varthabharthi


ವಿಶೇಷ-ವರದಿಗಳು

ಆನ್‌ಲೈನ್ ವಂಚನೆ: ಎಚ್ಚರಿಕೆಯ ಸಂಕೇತಗಳು ಮತ್ತು ಅವುಗಳಿಂದ ಪಾರಾಗಲು ಉಪಾಯಗಳಿಲ್ಲಿವೆ

ವಾರ್ತಾ ಭಾರತಿ : 12 Apr, 2021

ಆನ್‌ಲೈನ್ ಶಾಪಿಂಗ್ ಹಗರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಇಂತಹ ವಂಚನೆಗಳು ಹೊಸದೇನಲ್ಲ. ಅವು ಹಳೆಯ ತಂತ್ರಗಳೇ ಆಗಿದ್ದು,ಇಲ್ಲಿ ವಂಚಕರು ಶಾಸನಬದ್ಧ ಆನ್‌ಲೈನ್ ಮಾರಾಟಗಾರರ ಸೋಗಿನಲ್ಲಿ ಗ್ರಾಹಕರನ್ನು ತಮ್ಮ ಬಲೆಗೆ ಸಿಲುಕಿಸಲು ನಕಲಿ ಜಾಲತಾಣವನ್ನು ಅಥವಾ ಅಸಲಿ ಇ-ಮಾರಾಟಗಾರರ ಜಾಲತಾಣಗಳಲ್ಲಿ ನಕಲಿ ಜಾಹೀರಾತುಗಳನ್ನು ಬಳಸುತ್ತಾರೆ.

ತಂತ್ರಜ್ಞಾನವು ಹೆಚ್ಚೆಚ್ಚು ಸುಧಾರಿಸುತ್ತಿದ್ದಂತೆ,ಹೊಸ ಹೊಸ ತಂತ್ರಜ್ಞಾನಗಳು ಬರುತ್ತಿದ್ದಂತೆ ವಂಚಕರೂ ಹೆಚ್ಚು ಚಾಣಾಕ್ಷರಾಗುತ್ತಿದ್ದಾರೆ, ಅಮಾಯಕ ಗ್ರಾಹಕರ ಹಣಕಾಸು ಮಾಹಿತಿಗಳನ್ನು ಪಡೆಯುವುದು,ಐಡೆಂಟಿಟಿ ಕಳವು,ಆನ್‌ಲೈನ್ ಹಗರಣಗಳು,ಮಾಹಿತಿಗಳ ಕಳ್ಳತನ ಇತ್ಯಾದಿಗಳನ್ನು ನಡೆಸುವುದು ಅವರಿಗೆ ಸುಲಭವಾಗಿದೆ. ಇಂದು ಆನ್‌ಲೈನ್ ವಂಚನೆಗೆ ಬಲಿಯಾಗುವವರ ಸಂಖ್ಯೆ ದೇಶದಲ್ಲಿ ದಿನೇದಿನೇ ಹೆಚ್ಚುತ್ತಲೇ ಇದೆ. ಕಾರ್ಡ್‌ಗಳಿಗೆ ಸಂಬಂಧಿಸಿದ ವಂಚನೆಯು ಹೆಚ್ಚಿನ ಪ್ರಮಾಣದಲ್ಲಿಯೇ ಮುಂದುವರಿದಿದ್ದು,ವಂಚಕರು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿರುವುದರಿಂದ 2019 ಮತ್ತು 2020ರಲ್ಲಿ ರಿಯಲ್ ಟೈಮ್ ಹಣಪಾವತಿಗೆ ಸಂಬಂಧಿಸಿದ ವಂಚನೆಯು ಹೆಚ್ಚಾಗಿದೆ ಎಂದು ಎಸಿಐ ವರ್ಲ್ಡ್‌ವೈಡ್ ಆ್ಯಂಡ್ ಗ್ಲೋಬಲ್ ಡಾಟಾದ ಇತ್ತೀಚಿನ ಜಾಗತಿಕ ವರದಿಯು ಬೆಟ್ಟು ಮಾಡಿದೆ.

