varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 12 Apr, 2021
ಪಿ.ಎ.ರೈ

ಸೀಡಿ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿ ಎಮ್ಮೆಲ್ಸಿ, ಮಂತ್ರಿ ಆದವರಿಂದ ನಾನು ಕಲಿಯಬೇಕಾದುದೇನೂ ಇಲ್ಲ- ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಕನಿಷ್ಠ ಸಿಸಿ ಕ್ಯಾಮರಾ ಎಲ್ಲೆಲ್ಲ, ಹೇಗೆಲ್ಲ ಇರುತ್ತೆ ಎನ್ನುವ ಎಬಿಸೀಡಿಗಳನ್ನು ಕಲಿಯಬಹುದಲ್ಲವೇ?


ನಾಲ್ಕು ಗೋಡೆಗಳ ಮಧ್ಯೆ ಮಾತನಾಡಬೇಕಿದ್ದ ವಿಷಯವನ್ನು ಈಶ್ವರಪ್ಪ ರಾಜ್ಯಪಾಲರ ಬಳಿಗೆ ಒಯ್ದಿರುವುದು ಸರಿ ಅಲ್ಲ- ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ ನಾಲ್ಕು ಗೋಡೆಗಳ ನಡುವೆ ಮಾಡಬೇಕಾದ ಕೆಲಸ ಸೀಡಿಯೊಳಗೆ ಬಂದಿರುವಾಗ ಇದೇನು ಮಹಾ?


ರಾಜಕೀಯಕ್ಕೆ ಸಿನೆಮಾ ಕ್ಷೇತ್ರ ಅಡ್ಡಿಯಾಗಲಿದೆ ಎಂದು ಕಂಡು ಬಂದರೆ ಚಲನಚಿತ್ರ ಕ್ಷೇತ್ರಕ್ಕೆ ವಿದಾಯ ಹೇಳುವೆ- ಕಮಲ್ ಹಾಸನ್, ನಟ
ಚಿತ್ರರಂಗದಲ್ಲಿ ಸಾಲು ಸಾಲು ಸೋಲಿನಿಂದ ಕಂಗೆಟ್ಟು ಆಡಿದ ಮಾತು.


ಪ.ಬಂ.ದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಟಿಎಂಸಿ ಗೂಂಡಾಗಳಿಗೆ ಪಾಠ ಕಲಿಸಲಾಗುವುದು - ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ ಉತ್ತರ ಪ್ರದೇಶದ ಗೂಂಡಾಗಳಿಂದ ಟಿಎಂಸಿ ಗೂಂಡಾಗಳು ಪಾಠ ಕಲಿಯುವುದೇ?


ಯುವ ಜನತೆ ಆರ್ಥಿಕವಾಗಿ ಮುಂದೆ ಬರುತ್ತಲೇ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಬೇಕು - ಡಾ.ಸಿದ್ದಲಿಂಗಯ್ಯ, ಕವಿ
ತಾವು ಇನ್ನೂ ಆರ್ಥಿಕವಾಗಿ ಮುಂದೆ ಬಂದಿಲ್ಲ ಎಂದು ಇದರ ಅರ್ಥವೋ?


ರೈತರ ಕಣ್ಮಣಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕನಕದಾಸ ಜಯಂತಿಗೆ ಅವಕಾಶ ಮಾಡಿಕೊಟ್ಟಿದ್ದನ್ನು ನಾವು ಯಾರೂ ಮರೆಯುವಂತಿಲ್ಲ - ಕೆ.ಎಸ್.ಈಶ್ವರಪ್ಪ, ಸಚಿವ 
ಯಡಿಯೂರಪ್ಪರನ್ನು ಅಭಿನಂದಿಸುವುದಕ್ಕಾಗಿ ತಾವು ರಾಜ್ಯಪಾಲರ ಬಳಿಗೆ ಹೋಗಿರಬೇಕು, ಅಲ್ಲವೇ?


ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆ ಇಳಿಕೆಯಾಗುತ್ತಿದ್ದು, ಇನ್ನೂ ಇಳಿಕೆಯಾಗುವ ಸಾಧ್ಯತೆ ಇದೆ - ಧಮೇಂದ್ರ ಪ್ರಧಾನ್, ಕೇಂದ್ರ ಸಚಿವ ಚುನಾವಣೆ ಮುಗಿಯುವವರೆಗೆ ಪೈಸೆ ಲೆಕ್ಕದಲ್ಲಿ ಇಳಿಕೆಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ ಬಿಡಿ.


ರಾಜ್ಯ ಕಾಂಗ್ರೆಸ್ ನಾಯಕರು ಹಸಿ ಸುಳ್ಳು ಹೇಳುವುದರಿಂದ ಜನ ಅವರನ್ನು ನಂಬುವುದಿಲ್ಲ - ಜಗದೀಶ್ ಶೆಟ್ಟರ್, ಸಚಿವ
ನಿಮ್ಮದೆಲ್ಲ ಒಣ ಸುಳ್ಳು ಇರಬೇಕು.


