varthabharthi


ಕ್ರೀಡೆ

ಇಂದು ಕೆಕೆಆರ್-ಸನ್‌ರೆಸರ್ಸ್ ಮುಖಾಮುಖಿ

ವಾರ್ತಾ ಭಾರತಿ : 11 Apr, 2021

ಮುಂಬೈ: ಮಾಜಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ರವಿವಾರ ಇಲ್ಲಿ ನಡೆಯಲಿರುವ ಹದಿನಾಲ್ಕನೇ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಯ ಮೂರನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

  ಇಯಾನ್ ಮೊರ್ಗನ್ ನಾಯಕತ್ವದ ಕೆಕೆಆರ್ ಪರಿಪೂರ್ಣ ಸಮತೋಲನದ ನಿರೀಕ್ಷೆಯಲ್ಲಿ ತನ್ನ ಮೊದಲ ಪಂದ್ಯಕ್ಕೆ ಸಜ್ಜಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಅಪೂರ್ವ ಯಶಸ್ಸು ಸಾಧಿಸಿರುವ ಮೊರ್ಗನ್ ಯುಎಇಯಲ್ಲಿ ನಡೆದ ಕಳೆದ ಐಪಿಎಲ್ ಟೂರ್ನಿಯ ಮಧ್ಯದಲ್ಲಿ ದಿನೇಶ್ ಕಾರ್ತಿಕ್ ಅವರಿಂದ ನಾಯಕತ್ವವನ್ನು ವಹಿಸಿಕೊಂಡಿದ್ದರು.

  ಮೊರ್ಗನ್ ನೇತೃತ್ವದ ಕೆಕೆಆರ್, ಎಸ್‌ಆರ್‌ಎಚ್ ಮತ್ತು ಆರ್‌ಸಿಬಿ ತಲಾ 14 ಪಾಯಿಂಟ್‌ಗಳನ್ನು ಗಳಿಸಿದ್ದರೂ, ರನ್‌ರೇಟ್ ಆಧಾರದಲ್ಲಿ ಎರಡನೇ ಬಾರಿಗೆ ಪ್ಲೇಆಫ್ ಅವಕಾಶದಿಂದ ವಂಚಿತಗೊಂಡಿತ್ತು. ಎಸ್‌ಆರ್‌ಎಚ್ ಮತ್ತು ಆರ್‌ಸಿಬಿ ಉತ್ತಮ ರನ್ ರೇಟ್ ಆಧಾರದಲ್ಲಿ ಪ್ಲೇಆಫ್‌ಗೆ ಮುನ್ನಡೆದವು.

ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡದ ನಾಯಕ ಮೊರ್ಗನ್ ಐಪಿಎಲ್‌ನಲ್ಲಿ ಪೂರ್ಣಪ್ರಮಾಣದ ನಾಯಕನಾಗಿ ಮೊದಲ ಬಾರಿ ಕೆಕೆಆರ್‌ನ್ನು ಮುನ್ನಡೆಸುತ್ತಿದ್ದಾರೆ. ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಕೆಕೆಆರ್ ಅಪೂರ್ವ ದಿನಗಳನ್ನು ಎದುರು ನೋಡುತ್ತಿದೆ.

  ಶುಭ್‌ಮನ್ ಗಿಲ್ ಅವರಂತಹ ಅಗ್ರ ಕ್ರಮಾಂಕದ ಯುವ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿದ್ದಾರೆ. ನಾಯಕತ್ವದ ಹೊರೆಯಿಂದ ಮುಕ್ತವಾಗಿರುವ ಅನುಭವಿ ದಿನೇಶ್ ಕಾರ್ತಿಕ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ ಮೊದಲಾದವರು ತಂಡದ ಬ್ಯಾಟಿಂಗ್‌ನ ಶಕ್ತಿಯಾಗಿದ್ದಾರೆ. ಆ್ಯಂಡ್ರೆ ರಸ್ಸೆಲ್ ಅವರಿಂದ ಈ ಋತುವಿನಲ್ಲಿ ತಂಡ ಸ್ಫೋಟಕ ಪ್ರದರ್ಶನದ ನಿರೀಕ್ಷೆಯಲ್ಲಿದೆ. ಕಳೆದ ಋತುವಿನಲ್ಲಿ ರಸ್ಸೆಲ್ ವಿಫಲರಾಗಿದ್ದರು. ಅವರು 9 ಇನಿಂಗ್ಸ್‌ನಲ್ಲಿ ಸರಾಸರಿ 13 ರನ್ ದಾಖಲಿಸಿದ್ದರು.

