varthabharthi


ವಿಶೇಷ-ವರದಿಗಳು

ನರಸಿಂಹಾನಂದ ವಿರುದ್ಧ ಪ್ರತಿಭಟನೆ ಮಾಡಿದ್ದ ನೂರಕ್ಕೂ ಅಧಿಕ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿದ್ದ ಪೊಲೀಸರು

ಮುಸ್ಲಿಮರ ಕೊಲೆ ಮತ್ತು ನರಮೇಧಕ್ಕೆ ಕರೆ ನೀಡಿದ್ದ ಯತಿ ನರಸಿಂಹಾನಂದ ಇನ್ನೂ ಏಕೆ ಜೈಲು ಸೇರಿಲ್ಲ?

ವಾರ್ತಾ ಭಾರತಿ : 11 Apr, 2021

Photo: Thewire

ಹೊಸದಿಲ್ಲಿ,ಎ.11: ಕಟ್ಟರ್ ಹಿಂದುತ್ವವಾದಿ ಯತಿ ನರಸಿಂಹಾನಂದ ಸರಸ್ವತಿಯನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಕ್ಕಾಗಿ ಮುಸ್ಲಿಂ ಯುವಕನೋರ್ವನನ್ನು ಬಂಧಿಸಿರುವುದು ವರದಿಯಾಗಿದೆ. ಪ್ರವಾದಿ ಮುಹಮ್ಮದ್ ರನ್ನು ಅವಹೇಳನ ಮಾಡಿದ್ದಕ್ಕಾಗಿ ಉತ್ತರ ಪ್ರದೇಶದ ಪಿಲಿಭಿತ್ನಲ್ಲಿ ನರಸಿಂಹಾನಂದನ ವಿರುದ್ಧ ಪ್ರತಿಭಟನೆ ನಡೆಸಿದ್ದ ನೂರಕ್ಕೂ ಅಧಿಕ ಜನರ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆದರೆ ಮುಸ್ಲಿಮರ ಕೊಲೆ ಮತ್ತು ನರಮೇಧಕ್ಕೆ ಬಹಿರಂಗ ಕರೆ ನೀಡಿದ್ದ ನರಸಿಂಹಾನಂದ ಇನ್ನೂ ಸ್ವತಂತ್ರವಾಗಿ ಓಡಾಡಿಕೊಂಡಿರುವುದು ಹಲವಾರು ಪ್ರಶ್ನೆಗಳನ್ನು ಸೃಷ್ಟಿಸಿದೆ.

ಸಾಮಾನ್ಯವಾಗಿ ಈ ಎರಡೂ ಪ್ರಕರಣಗಳಲ್ಲಿ ಪೊಲೀಸರ ಕ್ರಮ ಸರಿಯಾಗಿಯೇ ಇದೆ ಎಂದು ಪರಿಗಣಿಸಲಾಗುತ್ತದೆ. ಯಾರಾದರೂ ಓರ್ವ ವ್ಯಕ್ತಿಯನ್ನು ಕೊಲ್ಲುವುದಾಗಿ ಬಹಿರಂಗ ಬೆದರಿಕೆಯನ್ನೊಡ್ಡಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಿ,ಆತ ತನ್ನ ಬೆದರಿಕೆಯನ್ನು ಕಾರ್ಯರೂಪಕ್ಕೆ ತರದಂತೆ ನಿರ್ಬಂಧಿಸುವುದು ಅಗತ್ಯವಾಗಿದೆ. ಹೀಗಾಗಿ ಇಂತಹ ಸ್ಥಿತಿಯಲ್ಲಿ ಬೆದರಿಕೆಯೊಡ್ಡಿದ ವ್ಯಕ್ತಿಯ ಬಂಧನ ಮುನ್ನೆಚ್ಚರಿಕೆ ಕ್ರಮವಾಗುತ್ತದೆ. ಇಂತಹ ಕ್ರಮವು ಇಂತಹ ಬೆದರಿಕೆಗಳ ಜಾಡಿನಲ್ಲಿಯೇ ಸಾಗುವ ಪ್ರಚೋದನೆ ಹೊಂದಿದ ಇತರರಿಗೆ ಎಚ್ಚರಿಕೆಯ ಸಂದೇಶವೂ ಆಗುತ್ತದೆ.

ಕೊರೋನವೈರಸ್ ಹರಡುವಿಕೆಯನ್ನು ತಡೆಯಲು ಸರಕಾರವು ಹೇರಿರುವ ನಿಯಮಗಳನ್ನು ಉಲ್ಲಂಘಿಸಿ ನೂರಾರು ಜನರು ಒಂದೆಡೆ ಸಮಾವೇಶಗೊಂಡರೆ ಅವರ ವಿರುದ್ಧ ಪ್ರಕರಣ ದಾಖಲಿಸುವುದರಲ್ಲಿ ಪೊಲೀಸರ ಯಾವುದೇ ತಪ್ಪಿಲ್ಲ.