ಕೊರೋನವೈರಸ್ ಸಾಂಕ್ರಾಮಿಕದಿಂದಾಗಿ ಎಲ್ಲ ವಯೋಮಾನದವರಲ್ಲಿ ಶಾಪಿಂಗ್ ಪ್ರವೃತ್ತಿಯು ಬದಲಾಗಿದೆ. ಸುರಕ್ಷಿತ ಅಂತರ ನಿಯಮಗಳು ಅಥವಾ ಪ್ರಯಾಣ ನಿರ್ಬಂಧಗಳಿಂದಾಗಿ ಗ್ರಾಹಕರು ಮಳಿಗೆಗಳಿಗೆ ತೆರಳಿ ಖರೀದಿ ಮಾಡುವುದರ ಬದಲಾಗಿ ಆನ್‌ಲೈನ್ ಖರೀದಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ಆನ್‌ಲೈನ್ ಶಾಪಿಂಗ್‌ನಲ್ಲಿ ಏರಿಕೆಯಾಗಿರುವುದು ಥರ್ಡ್ ಪಾರ್ಟಿ ಸೆಲ್ಲರ್‌ಗಳಿಗೆ ಮತ್ತು ವಂಚಕರಿಗೆ ಹೆಚ್ಚಿನ ಅವಕಾಶವನ್ನು ಒದಗಿಸಿದೆ. ಅತ್ಯುತ್ತಮ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ಪಡೆದುಕೊಳ್ಳಲು ಅಂತರ್ಜಾಲವನ್ನು ಜಾಲಾಡುವವರು ಕೆಲವೊಮ್ಮೆ ತಮಗೆ ಗೊತ್ತಿಲ್ಲದೇ ವಂಚಕ ಜಾಲತಾಣಗಳಿಗೆ ಭೇಟಿ ನೀಡುತ್ತಾರೆ ಮತ್ತು ಯಾವುದೇ ಎಚ್ಚರಿಕೆ ವಹಿಸದೆ ತಮ್ಮ ವೈಯಕ್ತಿಕ,ಸೂಕ್ಷ್ಮ ಮಾಹಿತಿಗಳನ್ನು ಒದಗಿಸುತ್ತಾರೆ. ಇದು ಸ್ಪಾಮ್ ಇ-ಮೇಲ್‌ಗಳು ಮತ್ತು ಪ್ರಚೋದನಾತ್ಮಕ ಸಂದೇಶಗಳ ಮೂಲಕ ಫಿಷಿಂಗ್ ದಾಳಿಗಳಿಗೆ ಬಲಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಮೆಕ್‌ಫೀ ಇಂಡಿಯಾದ ಎಂ.ಡಿ. ಮತ್ತು ಉಪಾಧ್ಯಕ್ಷ (ಇಂಜಿನಿಯರಿಂಗ್) ವೆಂಕಟ ಕೃಷ್ಣಾಪುರ.

ಆನ್‌ಲೈನ್ ವಂಚನೆಗಳ ಎಚ್ಚರಿಕೆಯ ಸಂಕೇತಗಳು

 ಎಚ್ಚರಿಕೆಯ ಸಂಕೇತಗಳನ್ನು ಗ್ರಾಹಕರು ಗಮನಿಸದಿರುವುದು ಆನ್‌ಲೈನ್ ಶಾಪಿಂಗ್ ಹಗರಣಗಳಿಗೆ ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ಈ ಆನ್‌ಲೈನ್ ವಂಚನೆ ಜಾಲತಾಣಗಳು ಸತ್ಯಕ್ಕೆ ದೂರವಾದ ಆಫರ್‌ಗಳನ್ನು ಮತ್ತು ರಿಯಾಯತಿ ದರಗಳ ಆಮಿಷವನ್ನು ಗ್ರಾಹಕರಿಗೆ ಒಡ್ಡುತ್ತವೆ. ಅತ್ಯಂತ ಕಡಿಮೆ ದರಗಳು, ಅತ್ಯಂತ ಕಡಿಮೆ ಸಮಯದಲ್ಲಿ ಡೀಲ್ ಮುಗಿಸುವ ಆಫರ್,ನಿಮಗೆ ಅವಕಾಶ ತಪ್ಪದಂತಿರಲು ತಕ್ಷಣದ ಹಣಪಾವತಿಗೆ ಆಗ್ರಹಿಸುವುದು,ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್ ಅಥವಾ ವೈರ್ ಸರ್ವಿಸ್ ಮೂಲಕ ಹಣಪಾವತಿಗೆ ಸೂಚಿಸುವುದು ಇತ್ಯಾದಿಗಳು ಇಂತಹ ಎಚ್ಚರಿಕೆಯ ಸಂಕೇತಗಳಾಗಿವೆ ಎನ್ನುತ್ತಾರೆ ಮಾಸ್ಟರ್‌ಕಾರ್ಡ್‌ನ ಉಪಾಧ್ಯಕ್ಷ (ಸೈಬರ್ ಆ್ಯಂಡ್ ಇಂಟಲಿಜೆನ್ಸ್ ಸೊಲ್ಯೂಷನ್ಸ್,ದಕ್ಷಿಣ ಏಷ್ಯಾ) ಸುಜಯ್ ವಾಸುದೇವನ್.

