ಉಡುಪಿ ಜಿಲ್ಲೆಯಲ್ಲಿ ಶನಿವಾರ 51 ಮಂದಿಗೆ ಕೊರೋನ ಪಾಸಿಟಿವ್
ಉಡುಪಿ, ಎ.10: ಶನಿವಾರ ಜಿಲ್ಲೆಯಲ್ಲಿ ಒಟ್ಟು 51 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ದಿನದಲ್ಲಿ 94 ಮಂದಿ ಸೋಂಕಿನಿಂದ ಮುಕ್ತರಾದರೆ, ಕೋವಿಡ್ಗೆ ಇನ್ನೂ ಸಕ್ರಿಯರಾಗಿರುವವರ ಸಂಖ್ಯೆ 347ಕ್ಕಿಳಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದ 51 ಮಂದಿಯಲ್ಲಿ 27 ಮಂದಿ ಪುರುಷರು ಹಾಗೂ 24 ಮಂದಿ ಮಹಿಳೆಯರು. ಇವರಲ್ಲಿ ತಲಾ 24 ಮಂದಿ ಉಡುಪಿ ಮತ್ತು ಕುಂಜಾಪುರ ತಾಲೂಕಿನವರು. ಉಳಿದ ಮೂವರು ಕಾರ್ಕಳ ತಾಲೂಕಿನವರು. ಇವರಲ್ಲಿ 50 ಮಂದಿ ಹೋಮ್ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ಶುಕ್ರವಾರ 94 ಮಂದಿ ಸೋಂಕಿನಿಂದ ಮುಕ್ತರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 25,341ಕ್ಕೇರಿದೆ. ಅಲ್ಲದೇ ಈ ದಿನ ಜಿಲ್ಲೆಯಲ್ಲಿ ಒಟ್ಟು 2322 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 51 ಮಂದಿ ಸೇರಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 25,880 ಆಗಿದೆ ಎಂದು ಡಾ.ಸೂಡ ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,42,030 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ. ಜಿಲ್ಲೆಯಲ್ಲಿ ಇಂದು ಸಹ ಯಾರೂ ಕೋವಿಡ್ಗೆ ಬಲಿಯಾಗಿಲ್ಲ. ಈವರೆಗೆ ಸತ್ತವರ ಸಂಖ್ಯೆ 192 ಆಗಿದೆ.
4483 ಮಂದಿಗೆ ಕೋವಿಡ್ ಲಸಿಕೆ
ಕೊರೋನ ವಿರುದ್ಧದ ಲಸಿಕೆಯನ್ನು ಶನಿವಾರ ಜಿಲ್ಲೆಯಲ್ಲಿ ಒಟ್ಟು 4483 ಮಂದಿ ಸ್ವೀಕರಿಸಿದರು. ಇವರಲ್ಲಿ 3964 ಮಂದಿ ಲಸಿಕೆಯ ಮೊದಲ ಡೋಸ್ ಪಡೆದರೆ, 519 ಮಂದಿಗೆ ಎರಡನೇ ಡೋಸ್ ನೀಡಲಾಯಿತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಜಿಲ್ಲೆಯಲ್ಲಿ 45 ವರ್ಷ ಮೇಲಿನ ಒಟ್ಟು 4422 ಮಂದಿ ಲಸಿಕೆಯನ್ನು ಸ್ವೀಕರಿ ಸಿದ್ದು, ಇವರಲ್ಲಿ 3954 ಮಂದಿ ಮೊದಲ ಡೋಸ್ನ್ನೂ, 468 ಮಂದಿ ಎರಡನೇ ಡೋಸ್ನ್ನು ಪಡೆದಿದ್ದಾರೆ. 43 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 18 ಮಂದಿ ಕೊರೋನ ಮುಂಚೂಣಿ ಯೋಧರು ಸಹ ಇಂದು ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದವರು ಹೇಳಿದರು.
ಜಿಲ್ಲೆಯಲ್ಲಿ ಇದುವರೆಗೆ 1,35,821 ಮಂದಿ ಲಸಿಕೆಯ ಮೊದಲ ಡೋಸ್ನ್ನು ಪಡೆದರೆ, 22,021 ಮಂದಿ ಎರಡನೇ ಡೋಸ್ನ್ನು ಸ್ವೀಕರಿಸಿದ್ದಾರೆ ಎಂದು ಡಾ.ಸೂಡ ತಿಳಿಸಿದರು.