varthabharthi


ಕರ್ನಾಟಕ

ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ: ಪ್ರಯಾಣಿಕ ವಾಹನಗಳ ತೆರಿಗೆ ಪಾವತಿ ಅವಧಿ ವಿಸ್ತರಿಸಿದ ಸರಕಾರ

ವಾರ್ತಾ ಭಾರತಿ : 12 Apr, 2021

ಬೆಂಗಳೂರು, ಎ.12: ಸಾರಿಗೆ ನೌಕರರು ಮುಷ್ಕರ ನಿರತರಾಗಿರುವುದರಿಂದ ಖಾಸಗಿ ವಾಹನ ಮಾಲಕರು ಸರಕಾರದ ಕೋರಿಕೆಗೆ ಸ್ಪಂದಿಸಿ ಜನಸಾಮಾನ್ಯರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಪ್ರಯಾಣಿಕ ವಾಹನಗಳ ತೆರಿಗೆ ಪಾವತಿ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯಿದೆ 1957ರ ಕಲಂ4(1) ನಿಯಮಗಳನ್ನು ಸಡಿಲಗೊಳಿಸಿ ರಾಜ್ಯದ ಎಲ್ಲ ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಅನ್ವಯಿಸುವಂತೆ ಎ.15ರೊಳಗಾಗಿ ಪಾವತಿಸಬೇಕಾಗಿದ್ದ ಮೋಟಾರು ವಾಹನ ತೆರಿಗೆಯನ್ನು ದಂಡರಹಿತವಾಗಿ ಪಾವತಿಸಲು ಎ.30ರವರೆಗೆ ವಿಸ್ತರಿಸಿ ಇಂದು ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹಲವಾರು ಅಡೆತಡೆಗಳನ್ನು ಎದುರಿಸಿಯೂ ನಮ್ಮ ನಿರೀಕ್ಷೆಯಂತೆ ಇಂದು ಮಧ್ಯಾಹ್ನದ ವೇಳೆಗೆ ನಮ್ಮ ಸಾರಿಗೆ ನಿಗಮಗಳ 3200ಕ್ಕೂ ಹೆಚ್ಚು ಬಸ್ಸುಗಳು ಸಂಚರಿಸಿ ಸಾರ್ವಜನಿಕರಿಗೆ ಅನುಕೂಲವಾಯಿತು. ನಮ್ಮ ಮನವಿಗೆ ಓಗೊಟ್ಟು ಕರ್ತವ್ಯಕ್ಕೆ ಹಾಜರಾಗಿರುವ ನಮ್ಮ ಸಾರಿಗೆ ಸಿಬ್ಬಂದಿಗಳಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಸಾರ್ವಜನಿಕ ಹಿತದೃಷ್ಟಿಯಿಂದ ಹಲವು ಕಡೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ನಮ್ಮ ನೌಕರರನ್ನು ತಡೆಗಟ್ಟುವ ಪ್ರಯತ್ನಕ್ಕೆ ಮತ್ತು ಅವರ ಮೇಲೆ ಹಲ್ಲೆ ನಡೆಸುವುದಕ್ಕೆ ಕೆಲವರು ಮುಂದಾಗಿದ್ದು, ಅಂಥವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕುರಿತು ಪೊಲೀಸ್ ಠಾಣೆಗಳಲ್ಲೂ ಪ್ರಕರಣ ದಾಖಲಾಗಿವೆ ಎಂದು ಅವರು ಹೇಳಿದ್ದಾರೆ.

