varthabharthi


ಕರ್ನಾಟಕ

ಮೇ ತಿಂಗಳ ಆರಂಭದಲ್ಲಿ ಕೋವಿಡ್ ಹೆಚ್ಚಳ ಸಾಧ್ಯತೆ, ಅಂತ್ಯದಲ್ಲಿ ಇಳಿಕೆ: ಸಚಿವ ಡಾ.ಸುಧಾಕರ್

ವಾರ್ತಾ ಭಾರತಿ : 11 Apr, 2021

ಬೆಂಗಳೂರು, ಎ. 11: ಮೇ ತಿಂಗಳ ಮೊದಲ ವಾರದಲ್ಲಿ ಕೊರೋನ ಪ್ರಕರಣ ಸಂಖ್ಯೆ ಹೆಚ್ಚಲಿದೆ. ಮೇ ಅಂತ್ಯದಲ್ಲಿ ಕಡಿಮೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ತಿಳಿಸಿದ್ದಾರೆ.

ರವಿವಾರ ಕೋವಿಡ್ ನಿಯಂತ್ರಣ ಸಂಬಂಧ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ ತಿಂಗಳ ಕೊನೆವರೆಗೂ ಎಚ್ಚರಿಕೆಯಿಂದಿರಬೇಕು. ಮೇ ಮೊದಲ ವಾರದಲ್ಲಿ ಕೊರೋನ ಗರಿಷ್ಠ ಮಟ್ಟ (ಪೀಕ್) ತಲುಪಬಹುದು. ಮೇ ಅಂತ್ಯಕ್ಕೆ ಸ್ವಲ್ಪ ಕಡಿಮೆಯಾಗಬಹುದು. ಹೆಚ್ಚು ಪ್ರಕರಣ ಕಂಡುಬಂದರೆ ಅದಕ್ಕೆ ತಕ್ಕಂತೆ ಆಸ್ಪತ್ರೆ, ಹಾಸಿಗೆ ಬೇಡಿಕೆ ಹೆಚ್ಚಾಗುತ್ತದೆ ಎಂದರು.

ಇದಕ್ಕಾಗಿ ಖಾಸಗಿ ಆಸ್ಪತ್ರೆಗಳ ಸಹಕಾರ ಪಡೆಯಬೇಕು. ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಾಗಿ ಪ್ರಯಾಣಿಕರನ್ನು ಪರೀಕ್ಷಿಸುವ ಹಾಗೂ ಪರೀಕ್ಷಾ ವರದಿ ಪರಿಶೀಲಿಸುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ. ಇವೆಲ್ಲವನ್ನೂ ವರದಿ ರೂಪದಲ್ಲಿ ನೀಡಲು ಸೂಚಿಸಲಾಗಿದೆ. ವರದಿಯನ್ನು ಮುಖ್ಯಮಂತ್ರಿಗೆ ನೀಡಿ ಸಮರ್ಪಕವಾಗಿ ಚರ್ಚಿಸಲಾಗುವುದು. ಇದನ್ನು ಪರಿಗಣಿಸಿ ಸರಕಾರ ಕ್ರಮ ಕೈಗೊಳ್ಳಲಿದೆ ಎಂದರು.

ಖಾಸಗಿ ಆಸ್ಪತ್ರೆಗಳು ಸರಕಾರೊಂದಿಗೆ ಕೆಲಸ ಮಾಡಿವೆ. ಟೆಲಿ ಐಸಿಯು ವ್ಯವಸ್ಥೆ ಮೊದಲಿಗೆ ನಮ್ಮ ಸರಕಾರ ಆರಂಭಿಸಿದ್ದು, ಖಾಸಗಿ ಆಸ್ಪತ್ರೆಗಳು ಉಚಿತವಾಗಿ ಈ ಸೇವೆ ನೀಡಿವೆ. ಇದನ್ನು ಇನ್ನಷ್ಟು ಗಟ್ಟಿಗೊಳಿಸಬೇಕಿದೆ. ಆರ್ಥಿಕ ಚಟುವಟಿಕೆಗೆ ತೊಂದರೆಯಾಗುವ ಯಾವುದೇ ಸಲಹೆ ನೀಡುವುದಿಲ್ಲ, ಆದರೆ, ಜನರು ಗುಂಪುಗೂಡದಂತೆ ಕ್ರಮ ವಹಿಸಬೇಕೆಂದು ತಜ್ಞರು ಹೇಳಿದ್ದಾರೆ ಎಂದು ಸುಧಾಕರ್ ವಿವರಿಸಿದರು.