  ಯುಎಇಯಲ್ಲಿ ವಿಫಲರಾಗಿದ್ದ ಇನ್ನೊಬ್ಬ ಆಲ್‌ರೌಂಡರ್ ವೆಸ್ಟ್ ಇಂಡೀಸ್‌ನ ಸುನೀಲ್ ನರೈನ್. 2012 ಮತ್ತು 2014ರಲ್ಲಿ ಕೆಕೆಆರ್‌ನ ತಂಡದ ಯಶಸ್ಸಿಗೆ ನರೈನ್ ದೊಡ್ಡ ಕೊಡುಗೆ ನೀಡಿದ್ದರು. ಆದರೆ ಕಳೆದ ವರ್ಷ ಅವರ ಪ್ರದರ್ಶನ ಮಸುಕಾಗಿತ್ತು.

  ಈ ವರ್ಷದ ಹರಾಜಿನಲ್ಲಿ ಖರೀದಿಸಿದ ಬಾಂಗ್ಲಾದ ಶಾಕೀಬ್ ಅಲ್ ಹಸನ್ ಅವರಿಂದ ತಂಡ ಉತ್ತಮ ಕೊಡುಗೆಯ ನಿರೀಕ್ಷೆಯಲ್ಲಿದೆ. 40ರ ಹರೆಯದ ಹರ್ಭಜನ್ ಸಿಂಗ್ ಅವರ ಅನುಭವವನ್ನು ತಂಡ ಯಾವ ರೀತಿ ಬಳಸಿಕೊಳ್ಳಲಿದೆ ಎನ್ನುವುದನ್ನು ನೋಡಬೇಕಾಗಿದೆ.

 ಐಪಿಎಲ್‌ನ ಹೆಚ್ಚು ಸ್ಥಿರವಾದ ತಂಡಗಳಲ್ಲಿ ಒಂದಾದ ಸನ್‌ರೈಸರ್ಸ್ ಹೈದರಾಬಾದ್ ಕಳೆದ ವರ್ಷ ನಡೆದ ಕ್ವಾಲಿಫೈಯರ್ 2 ರಲ್ಲಿ ರನ್ನರ್ಸ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 17 ರನ್‌ಗಳ ಅಂತರದಲ್ಲಿ ಸೋತು ಫೈನಲ್‌ಗೇರುವ ಅವಕಾಶ ಕಳೆದುಕೊಂಡಿತ್ತು.

 ಗಾಯದಿಂದಾಗಿ ಕಳೆದ ವರ್ಷ ಯುಎಇಯಲ್ಲಿ ನಡೆದ ಐಪಿಎಲ್‌ನಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಆಡಿದ್ದ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಮರಳುವ ಮೂಲಕ ಎಸ್‌ಆರ್‌ಎಚ್ ತಂಡದ ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬಲಿದ್ದಾರೆ.

 ಭುವನೇಶ್ವರ್ ಅವರು ಯಾರ್ಕರ್ ಸ್ಪೆಷಲಿಸ್ಟ್ ಟಿ.ನಟರಾಜನ್ ಅವರೊಂದಿಗೆ ದಾಳಿಯನ್ನು ಮುನ್ನಡೆಸಲಿದ್ದಾರೆ. ಬೌಲಿಂಗ್ ವಿಭಾಗಕ್ಕೆ ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಸೇರಿಕೊಂಡಿದ್ದಾರೆ. ಆದರೆ ಎಸ್‌ಆರ್‌ಎಚ್‌ನ ನಿಜವಾದ ಶಕ್ತಿ ಡೇವಿಡ್ ವಾರ್ನರ್ ಮತ್ತು ಇನ್-ಫಾರ್ಮ್ ಜಾನಿ ಬೈರ್‌ಸ್ಟೋವ್. ಇವರೊಂದಿಗೆ ಕೇನ್ ವಿಲಿಯಮ್ಸನ್ ಮತ್ತು ಮನೀಶ್ ಪಾಂಡೆ ಇದ್ದಾರೆ. ವೃದ್ಧಿಮಾನ್ ಸಹಾ ಕಳೆದ ವರ್ಷ ಎಸ್‌ಆರ್‌ಎಚ್ ತಂಡದಲ್ಲಿ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ಆಗಿ ಮಿಂಚಿದ್ದರು. ರಾಷ್ಟ್ರೀಯ ತಂಡದಲ್ಲಿ ರಿಷಭ್ ಪಂತ್ ಕಾರಣದಿಂದಾಗಿ ಸಹಾ ಸ್ಥಾನ ಕಳೆದುಕೊಂಡಿದ್ದಾರೆ.