ಮುಂದೆಯೂ ಇದೇ ರೀತಿ ಪ್ರಕರಣಗಳು ವರದಿಯಾದರೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಮತ್ತು ನಮ್ಮ ನಿಗಮಗಳ ಅಧಿಕಾರಿಗಳ ಗಮನಕ್ಕೆ ತರಲು ಕೋರುತ್ತೇನೆ ಹಾಗೂ ಕರ್ತವ್ಯಕ್ಕೆ ಹಾಜರಾದ ನಮ್ಮ ಸಿಬ್ಬಂದಿಗಳಿಗೆ ಜೀವ ಬೆದರಿಕೆ ಎದುರಾದಾಗಲೂ ಎದೆಗುಂದದೆ ಸಾರ್ವಜನಿಕರಿಗೆ ಸಾರಿಗೆ ಸೇವೆ ಕಲ್ಪಿಸುವಲ್ಲಿ ಬದ್ಧತೆ ತೋರಿದ ನೌಕರರ ಮತ್ತು ಅಧಿಕಾರಿಗಳ ಕರ್ತವ್ಯ ಪ್ರಜ್ಞೆಯನ್ನು ನಮ್ಮ ಸರಕಾರ ಮುಕ್ತಕಂಠದಿಂದ ಪ್ರಶಂಸಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ಕೋವಿಡ್ 2ನೇ ಅಲೆಯ ಅಪಾಯದ ಸಂದರ್ಭ ಎದುರಾಗಿದೆ. ಅಷ್ಟೇ ಅಲ್ಲ ಯುಗಾದಿ ಪ್ರಯುಕ್ತ ನೌಕರ ವರ್ಗದವರು ಮತ್ತು ವಿದ್ಯಾರ್ಥಿಗಳು, ಮತ್ತಿತರರು ತಮ್ಮ ಊರುಗಳಿಗೆ ತೆರಳಬೇಕಾದ ಅನಿವಾರ್ಯತೆ ಇರುವ ಪ್ರಯುಕ್ತ ಅವರಿಗೆ ಅನುಕೂಲವಾಗಲು ನೌಕರರು ಕರ್ತವ್ಯಕ್ಕೆ ಮರಳಬೇಕು ಎಂದು ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.

ಚುನಾವಣಾ ನೀತಿ ಸಂಹಿತೆಯ ಅವಧಿ ಮುಕ್ತಾಯಗೊಂಡ ನಂತರ ನಮ್ಮ ನೌಕರ ಬಾಂಧವರ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೇವೆ. ಆದರೆ ಇದಕ್ಕೆ ಕೆಲವು ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳು ಹುಳಿಹಿಂಡುತ್ತಾ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತಿದ್ದಾರೆ. ಇದರಿಂದಾಗಿ ದಿನದಿಂದ ದಿನಕ್ಕೆ ಈ ಮುಷ್ಕರವು ಸಾರ್ವಜನಿಕರ ಸಹಾನುಭೂತಿಯನ್ನೂ ಕಳೆದುಕೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದು ಬೇವು ಬೆಲ್ಲದ ಹಬ್ಬವಾದ ಯುಗಾದಿಯ ಪುಣ್ಯ ಸಂದರ್ಭ. ಈ ಸಂದರ್ಭದಲ್ಲಿ ನಮ್ಮ ಸಾರಿಗೆ ನೌಕರರ ಬದುಕಿನಲ್ಲಿ ಬೇವಿಗಿಂತ ಬೆಲ್ಲದ ಸಿಹಿಯೇ ಹೆಚ್ಚು ಸಿಗುವಂತಾಗಲಿ ಎಂದು ಶುಭ ಹಾರೈಸುತ್ತೇನೆ. ಆದುದರಿಂದ, ಅವರ ಬದುಕಿನಲ್ಲಿ ಬೆಲ್ಲದ ಸವಿ ಹೆಚ್ಚಾಗಲು ಸಾರಿಗೆ ನೌಕರರು ಕೂಡಲೇ ತಮ್ಮ ಕರ್ತವ್ಯಕ್ಕೆ ಹಾಜರಾಗಿ ಜನರ ಪ್ರೀತಿ ವಿಶ್ವಾಸಕ್ಕೆ ಭಾಜನರಾಗಬೇಕೆಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಸಹನೆಯನ್ನು ದೌರ್ಬಲ್ಯ ಎಂದು ಪರಿಗಣಿಸಬೇಡಿ: ಸವದಿ ಎಚ್ಚರಿಕೆ

ಆದಷ್ಟೂ ಸಹನೆಯಿಂದ ಈ ಸಮಸ್ಯೆಯನ್ನು ಬಗೆಹರಿಸಲು ಅತ್ಯಂತ ವಿವೇಚನೆಯಿಂದ ಸರಕಾರವು ಹೆಜ್ಜೆ ಇಡುತ್ತಿದೆ. ಆದರೆ ಇದನ್ನು ನಮ್ಮ ದೌರ್ಬಲ್ಯ ಎಂದು ಯಾರೂ ಪರಿಗಣಿಸಬಾರದು ಮತ್ತು ನಮ್ಮ ತಾಳ್ಮೆಯನ್ನು ಮತ್ತಷ್ಟು ಪರೀಕ್ಷಿಸಲು ಯಾರಾದರೂ ಮುಂದಾದರೆ ಅಂಥವರ ವಿರುದ್ಧ ಮುಂದಿನ ಕ್ರಮಗಳು ಮತ್ತಷ್ಟು ಗಂಭೀರವಾಗಿರುತ್ತದೆ.

-ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)