ಆದರೆ ನರಸಿಂಹಾನಂದನಂತಹ ವ್ಯಕ್ತಿಗಳು ಒಡ್ಡಿರುವ ಹಿಂಸಾಚಾರದ ಗಂಭೀರ ಬೆದರಿಕೆಗಳಿಗೆ ಸಂಬಂಧಿಸಿದಂತೆ ಕಾನೂನು ಮತ್ತು ಸುವ್ಯವಸ್ಥೆ ಯಂತ್ರವು ಸಂಪೂರ್ಣವಾಗಿ ನಿಷ್ಕ್ರಿಯವಾಗಿರುವಾಗ ಇಂತಹ ದಂಡನಾತ್ಮಕ ಕ್ರಮಗಳಿಗೆ ಯಾರಾದರೂ ಹೇಗೆ ಪ್ರತಿಕ್ರಿಯಿಸಬೇಕು? ನರಸಿಂಹಾನಂದರಂತಹ ವ್ಯಕ್ತಿಗಳ ಬೆದರಿಕೆ ಇಡೀ ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸಿಕೊಂಡಿರುವಾಗ ಅಂತಹವರನ್ನೇಕೆ ಬಂಧಿಸಲಾಗುತ್ತಿಲ್ಲ?
 
ದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನರಸಿಂಹಾನಂದ ಪ್ರವಾದಿ ಮುಹಮ್ಮದ್ ಮತ್ತು ಇಸ್ಲಾಂ ಧರ್ಮದ ವಿರುದ್ಧ ನಿಂದನೀಯ ಭಾಷೆಯನ್ನು ಬಳಸಿದ್ದ. ಆತ ಭಾರತದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರನ್ನು ‘ಜಿಹಾದಿ’ಎಂದು ಬಣ್ಣಿಸಿದ್ದ ಹಾಗೂ ವಿಭಜನೆಯ ಸಂದರ್ಭದಲ್ಲಿ ಭಾರತೀಯ ಮುಸ್ಲಿಮರನ್ನು ದೇಶದಿಂದ ಹೊರದಬ್ಬದಿದ್ದಕ್ಕೆ ಅಥವಾ ಅವರನ್ನು ನಿರ್ನಾಮಗೊಳಿಸದ್ದಕ್ಕೆ ವಿಷಾದಿಸಿದ್ದ. ಈತ ಮುಸ್ಲಿಮರ ಕೊಲೆಗೆ ಹಲವಾರು ಸಲ ಕರೆ ನೀಡಿದ್ದ. ಈತನಿಗೆ ಹಲವಾರು ಹಿಂಬಾಲಕರಿದ್ದು,ಅವರೂ ಮುಸ್ಲಿಮರಿಗೆ ಬೆದರಿಕೆಗಳನೊಡ್ಡುತ್ತಿದ್ದಾರೆ ಮತ್ತು ಭಾರತವನ್ನು ಮುಸ್ಲಿಮ್ ಮುಕ್ತಗೊಳಿಸುವಂತೆ ಹಿಂದುಗಳನ್ನು ಪ್ರಚೋದಿಸುತ್ತಿದ್ದಾರೆ.

ನಿಜವಾದ ಧಾರ್ಮಿಕ ನಾಯಕರೆಂದು ಅವರ ಬೆಂಬಲಿಗರು ಮತ್ತು ಮಾಧ್ಯಮದ ಒಂದು ವರ್ಗವು ಬಿಂಬಿಸಿರುವ ವ್ಯಕ್ತಿಗಳ ಪಟ್ಟಿಯಲ್ಲಿ ನರಸಿಂಹಾನಂದ ಇತ್ತೀಚಿನ ಸೇರ್ಪಡೆಯಾಗಿದ್ದಾನೆ. ಆದರೆ ಇವರೆಲ್ಲ ನಿಜಕ್ಕೂ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಮತ್ತು ಹಿಂಸಾಚಾರದ ಬೋಧಕರಾಗಿದ್ದಾರೆ.