ಮಾದರಿ ಮಹಿಳೆಯರು: ರಾಜ್ಯದಲ್ಲಿ 61 ಲಕ್ಷ ಕೋವಿಡ್ ಲಸಿಕೆ ನೀಡಿದ್ದು, ಈ ಪೈಕಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದು ಮಾದರಿಯಾಗಿದ್ದಾರೆ ಎಂದ ಅವರು, ರಾಜ್ಯಕ್ಕೆ 72 ಲಕ್ಷಕ್ಕೂ ಹೆಚ್ಚು ಲಸಿಕೆ ಬಂದಿದೆ. ರಾಜ್ಯದಲ್ಲಿ 61 ಲಕ್ಷ ಕೋವಿಡ್ ಲಸಿಕೆ ನೀಡಿದ್ದು, ಶೇ.53ರಷ್ಟು ಮಹಿಳೆಯರಿಗೆ ನೀಡಲಾಗಿದೆ. ಆದುದರಿಂದ ಮಹಿಳೆಯರೇ ನಿಜವಾದ ಮಾದರಿ, ಮಾರ್ಗದರ್ಶಕರು. ಈ ಶತಮಾನದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದ, ಅಸಮಾನತೆ ನಿವಾರಿಸಲು ಕೆಲಸ ಮಾಡಿದ ಜ್ಯೋತಿಬಾಫುಲೆ ಅವರ ಜನ್ಮದಿನ ಹಾಗೂ ಸಮಾನತೆ, ಸ್ವಾತಂತ್ರ್ಯಕ್ಕೆ ಹೋರಾಡಿದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ ಪ್ರಯುಕ್ತ ಪ್ರಧಾನಿ ಮೋದಿ ಕರೆ ಮೇರೆಗೆ ಲಸಿಕೋತ್ಸವ ಮಾಡಲಾಗುತ್ತಿದೆ. ಲಸಿಕೆ ವಿಚಾರದಲ್ಲಿ ರಾಜಕೀಯ, ಧರ್ಮ, ಭಾಷೆ ಬೆರೆಸುವ ಕೆಲಸ ಮಾಡಬಾರದು. ಸಾಂಕೇತಿಕವಾಗಿ ಎಲ್ಲ ಧರ್ಮಗಳ ಮಹಿಳೆಯರಿಗೆ ಲಸಿಕೆ ನೀಡುವ ಮೂಲಕ ವಿಶೇಷ ಲಸಿಕೋತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಸರಕಾರಿ ಆಸ್ಪತ್ರೆಗಳಲ್ಲಿನ ವ್ಯವಸ್ಥೆ, ಆಂಬ್ಯುಲೆನ್ಸ್ ಸೇವೆಯಲ್ಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಲು ನಿನ್ನೆ ವಿವಿಧೆಡೆಗಳಲ್ಲಿನ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಲಾಗಿದೆ. ನ್ಯೂನತೆ ಸರಿಪಡಿಸಲು ಕ್ರಮ ವಹಿಸಲಾಗಿದೆ. ಜನರು ಜಾಗೃತರಾಗಿದ್ದರೆ ಯಾವುದೇ ಲಾಕ್‍ಡೌನ್ ಅಥವಾ ಆರ್ಥಿಕ ಚಟುವಟಿಕೆ ನಿಬರ್ಂಧಿಸುವ ಅಗತ್ಯವಿಲ್ಲ. ಜನರು ಸರಕಾರದೊಂದಿಗೆ ಸಹಕರಿಸಿ ಕೋವಿಡ್ ನಿಯಂತ್ರಿಸಬೇಕು ಎಂದು ಅವರು ಮನವಿ ಮಾಡಿದರು.

`ರಾಜ್ಯದಲ್ಲಿ ಕೊರೋನ ಎರಡನೇ ಅಲೆ ಆರಂಭವಾಗಿದೆ. ಮೇ 15ರ ವೇಳೆಗೆ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲೇ 15 ಸಾವಿರ ಪ್ರಕರಣಗಳು ಬರಬಹುದು. ಹೀಗಾಗಿ ಜನರು ಗುಂಪು ಸೇರುವುದನ್ನು ತಡೆಯಬೇಕು. ವಾಣಿಜ್ಯ ಚಟುವಟಿಕೆಗೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಬೇಕು. ಐಸ್ ಕ್ರೀಂ ಪಾರ್ಲರ್, ಚಾಟ್ ಸೆಂಟರ್ ಮುಂದೆ ಜನ ಸಾಲಾಗಿ ನಿಲ್ಲುತ್ತಿದ್ದಾರೆ. ನಿಷೇಧಾಜ್ಞೆ ಹೇರಲು ಸೂಚಿಸಿದ್ದು, ಜಾತ್ರೆ, ಮದುವೆಗಳಿಗೆ ಜನ ಸೇರುವುದಕ್ಕೂ ನಿರ್ಬಂಧ ಹೇರಬೇಕು'

-ಡಾ.ಸಿ.ಎನ್. ಮಂಜುನಾಥ್, ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)