varthabharthi


ಕರ್ನಾಟಕ

ಚಿಕ್ಕಮಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಬೀಳ್ಕೊಡುಗೆ

ರೈತ ಚಳವಳಿ ಬೆಂಬಲಿಸಿ ಚಾಮರಾಜನಗರದಿಂದ ದಿಲ್ಲಿಗೆ ಪಾದಯಾತ್ರೆ ನಡೆಸುತ್ತಿರುವ ನಾಗರಾಜ್

ವಾರ್ತಾ ಭಾರತಿ : 11 Apr, 2021

ಚಿಕ್ಕಮಗಳೂರು, ಎ.11: ಕೇಂದ್ರ ಸರಕಾರದ ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯಿಸಿ ದಿಲ್ಲಿಯಲ್ಲಿ ರೈತರು ನಡೆಸುತ್ತಿರುವ ಚಳವಳಿ ಬೆಂಬಲಿಸಿ ಪಾದಯಾತ್ರೆ ನಡೆಸುತ್ತಿರುವ ಬಾಗಲಕೋಟೆಯ ನಾಗರಾಜ್ ಅವರನ್ನು ಜಿಲ್ಲಾ ಕಾಂಗ್ರೆಸ್ ಸ್ವಾಗತಿಸಿ ಬೀಳ್ಕೊಡಲಾಯಿತು.

ರೈತರ ಚಳವಳಿಯನ್ನು ಬೆಂಬಲಿಸಲು ಫೆ.11ರಂದು ಮಲೆಮಹದೇಶ್ವರ ಬೆಟ್ಟದಿಂದ ಪಾದಯಾತ್ರೆ ಆರಂಭಿಸಿರುವ ಬಾಗಲಕೋಟೆಯ ನಾಗರಾಜ್ ಅವರು ರವಿವಾರ ಆಲ್ದೂರು ಮಾರ್ಗವಾಗಿ ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ್ದರು. ಈ ವೇಳೆ ನಾಗರಾಜ್ ರನ್ನು ಜಿಲ್ಲಾ ಕಾಂಗ್ರೆಸ್ ನಿಂದ ಸ್ವಾಗತಿಸಿ, ಗೌರವ ಸಲ್ಲಿಸುವ ಮೂಲಕ ಬೀಳ್ಕೊಡಲಾಯಿತು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಗಲಕೋಟೆ ನಾಗರಾಜ್ ಅವರಿಗೆ ಗಾಂಧಿ-150 ಕೃತಿ ಮತ್ತು ಕಿರುಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಉದ್ದೇಶಗಳನ್ನು ನಾಗರಾಜ್ ಹಂಚಿಕೊಂಡರು. '6 ತಿಂಗಳ ಪಾದಯಾತ್ರೆ ಇದಾಗಿದ್ದು, ಒಟ್ಟು 6000 ಕಿಮೀ ಕ್ರಮಿಸಲು ಉದ್ದೇಶಿಸಲಾಗಿದೆ. ಮಾರ್ಗದ ಉದ್ದಕ್ಕೂ ರೈತರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಅಧ್ಯಯನ ಮಾಡಲಾಗುತ್ತದೆ. ದಿಲ್ಲಿಯಲ್ಲಿ ನಡೆಯುತ್ತಿರುವ ಚಳವಳಿ ನಿರತ ರೈತರನ್ನು ಭೇಟಿ ಮಾಡಿ ಬೆಂಬಲ ಘೋಷಿಸುವುದಾಗಿ ಹೇಳಿದರು.

ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರಕಾರದ ವೈಫಲ್ಯಗಳನ್ನು ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ, ನಗರ ಪ್ರದೇಶಗಳಲ್ಲಿ ಜನರಿಗೆ ಮುಟ್ಟಿಸುವ ಕಾರ್ಯವನ್ನು ಯುವಜನರು ತುರ್ತಾಗಿ ಮಾಡಬೇಕಾಗಿದೆ. ಜನರನ್ನು ಜಾಗೃತರನ್ನಾಗಿಸದಿದ್ದರೆ ಕೇಂದ್ರ ಸರಕಾರ ಈ ದೇಶದ ಕೃಷಿಯನ್ನು ನಾಶದ ಹಂಚಿಗೆ ಕೊಂಡೊಯ್ಯುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರಕಾರದ ದುರಾಡಳಿತದಿಂದ ಜನರು ನೋವು ಅನುಭವಿಸುತ್ತಿದ್ದಾರೆ. ಬಿಜೆಪಿ ಸರಕಾರಗಳ ದುರಾಡಳಿತದ ಬಗ್ಗೆ ಜನ ಜಾಗೃತಿ ಮೂಡಿಸುವ ಕಾರ್ಯ ಪ್ರಸ್ತುತ ನಡೆಯಬೇಕಾಗಿದೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ಜನ ವಿರೋಧಿ ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯಿಸಿ ನಡೆಸುತ್ತಿರುವ ರೈತರಲ್ಲಿಗೆ ಬೆಂಬಲ ಸೂಚಿಸಲು ಪಾದಯಾತ್ರೆಯಲ್ಲಿ ದಿಲ್ಲಿಗೆ  ತೆರಳುತ್ತಿರುವ ನಾಗರಾಜ್ ಅವರಿಗೆ ಕಾಂಗ್ರೆಸ್ ಶುಭ ಕೋರುತ್ತದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕ ಅಧ್ಯಕ್ಷ ಅರೇನಹಳ್ಳಿ ಪ್ರಕಾಶ್ ಮಾತನಾಡಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್, ಸೋಷಿಯಲ್ ಮೀಡಿಯಾ ಅಧ್ಯಕ್ಷ ವಿನಾಯಕ, ಯುವ ಕಾಂಗ್ರೆಸ್ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಶಿವಕುಮಾರ್, ಯುವ ಕಾಂಗ್ರೆಸ್ನ ರಾಹಿಲ್ ಶರೀಫ್, ಕೆಪಿಸಿಸಿ ಒಬಿಸಿ ಉಪಾಧ್ಯಕ್ಷ ಪ್ರಶಾಂತ್, ಮುಖಂಡರಾದ ತರೀಕೆರೆ ಮಂಜುನಾಥ್, ಪದ್ಮನಾಭ್ ಹಾಜರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)