varthabharthi


ಕರ್ನಾಟಕ

ಸಾರಿಗೆ ಸಂಸ್ಥೆಗಳ ಖಾಸಗಿಕರಣಕ್ಕೆ ಸರಕಾರ ಅಡಿಗಲ್ಲು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ವಾರ್ತಾ ಭಾರತಿ : 12 Apr, 2021

ಬೆಂಗಳೂರು, ಎ. 12: ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ಖಾಸಗಿಕರಣಕ್ಕೆ ರಾಜ್ಯ ಸರಕಾರ ಅಡಿಗಲ್ಲು ಹಾಕುತ್ತಿದೆ. ಕಾಂಗ್ರೆಸ್ ಪಕ್ಷದ್ದು ರಾಷ್ಟ್ರೀಕರಣ, ಬಿಜೆಪಿಯವರದ್ದು ಖಾಸಗೀಕರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಸ್‍ಎನ್‍ಎಲ್, ರೈಲ್ವೆ ಲೈನ್, ಏರ್ ಫೋರ್ಸ್, ಪೆಟ್ರೋಲ್ ಕಂಪೆನಿ, ಬಿಎಚ್‍ಇಎಲ್ ಸೇರಿದಂತೆ ಎಲ್ಲ ಸರಕಾರಿ ಸ್ವಾಮ್ಯದ ಕಂಪೆನಿಗಳನ್ನು ಖಾಸಗಿಕರಣ ಮಾಡಲಾಗುತ್ತಿದೆ. ನಮ್ಮ ಸರಕಾರ ಇದ್ದಾಗ ಅವುಗಳನ್ನು ರಾಷ್ಟ್ರೀಕರಣ ಮಾಡಲಾಗಿತ್ತು ಎಂದು ಇದೇ ಸಂದರ್ಭದಲ್ಲಿ ಸ್ಮರಿಸಿದರು.

ಸಾರಿಗೆ ಸಂಸ್ಥೆ ನಮ್ಮ ಕುಟುಂಬ. ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡಬೇಕು. ಅದು ಬಿಟ್ಟು ಅವರ ವಿರುದ್ಧ ಕ್ರಮಕ್ಕೆ. ಬಲಪ್ರಯೋಗಕ್ಕೆ ಮುಂದಾಗುವುದು ಸರಿಯಲ್ಲ. ಸರಕಾರಿ ಆಸ್ಪತ್ರೆ, ಶಾಲೆ, ಸಾರಿಗೆ ವ್ಯವಸ್ಥೆಯಲ್ಲಿ ಲಾಭದ ದೃಷ್ಟಿಯಲ್ಲಿ ನೋಡುವಂತಿಲ್ಲ. ಅಲ್ಲಿ ಸೇವೆ ಉದ್ದೇಶದಿಂದ ನಡೆಸಬೇಕು ಎಂದ ಅವರು, ನೌಕರರನ್ನು ಕರೆದು ಸಮಾಲೋಚನೆ ನಡೆಸಬೇಕು ಎಂದು ಸಲಹೆ ಮಾಡಿದರು.

ಸಾರಿಗೆ ನೌಕರರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ನಾವೇ ಅವರ ಬಳಿಗೆ ತೆರಳಿ ಮನವಿ ಮಾಡುತ್ತೇವೆ. ಆದರೆ, ಒಬ್ಬ ಮಂತ್ರಿ ಹೇಳುತ್ತಾರೆ. ಯಾವುದೇ ಕಾರಣಕ್ಕೂ ಮಾತುಕತೆ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಾರೆ. ಪರಿಸ್ಥಿತಿ ನಿಬಾಯಿಸುವಲ್ಲಿ ಸರಕಾರ ವಿಫಲವಾಗಿದೆ. ಸಾರಿಗೆ ಸಿಬ್ಬಂದಿಗೆ ತಡೆಹಿಡಿದಿರುವ ಸಂಬಳ ಕೂಡಲೇ ನೀಡಬೇಕು. ಬೆಳಗಾವಿಯಲ್ಲಿ ಪ್ರತಿಭಟನೆ ಮಾಡಲು ಹೋದರೆ, ಅವರನ್ನು ಬಂಧಿಸಿದರೆ ಖಂಡಿಸಿ ಹೋರಾಟ ಮಾಡುತ್ತಾರೆ. ಹೋರಾಟ ಅವರ ಹಕ್ಕು ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದರು.

ಗೆಲುವು ನಮ್ಮದೆ: ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಹಣ ಹಂಚಿಕೆ ವಿಡಿಯೋ ವೈರಲ್ ಆಗಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿಯನ್ನು ಅನರ್ಹಗೊಳಿಸಬೇಕು. ಸಿಎಂ ಯಡಿಯೂರಪ್ಪ ಪಕ್ಷದ ಅಧ್ಯಕ್ಷರಂತೆ ಜಾತಿವಾರು ಸಭೆಗಳನ್ನು ನಡೆಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಸೋಲಿನ ಭೀತಿ ಅವರನ್ನು ಕಾಡುತ್ತಿದೆ. ಹೀಗಾಗಿಯೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.