 

ಇಂತಹವರನ್ನು ದ್ವೇಷವನ್ನು ಹರಡಲು ಹೇಗೆ ಮುಕ್ತವಾಗಿ ಬಿಡಲಾಗಿದೆ? ಒಂದು ಇಡೀ ಸಮುದಾಯದ ವಿರುದ್ಧ ಹಿಂಸಾಚಾರಕ್ಕೆ ಅವರ ಬಹಿರಂಗ ಮತ್ತು ನಿರಂತರವಾದ ಪ್ರಚೋದನೆಗಳ ಬಗ್ಗೆ ಪೊಲೀಸರ ಸಹನೆಗೆ ವಿವರಣೆ ಏನು? ಇಂತಹ ವ್ಯಕ್ತಿಗಳನ್ನೇಕೆ ಗಂಭೀರವಾಗಿ ಪರಿಗಣಿಸಲಾಗುತ್ತಿಲ್ಲ? ಅಥವಾ ಮುಸ್ಲಿಮರನ್ನು ಭಾರತದಲ್ಲಿ ಮನುಷ್ಯರನ್ನಾಗಿ ನಡೆಸಿಕೊಳ್ಳಲಾಗುತ್ತಿಲ್ಲವೇ? ಭಾರತವರ್ಷವೆಂಬ ಪವಿತ್ರ ಸ್ಥಳವನ್ನು ಶುದ್ಧವಾಗಿರಿಸಲು ನಿರ್ಮೂಲನ ಅಗತ್ಯವಾಗಿರುವ ಗೆದ್ದಲುಗಳು ಮತ್ತು ಹುಳಗಳು ಎಂದು ಮುಸ್ಲಿಮರನ್ನು ಪರಿಗಣಿಸಲಾಗಿದೆಯೇ?

ವಾಸ್ತವದಲ್ಲಿ ಪೊಲೀಸರು ಮತ್ತು ಭಾರತೀಯ ನ್ಯಾಯಾಲಯಗಳು ಹಿಂದುಗಳು ಹಿಂಸಾಚಾರದ ಬಗ್ಗೆ ಆಡುವ ಮಾತುಗಳು ಎಂದಿಗೂ ಗಂಭೀರವಾಗಿರುವುದಿಲ್ಲ ಎಂದು ನಂಬಿದ್ದಾರೆ. ಅವರಲ್ಲಿ ಹಿಂಸೆಯನ್ನು ಎಸಗುವ ಸಾಮರ್ಥ್ಯವಿಲ್ಲ ಮತ್ತು ಅವರು ಒಡ್ಡುವ ಹಿಂಸಾಚಾರದ ಬೆದರಿಕೆಗಳು ಅವರ ಭಾವೋದ್ವೇಗಗಳಿಂದ ಹೊರಹೊಮ್ಮುವ ಸಹಜ ಆಕ್ರೋಶಗಳಾಗಿವೆ. ಅವರು ಹಿಂಸೆಯ ಬಗ್ಗೆ ಮಾತನಾಡುತ್ತಾರೆ ಅಷ್ಟೇ,ಅದನ್ನೆಂದೂ ಉದ್ದೇಶಿಸಿರುವುದಿಲ್ಲ ಎನ್ನುವುದು ಆಡಳಿತ ಯಂತ್ರದ ನಂಬಿಕೆಯಾಗಿದೆ.
 
ಮುಸ್ಲಿಮರು ಸುಲಭವಾಗಿ ಮೂಲಭೂತೀಕರಣಕ್ಕೆ ಒಳಗಾಗುತ್ತಾರೆ,ಆದರೆ ಹಿಂದುಗಳು ಮೂಲಭೂತೀಕರಣದಿಂದ ದೂರವಿರುತ್ತಾರೆ. ಅವರು ಕೇವಲ ಮಾತನಾಡುತ್ತಾರೆ ಮತ್ತು ಕೊಲ್ಲುವುದಿಲ್ಲ. ಇಂತಹ ಹೇಳಿಕೆಗಳ ಮೂಲಕ ಅವರು ಮುಸ್ಲಿಮರ ನಿಜವಾದ ಮುಖವನ್ನು ವಿಶ್ವದೆದುರು ಇಡುತ್ತಿದ್ದಾರೆ ಎಂದು ಪೊಲೀಸರು ಭಾವಿಸಿರುವಂತಿದೆ.
 
