varthabharthi


ಕ್ರೀಡೆ

ಟ್ರೋಲ್‌ ಮಾಡಲೆತ್ನಿಸಿದ ಪಾಕಿಸ್ತಾನಿ ಪತ್ರಕರ್ತನಿಗೆ ಖಡಕ್‌ ಪ್ರತಿಕ್ರಿಯೆ ನೀಡಿದ ವೆಂಕಟೇಶ್‌ ಪ್ರಸಾದ್‌

ವಾರ್ತಾ ಭಾರತಿ : 11 Apr, 2021

ಹೊಸದಿಲ್ಲಿ: ಸಾಮಾಜಿಕ ತಾಣದಲ್ಲಿ ಕಾಲೆಳೆಯಲು ಯತ್ನಿಸಿದ ಪಾಕಿಸ್ತಾನಿ ಪತ್ರಕರ್ತನಿಗೆ ಭಾರತೀಯ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್‌ ವೆಂಕಟೇಶ್‌ ಪ್ರಸಾದ್‌ ಖಡಕ್‌ ಪ್ರತ್ಯುತ್ತರ ನೀಡಿದ್ದು, ಪೋಸ್ಟ್‌ ವೈರಲ್‌ ಆಗಿದೆ.

ಸದ್ಯ ಟ್ವಿಟರ್‌ ನಾದ್ಯಂತ ʼಕ್ರೆಡ್‌ʼ ಸಂಸ್ಥೆಯ ಜಾಹೀರಾತಿನಲ್ಲಿ ರಾಹುಲ್‌ ದ್ರಾವಿಡ್‌ ರ ʼಇಂದಿರಾ ನಗರ್‌ ಕ ಗೂಂಡಾʼ ಅವತಾರವು ಹೆಚ್ಚಿನ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ವೆಂಕಟೇಶ್‌ ಪ್ರಸಾದ್‌ ತಾವು ಈ ಹಿಂದೆ ಪಾಕಿಸ್ತಾನಿ ಕ್ರಿಕೆಟಿಗ ಅಮೀರ್‌ ಸುಹೈಲ್‌ ವಿಕೆಟ್‌ ಕಿತ್ತ ಫೋಟೊ ಪ್ರಕಟಿಸಿ ʼಇಂದಿರಾ ನಗರ್‌ ಕ ಗೂಂಡಾ ಹೂ ಮೆʼ ಎಂದು ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ ಗೆ ಪ್ರತಿಕ್ರಿಯಿಸಿದ ಪಾಕಿಸ್ತಾನಿ ಪತ್ರಕರ್ತ ನಜೀಬ್‌ ಉಲ್‌ ಹಸ್ನೈನ್‌, "ವೆಂಕಟೇಶ್‌ ಪ್ರಸಾದ್‌ ರ ವೃತ್ತಿಜೀವನದ ಏಕೈಕ ಸಾಧನೆ" ಎಂದು ಟ್ರೋಲ್‌ ಮಾಡಲೆತ್ನಿಸಿದ್ದರು. ಕೂಡಲೇ ಈ ಟ್ವೀಟ್‌ ಗೆ ಪ್ರತಿಕ್ರಿಯಿಸಿದ ಪ್ರಸಾದ್‌, "ಇಲ್ಲ ನಜೀಬ್‌ ಭಾಯ್‌, ನಾನು ಕೆಲವು ಸಾಧನೆಗಳನ್ನು ಮೀಸಲಿಟ್ಟಿದ್ದೆ. ಇಂಗ್ಲೆಂಡ್‌ ನಲ್ಲಿ 1999ರಲ್ಲಿ ನಡೆದ ಮುಂದಿನ ವಿಶ್ವಕಪ್‌ ನಲ್ಲಿ ಪಾಕಿಸ್ತಾನದ ವಿರುದ್ಧ 27 ರನ್‌ ಗಳಿಗೆ 5 ವಿಕೆಟ್‌ ಕಿತ್ತಿದ್ದೆ ಮತ್ತು 228 ರನ್‌ ಗಳನ್ನು ಬೆನ್ನಟ್ಟಲು ಪಾಕಿಸ್ತಾನೀಯರಿಗೆ ಸಾಧ್ಯವಾಗಿರಲಿಲ್ಲ. ದೇವರು ಅನುಗ್ರಹಿಸಲಿ" ಎಂದು ಪ್ರತಿಕ್ರಿಯೆ ನೀಡಿದ್ದಾರೆ. 

"ಪತ್ರಕರ್ತ ನಜೀಬ್‌ ರ ಜೀವನದ ಏಕೈಕ ಸಾಧನೆಯೆಂದರೆ ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಆಟಗಾರ ವೆಂಕಟೇಶ್‌ ಪ್ರಸಾದ್‌ ರಿಂದ ಪ್ರತಿಕ್ರಿಯೆ ಪಡೆದುಕೊಂಡಿದ್ದು" ಎಂದು ಭಾರತೀಯ ಕ್ರಿಕೆಟ್‌ ಅಭಿಮಾನಿಯೋರ್ವರು ವ್ಯಂಗ್ಯವಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)