ಕರ್ನಾಟಕ ರಾಜ್ಯದಲ್ಲಿ ಆಡಳಿತ ಕುಸಿದಿದೆ ಎಂಬುದನ್ನು ತೋರಿಸುತ್ತಿದೆ. ಈ ವರ್ಷ ನಡೆದಷ್ಟು ಪ್ರತಿಭಟನೆ, ಹೋರಾಟ ಯಾವ ವರ್ಷವೂ ನೋಡಿರಲಿಲ್ಲ. ಜನರ ನಿರೀಕ್ಷೆಯಂತೆ ಆಡಳಿತ ಕೊಡಲು ಬಿಜೆಪಿಗೆ ಸಾಧ್ಯವಾಗಿಲ್ಲ. ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಅಧಿವೇಶನವನ್ನೇ ನಡೆಸಲಿಲ್ಲ ಎಂದ ಅವರು, ಕೋವಿಡ್ ಸಂದರ್ಭದಲ್ಲಿ ಎಲ್ಲಾ ವರ್ಗದ ಜನರಿಗೆ ಹಣ ಕೊಡುತ್ತೇನೆ ಎಂದು ಹೇಳಿದರು. ಆದರೆ, ಒಬ್ಬರಿಗೂ ನಯಾಪೈಸೆ ಹಣ ನೀಡಲಿಲ್ಲ ಎಂದರು.

ನೈಟ್ ಕರ್ಫ್ಯೂ: ಕೋವಿಡ್ ಎರಡನೆ ಅಲೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಕೆಲ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಹೇರಿದೆ. ಬೆಳಗ್ಗೆ ಕೊರೋನ ಹಬ್ಬುವುದಿಲ್ಲವೇ? ಎಂದು ಪ್ರಶ್ನಿಸಿದ ಅವರು, ಜಿಮ್‍ಗಳಲ್ಲಿ ವ್ಯಾಯಾಮ ಮಾಡಲು ನಿರ್ಬಂಧ ವಿಧಿಸಿದರೆ ಹೇಗೆ? ಇನ್ನು ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಈ ಮಧ್ಯೆ ರಸಗೊಬ್ಬರದ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. ಹೀಗಾಗಿ ಮತದಾರರು ಉಪಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಕೋರಿದರು.

`ಸಿನಿಮಾ ಮಂದಿರಗಳಲ್ಲಿ ಗಂಡ-ಹೆಂಡತಿ ಒಂದು ಸೀಟ್ ಬಿಟ್ಟು ಒಂದು ಸೀಟ್‍ನಲ್ಲಿ ಸಿನಿಮಾ ನೋಡಬೇಕಂತೆ. ಆದರೆ, ಬಸ್‍ನಲ್ಲಿ ಮಾತ್ರ ಅಕ್ಕಪಕ್ಕ ಕೂರಬಹುದಂತೆ. ಯಾರೂ ನಿಂತುಕೊಳ್ಳಬಾರದು. ಎಲ್ಲರೂ ಒಟ್ಟಿಗೆ ವಿಮಾನದಲ್ಲಿ ಪ್ರಯಾಣಿಸಬಹುದು. ಇದಕ್ಕೆಲ್ಲ ವೈಜ್ಞಾನಿಕ ಆಧಾರವಿದೆಯೇ. ಸರಕಾರದ ನಿರ್ಧಾರದಿಂದ ಚಿತ್ರರಂಗ ನೆಲಕಚ್ಚಿದೆ'

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

`ಯುಗಾದಿ ರಾಜ್ಯದ ಜನರಿಗೆ ಕಾಂಗ್ರೆಸ್ ಪಕ್ಷದ ಪರವಾಗಿ ಎಲ್ಲ ಕಷ್ಟಗಳನ್ನು ನಿವಾರಣೆ ಮಾಡಲಿ. ಹೋದ ವರ್ಷ ಜನರು ತುಂಬಾ ಕಷ್ಟ ಅನುಭವಿಸಿದ್ದಾರೆ. ಈ ವರ್ಷ ಆ ಎಲ್ಲ ಕಷ್ಟದಿಂದ ದೂರ ಮಾಡಲಿ. ಜೊತೆಗೆ ರಮಝಾನ್ ಹಬ್ಬವೂ ಬರುತ್ತಿದ್ದು, ರಾಜ್ಯದಲ್ಲಿನ ಎಲ್ಲ ಮುಸ್ಲಿಮ್ ಬಾಂಧವರಿಗೂ ಶುಭಾಶಯಗಳು'

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)