ್ಪನ್ನು ನೆಚ್ಚಿಕೊಂಡಿತ್ತು. ತಡೆಯಾಜ್ಞೆಯನ್ನು ಸ್ಪಷ್ಟವಾಗಿ ವಿಸ್ತರಿಸದಿದ್ದರೆ ಆರು ತಿಂಗಳ ಬಳಿಕ ಸಿವಿಲ್ ಅಥವಾ ಕ್ರಿಮಿನಲ್ ನ್ಯಾಯಾಲಯ ಕಲಾಪವನ್ನು ಪುನರಾರಂಭಿಸಬಹುದು ಎಂದು ಮೂವರು ನ್ಯಾಯಾಧೀಶರ ಪೀಠವು ಆ ತೀರ್ಪಿನಲ್ಲಿ ಹೇಳಿತ್ತು.

ಆದರೆ ಅಲಹಾಬಾದ್ ಉಚ್ಚ ನ್ಯಾಯಾಲಯವು 2020,ಫೆ.26ರಂದು ದಾವೆಯ ಕಲಾಪಗಳ ಮೇಲಿನ ತಡೆಯಾಜ್ಞೆಯನ್ನು ವಿಸ್ತರಿಸಿತ್ತು ಮತ್ತು ಇಂದಿಗೂ ಈ ತಡೆಯಾಜ್ಞೆ ಮುಂದುವರಿದಿದೆ ಎಂದು ಮಸೀದಿಯ ಆಡಳಿತ ಸಮಿತಿಯಾದ ಅಂಜುಮನ್ ಇಂತೆಝಾಮಿಯಾ ಮಸ್ಜಿದ್ನ ಪರ ಹಿರಿಯ ನ್ಯಾಯವಾದಿ ಹಾಗೂ ದಾವೆಯಲ್ಲಿ ಪ್ರತಿವಾದಿಗಳಲ್ಲೊಬ್ಬರಾಗಿರುವ ಸೈಯದ್ ಫರ್ಮಾನ್ ಅಹ್ಮದ್ ನಕ್ವಿ ಅವರು ತಿಳಿಸಿದ್ದನ್ನು ಸುದ್ದಿ ಜಾಲತಾಣ Scroll.in ಉಲ್ಲೇಖಿಸಿದೆ.
 
ದಾವೆಯ ಸಮರ್ಥನೀಯತೆ ಕುರಿತು ಉಚ್ಚ ನ್ಯಾಯಾಲಯವೇ ತನ್ನ ತೀರ್ಪನ್ನು ಪ್ರಕಟಿಸುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಸಿವಿಲ್ ನ್ಯಾಯಾಧೀಶರು ಕಲಾಪಗಳನ್ನು ಮುಂದೂಡಬಹುದಾಗಿತ್ತು ಮತ್ತು ತೀರ್ಪಿಗಾಗಿ ಕಾಯಬಹುದಿತ್ತು. ಆದರೆ ಅವರು ಗುರುವಾರ ಆದೇಶವನ್ನು ಹೊರಡಿಸುವ ಮೂಲಕ ತೀವ್ರ ರಾಜಕೀಯ ಪರಿಣಾಮಗಳನ್ನು ಬೀರಬಲ್ಲ ಅತ್ಯಂತ ವಿವಾದಾತ್ಮಕ ಬೆಳವಣಿಗೆಗಳಿಗೆ ಚಾಲನೆ ನೀಡಿದ್ದಾರೆ.

ಕಾನೂನಿನ ಉಲ್ಲಂಘನೆ:
ಸಿವಿಲ್ ನ್ಯಾಯಾಧೀಶರ ಆದೇಶವು ಆರಾಧನಾ ತಾಣಗಳ (ವಿಶೇಷ ನಿಯಮಗಳು) ಕಾಯ್ದೆ,1991ನ್ನು ನೇರವಾಗಿ ಉಲ್ಲಂಘಿಸಿರುವಂತೆ ಕಂಡುಬರುತ್ತಿದೆ. ಅಯೋಧ್ಯೆಯ ಬಾಬ್ರಿ ಮಸೀದಿ ನಿವೇಶನದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ರಾಮಜನ್ಮಭೂಮಿ ಆಂದೋಲನದ ಹಿನ್ನೆಲೆಯಲ್ಲಿ 1991ರಲ್ಲಿ ಈ ಕಾಯ್ದೆಯನ್ನು ಅಂಗೀಕರಿಸಲಾಗಿತ್ತು.
 
ಮಹತ್ವದ್ದೆಂದರೆ ಈ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವನ್ನು ಪ್ರಶ್ನಿಸಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಮಾ.25ರಂದು ನೋಟಿಸನ್ನು ಹೊರಡಿಸಿರುವ ಹಿನ್ನೆಲೆಯಲ್ಲಿ ಗುರುವಾರದ ಆದೇಶವು ಹೊರಬಿದ್ದಿದೆ. ಆದರೆ ಕಾಯ್ದೆಯ ಅನುಷ್ಠಾನಕ್ಕೆ ಯಾವುದೇ ತಡೆಯಾಜ್ಞೆಯನ್ನು ಸರ್ವೋಚ್ಚ ನ್ಯಾಯಾಲಯವು ನೀಡಿಲ್ಲ.
ಕಾಯ್ದೆಯು ಇನ್ನೂ ಜಾರಿಯಲ್ಲಿದೆ ಮತ್ತು ಆರಾಧನಾ ತಾಣವೊಂದರ ಸ್ವರೂಪ,ಗುಣಲಕ್ಷಣವನ್ನು ಬದಲಿಸಲು ಕೋರುವ ಕಾನೂನು ಕಲಾಪಗಳನ್ನು ಸ್ಪಷ್ಟವಾಗಿ ನಿಷೇಧಿಸಿದೆ. ಹೀಗಿರುವಾಗ ಸಿವಿಲ್ ನ್ಯಾಯಾಲಯವು ಜ್ಞಾನವಾಪಿ ಮಸೀದಿ ಸಂಕೀರ್ಣದ ಸರ್ವೆ ನಡೆಸುವಂತೆ ಎಎಸ್ಐಗೆ ಆದೇಶಿಸಲು ಹೇಗೆ ಸಾಧ್ಯ?

ಕೃಪೆ: scroll.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)