varthabharthi


ಕ್ರೀಡೆ

ಇಂದು ಪಂಜಾಬ್ ಕಿಂಗ್ಸ್ -ರಾಜಸ್ಥಾನ ರಾಯಲ್ಸ್ ಮುಖಾಮುಖಿ

ವಾರ್ತಾ ಭಾರತಿ : 12 Apr, 2021

ಮುಂಬೈ: ಲೋಕೇಶ್ ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಮತ್ತು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡಗಳು ಸೋಮವಾರ ಇಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

 ಉಭಯ ತಂಡಗಳು ತಮ್ಮ ಅಭಿಯಾನವನ್ನು ಗೆಲುವಿನೊಂದಿಗೆ ಪ್ರಾರಂಭಿಸುವ ಉದ್ದೇಶದೊಂದಿಗೆ ಕಣಕ್ಕಿಳಿಯಲಿವೆ. ರಾಜಸ್ಥಾನ ತಂಡವು ಆಕ್ರಮಣಕಾರಿ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಇಂಗ್ಲೆಂಡ್‌ನ ಜೋಸ್ ಬಟ್ಲರ್ ಮತ್ತು ನೂತನ ನಾಯಕ ಸ್ಯಾಮ್ಸನ್ ನೇತೃತ್ವದಲ್ಲಿ ತಂಡ ಈ ಬಾರಿ ಮತ್ತೊಮ್ಮೆ ಪ್ರಯತ್ನ ನಡೆಸಲಿದೆ.

 ರಾಯಲ್ಸ್ ತಂಡದ ಇನಿಂಗ್ಸ್‌ನ್ನು ಪ್ರತಿಭಾವಂತ ಯಶಸ್ವಿ ಜೈಸ್ವಾಲ್ ಮತ್ತು ಬಟ್ಲರ್ ಆರಂಭಿಸುವ ಸಾಧ್ಯತೆ ಇದೆ. ಸ್ಯಾಮ್ಸನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಸ್ಟೋಕ್ಸ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಜೈಸ್ವಾಲ್, ಬಟ್ಲರ್, ಸ್ಯಾಮ್ಸನ್ ಮತ್ತು ಸ್ಕೋಕ್ಸ್ ಯಾವುದೇ ಬೌಲಿಂಗ್ ದಾಳಿಯನ್ನು ಪುಡಿಪುಡಿ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಆಲ್‌ರೌಂಡರ್‌ಗಳಾದ ಶಿವಂ ದುಬೆ, ಶ್ರೇಯಾಸ್ ಗೋಪಾಲ್, ರಾಹುಲ್ ತಿವಾಟಿಯಾ, ರಿಯಾನ್ ಪರಾಗ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ರಾಯಲ್ಸ್ ತಂಡದಲ್ಲಿ ಇದ್ದಾರೆ.