ನರಸಿಂಹಾನಂದನಂತಹ ಸ್ವಾಮಿಗಳು ಮತ್ತು ಬಾಬಾಗಳು ಮುಸ್ಲಿಮರನ್ನು ದೂಷಿಸುತ್ತಾರೆ,ಅವರ ಪ್ರವಾದಿಗಳನ್ನು ನಿಂದಿಸುತ್ತಾರೆ, ಕುರ್ಆನ್ ಅನ್ನು ಹರಿದೆಸೆಯುವಂತೆ ಬಹಿರಂಗ ಕರೆಗಳನ್ನು ನೀಡುತ್ತಾರೆ ಮತ್ತು ಅದನ್ನು ಅನುಸರಿಸುವವರನ್ನು ಕೊಲ್ಲುವಂತೆ ಪ್ರಚೋದಿಸುತ್ತಾರೆ. ಇದಕ್ಕೆ ಮುಸ್ಲಿಮರು ಪ್ರತಿಕ್ರಿಯಿಸುತ್ತಾರೆ. ಅವರಲ್ಲಿ ಹೆಚ್ಚಿನವರು ಆಘಾತ, ನಿರಾಶೆಯನ್ನು ವ್ಯಕ್ತಪಡಿಸುತ್ತಾರೆ. ಕೆಲವರು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ಆಗ ನರಸಿಂಹಾನಂದನಂತಹವರು, ‘ನಾವು ಹೀಗೆಂದು ಹೇಳಿರಲಿಲ್ಲವೇ? ಮುಸ್ಲಿಮರು ಹಿಂಸಾಚಾರಿಗಳು ’ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಇದು ಹಿಂದುತ್ವ ಸಂಘಟನೆಗಳ ಕಾರ್ಯತಂತ್ರವಾಗಿದೆ. 

ದುರದೃಷ್ಟವೆಂದರೆ ಭಾರತ ಸರಕಾರದ ವಿಚಾರವೂ ಇದೇ ಆಗಿದೆ. ಪೊಲೀಸರು ಮತ್ತು ಆಡಳಿತ ಮುಸ್ಲಿಮರನ್ನು ಶಂಕೆಯಿಂದಲೇ ನೋಡುತ್ತಾರೆ ಮತ್ತು ಹಿಂದುಗಳ ಬಗ್ಗೆ ಪ್ರಸನ್ನಚಿತ್ತ ಹೊಂದಿರುತ್ತಾರೆ. ಹೀಗಾಗಿ ಮುಸ್ಲಿಮರ ಕ್ರುದ್ಧ ಸಂದೇಶಗಳು ಅವರ ವಿರುದ್ಧ ತಕ್ಷಣದ ಕ್ರಮವನ್ನು ಆಹ್ವಾನಿಸುತ್ತವೆ. ಅವರ ಸಿಟ್ಟು ಹಿಂಸೆಯನ್ನು ಭುಗಿಲೆಬ್ಬಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬ ವಾದವನ್ನು ಮುಂದಿರಿಸಲಾಗುತ್ತಿದೆ. ಮುಸ್ಲಿಮರು ಹಿಂಸಾ ಪ್ರವೃತ್ತಿಯನ್ನು ಹೊಂದಿದ್ದಾರೆ ಎನ್ನುವ ಅವರು ಹಿಂದುಗಳ ಬಗ್ಗೆ ಇದನ್ನು ಹೇಳುವುದಿಲ್ಲ. ಹೀಗಾಗಿ ಹಿಂದುಗಳು ಪ್ರಚೋದನಾತ್ಮಕ ಹೇಳಿಕೆಗಳನ್ನು ಕಡೆಗಣಿಸುವಷ್ಟು ಬುದ್ಧಿವಂತರಾಗಿದ್ದಾರೆ ಎಂದು ಪರಿಗಣಿಸಿ ಕೊಲೆ,ಹಿಂಸಾಚಾರ ಮತ್ತು ನರಮೇಧದ ಕರೆಗಳನ್ನು ತಳ್ಳಿ ಹಾಕಲಾಗುತ್ತಿದೆ.

2020ರಲ್ಲಿ ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವಾಗ ಹಲವಾರು ಬಿಜೆಪಿ ನಾಯಕರು ಮುಸ್ಲಿಮರನ್ನು ಒಂದು ಕೈ ನೋಡಿಕೊಳ್ಳುವಂತೆ ತಮ್ಮ ಹಿಂಬಾಲಕರಿಗೆ ಕರೆಗಳನ್ನು ನೀಡಿದ್ದರು. ಕೇಂದ್ರದ ಸಚಿವರೋರ್ವರು ಮುಸ್ಲಿಂ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವಂತೆ ಕರೆ ನೀಡಿದ್ದರು. ಆದರೆ ಅವರೆಲ್ಲರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ.

ಹೀಗಾಗಿಯೇ ಆರಂಭದಲ್ಲಿ ಪ್ರಸ್ತಾಪಿಸಿರುವ ಎರಡು ಪ್ರಕರಣಗಳಲ್ಲಿ ಬಂಧನಗಳಾಗಿದ್ದರೂ, ಆ ಎಲ್ಲ ಬೆಳವಣಿಗೆಗಳನ್ನು ಪ್ರಚೋದಿಸಿದ್ದ ನರಸಿಂಹಾನಂದನೇಕೆ ಇನ್ನೂ ಜೈಲು ಸೇರಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಕೇಳಿಬರುತ್ತಿದೆ.

ಕೃಪೆ: thewire.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)