varthabharthi


ಕರ್ನಾಟಕ

ನಮ್ಮನ್ನು ಅಧಿಕಾರಕ್ಕೆ ತಂದರೆ ಒಂದೇ ವರ್ಷದಲ್ಲಿ ಪ್ರತಿ ಕುಟುಂಬಕ್ಕೆ ಮನೆ: ಕುಮಾರಸ್ವಾಮಿ

ವಾರ್ತಾ ಭಾರತಿ : 10 Apr, 2021

ಬೀದರ್, ಎ.10: ಯಾರು ರೈತರ ಪರವಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೋ ಅಂತ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ತಮ್ಮೆಲ್ಲರ ಕರ್ತವ್ಯವೆಂದು ನಾನು ಭಾವಿಸಿದ್ದೇನೆ. ಬಸವಕಲ್ಯಾಣ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಟ್ಟರೆ ನನಗೆ ಶಕ್ತಿ ಕೊಟ್ಟಂತೆಯಾಗುತ್ತದೆ. ಅದು ಮುಂದಿನ ಚುನಾವಣೆಯಲ್ಲಿ ನಮಗೆ ಸಹಾಯಕವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಜಿಲ್ಲೆಯ ಬಸವಕಲ್ಯಾಣ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿರವರ ಪರವಾಗಿ ಕ್ಷೇತ್ರದ ಕೋಟಮಾಳ, ಹುಲಸೂರು, ಬೇಲೂರ, ನಾರಾಯಣಪುರ, ಕಿಟ್ಟ (ಗೋಕುಲ)ಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಸ್ವತಂತ್ರ ಸರಕಾರ ತರಲು ಸಹಾಯ ಮಾಡುವ ಮೂಲಕ ಉಚಿತ ಶಿಕ್ಷಣ, ಉಚಿತ ಆರೋಗ್ಯ ನೀಡಲು ಅವಕಾಶ ಕಲ್ಪಿಸಿಕೊಡಿ. ನಾವು ಉದ್ಯೋಗ ಸೃಷ್ಟಿಸುವ ಕೆಲಸ ಮಾಡುತ್ತೇವೆ. ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರಿಗೂ ಒಳ್ಳೆಯ ಸೌಲಭ್ಯಗಳನ್ನು ನೀಡುತ್ತೇವೆ ಎಂದರು. 

ಚುನಾವಣೆಯ ನಂತರ ಮತ್ತೆ ನಿಮ್ಮ ಗ್ರಾಮಗಳಿಗೆ ಬಂದು ನಿಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುವ ಕೆಲಸವನ್ನು ನಾನು ಮತ್ತು ಬಂಡೆಪ್ಪ ಖಾಶೆಂಪುರ್ ಸೇರಿದಂತೆ ನಮ್ಮ ನಾಯಕರೆಲ್ಲರೂ ಮಾಡುತ್ತೇ. ನಮಗೆ ಮತನೀಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ಇದು ಉಪಚುನಾವಣೆ ಆದರೂ ನಮ್ಮ ಪಕ್ಷಕ್ಕೆ ಅತ್ಯಂತ ಮಹತ್ವದ ಚುನಾವಣೆಯಾಗಿದೆ. ಕಾಂಗ್ರೆಸ್‍ನವರು ನಮ್ಮನ್ನು ಬಿಜೆಪಿಯ ಬಿ ಟೀಮ್ ಅಂತಾರೆ. ಆದರೆ ಈ ಹಿಂದೆ ಸರಕಾರ ಮಾಡಲು ಅವರೇ ನಮ್ಮ ಮನೆಗೆ ಬಂದಿದ್ದರು ಎಂದು ಅವರು ಹೇಳಿದರು.

ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡ್ತಿನಿ ಅಂತ ಹೇಳಿದ್ದೆ. ಆಗ ಇದೇ ಕಾಂಗ್ರೆಸ್ ಮತ್ತು ಬಿಜೆಪಿಯವರು ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕೇವಲ ಹದಿನಾಲ್ಕು ತಿಂಗಳಲ್ಲಿ ಉತ್ತಮ ಆಡಳಿತ ನೀಡಿದ್ದೇನೆ. ಇವತ್ತು ರಾಜ್ಯದಲ್ಲಿ ಕೆಟ್ಟ ಸರಕಾರ ನಡೆಯಲು ಕಾಂಗ್ರೆಸ್‍ನವರೇ ಮೂಲ ಕಾರಣಿಕರ್ತರಾಗಿದ್ದಾರೆ. ಅವತ್ತು ಅವರು ಮೈತ್ರಿ ಸರಕಾರಕ್ಕೆ ಅಡ್ಡಿಪಡಿಸಿರೋದರಿಂದಲೇ ಇವತ್ತು ಈ ಅನೈತಿಕ ಬಿಜೆಪಿ ಸರಕಾರ ರಚನೆಯಾಗಿದೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನನ್ನ ಸರಕಾರದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು, ಪ್ರತಿಭಟನೆಗಳು ನಡೆಯಲಿಲ್ಲ. ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಇಟ್ಟಿದ್ದೆ ಬಿಜೆಪಿಯವರು ಅದನ್ನು ನಿಲ್ಲಿಸಿದ್ದಾರೆ ಎಂದು ಅವರು ಕಿಡಿಗಾರಿದರು.

ಬೀದಿ ಬದಿಯ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ ನೀಡುವ ಯೋಜನೆ ತಂದಿದ್ದೆ. ಕಾಯಕ ಅನ್ನೋ ಯೋಜನೆಯನ್ನು ತಂದಿದ್ದೆ. ಸ್ವಸಹಾಯ ಸಂಘಗಳಿಗೆ ಐದು ಲಕ್ಷ ರೂ.ಗಳವರೆಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಅದಾಗಿತ್ತು. ಈಗ ಅದು ಕೂಡ ನಿಲ್ಲಿಸಿದ್ದಾರೆ. ಕೊರೋನ ಪರಿಣಾಮವಾಗಿ ಇವತ್ತು ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಆ ಬಗ್ಗೆ ಈ ಬಿಜೆಪಿ ಸರಕಾರಕ್ಕೆ ಕಾಳಜಿ ಇಲ್ಲ ಎಂದು ಸರಕಾರದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.

2023ರ ಚುನಾವಣೆಯಲ್ಲಿ ಸ್ವತಂತ್ರ ಸರಕಾರ ತರುವ ಜವಾಬ್ದಾರಿ ನಿಮ್ಮ ಮೇಲೆ ಇದೆ. ಬಸವಕಲ್ಯಾಣ ಉಪಚುನಾವಣೆ 2023ರ ಚುನಾವಣೆಗೆ ದಿಕ್ಸೂಚಿ ಎಂಬುದನ್ನು ಮರೆಯಬೇಡಿ. 2023ರಲ್ಲಿ ನಮ್ಮನ್ನು ಅಧಿಕಾರಕ್ಕೆ ತಂದರೆ ವಾಸಕ್ಕೆ ಉತ್ತಮ ಮನೆ, ಶಿಕ್ಷಣ, ಆರೋಗ್ಯ ನೀಡುವ ಕೆಲಸ ಮಾಡುವೆ. ಒಂದೇ ವರ್ಷದಲ್ಲಿ ಪ್ರತಿ ಕುಟುಂಬಕ್ಕೆ ಒಂದು ಮನೆ ನೀಡುವ ಕಾರ್ಯಕ್ರಮ ಮಾಡುತ್ತೇನೆ. ಇವತ್ತು ನಿಮ್ಮನ್ನು ನಂಬಿ ಬಸವಕಲ್ಯಾಣದಲ್ಲಿ ಅಭ್ಯರ್ಥಿ ಹಾಕಿದ್ದೇನೆ. ಆಯ್ಕೆ ಮಾಡಿಕೊಟ್ಟು ಮುಂದಿನ ಹೋರಾಟಕ್ಕೆ ಅವಕಾಶ ಮಾಡಿಕೊಡಿ ಎಂದು ಬಸವಕಲ್ಯಾಣದ ಜನರಲ್ಲಿ ಅವರು ಮನವಿ ಮಾಡಿದರು.

ಶಾಸಕರಾದ ಬಂಡೆಪ್ಪ ಖಾಶೆಂಪುರ್, ವೆಂಕಟರಾವ್ ನಾಡಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲಾಪೂರ ಸೇರಿದಂತೆ ಅನೇಕರು ಮಾತನಾಡಿ, ಜೆಡಿಎಸ್‍ಗೆ ಮತ ನೀಡುವಂತೆ ಮನವಿ ಮಾಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)