varthabharthi


ಗಲ್ಫ್ ಸುದ್ದಿ

ಯುಎಇಯ ಮೊದಲ ಮಹಿಳಾ ಗಗನಯಾನಿ ನೂರಾ ಅಲ್-ಮತ್ರೂಶಿ

ವಾರ್ತಾ ಭಾರತಿ : 10 Apr, 2021

 ದುಬೈ (ಯುಎಇ), ಎ. 10: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತನ್ನ ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ಇನ್ನಿಬ್ಬರು ಗಗನಯಾನಿಗಳನ್ನು ಶನಿವಾರ ನೇಮಿಸಿದ್ದು, ಈ ಪೈಕಿ ಒಬ್ಬರು ಮಹಿಳೆಯಾಗಿದ್ದಾರೆ.

ದುಬೈ ಆಡಳಿತಗಾರ ಹಾಗೂ ಯುಎಇ ಪ್ರಧಾನಿ ಹಾಗೂ ಉಪಾಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಇಬ್ಬರು ಗಗನಯಾನಿಗಳ ಹೆಸರುಗಳನ್ನು ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ. ಅವರೆಂದರೆ ನೂರಾ ಅಲ್-ಮತ್ರೂಶಿ ಮತ್ತು ಮುಹಮ್ಮದ್ ಅಲ್-ಮುಲ್ಲಾ.

ನೂರಾ ಅಲ್-ಮತ್ರೂಶಿ ಯುಎಇಯ ಮೊದಲ ಮಹಿಳಾ ಗಗನಯಾನಿಯಾಗಿದ್ದಾರೆ.

ಈ ಹುದ್ದೆಗಳಿಗಾಗಿ ಯುಇಎಯ ಏಳು ಎಮಿರೇಟ್‌ಗಳಿಂದ 4,000ಕ್ಕೂ ಅಧಿಕ ಮಂದಿ ಅರ್ಜಿ ಹಾಕಿದ್ದರು. ಆಯ್ಕೆಯಾಗಿರುವ ಇಬ್ಬರು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಹ್ಯೂಸ್ಟನ್‌ನಲ್ಲಿರುವ ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ತರಬೇತಿ ಪಡೆಯಲಿದ್ದಾರೆ.

2019ರಲ್ಲಿ ಮೇಜರ್ ಜನರಲ್ ಹಝ್ಝ ಅಲ್-ಮನ್ಸೂರಿ ಯುಎಇಯ ಪ್ರಥಮ ಗಗನಯಾನಿಯಾಗಿದ್ದರು. ಅವರು ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 8 ದಿನಗಳನ್ನು ಕಳೆದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಯುಎಇಯು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸಾಧನೆಗಳನ್ನು ಮಾಡುತ್ತಿದೆ. ಅದರ ಮಂಗಳ ಶೋಧಕ ನೌಕೆ ‘ಹೋಪ್’ ಫೆಬ್ರವರಿಯಲ್ಲಿ ಮಂಗಳ ಗ್ರಹದ ಕಕ್ಷೆಯನ್ನು ಸೇರಿದೆ. ಈ ಸಾಧನೆಗೈದ ಮೊದಲ ಅರಬ್ ದೇಶ ಅದಾಗಿದೆ.

2024ರಲ್ಲಿ, ಚಂದ್ರನ ಮೇಲೆ ಮಾನವರಹಿತ ಬಾಹ್ಯಾಕಾಶ ನೌಕೆಯನ್ನು ಇಳಿಸುವ ಗುರಿಯನ್ನು ಯುಎಇ ಹೊಂದಿದೆ.

ಅದೂ ಅಲ್ಲದೆ, 2,117ರ ವೇಳೆಗೆ ಮಂಗಳ ಗ್ರಹದಲ್ಲಿ ಮಾನವ ಕಾಲನಿಯೊಂದನ್ನು ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನೂ ಅದು ಹೊಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)