 ಕೆಕೆಆರ್ : ಇಯಾನ್ ಮೊರ್ಗನ್ (ನಾಯಕ), ದಿನೇಶ್ ಕಾರ್ತಿಕ್, ಶುಭ್‌ಮನ್ ಗಿಲ್, ನಿತೀಶ್ ರಾಣಾ, ಟಿಮ್ ಸೀಫರ್ಟ್, ರಿಂಕು ಸಿಂಗ್, ಆ್ಯಂಡ್ರೆ ರಸ್ಸೆಲ್, ಸುನೀಲ್ ನರೀನ್, ಕುಲದೀಪ್ ಯಾದವ್, ಶಿವಂ ಮಾವಿ, ಲ್ಯುಕಿ ಫರ್ಗುಸನ್, ಪ್ಯಾಟ್ ಕಮಿನ್ಸ್, ಕಮಲೇಶ್ ನಾಗರಕೋಟಿ, ಸಂದೀಪ್ ವಾರಿಯರ್, ಪ್ರಸಿದ್ಧ ಕೃಷ್ಣ, ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ, ಶಾಕೀಬ್ ಅಲ್ ಹಸನ್, ಶೆಲ್ಡಾನ್ ಜಾಕ್ಸನ್, ವೈಭವ್ ಅರೋರಾ, ಹರ್ಭಜನ್ ಸಿಂಗ್, ಕರುಣ್ ನಾಯರ್, ಬೆನ್ ಕಟ್ಟಿಂಗ್, ವೆಂಕಟೇಶ್ ಅಯ್ಯರ್ ಮತ್ತು ಪವನ್ ನೇಗಿ.

 ಎಸ್‌ಆರ್‌ಎಚ್ : ಡೇವಿಡ್ ವಾರ್ನರ್ (ನಾಯಕ), ಕೇನ್ ವಿಲಿಯಮ್ಸನ್, ವಿರಾಟ್ ಸಿಂಗ್, ಮನೀಶ್ ಪಾಂಡೆ, ಪ್ರಿಯಮ್ ಗಾರ್ಗ್, ವೃದ್ಧಿಮಾನ್ ಸಹಾ, ಜಾನಿ ಬೈರ್‌ಸ್ಟೋವ್, ಜೇಸನ್ ರಾಯ್, ಶ್ರೀವತ್ಸ ಗೋಸ್ವಾಮಿ, ವಿಜಯ್ ಶಂಕರ್,ಮುಹಮ್ಮದ್ ನಬಿ, ಕೇದಾರ್ ಜಾಧವ್, ಜೆ .ಸುಚಿತ್, ಜೇಸನ್ ಹೋಲ್ಡರ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಭುವನೇಶ್ವರ್ ಕುಮಾರ್, ರಶೀದ್ ಖಾನ್, ಟಿ.ನಟರಾಜನ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್, ಸಿದ್ಧಾರ್ಥ್ ಕೌಲ್, ಬಾಸಿಲ್ ಥಾಂಪಿ, ಶಹಬಾಝ್ ನದೀಮ್ ಮತ್ತು ಮುಜೀಬ್ ಉರ್ ರಹ್ಮಾನ್.

ಪಂದ್ಯ ಆರಂಭದ ಸಮಯ ರಾತ್ರಿ 7:30

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)