varthabharthi


ಕರ್ನಾಟಕ

ಕೊರೋನ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ ಅನಿವಾರ್ಯ: ಸಿಎಂ ಯಡಿಯೂರಪ್ಪ

ವಾರ್ತಾ ಭಾರತಿ : 11 Apr, 2021

ರಾಯಚೂರು, ಎ. 11: ಕೊರೋನ ಎರಡನೆ ಅಲೆ ಹಿನ್ನೆಲೆಯಲ್ಲಿ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆಗಟ್ಟಲು ಅನಿವಾರ್ಯವಾಗಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದ್ದು, ಯಾರೊಬ್ಬರೂ ಮಾರ್ಗಸೂಚಿ ಉಲ್ಲಂಘನೆ ಮಾಡಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಮನವಿ ಮಾಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕೊರೋನ ಕರ್ಫ್ಯೂ ವಿಧಿಸಲಾಗಿದೆ. ಅನಗತ್ಯವಾಗಿ ಮನೆಯಿಂದ ಆಚೆ ಬರುವುದು, ತಿರುಗಾಡುವುದು ಸರಿಯಲ್ಲ. ಸಾರ್ವಜನಿಕರ ಸಹಕಾರ ಇಲ್ಲದಿದ್ದರೆ ಸೋಂಕು ತಡೆಗಟ್ಟುವುದಕ್ಕೆ ಸಾಧ್ಯವಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಪಾಲನೆ ಮಾಡದ ಪರಿಣಾಮ ಹೀಗಾಗಿದೆ. ಇದಕ್ಕೆ ಮತ್ತೆ ಯಾರೊಬ್ಬರೂ ಅವಕಾಶ ಮಾಡಿಕೊಡಬಾರದು. ಅಂತರ ಕಾಯ್ದುಕೊಳ್ಳಬೇಕು, ಸಾನಿಟೈಸರ್ ಬಳಕೆ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಯಡಿಯೂರಪ್ಪ ಇದೇ ವೇಳೆ ಸಲಹೆ ಮಾಡಿದರು.

ಸರಕಾರ ಬೇಕೆಂದೇನೂ ಕೊರೋನ ನೈಟ್ ಕರ್ಫ್ಯೂ ಜಾರಿ ಮಾಡಿಲ್ಲ. ಪರಿಸ್ಥಿತಿ ಕೈ ಮೀರುತ್ತಿರುವುದರಿಂದ ಅನಿವಾರ್ಯವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದ ಅವರು, ಇಂದಿನಿಂದ ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಕೋವಿಡ್ ಲಸಿಕೆ ಉತ್ಸವ ಆರಂಭವಾಗಿದೆ. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಕೋವಿಡ್ ಲಸಿಕೆ ಪಡೆಯಬೇಕು. ನಿಮ್ಮ ನಿಮ್ಮ ಕ್ಷೇತ್ರದಲ್ಲಿರುವ ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆದು ಆರೋಗ್ಯವಾಗಿರಿ ಎಂದು ಕೋರಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)