varthabharthi


ಸಿನಿಮಾ

ಕೊಡೆ ಮುರುಗ: ಚಿತ್ರರಂಗದ ಛತ್ರಿಗಳ ಬಗೆಗೊಂದು ಚಿತ್ರ!

ವಾರ್ತಾ ಭಾರತಿ : 11 Apr, 2021
ಶಶಿಕರ ಪಾತೂರು

ಸಿನೆಮಾರಂಗದಲ್ಲಿ ಚಿತ್ರೀಕರಣ ಹೇಗೆ ನಡೆಯುತ್ತದೆ ಎನ್ನುವುದನ್ನು ‘ಶ್’ ಸೇರಿದಂತೆ ಒಂದಷ್ಟು ಸಿನೆಮಾಗಳಲ್ಲಿ ನೋಡಿದ್ದೇವೆ. ಆದರೆ ಒಂದು ಹೊಸಬರ ಸಿನೆಮಾ ಪೂರ್ತಿಯಾಗಿ ತೆರೆಗೆ ಬರುವುದನ್ನೇ ಪ್ರಧಾನವಾಗಿಸಿರುವ ಚಿತ್ರ ಇದು. ‘ಕೊಡೆ ಮುರುಗ’ ಎನ್ನುವುದು ನಾಯಕನ ಹೆಸರು. ಕೊಡೆ ಅವರ ಸಂಸ್ಥೆಯ ಲಾಂಛನ. ಮುರುಗನನ್ನು ನಾಯಕನಾಗಿಸಿ ಚಿತ್ರ ಮಾಡಲು ಮುರುಗನ ಅಣ್ಣ ಮುನಿಯಪ್ಪಣ್ಣ ತಯಾರಾಗಿರುತ್ತಾನೆ. ಆದರೆ ಚಿತ್ರೀಕರಣದ ಅರ್ಧದಲ್ಲೇ ಅಣ್ಣ ನಿರ್ಮಾಣದಿಂದ ಹಿಂದೆ ಸರಿಯುತ್ತಾನೆ. ಆತ ಹಾಗೆ ಹಿಂದೆ ಸರಿಯಲು ಕಾರಣವೇನು? ನಿಂತು ಹೋದ ಚಿತ್ರದ ನಾಯಕ ಕೊಡೆ ಮುರುಗ ಪೂರ್ತಿ ಮಾಡಲು ಆಯ್ದುಕೊಳ್ಳುವ ಮಾರ್ಗ ಯಾವುದು ಎನ್ನುವುದನ್ನು ನೋಡಬೇಕಾದರೆ ನೀವು ಕೊಡೆ ಮುರುಗ ಚಿತ್ರ ವೀಕ್ಷಿಸಬಹುದು.