ವಂಚಕ ಜಾಲತಾಣವನ್ನು ನೀವು ಪ್ರವೇಶಿಸಿದ್ದರೆ ಮಾರಾಟಗಾರರು ಯಾವಾಗಲೂ ತಕ್ಷಣದ ಹಣಪಾವತಿ ಅಥವಾ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್ ಅಥವಾ ವೈರ್ ಸರ್ವಿಸ್‌ಗೆ ಒತ್ತಾಯಿಸುತ್ತಾರೆ ಎನ್ನುವುದು ನಿಮ್ಮ ಗಮನದಲ್ಲಿರಲಿ. ನಂಬಲಾಗದ ಅದ್ಭುತ ಲಾಭಗಳು ಮತ್ತು ವೈಶಿಷ್ಟಗಳೊಂದಿಗೆ ಉತ್ಪನ್ನಗಳ ಪ್ರಚಾರ ಮಾಡಲಾಗಿದ್ದರೆ ಹೆಚ್ಚಿನ ಪ್ರಕರಣಗಳಲ್ಲಿ ಅವೆಲ್ಲವೂ ಸುಳ್ಳಾಗಿರುತ್ತವೆ. ಆನ್‌ಲೈನ್ ವೇದಿಕೆಯಲ್ಲಿ ಡೆಲಿವರಿ ಮತ್ತು ಇತರ ಪಾಲಿಸಿಗಳ ಬಗ್ಗೆ ಸೀಮಿತ ಮಾಹಿತಿ,ಕಳಪೆ ಜಾಲತಾಣ ವಿನ್ಯಾಸ ಅಥವಾ ಕಳಪೆ ಇಂಗ್ಲಿಷ್‌ನ ಬಳಕೆ,ಯುಆರ್‌ಎಲ್‌ಗಳಲ್ಲಿ ಬಾಹ್ಯ ಶಬ್ದಗಳು ಅಥವಾ ಅಕ್ಷರಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಅಸ್ತಿತ್ವ ಇವೆಲ್ಲ ಇಂತಹ ವಂಚಕ ಜಾಲತಾಣಗಳ ನಿಜವಾದ ಬಣ್ಣವನ್ನು ಬಯಲು ಮಾಡುವ ಸಂಕೇತಗಳಾಗಿವೆ ಎನ್ನುತ್ತಾರೆ ಇನ್‌ಸ್ಪೈರಾ ಎಂಟರ್‌ಪ್ರೈಸ್‌ನ ಸಿಇಒ ಮನೋಜ್ ಕನೋಡಿಯಾ.

 ತಜ್ಞರು ಹೇಳುವಂತೆ ವಂಚಕರು ಸಾಮಾನ್ಯವಾಗಿ ನಿಯಮಗಳು ಮತ್ತು ಷರತ್ತುಗಳು,ವಿವಾದಗಳ ಇತ್ಯರ್ಥ,ಖಾಸಗಿತನ ನೀತಿ, ಡೆಲಿವರಿ ವಿವರಗಳು ಮತ್ತು ಸರಿಯಾದ ಸಂಪರ್ಕ ಮಾಹಿತಿಗಳನ್ನು ಉಲ್ಲೇಖಿಸಿರುವುದಿಲ್ಲ. ಈ ವಿವರಗಳು ಆನ್‌ಲೈನ್ ಮಾರಾಟಗಾರರ ಪ್ರಾಮಾಣಿಕತೆಯನ್ನು ನಿರ್ಧರಿಸುವ ಮುಖ್ಯ ಅಂಶಗಳಾಗಿವೆ.

ಗ್ರಾಹಕರು ಡಿಜಿಟಲ್ ಕರೆನ್ಸಿಗಳನ್ನು ಬಳಸುವುದರಿಂದ ದೂರವಿರಬೇಕು ಮತ್ತು ಆನ್‌ಲೈನ್ ಮಾರಾಟಗಾರ ದೇಶೀಯ ಅಥವಾ ವಿದೇಶಿ ಸಂಸ್ಥೆಯೇ ಎನ್ನುವುದನ್ನು ಪರಿಶೀಲಿಸಬೇಕು. ಜೊತೆಗೆ ತಮ್ಮ ಕಾರ್ಡ್ ವಿವರಗಳನ್ನು ತಮಗೆ ಹೊಸದಾದ ಅಥವಾ ತಾವು ಸಾಮಾನ್ಯವಾಗಿ ಬಳಸದಿರುವ ವೆಬ್‌ಸೈಟ್‌ಗಳಲ್ಲಿ ಸ್ಟೋರ್ ಮಾಡುವುದನ್ನು ನಿವಾರಿಸಬೇಕು ಎನ್ನುತ್ತಾರೆ ವಾಸುದೇವನ್.

