varthabharthi


ಕರ್ನಾಟಕ

ಜನ ವಿರೋಧಿ ಕೇಂದ್ರ- ರಾಜ್ಯ ಸರಕಾರಗಳಿಗೆ ಪಾಠ ಕಲಿಸಿ: ಎಚ್.ಡಿ.ಕುಮಾರಸ್ವಾಮಿ

ವಾರ್ತಾ ಭಾರತಿ : 11 Apr, 2021

ಬೀದರ್, ಎ. 10: ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರಗಳ ಜನ ವಿರೋಧಿ ನೀತಿಯ ಸರಕಾರಗಳಾಗಿದೆ. ಈ ಸರಕಾರಗಳಿಗೆ ಪಾಠ ಕಲಿಸಬೇಕಾಗಿದೆ. ರೈತರ ಪರ, ಬಡಜನರ ಪರ ಕಾಳಜಿ ಇರುವ ನಮ್ಮ ಪಕ್ಷಕ್ಕೆ ಮತ ನೀಡುವ ಮೂಲಕ ಬಿಜೆಪಿಗೆ ಪಾಠ ಕಲಿಸಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಬಸವಕಲ್ಯಾಣದ ಮತದಾರರಲ್ಲಿ ಮನವಿ ಮಾಡಿದ್ದಾರೆ.

ರವಿವಾರ ಜಿಲ್ಲೆಯ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ ಪರವಾಗಿ ಬಸವಕಲ್ಯಾಣದ ವಿವಿಧೆಡೆ ನಡೆದ ಲಿಂಗಾಯತ ಮತ್ತು ರೆಡ್ಡಿ ಸಮಾವೇಶ, ಬಹಿರಂಗ ಸಭೆ, ಮಾದಿಗ ಸಮಾಜದ ಸಭೆಗಳಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರು ಬೆಳೆಯುವ ಬೆಳೆಗಳಿಗೆ ಎರಡು ಪಟ್ಟು ಬೆಲೆ ಕೊಡ್ತಿವಿ ಎಂದು ಕೇಂದ್ರ ಸರಕಾರ ಹೇಳಿತ್ತು. ಆದರೆ, ಕೊಡಲಿಲ್ಲ. ಅಲ್ಲದೆ, ರಸಗೊಬ್ಬರಗಳ ಬೆಲೆ, ಡಿಸೇಲ್, ಪೆಟ್ರೋಲ್, ಅಡುಗೆ ಅನಿಲ ಸೇರಿ ಅಗತ್ಯ ವಸ್ತುಗಳ ಬೆಲೆಯನ್ನು ಹೆಚ್ಚಳ ಮಾಡಿದ್ದಾರೆ.

ಇದರೊಂದಿಗೆ ಸಾಗಾಣಿಕೆ ವೆಚ್ಚ ಜಾಸ್ತಿಯಾಗ್ತಿದೆ. ಮೋದಿ ಅಧಿಕಾರಕ್ಕೆ ಬರುವ ಮುಂಚೆ ಹೊರದೇಶದಲ್ಲಿರುವ ಸಂಪತ್ತು, ಬ್ಲಾಕ್ ಮನಿಯನ್ನು ದೇಶಕ್ಕೆ ತರ್ತಿವಿ ಅಂತ ಹೇಳಿದ್ದರು. ಎಷ್ಟು ಬ್ಲಾಕ್ ಮನಿ ಬಂದಿದೆ, ಹೊರದೇಶಗಳಲ್ಲಿನ ಸಂಪತ್ತು ಮರಳಿ ದೇಶಕ್ಕೆ ಬಂದಿದೆಯಾ. ತಂದು ಯಾರಿಗೆ ಕೊಟ್ಟಿದ್ದಾರೆಂದು ಪ್ರಶ್ನಿಸಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ, ಶಾಸಕ ಬಂಡೆಪ್ಪ ಕಾಶೆಂಪುರ್ ಮಾತನಾಡಿ, ನಾವೆಲ್ಲ ರೈತರ ಮಕ್ಕಳು ರೈತರ ಪಕ್ಷವಾದ ಜೆಡಿಎಸ್‍ಗೆ ಬೆಂಬಲ ನೀಡಬೇಕಾಗಿದೆ. ರೈತರೇ ನಮ್ಮ ದೇಶದ ಬೆನ್ನೆಲುಬು, ರೈತರ ಪರವಾಗಿ ಇರುವ ಪಕ್ಷ ನಮ್ಮ ಜೆಡಿಎಸ್ ಪಕ್ಷವಾಗಿದೆ ಎಂದು ಹೇಳಿದರು.

ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ನಿಮ್ಮ ಮುಂದೆ ಮೂರು ಪಕ್ಷಗಳಿವೆ. ಜಾತ್ಯತೀತ ಜನತಾದಳಕ್ಕೆ ಏಕೆ ಮತ ಕೊಡಬೇಕು ಎಂದರೆ, ಯಾವಾಗ್ಯಾವಾಗ ಜಾತ್ಯತೀತ ಜನತಾದಳ ಪರಿವಾರದ ಸರಕಾರ ಅಧಿಕಾರಕ್ಕೆ ಬಂದಿದೆ, ಆಗೆಲ್ಲ ಹೊಸ-ಹೊಸ ಯೋಜನೆಗಳು ಪ್ರಾರಂಭವಾಗಿವೆ. ಯಾರಾದರು ಒಬ್ಬ ಮುಖ್ಯಮಂತ್ರಿ ಬಡವರ, ಹರಿಜನ ಗಿರಿಜನರ ಮನೆಯಲ್ಲಿ ವಾಸ್ತವ್ಯ ಹೂಡಿ, ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆಂದರೆ, ಅದು ಕುಮಾರಸ್ವಾಮಿರವರು ಎಂದು ಹೇಳಿದರು.

ಈ ವೇಳೆ ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಶಾಸಕ ರಾಜಾ ವೆಂಕಟಪ್ಪ ನಾಯಕ, ದೇವದುರ್ಗದ ಕರೆಮ್ಮ ನಾಯಕ, ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ರಮೇಶಗೌಡ, ಬೋಜೆಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲಾಪೂರ, ಕೃಷ್ಣಾರೆಡ್ಡಿ, ಆನಂದ್, ಆಕಾಶ ಸೇರಿದಂತೆ ಇನ್ನಿತರರು ಹಾಜರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)