ಚಿತ್ರದ ಮೊದಲ ಆಕರ್ಷಣೆ ಕೊಡೆ ಮುರುಗ ಎಂದು ಹೇಳಲೇಬೇಕು. ಪಾತ್ರವೇ ತಾವಾಗುವಲ್ಲಿ ಮುನಿಕೃಷ್ಣ ಅವರ ಪ್ರಯತ್ನ ಎದ್ದು ಕಾಣುತ್ತದೆ. ಮುರುಗನ ಅಣ್ಣ ಮುನಿಯಪ್ಪಣ್ಣನ ಪಾತ್ರಕ್ಕೆ ಜೀವ ತುಂಬಿರುವ ರಾಕ್‌ಲೈನ್ ಸುಧಾಕರ್ ಅವರು ಇಂದು ಜೀವಂತವಾಗಿಲ್ಲ ಎನ್ನುವುದು ದುರಂತ. ಕೊಡೆ ಮುರುಗನ ಬಳಿಕ ಚಿತ್ರದ ಪ್ರಧಾನ ಪಾತ್ರವಾಗಿರುವುದು ಸ್ವತಃ ಚಿತ್ರದ ನಿರ್ದೇಶಕರೇ ಆಗಿರುವ ಸುಬ್ರಹ್ಮಣ್ಯ ಪ್ರಸಾದ್. ಬಹುಶಃ ಅದೊಂದು ತಪ್ಪನ್ನು ನಿರ್ದೇಶಕರು ಮಾಡಿರದೇ ಇದ್ದರೆ ಈ ಚಿತ್ರ ಇನ್ನಷ್ಟು ಆಕರ್ಷಣೆ ಪಡೆದುಕೊಳ್ಳುತ್ತಿತ್ತು ಎನ್ನುವುದರಲ್ಲಿ ಸಂದೇಹವಿಲ್ಲ. ಅದರ ಹೊರತಾಗಿ ಒಂದಷ್ಟು ತಮಾಷೆಯ, ವಿಡಂಬನೆಯ ಸನ್ನಿವೇಶಗಳ ಮೂಲಕ ಚಿತ್ರವನ್ನು ಮನರಂಜನಾತ್ಮಕವಾಗಿ ನಿರ್ದೇಶಿಸುವಲ್ಲಿ ಸುಬ್ರಹ್ಮಣ್ಯ ಪ್ರಸಾದ್ ಗೆದ್ದಿದ್ದಾರೆ. ಹೊಸಬರು ಚಿತ್ರ ಮಾಡಲು ಮುಂದಾದಾಗ ಎದುರಾಗುವ ತೊಂದರೆಗಳೇನು? ಕಲಾವಿದರು ಪಾತ್ರಗಳನ್ನು ಯಾವ ಕಾರಣಗಳಿಗಾಗಿ ನಿರಾಕರಿಸುತ್ತಾರೆ? ವಿತರಕರು ಚಿತ್ರ ಕೊಳ್ಳಲು ಏನಿರಬೇಕು? ಮೊದಲಾದ ಸಂದೇಹಗಳಿಗೆ ಚಿತ್ರ ನೀಡುವ ಉತ್ತರ ಹೊಸ ನಿರ್ಮಾಪಕರುಗಳಿಗೆ ಉಪಕಾರಿಯಾದೀತು.