ಇಂತಹ ವಂಚಕರಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಜಾಲತಾಣವು ಅಸಲಿಯೇ ಅಥವಾ ನಕಲಿಯೇ ಎನ್ನುವುದನ್ನು ನೀವು ಹೇಗೆ ನಿರ್ಧರಿಸಬಹುದು ಎನ್ನುವುದು ಇಲ್ಲಿದೆ.

 ಗ್ರಾಹಕರು ಮತ್ತು ಸೈಬರ್ ಕ್ರಿಮಿನಲ್‌ಗಳ ಸಂಖ್ಯೆ ಏಕಪ್ರಕಾರವಾಗಿ ಹೆಚ್ಚುವುದರೊಂದಿಗೆ ಬಳಕೆದಾರರು ಆನ್‌ಲೈನ್ ಶಾಪಿಂಗ್ ಮಾಡುವಾಗ ತಮ್ಮ ಸುರಕ್ಷತೆಗಾಗಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುವುದು ಇಂದು ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ. ಸಾಮಾನ್ಯವಾಗಿ ನಕಲಿ ವೆಬ್‌ಸೈಟ್‌ಗಳು ಯಾವುದೇ ಜನಪ್ರಿಯ ಇ-ಕಾಮರ್ಸ್ ಜಾಲತಾಣ ಅಥವಾ ಸರಕಾರಿ ಜಾಲತಾಣ(ಉದಾಹರಣೆಗೆ ತೆರಿಗೆಗೆ ಸಂಬಂಧಿತ)ದಂತಹ ಇತರ ಯಾವುದೋ ವಿಶ್ವಾಸಾರ್ಹ ಸಂಸ್ಥೆಯ ಜಾಲತಾಣಗಳನ್ನು ಹೋಲುವ ವಿಳಾಸಗಳು ಮತ್ತು ಹೆಸರುಗಳನ್ನು ಬಳಸುತ್ತವೆ ಎನ್ನುತ್ತಾರೆ ವಿಂಬೋದ ಸಿಇಒ ಸುರೇಶ ರಾಜಗೋಪಾಲನ್.

ಆನ್‌ಲೈನ್ ಶಾಪಿಂಗ್ ಪ್ರವೃತ್ತಿಯ ಕುರಿತು ಮೆಕ್‌ಫೀ ಇತ್ತೀಚಿಗೆ ನಡೆಸಿದ ಅಧ್ಯಯನವೊಂದು ಹೆಚ್ಚಿನ ಗ್ರಾಹಕರು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಹೊಂದಿಲ್ಲ,ಕೇವಲ ಶೇ.27.5ರಷ್ಟು ಭಾರತೀಯರು ಆನ್‌ಲೈನ್ ಭದ್ರತಾ ಕ್ರಮಗಳನ್ನು ಪಾಲಿಸುತ್ತಿದ್ದಾರೆ ಎನ್ನುವುದನ್ನು ಬೆಟ್ಟುಮಾಡಿದೆ.

ಕೆಲವು ಸರಳವಾದ,ಆದರೆ ಸುರಕ್ಷಿತವಾದ ಮಹತ್ವದ ಕ್ರಮಗಳು ವಂಚಕರಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನೆರವಾಗುತ್ತವೆ. ನಂಬಲಸಾಧ್ಯವಾದ ಆಫರ್‌ಗಳನ್ನು,ಅವುಗಳನ್ನು ನಿಮಗೆ ಗೊತ್ತಿದ್ದ ಜನರೇ ನಿಮಗೆ ಶಿಫಾರಸು ಮಾಡಿದ್ದರೂ,ಯಾವಾಗಲೂ ಎರಡೆರಡು ಸಲ ಪರೀಕ್ಷಿಸಿ ಮತ್ತು ನಿಮಗೆ ಅಪರಿಚಿತವಾದ ಇ-ಕಾಮರ್ಸ್ ಜಾಲತಾಣಗಳಿಂದ ದೂರವಿರಿ.