   ಗೋಪಾಲ್, ತಿವಾಟಿಯಾ ಮತ್ತು ಪರಾಗ್ ಕೂಡ ಲೆಗ್ ಸ್ಪಿನ್ ಬೌಲ್ ಮಾಡುತ್ತಾರೆ ಮತ್ತು ರಾಯಲ್ಸ್ ತಂಡವು ಇಬ್ಬರು ಲೆಗ್ ಸ್ಪಿನ್ನರ್‌ಗಳೊಂದಿಗೆ ಇಳಿಯುವ ಸಾಧ್ಯತೆ ಇದೆ. ತಿವಾಟಿಯಾ ಮತ್ತು ದುಬೆ ಸ್ಫೋಟಕ ಬ್ಯಾಟಿಂಗ್ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ಆಡುವ ಇಲೆವೆನ್‌ನಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಗಾಯದಿಂದಾಗಿ ಜೋಫ್ರಾ ಆರ್ಚರ್ ಅನುಪಸ್ಥಿತಿಯಲ್ಲಿ ರಾಯಲ್ಸ್ ವೇಗದ ಬೌಲಿಂಗ್ ದಾಳಿಯನ್ನು ಕ್ರಿಸ್ ಮಾರಿಸ್ ಮುನ್ನಡೆಸಲಿದ್ದಾರೆ. ಈ ವರ್ಷ ಆಟಗಾರರ ಹರಾಜಿನಲ್ಲಿ ತಂಡವು ಅವರನ್ನು 16 .25 ಕೋಟಿ ರೂ.ಗೆ ಖರೀದಿಸಿತ್ತು. ಆಡುವ ಇಲೆವೆನ್‌ನಲ್ಲಿ ಕೇವಲ 4 ವಿದೇಶಿ ಆಟಗಾರರನ್ನು ಆಡಿಸುವ ಕಡೆಗೆ ರಾಯಲ್ಸ್ ಗಮನ ಹರಿಸಬೇಕಾಗುತ್ತದೆ. ಎಡಗೈ ವೇಗದ ಬೌಲರ್ ಮುಸ್ತಾಫಿಝುರ್ರಹ್ಮಾನ್, ಜಯದೇವ್ ಉನಾದ್ಕಟ್, ಕಾರ್ತಿಕ್ ತ್ಯಾಗಿ ಮತ್ತು ಚೇತನ್ ಸಕಾರಿಯಾ ಇವರಿಗೆ ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿದೆಯೇ ಎಂದು ನೋಡಬೇಕಾಗಿದೆ.

ಪಂಜಾಬ್‌ನಲ್ಲಿ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳಾದ ರಾಹುಲ್ (2020ರ ಋತುವಿನಲ್ಲಿ 670 ರನ್), ಮಾಯಾಂಕ್ ಅಗರ್ವಾಲ್ (2020ರ ಋತುವಿನಲ್ಲಿ 424 ರನ್) ಮತ್ತು ಕ್ರಿಸ್ ಗೇಲ್ ಇದ್ದಾರೆ. ರಾಹುಲ್ ಮತ್ತು ಅಗರ್ವಾಲ್ 2020ರಲ್ಲಿ ತಂಡದ ಇನಿಂಗ್ಸ್ ಆರಂಭಿಸುವಲ್ಲಿ ಯಶಸ್ಸು ಸಾಧಿಸಿದ್ದರು. ಈ ಜೋಡಿ ಹಾಗೇ ಉಳಿಯುವ ನಿರೀಕ್ಷೆಯಿದೆ. ಈ ತಂಡವು ಇಂಗ್ಲೆಂಡ್‌ನ ಡೇವಿಡ್ ಮಲಾನ್, ತಮಿಳುನಾಡಿನ ಎಂ.ಶಾರುಖ್ ಖಾನ್ ಮತ್ತು ವೆಸ್ಟ್ ಇಂಡೀಸ್‌ನ ನಿಕೋಲಸ್ ಪುರಾನ್ ಅವರಂತಹ ಉತ್ತಮ ಹಿಟ್ಟರ್‌ಗಳನ್ನು ಹೊಂದಿದೆ.

ಶಾರುಖ್, ದೀಪಕ್ ಹೂಡಾ ಮತ್ತು ಸರ್ಫರಾಝ್ ಖಾನ್‌ಗೆ ಈ ಬಾರಿ ಆದ್ಯತೆ ನೀಡಬಹುದು. ಕಳೆದ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಮುಹಮ್ಮದ್ ಶಮಿ ಅವರು ತಂಡದ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಆಸ್ಟ್ರೇಲಿಯದ ಜೆ. ರಿಚರ್ಡ್ಸನ್ ಮತ್ತು ರಿಲೆ ಮೆರೆಡಿತ್ ಅವರನ್ನು ಸೇರಿಸಿಕೊಂಡು ವೇಗದ ಬೌಲಿಂಗ್ ದಾಳಿಯನ್ನು ಬಲಪಡಿಸಲಾಗಿದೆ. ತಂಡದಲ್ಲಿ ಕ್ರಿಸ್ ಜೋರ್ಡಾನ್ ಕೂಡ ಇದ್ದಾರೆ. ಶಮಿ ಅವರೊಂದಿಗೆ ಹೊಸ ಚೆಂಡಿನೊಂದಿಗೆ ದಾಳಿ ಆರಂಭಿಸುವ ಅವಕಾಶ ಯಾರಿಗೆ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಸ್ಪಿನ್ ವಿಭಾಗದಲ್ಲಿ ತಂಡವು ಮುರುಗನ್ ಅಶ್ವಿನ್ ಮತ್ತು ರವಿ ಬಿಷ್ಣೋಯ್ ಅವರಂತಹ ಬೌಲರ್‌ಗಳನ್ನು ಹೊಂದಿದೆ.

ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಯಶಸ್ವಿ ಜೈಸ್ವಾಲ್, ಮನನ್ ವೊಹ್ರಾ, ಅನುಜ್ ರಾವತ್, ರ್ಯಾನ್ ಪರಾಗ್, ಡೇವಿಡ್ ಮಿಲ್ಲರ್, ರಾಹುಲ್ ತಿವಾಟಿಯಾ, ಮಹಿಪಾಲ್ ಲೊಮರ್, ಶ್ರೇಯಾಸ್ ಗೋಪಾಲ್, ಮಯಾಂಕ್ ಮಾರ್ಕಂಡೆ, ಆಂಡ್ರೋ ಟೈ, ಜಯದೇವ್ ಉನಾದ್ಕಟ್ ,ಶಿವಂ ದುಬೆ, ಕ್ರಿಸ್ ಮಾರಿಸ್, ಮುಸ್ತಾಫಿಝ್ರುಹ್ಮಾನ್, ಚೇತನ್ ಸಕರಿಯಾ, ಕೇಸಿ ಕರಿಯಪ್ಪ, ಲಿಯಾಮ್ ಲಿವಿಂಗ್‌ಸ್ಟೋನ್‌ಕುಲದೀಪ್ ಯಾದವ್ ಮತ್ತು ಆಕಾಶ್ ಸಿಂಗ್.

 ಪಂಜಾಬ್ ಕಿಂಗ್ಸ್: ಲೋಕೇಶ್ ರಾಹುಲ್ (ನಾಯಕ), ಮಾಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ಮಂದೀಪ್ ಸಿಂಗ್, ಪ್ರಭಾಸಿಮ್ರಾನ್ ಸಿಂಗ್, ನಿಕೋಲಸ್ ಪೂರನ್, ಸರ್ಫರಾಜ್ ಖಾನ್, ದೀಪಕ್ ಹೂಡಾ, ಮುರುಗನ್ ಅಶ್ವಿನ್, ರವಿ ಬಿಷ್ಣೋಯ್, ಹರ್ಪ್ರೀತ್ ಬ್ರಾರ್, ಮುಹಮ್ಮದ್ ಶಮಿ, ಅರ್ಷೋರ್‌ಪ್ರಲ್ ಸಿಂಗ್ , ಕ್ರಿಸ್ ಜೋರ್ಡಾನ್, ಡೇವಿಡ್ ಮಲನ್, ಜೆ.ಕೆ. ರಿಚರ್ಡ್ಸನ್, ಶಾರುಖ್ ಖಾನ್, ರಿಲೆ ಮೆರೆಡಿತ್, ಮೊಯ್ಸೆಸ್ ಹೆನ್ರಿಕ್ಸ್, ಜಲಜ್ ಸಕ್ಸೇನಾ, ಉತ್ಕರ್ಶ್ ಸಿಂಗ್, ಫ್ಯಾಬಿಯನ್ ಅಲೆನ್ ಮತ್ತು ಸೌರಭ್ ಕುಮಾರ್.

ಪಂದ್ಯದ ಸಮಯ: ರಾತ್ರಿ 7:30ಕ್ಕೆ ಆರಂಭವಾಗಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)