ಆರಂಭದ ಒಂದಷ್ಟು ದೃಶ್ಯಗಳು ಕತೆಗೆ ನೇರವಾಗಿ ಯಾವುದೇ ಸಂಬಂಧ ಹೊಂದಿಲ್ಲ. ಅವುಗಳಂತೆ ಇನ್ನೊಂದಷ್ಟು ದೃಶ್ಯಗಳು ಕೂಡ ಕತೆಯ ವೇಗಕ್ಕೆ ತಡೆಯಾದಂತೆ ಕಾಣಿಸುತ್ತವೆ. ಲೂಸ್ ಮಾದ ಯೋಗಿ ಕಾಣಿಸಿಕೊಂಡಿರುವ ಹಾಡು ಚಿತ್ರದಲ್ಲಿ ಅನಗತ್ಯವಾಗಿ ಬಂದು ಹೋಗುತ್ತದೆ. ಚಿಕ್ಕದಾಗಿ ಹೇಳಬಹುದಾದ ಸಂಗತಿಗಳಿಗೂ ಒಂದೆರಡು ದೃಶ್ಯಗಳನ್ನು ಮೀಸಲಿಟ್ಟು ಎಳೆದಾಡಿರುವುದು ವಿಪರ್ಯಾಸ. ಆದರೆ ಅರವಿಂದ್ ರಾವ್ ಅವರಂತಹ ಕಲಾವಿದರಿಗೆ ಈ ಹಿಂದೆ ಮಾಡಿರದಂತಹ ಪಾತ್ರಗಳನ್ನು ನೀಡಿ ನಗಿಸುವಂತೆ ಮಾಡಿರುವುದನ್ನು ಮೆಚ್ಚಲೇಬೇಕು. ಮಧ್ಯಂತರದ ಬಳಿಕ ಚಿತ್ರವನ್ನು ಮೇಲೆತ್ತುವಲ್ಲಿ ಮಿಮಿಕ್ರಿ ಗೋಪಿಯವರ ಪಾತ್ರದ ಪ್ರಭಾವ ಬಹಳಷ್ಟು ಇದೆ. ಹುಚ್ಚ ವೆಂಕಟ್ ಅವರನ್ನು ನೆನಪಿಸುವ ಪಾತ್ರಕ್ಕೆ ಅವರು ಸಂಪೂರ್ಣವಾದ ನ್ಯಾಯ ಒದಗಿಸಿದ್ದಾರೆ. ವೆಂಕಟ್ ಅವರನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳುವಲ್ಲಿ ಚಿತ್ರರಂಗ ಕೂಡ ಹಿಂದೆ ಬಿದ್ದಿರಲಿಲ್ಲ ಎನ್ನುವುದನ್ನು ನಿರ್ದೇಶಕರು ಪರಿಣಾಮಕಾರಿಯಾಗಿ ತೋರಿಸಿದ್ದಾರೆ. ಚಿತ್ರದ ನಾಯಕಿ ಪಲ್ಲವಿಗೌಡ ಅವರಂತೆ ನಾಯಕನ ತಾಯಿ ಸ್ವಾತಿಯವರ ಪಾತ್ರಗಳು ನೆನಪಲ್ಲಿ ಉಳಿಯುತ್ತವೆ. ಹದಿನೈದು ವರ್ಷಗಳ ಹಿಂದೆ ಮಲಯಾಳಂನಲ್ಲಿ ‘ಉದಯನಾಣ್ ತಾರಂ’ ಎನ್ನುವ ಸಿನೆಮಾ ಬಂದಿತ್ತು. ಅದು ಹೊಸ ನಿರ್ದೇಶಕರ ಚಿತ್ರವಾದರೂ ಚಿತ್ರದೊಳಗಿನ ಚಿತ್ರದಲ್ಲಿ ನಿರ್ದೇಶಕನಾಗಿ ಮೋಹನ್‌ಲಾಲ್ ಅಭಿನಯಿಸಿದ್ದರು. ಕೊಡೆ ಮುರುಗ ಚಿತ್ರಕ್ಕೆ ಅದರೊಂದಿಗೆ ನೇರ ಸಂಬಂಧ ಇಲ್ಲವಾದರೂ ಒಂದಷ್ಟು ಹೋಲಿಕೆಗಳಿವೆ. ಬಹುಶಃ ನಿರ್ದೇಶಕರಿಗೆ ಮೊದಲ ಅನುಭವವಾಗಿರುವ ಕಾರಣದಿಂದಲೇ ಇರಬಹುದು, ಇಲ್ಲಿ ಎಲ್ಲವನ್ನೂ ಪ್ರೇಕ್ಷಕರಿಗೆ ಚಮಚದಲ್ಲಿ ಕಲಸಿ ಬಾಯಿಗಿರಿಸುವ ಪ್ರಯತ್ನ ಮಾಡಿದ್ದಾರೆ. ಚಿತ್ರದ ಕೊನೆಯಲ್ಲಿ ಪೂರ್ತಿ ಸಿನೆಮಾದ ಸಾರಾಂಶವನ್ನೇ ಭಾಷಣದ ಮೂಲಕ ಹೇಳಿದ್ದಾರೆ! ಶಬರಿಮಲೆ ವ್ರತಧಾರಿ ಎನ್ನುವ ಮೂಲಕ ತಮ್ಮ ಪ್ರವಚನಕ್ಕೊಂದು ನೈತಿಕತೆಯ ಜಾಮೀನು ಪಡೆದುಕೊಂಡಿದ್ದಾರೆ.

ತಾರಾಗಣ: ಮುನಿಕೃಷ್ಣ, ಪಲ್ಲವಿ ಗೌಡ
ನಿರ್ದೇಶನ: ಸುಬ್ರಹ್ಮಣ್ಯ ಪ್ರಸಾದ್
ನಿರ್ಮಾಣ: ಕೆ. ರವಿಕುಮಾರ್

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)