ಕಲೆ, ಸಾಹಿತ್ಯದ ಮೂಲಕ ಸಂಸ್ಕೃತಿಯನ್ನು ಉಳಿಸುವ ಕೆಲಸವಾಗಬೇಕು- ಕಲ್ಲಡ್ಕ ಪ್ರಭಾಕರ್ ಭಟ್, ಆರೆಸ್ಸೆಸ್ ಮಖಂಡ
ಜನರಿಗೆ ಅದು ಕೊಲೆ ಸಾಹಿತ್ಯದ ಮೂಲಕ ಎಂದು ಕೇಳಿಸಿದೆ.


ಸರಕಾರ ಉಚಿತವಾಗಿ ಕೋವಿಡ್ ಲಸಿಕೆ ಕೊಡುತ್ತಿದೆಯಾದರೂ ಜನರು ತೆಗೆದುಕೊಳ್ಳುತ್ತಿಲ್ಲ - ಡಾ.ಕೆ.ಸುಧಾಕರ್, ಸಚಿವ
ಹಸಿದ ಜನರಿಗೆ ಬೇಕಾಗಿರುವುದು ಉಚಿತ ಅಕ್ಕಿ.


ಬಿಜೆಪಿಯಲ್ಲಿ ಅಭಿಪ್ರಾಯ ಭೇದಗಳಿವೆಯೇ ಹೊರತು ಭಿನ್ನಾಭಿಪ್ರಾಯಗಳಿಲ್ಲ - ನಳಿನ್ ಕುಮಾರ್ ಕಟೀಲು, ಸಂಸದ
ಸೀಡಿಯ ವಿಷಯದಲ್ಲಿ ಇರಬೇಕು.


 ಕಾಂಗ್ರೆಸ್ ಎಲ್ಲ ಜನರನ್ನೂ ಸೇರಿಸಿಕೊಂಡು ಹಲವಾರು ದಶಕಗಳ ಕಾಲ ಆಡಳಿತ ನಡೆಸಿದೆ - ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ
ಅದಕ್ಕೆ ಬೇಸತ್ತ ಜನರು ಈಗ ಬರೇ ಇಬ್ಬರಿಂದ ಆಳಿಸಿಕೊಳ್ಳುತ್ತಿದ್ದಾರೆ.


ಒಂದೊಮ್ಮೆ ನಾನು ಮುಖ್ಯಮಂತ್ರಿಯಾದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ಆಡಳಿತ ನೀಡುತ್ತೇನೆ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ನೇರ ಉತ್ತರ ಪ್ರದೇಶಕ್ಕೇ ಹೋಗಿ, ಇಲ್ಲೇನು ಮಾಡುತ್ತಿದ್ದೀರಿ?


ಪ್ರಧಾನಿ ಮೋದಿ ಅಲೆಯಿಂದಾಗಿ ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಕೊರೋನ ಅಲೆಯ ಜೊತೆಗೆ ಮೋದಿ ಅಲೆ ತೀವ್ರ ಪೈಪೋಟಿಯಲ್ಲಿದೆ.


ಚುನಾವಣೆಗಳು ಬಂದಾಗ ಮಾತ್ರ ಕಾಂಗ್ರೆಸ್ ಸ್ವಲ್ಪಮಟ್ಟಿಗೆ ಕ್ರಿಯಾಶೀಲವಾಗಿರುತ್ತದೆ - ಜಿತೇಂದ್ರ ಸಿಂಗ್, ಕೇಂದ್ರ ಸಚಿವ
ಬಿಜೆಪಿಗೆ ಮಾರಿಕೊಳ್ಳಲು ಒಂದಿಷ್ಟು ಶಾಸಕರು ಬೇಕಲ್ಲ, ಆ ಕಾರಣಕ್ಕೆ ಕ್ರಿಯಾಶೀಲವಾಗಿರುವುದಂತೆ.


ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಬಿಜೆಪಿ ಸರಕಾರ ಇದ್ದಾಗ ಮಾತ್ರ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಲಿದೆ - ಅಮಿತ್ ಶಾ, ಕೇಂದ್ರ ಸಚಿವ
ಕರ್ನಾಟಕ ಆ ಪರಿಹಾರವನ್ನು ಈಗಾಗಲೇ ಅನುಭವಿಸುತ್ತಿದೆ.