 ಅಸಲಿ ಜಾಲತಾಣದಂತೆ ಕಾಣುವಂತೆ ರೂಪಿಸಲಾಗಿರುವ ಕಾಪಿಕ್ಯಾಟ್ ವೆಬ್‌ಸೈಟ್‌ಗಳ ಬಗ್ಗೆ ನಿಗಾವಹಿಸಿ. ಖಾಸಗಿ ಮತ್ತು ಹಣಕಾಸು ಮಾಹಿತಿಗಳನ್ನು ಪಡೆದುಕೊಳ್ಳಲು ಇಂತಹ ವೆಬ್‌ಸೈಟ್‌ಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಇಂತಹ ವೆಬ್‌ಸೈಟ್‌ಗಳಲ್ಲಿ ಕಳಪೆ ಇಂಗ್ಲಿಷ್ ಭಾಷೆ ಮತ್ತು ತಪ್ಪು ವ್ಯಾಕರಣಗಳು ಇವೆಯೇ ಎನ್ನುವುದನ್ನು ಪರಿಶೀಲಿಸಿ. ಇಂತಹ ದೋಷಗಳು ಕಂಡುಬಂದರೆ ಹೆಚ್ಚಿನ ಸಂದರ್ಭಗಳಲ್ಲಿ ಈ ವೆಬ್‌ಸೈಟ್‌ಗಳು ವೃತ್ತಿಪರವಾಗಿ ನಿರ್ವಹಣೆಗೊಳ್ಳುತ್ತಿಲ್ಲ ಮತ್ತು ನಕಲಿ ವೆಬ್‌ಸೈಟ್ ಆಗಿರಬಹುದು.

ಶಾಪಿಂಗ್ ವೆಬ್‌ಸೈಟ್/ ಪೋರ್ಟಲ್‌ನ ವಿಮರ್ಶೆ ವಿಭಾಗವನ್ನು ಓದುವುದನ್ನು ಮರೆಯಬೇಡಿ.

ಕೊಂಡಿಗಳ ಮೇಲೆ ಕ್ಲಿಕ್ ಮಾಡುವಾಗ ಎಚ್ಚರಿಕೆ ವಹಿಸಿ ಮತ್ತು ಇ-ಮೇಲ್ ಅಟ್ಯಾಚ್‌ಮೆಂಟ್‌ಗಳನ್ನು,ಅವು ನಿಮಗೆ ಅಪರಿಚಿತರಿಂದ ಬಂದಿದ್ದರೆ ತೆರೆಯುವ ಗೋಜಿಗೆ ಹೋಗಲೇಬೇಡಿ. ಇ-ಮೇಲ್ ಅಥವಾ ಟೆಕ್ಸ್ಟ್ ಮೆಸೇಜ್‌ನಲ್ಲಿಯ ಕೊಂಡಿಗಳನ್ನು ಕ್ಲಿಕ್ಕಿಸುವ ಬದಲು ನಿಮ್ಮ ವೆಬ್ ಬ್ರೌಸರ್‌ನಲ್ಲಿ ಆ ವೆಬ್‌ಸೈಟ್‌ನ್ನು ಪ್ರತ್ಯೇಕವಾಗಿ ಜಾಲಾಡಿ ಅದರ ಅಸಲಿಯತ್ತನ್ನು ಪತ್ತೆ ಹಚ್ಚಲು ಪ್ರಯತ್ನಿಸಿ.

ಯಾವಾಗಲೂ ಯುಆರ್‌ಎಲ್‌ನ ‘https:// ' ನ s ' ’ ಕೊನೆಯಲ್ಲಿ ಅಕ್ಷರ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇದು ‘secure ’ ಅಥವಾ ವೆಬ್‌ಸೈಟ್ ಪೇಜ್ ಸುರಕ್ಷಿತವಾಗಿದೆ ಮತ್ತು ಎನ್‌ಕ್ರಿಪ್ಟೆಡ್ ಆಗಿದೆ ಎನ್ನುವುದನ್ನು ಸೂಚಿಸುತ್ತದೆ. ಹೆಚ್ಚುವರಿ ಭದ್ರತೆಗಾಗಿ ನಿಮ್ಮ ಎಲ್ಲ ಖಾತೆಗಳಿಗೆ ಎರಡು ಅಥವಾ ಹೆಚ್ಚಿನ ಅಥೆಂಟಿಕೇಷನ್ ಅಳವಡಿಸಿಕೊಳ್ಳಿ.

* ಕೃಪೆ:ಫೈನಾನ್ಶಿಯಲ್ ಎಕ್ಸ್‌ಪ್ರೆಸ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)