ಬಿಜೆಪಿಯಲ್ಲಿ ಯೋಗ್ಯತೆ ಇದ್ದವರಿಗೆ ಮಾತ್ರ ಉಸ್ತುವಾರಿ ಕೊಡಲಾಗುತ್ತಿದೆ - ಬಿ.ವೈ.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
ಕೆಪಿಎಸ್ಸಿ ಸ್ಥಾನಕ್ಕೆ ಮಾತ್ರ ಯೋಗ್ಯತೆಯ ಅಗತ್ಯವಿಲ್ಲ ಎಂದು ಭಾವಿಸಿರಬೇಕು.


ಕೇರಳ ವಿಧಾನ ಸಭಾ ಚುನಾವಣೆಯ ಬಳಿಕ ಎಡರಂಗದ ರಕ್ತ ರಾಜಕಾರಣ ಕೊನೆಯಾಗಲಿದೆ - ನಳಿನ್ ಕುಮಾರ್ ಕಟೀಲು, ಸಂಸದ
ಬಲರಂಗದ ರಕ್ತ ರಾಜಕಾರಣ ಆರಂಭವಾಗುತ್ತದೆಯೇ?


ರಾಷ್ಟ್ರೀಯ ಪಕ್ಷಗಳಲ್ಲಿ ಹೈಕಮಾಂಡ್ ಪ್ರಬಲವಾದರೆ ಮುಖ್ಯಮಂತ್ರಿ ದುರ್ಬಲರಾಗುತ್ತಾರೆ. ಹೈಕಮಾಂಡ್ ದುರ್ಬಲವಾದರೆ ಮುಖ್ಯಮಂತ್ರಿ ಪ್ರಬಲರಾಗುತ್ತಾರೆ - ವೈ.ಎಸ್.ವಿ.ದತ್ತ ಜೆಡಿಎಸ್ ಮುಖಂಡ
ತಾವು ದುರ್ಬಲರಾಗಲು ಯಾರು ಪ್ರಬಲರಾದದ್ದು ಕಾರಣ ಎನ್ನುವುದನ್ನು ಬಿಡಿಸಿ ಹೇಳುತ್ತೀರಾ?


ಪರೀಕ್ಷೆಗಳು ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಇರುವ ಅವಕಾಶಗಳು - ನರೇಂದ್ರ ಮೋದಿ, ಪ್ರಧಾನಿ
ಬರೇ ಪರೀಕ್ಷೆ ಮಾಡುವುದಷ್ಟೇ ಪ್ರಧಾನಿಯ ಕೆಲಸವೇ?


ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿಯ ಮಾಲಕರಲ್ಲ - ಸಿ.ಟಿ.ರವಿ, ಬಿಜೆಪಿ ಪ್ರ.ಕಾರ್ಯದರ್ಶಿ
ಅದಾನಿ, ಅಂಬಾನಿ ಬಿಜೆಪಿಯ ಮಾಲಕರು ಎನ್ನುವುದು ವಿಶ್ವಕ್ಕೆ ಗೊತ್ತಿದೆ ಬಿಡಿ.


ಯಡಿಯೂರಪ್ಪರ ಬಗ್ಗೆ ಈಶ್ವರಪ್ಪರಿಗೆ ಅಭಿಮಾನವಿದೆ- ಭೈರತಿ ಬಸವರಾಜ್, ಸಚಿವ
ಆ ಅಭಿಮಾನ ನೋಡಿ ರಾಜ್ಯಪಾಲರು ಆನಂದ ಬಾಷ್ಪವನ್ನು ಸುರಿಸಿದರಂತೆ.


ಮಹಾರಾಷ್ಟ್ರದಲ್ಲಿ ಕೊರೋನ ಹೆಚ್ಚಾಗಲು ವಲಸೆ ಕಾರ್ಮಿಕರೇ ಕಾರಣ - ರಾಜ್ ಠಾಕ್ರೆ, ಎಂ.ಎನ್.ಎಸ್. ನಾಯಕ
ತಪಾಸಣೆ ಹೆಚ್ಚುತ್ತಿರುವುದು ಕಾರಣ ಎನ್ನುವುದು ವೈದ್ಯರ ಅಂಬೋಣ. ತಪಾಸಣೆಯನ್ನು ನಿಲ್ಲಿಸಿದರೆ ಕೊರೋನ ಇಳಿಕೆಯಾಗುವ ಸಾಧ್ಯತೆಗಳಿವೆ. 


ಆರೆಸ್ಸೆಸ್ ಸಿದ್ಧಾಂತ ವಿಷ ಇದ್ದಂತೆ. ಈ ವಿಷ ದೇಶಾದ್ಯಂತ ಹರಡುವ ಮೊದಲು ನಾವು ಎಚ್ಚೆತ್ತುಕೊಳ್ಳಬೇಕು- ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ಮುಖಂಡ
ದೇಶಾದ್ಯಂತ ಇನ್ನೂ ಹರಡಿಯೇ ಇಲ್ಲ ಎಂಬ ನಿಮ್ಮ ಮುಗ್ಧತೆಗೆ ನಮಸ್ಕಾರ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು