varthabharthi


ಅನುಗಾಲ

ನಾರ್ಲ ವೆಂಕಟೇಶ್ವರ ರಾವು ಅವರ ‘ಜಾಬಾಲಿ’

ವಾರ್ತಾ ಭಾರತಿ : 15 Apr, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಇಡೀ ನಾಟಕವು ದುರ್ಗಮವಾದ ಧರ್ಮಸಿದ್ಧಾಂತಗಳನ್ನು ಪ್ರಶ್ನಿಸುತ್ತದೆ. ಅಯೋಧ್ಯೆಯ ರಾಜವಂಶವೂ ರಾಜಕಾರಣದ ಗೂಡಾಗಿ, ಮನುಷ್ಯ ಸಹಜ ಲೋಪಗಳ ಬೀಡಾಗಿ ಕಾಣುತ್ತದೆ. ಇದು ಸಹಜವೂ ಹೌದು. ಒಂದು ವೇಳೆ ರಾಮನ ವನವಾಸವು ಧರ್ಮಪರವೇ ಆಗಿದ್ದರೆ ಭರತನು ರಾಮದರ್ಶನಕ್ಕೆ ಬಂದು ಆತನನ್ನು ಒಲಿಸಿ ಕರೆದುಕೊಂಡು ಹೋಗಲು ಮಾಡುವ ಪ್ರಯತ್ನವು ತೀರಾ ಅಧರ್ಮವೂ ಕೃತಕವೂ ಆಗುತ್ತದೆ. ಇದರ ಹಿನ್ನೆಲೆಯಲ್ಲಿ ಜಾಬಾಲಿಯು ಹೇಳುವ ತರ್ಕಗಳು ಪೌರಾಣಿಕ ಸತ್ಯವಾಗಿಯೂ ಸಾಧುವೆನಿಸುತ್ತದೆ.


ಎರಡು ವರ್ಷಗಳ ಹಿಂದೆ ಇದೇ ಅಂಕಣದಲ್ಲಿ ನಾನು ತೆಲುಗಿನ ಖ್ಯಾತ ಸಾಹಿತಿ ನಾರ್ಲ ವೆಂಕಟೇಶ್ವರ ರಾವು ಮತ್ತು ಅವರ ನಾಟಕ ‘ಸೀತೆಯ ಭವಿಷ್ಯ’ದ ಕುರಿತು ಬರೆದಿದ್ದೆ. ಆಗ ನಾನು ‘‘ಈ ನಾಟಕಕ್ಕೆ ಮುನ್ನ ನಾರ್ಲ ಅವರು ‘ಜಾಬಾಲಿ’ ಎಂಬ ನಾಟಕವನ್ನು ರಚಿಸಿದ್ದರು. ಅದೂ ರಾಮಾಯಣವನ್ನು ಆಧರಿಸಿದ್ದು. ಅದರ ಪೀಠಿಕೆಯಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಅನೇಕ ಮುಖ್ಯಾಂಶಗಳನ್ನು ಚರ್ಚಿಸಲಾಗಿದೆಯೆಂದು ಲೇಖಕರು ಹೇಳಿ ಇಲ್ಲಿ ಹೊಸ ವಿಷಯಗಳನ್ನು ಬರೆದಿದ್ದೇನೆಂದು ಹೇಳುತ್ತಾರೆ. ಅಷ್ಟೇ ಅಲ್ಲ, ‘ಈ ಸೀತೆಯ ಭವಿಷ್ಯ ನಾಟಕವನ್ನು, ಇದರ ಪ್ರಧಾನ ಪಾತ್ರಗಳನ್ನು ನೀವು ಸರಿಯಾಗಿ ಅವಗಾಹನೆ ಮಾಡಿಕೊಳ್ಳಬೇಕಾದರೆ ಜಾಬಾಲಿಯ ಪೀಠಿಕೆಯನ್ನು ಒಂದು ಬಾರಿ ಓದುವುದು ಅಗತ್ಯವೆಂದು ಭಾವಿಸುತ್ತೇನೆ.’ ಎನ್ನುವ ಉಪದೇಶಾತ್ಮಕ ಮಾತುಗಳಿಂದಾಗಿ ಅವರ ಒಟ್ಟು ನಾಟಕ ಬರವಣಿಗೆಯು ಒಂದು ಸೂತ್ರಬದ್ಧ ಪುರಾಣವೆಂಬುದನ್ನು ಸೂಚಿಸುತ್ತಾರೆ. (ಎಷ್ಟೇ ಹುಡುಕಾಡಿದರೂ ನನಗೆ ಜಾಬಾಲಿ ಕೃತಿ ಸಿಗಲಿಲ್ಲ. ಅಷ್ಟರ ಮಟ್ಟಿಗೆ ಈ ವಿಮರ್ಶೆಯೂ ಕಿಂಚಿದೂನವೇ.)’’ ಎಂದು ಬರೆದಿದ್ದೆ. (ನನ್ನ ‘ಹಳತಿಗೆ ಹೊಳಪು ಮತ್ತು ಇತರ ಸಾಹಿತ್ಯ ಪ್ರಬಂಧಗಳು’ ಪ್ರ: ನವಕರ್ನಾಟಕ ಪ್ರಕಾಶನ- 2020 ಈ ಕೃತಿಯಲ್ಲಿ ಮೇಲೆ ಹೇಳಿದ ಲೇಖನವಿದೆ.)

ಇದಾದ ಕೆಲವು ಸಮಯದ ಬಳಿಕ ನನಗೆ ‘ಜಾಬಾಲಿ’ ನಾಟಕ ಕನ್ನಡಾನುವಾದದಲ್ಲಿ ಸಿಕ್ಕಿತು. ಅದನ್ನು ಹರಿಹರಪ್ರಿಯ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿರುವ ಕನ್ನಡದ ಹಿರಿಯ ಲೇಖಕ ಶ್ರೀ ಸಾತವಲ್ಲಿ ವೆಂಕಟವಿಶ್ವನಾಥರು 1979ರಷ್ಟು ಹಿಂದೆಯೇ ಅನುವಾದಿಸಿ ಪ್ರಕಟಿಸಿದ್ದರು. ಅವರೇ ತಮ್ಮ ಈ ಕೃತಿಯ ಮುದ್ರಿತ ಪ್ರತಿ ಲಭ್ಯವಿಲ್ಲದ್ದರಿಂದ ಅದರ ಫೋಟೊ ಪ್ರತಿಯನ್ನು ನನಗೆ ಒದಗಿಸಿಕೊಟ್ಟರು. ಅವರ ಸೌಜನ್ಯ ಮತ್ತು ಔದಾರ್ಯಕ್ಕೆ ನಾನು ಶರಣು. ರಾಮಾಯಣ ಮೊದಲು ಬರೆದರೋ ಮಹಾಭಾರತ ಮೊದಲು ಬರೆದರೋ ಎಂಬ ಜಿಜ್ಞಾಸೆಯಿದೆ. ಮಹಾಭಾರತದಲ್ಲಿ ಬಂದ ರಾಮಾಯಣದ ಉಲ್ಲೇಖಗಳನ್ನು ಜೋಡಿಸಿ ರಾಮಕಥೆ ಸೃಷ್ಟಿಯಾಯಿತೆಂಬ ವಾದ ಒಂದೆಡೆ; ಹಾಗಿಲ್ಲ, ರಾಮಾಯಣವೇ ಮೊದಲು ಎಂಬ ವಾದ ಇನ್ನೊಂದೆಡೆ. ಪರ-ವಿರೋಧವಾಗಿ ವಿವಿಧ ವಾದಗಳು ತಲೆಯೆತ್ತಿವೆ. ‘ಜಾಬಾಲಿ’ಯ ಪೀಠಿಕೆಯಲ್ಲಿ ಜರ್ಮನಿಯ ಸಂಸ್ಕೃತ ಭಾಷಾ ವಿದ್ವಾಂಸ ಡಾ. ಮಾರಿಸ್ ವಿಂಟರ್‌ನಿಟ್ಜ್ ಅವರನ್ನು ಉಲ್ಲೇಖಿಸಿ ನಾರ್ಲರು ‘‘ರಚನಾಶಿಲ್ಪವನ್ನು ಪರಿಗಣಿಸಿದರೂ ಮಹಾಭಾರತವು ಗ್ರಂಥಸ್ಥವಾದ ತರುವಾಯವೇ ರಾಮಾಯಣ, ಕುಶಲವರು ಹಾಡಿ ಕೇಳಿಸುವ ವೀರಗಾಥೆ ರೂಪವನ್ನು ಬಿಟ್ಟು, ಅಕ್ಷರಬದ್ಧ ಕಾವ್ಯರೂಪವನ್ನು ಧರಿಸಿದಂತೆ ಅಂದುಕೋಬೇಕಾಗಿ ಬರುತ್ತದೆ’’ ಮತ್ತು ‘‘ಮಹಾಭಾರತ ಪಾತ್ರಗಳಲ್ಲಿ ಕಂಡುಬರುವ ಆವೇಶಕಾವೇಷಗಳು, ಅವರ ಕ್ರೌರ್ಯ ಕಾಠಿಣ್ಯಗಳು, ಒಂದೇ ಮಾತಿನಲ್ಲಿ (ಹೇಳುವುದಾದರೆ) ಅವರ ‘ಹಸಿತನ’ ರಾಮಾಯಣ ಪಾತ್ರಗಳಲ್ಲಿ ಅಷ್ಟಾಗಿ ಇಲ್ಲ.

ಮಹಾಭಾರತದ ತರುವಾಯವೇ, ಸಭ್ಯತಾ ಸಂಸ್ಕೃತಿಗಳು ಮತ್ತು ಪರಿಣತಿ ಪಡೆದ ತರುವಾಯವೇ, ರಾಮಾಯಣ ಗ್ರಂಥಸ್ಥವಾಗಿದೆ ಎಂಬ ಅಭಿಪ್ರಾಯವನ್ನು ಇದು ಮತ್ತಷ್ಟು ಬಲಪಡಿಸುತ್ತದೆ.’’ ಎಂದು ಅಭಿಪ್ರಾಯಪಡುತ್ತಾರೆ. ಮುಂದೆ ‘ಕೃಷ್ಣಾರ್ಜುನರನ್ನು, ಯುಧಿಷ್ಠಿರನನ್ನು ಹೆಸರಿಸಿದ ಪಾಣಿನಿಯಾಗಲಿ, ಪತಂಜಲಿಯಾಗಲಿ ರಾಮನ ಹೆಸರೆತ್ತಲಿಲ್ಲ.’ ಮುಂತಾದ ವಾದಗಳಿವೆ. ಈ ವಾದಗಳೇನೇ ಇದ್ದರೂ ಅವು ಇಂದಿಗೆ ಅಪ್ರಸ್ತುತ. ಅವು ನಮಗಿಂತ ಮೊದಲು ರಚನೆಯಾದ ಕಾವ್ಯಗಳು ಎಂಬ ಪ್ರಮೇಯವೇ ಅನುಕೂಲ; ಸಾಮಾಜಿಕವಾಗಿಯೂ ಅದು ಹಿತ. ಯಾರೋ ಒಬ್ಬರು ಈ ಜಗತ್ತು ಇನ್ನು ಹತ್ತು ಸಾವಿರ ವರ್ಷಗಳಲ್ಲಿ ನಾಶವಾಗುತ್ತದೆಂದು ಭಾಷಣ ಮಾಡುತ್ತಿದ್ದರಂತೆ. ಆಗ ಹಿಂದಿನ ಸಾಲಿನಲ್ಲಿ ಕುಳಿತ 90 ವರ್ಷಗಳನ್ನು ಮೀರಿದವರೊಬ್ಬರು ‘‘ಕೇಳಿಸಿಲ್ಲ, ಎಷ್ಟು ವರ್ಷ?’’ ಎಂದು ಪ್ರಶ್ನಿಸಿದರಂತೆ. ಆಗ ಭಾಷಣಕಾರರು ‘‘ಹತ್ತು ಸಾವಿರ.. ಹತ್ತು...’’ ಎಂದು ಕೈಸನ್ನೆಯ ಸಹಿತ ಹೇಳಿದರಂತೆ. ಪ್ರಶ್ನಿಸಿದ ಹಿರಿಯರು ಸಮಾಧಾನದಿಂದ ‘‘ಸರಿ, ನಾನೆಲ್ಲೋ ಐದು ಸಾವಿರ ವರ್ಷವೆಂದು ತಿಳಿದು ಗಾಬರಿಯಾಗಿದ್ದೆ!’’ ಎಂದು ಹೇಳಿ ಕುಳಿತರಂತೆ. ಇತರ ಸಭಿಕರು ಇವರ ವಯಸ್ಸಿಗೆ ಐದು ಸಾವಿರವಾದರೇನು, ಹತ್ತು ಸಾವಿರವಾದರೇನು ಎಂದು ಆಡಿಕೊಂಡರಂತೆ. ವಯಸ್ಸಾದವರಿಗೆ ಅಂತ ಅಲ್ಲ, ತಲೆಮಾರುಗಳಿಗೇ ಅದು ತಲುಪದಷ್ಟು ದೂರ!

ಯಾವ್ಯಾವುದೊ ಕಾರಣಕ್ಕೆ ಈ ಲೇಖನ ವಿಳಂಬವಾಯಿತು. ಪ್ರಾಯಃ ಈ ಕೃತಿ ‘ಸೀತೆಯ ಭವಿಷ್ಯ’ ಲೇಖನದ ಸಂದರ್ಭದಲ್ಲಿ ಲಭ್ಯವಾಗಿರುತ್ತಿದ್ದರೆ ಅದರ ಸ್ವರೂಪ ಬದಲಾಗುತ್ತಿತ್ತೇನೋ ಗೊತ್ತಿಲ್ಲ. ಹೇಗೂ ಇರಲಿ, ಇದೀಗ ‘ಜಾಬಾಲಿ’ಯ ಕುರಿತು ಬರೆಯಲು ಒಂದು ಅವಕಾಶ ಸಿಕ್ಕಿದೆ. ಹೊಸದನ್ನು ಪರಿಚಯಿಸಿದ ಆನಂತರ ಹಳತನ್ನು ತಲುಪುತ್ತಿದ್ದೇನೆ. ಮಹಾಭಾರತದ ಆನಂತರ ರಾಮಾಯಣ ಬರೆದ ಪ್ರಮೇಯ ಇಲ್ಲಿಗೆ ಸರಿಹೋದೀತೇನೋ!

ಹರಿಹರಪ್ರಿಯರು ತೆಲುಗು ಭಾಷೆಯನ್ನು ಚೆನ್ನಾಗಿ ಬಲ್ಲವರು. (ನಾರ್ಲರಂತೆ ಹರಿಹರಪ್ರಿಯರಿಗೂ ತೆಲುಗು ಮಾತೃಭಾಷೆ.) ಈ ನಾಟಕವನ್ನು ಚೆನ್ನಾಗಿ ಅಂದರೆ ಮೂಲದ ನಾಡಿಬಡಿತದೊಂದಿಗೆ ಅನುವಾದಿಸಿದ್ದಾರೆ. ಅವರೇ ಸೀತೆಯ ಭವಿಷ್ಯವನ್ನೂ ಅನುವಾದಿಸಿದ್ದಾರೇನೋ ತಿಳಿಯದು. ಕೃತಿಯ ಆರಂಭದಲ್ಲಿ ಹರಿಹರಪ್ರಿಯರು ‘ಕಿವಿಮಾತು’ ಬರೆದಿದ್ದಾರೆ. ಅದರಲ್ಲಿ ಕೊನೆಗೆ ‘‘ಕನ್ನಡಿಗರು ಅದರಲ್ಲಿಯೂ ಹಿಂದೂಗಳು ತಪ್ಪದೆಯೇ ಈ ಕೃತಿಯನ್ನು ಓದಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.’’ ಎಂದು ಬರೆದಿದ್ದಾರೆ. ಈ ವಾಕ್ಯದ ಮಹತ್ವವನ್ನು ಗಮನಿಸಬೇಕಾದರೆ ನಾಟಕ ಮತ್ತು ಅದರ ಪೀಠಿಕೆಯನ್ನೋದಬೇಕು. ಸೀತೆಯ ಭವಿಷ್ಯದಲ್ಲಿ ಹೇಳಿದಂತೆ ನಾರ್ಲರು 32 ಪುಟಗಳ ಈ ನಾಟಕಕ್ಕೆ ಸುಮಾರು 75 ಪುಟಗಳ ಪೀಠಿಕೆಯನ್ನು ಬರೆದಿದ್ದಾರೆ. ಇದು ನಾಟಕಕ್ಕೆ ಪ್ರವೇಶಿಕೆಯಾಗಿದೆ.

ಜಾಬಾಲಿ ರಾಮಾಯಣದಲ್ಲಿ ಬರುವ ಅಷ್ಟೇನೂ ಪ್ರಮುಖವಲ್ಲದ ಒಂದು ಪಾತ್ರ; ಋಷಿ. ಪುರಾಣದ ಬೇರುಗಳನ್ನು ಅರಸಿದರೆ ಅಂತಹ ಹೆಸರಿರುವ ಹಲವು ವ್ಯಕ್ತಿಗಳಿದ್ದರೂ ಪ್ರಮುಖವಾದದ್ದು ರಾಮಾಯಣ ಕಾಲದ ಮಹರ್ಷಿ ಜಾಬಾಲಿ. ಈತ ಅಯೋಧ್ಯೆಯ ಋತ್ವಿಜರಲೊಬ್ಬ. ಭರತನೊಂದಿಗೆ ಚಿತ್ರಕೂಟಕ್ಕೆ ಬಂದು ರಾಮನನ್ನು ಮರಳಿ ತರಲು ಯತ್ನಿಸಿದ ತಂಡದವನು. ಈತನ ಕುರಿತು ಒಂದು ನಾಟಕವನ್ನು ಬರೆಯವುದಕ್ಕೇನಿದೆ ಎಂದು ಸಂಪ್ರದಾಯಸ್ಥರು ಗೋಗರೆಯುವುದುಂಟು. ಆದರೆ ನಾರ್ಲರ ನಾಟಕವನ್ನು ಅದರ ಪೀಠಿಕೆಯೊಂದಿಗೆ ಓದಿದರೆ ಜಾಬಾಲಿಯೂ ಯಾಕೆ ಮುಖ್ಯನಾಗುತ್ತಾನೆಂಬುದು ಅರ್ಥವಾದೀತು. ಮೊದಲು ನಾಟಕವನ್ನು ಗಮನಿಸೋಣ: ಇಲ್ಲಿನ ಜಾಬಾಲಿ ವಯೋವೃದ್ಧ. ವೇದವೇದಾಂಗ ಪಂಡಿತ. ರಾಮ 17ರ ಹದಿಹರೆಯದವನು. ನಾಟಕದ ಸಂದರ್ಭದಲ್ಲಿ ಆತ ಉತ್ಸಾಹಿಯೇನೂ ಅಲ್ಲ; ಮಾನಸಿಕ ಶಿಶಿರ ಶೈಥಿಲ್ಯದಿಂದ ಬಳಲುತ್ತಿರುವವನು. ಜಾಬಾಲಿಗಿಂತಲೂ ಹಿರಿಯನಾದ ವಸಿಷ್ಠ ಜಾಬಾಲಿಗಿಂತಲೂ ದೇಹದಾರ್ಢ್ಯ. ಸಂಪ್ರದಾಯಸ್ಥ ಪುರೋಹಿತ. ಈ ಮೂರೇ ಪಾತ್ರಗಳು ಈ ನಾಟಕದ ತ್ರಿಕೋನಗಳು. ಜಾಬಾಲಿ ರಾಮನಿಗಾಗಿ ಕಾಯುವ ಶಬರಿಯಂತಲ್ಲ; ಬದಲಾಗಿ ಪರಮರಹಸ್ಯವನ್ನು ಹೇಳಸಲುವಾಗಿ ರಾಮನನ್ನು ಬರಹೇಳಿ ಕಾಯುತ್ತಿರುವವನು. ರಾಮನೊಂದಿಗೆ ಆತ ತಳೆಯುವ ನಿಲುವು ವಸಿಷ್ಠರಿಗೆ ಹಿಡಿಸದು ಎಂಬ ಸಂಕೇತ ಆರಂಭದಲ್ಲೇ ಇದೆ: ‘‘ರಾಘವಾ! ನಿನಗೆ ಹಿತವನ್ನು ಹೇಳಬಯಸುತ್ತಿರುವೆ-ಅಷ್ಟೆ! ನಿನಗೆ ಹಿತವಾದದ್ದು, ಅನ್ಯರಿಗೆ ಅಹಿತವಾಗಬಹುದು; ಮುಖ್ಯವಾಗಿ ನಮ್ಮ ವಸಿಷ್ಠರಿಗೆ.’’

ಮುಂದೆ ಜಾಬಾಲಿಯು ರಾಮನು ಮತ್ತೆ ಅಯೋಧ್ಯೆಗೆ ಬರಬೇಕಾದ ಅಗತ್ಯ-ಅನಿವಾರ್ಯಗಳನ್ನು ಹೇಳುತ್ತಾನೆ. ಮೊದಲಿಗೆ ಆತನ ರಾಜ್ಯಾಭಿಷೇಕವೇ ಒಂದು ರಾಜಕೀಯವೆಂದು ಪ್ರತಿಪಾದಿಸುತ್ತಾನೆ. ಅದನ್ನು ರಾಮನು ಒಪ್ಪದಿದ್ದಾಗ ಆತನು ರಾಜಧರ್ಮವನ್ನು ಬಳಸಿಕೊಳ್ಳುತ್ತಾನೆ. ರಾಜ್ಯಪ್ರಲೋಭವು ಭರತನನ್ನೂ ಕೆಡುಕನಾಗಿ ಮಾಡಬಹುದೆಂದು ರಾಜ್ಯ ಮತ್ತೆ ರಾಮನದ್ದಾಗದೆಂದೂ ಸಂಶಯ ತಾಳುತ್ತಾರೆ. ಪ್ರಜಾಹಿತಕ್ಕಿಂತ ದೊಡ್ಡ ಕರ್ತವ್ಯವು ರಾಜನಿಗಿಲ್ಲವೆನ್ನುತ್ತಾನೆ. ಚಂಚಲನಾಗಿ ವರ್ತಿಸಿದ ದಶರಥನ ಮಾತನ್ನು ಪಾಲಿಸಬೇಕಾಗಿಲ್ಲವೆಂದೂ ಅದಕ್ಕೆ ವಿರೋಧವಾದ ಧರ್ಮಶಾಸ್ತ್ರಗಳು ಉಲ್ಲಂಘನೀಯವೆಂದು ವಾದಿಸುತ್ತಾನೆ. ವಸಿಷ್ಠರು ಪ್ರತಿಪಾದಿಸುವ ಧರ್ಮವು ಪುರೋಹಿತಶಾಹಿ ಹಿತವನ್ನು ಕಾಯುವುದೇ ಹೊರತು ಶಾಶ್ವತ ನೆಮ್ಮದಿ-ಸುಖವನ್ನು ನೀಡದೆನ್ನುತ್ತಾನೆ. ಈ ವಾದವು ರಾಮನ ದೃಷ್ಟಿಗೆ ‘ನಾಸ್ತಿಕವಾದ’ವಾಗುತ್ತದೆ. ಕ್ಷತ್ರಿಯನಾದ ರಾಮನು ವೈದಿಕಧರ್ಮ ಪ್ರತಿಪಾದಕನಾಗಿಯೂ ಬ್ರಾಹ್ಮಣ ಜಾಬಾಲಿಯು ವೈದಿಕಧರ್ಮ ವಿರೋಧಿಯಂತೆಯೂ ಅಭಿವ್ಯಕ್ತಗೊಳ್ಳುತ್ತಾರೆ. ರಾಮನು ಮತ್ತೆ ಬರಬೇಕೆನ್ನುವುದು ಭರತನೂ ಸೇರಿದಂತೆ ಎಲ್ಲರ ಆಶಯ. ಅದಕ್ಕಾಗಿ ಜಾಬಾಲಿಯು ಅನುಸರಿಸುವ ವಿಧಾನವು ಪ್ರತ್ಯೇಕ. ರಾಮನಲ್ಲಿ ಅದನ್ನು ಖಂಡಿಸುವ ವಾದಗಳಿಲ್ಲ. ಆತನು ಅದನ್ನು ‘ಯುಕ್ತಿಪ್ರಧಾನ’ವೆಂದು ಅಲ್ಲಗಳೆಯುತ್ತಾನೆ.

‘ಒಳ್ಳೆಯವಾಗಿ ಕಂಡು ಬರುತ್ತಿದ್ದರೂ, ನಿಮ್ಮ ನುಡಿಗಳು ಉಪಯುಕ್ತವಾದವಲ್ಲ’ ಎನ್ನುತ್ತಾನೆ. ಹೀಗೆ ತರ್ಕವನ್ನು ಮೀರಿ ಆತನ ನಿಲುವು ನಿಶ್ಚಿತವಾಗುವಷ್ಟರಲ್ಲಿ ವಸಿಷ್ಠರು ಆಗಮಿಸುತ್ತಾರೆ. ಅವರಿಗೆ ಜಾಬಾಲಿಯ ಉದ್ದೇಶವು ಪ್ರಶ್ನಾರ್ಹ. ಅವರೆದುರು ಜಾಬಾಲಿಯು ತಾನು ರಾಮನನ್ನು ಪರೀಕ್ಷಿಸಿದ್ದಾಗಿಯೂ ಎಷ್ಟಕ್ಕೂ ರಾಮನು ತನ್ನ ನಿರ್ಧಾರದಿಂದ ವಿಚಲಿತನಾಗುತ್ತಿಲ್ಲವೆಂದೂ ಹೇಳುತ್ತಾನೆ. ರಾಮನು ಅಚ್ಚರಿ ಮತ್ತು ಆಘಾತಗೊಂಡು ಜಾಬಾಲಿಯ ಕುರಿತು ವಸಿಷ್ಠರಲ್ಲಿ ‘ಈತ ಮುನಿರೂಪದಲ್ಲಿರುವ ನಾಸ್ತಿಕ’ನೆಂದು ಜರೆಯುತ್ತಾನಾದರೂ ವಸಿಷ್ಠರು ಜಾಬಾಲಿಯನ್ನು ಶಂಕಿಸಬೇಕಾದ್ದಿಲ್ಲವೆಂದು ನುಡಿಯುತ್ತಾರೆ. ಅಯೋಮಯ ಸ್ಥಿತಿಯ ರಾಮನು ‘ಯಾವುದು ನಿಜ, ಯಾವುದು ಸುಳ್ಳು? ಯಾವುದು ವಾಸ್ತವ, ಯಾವುದು ಕಪಟ?’ ಎಂಬ ಗೊಂದಲಕ್ಕೆ ತಲುಪುತ್ತಾನೆ. ಇಡೀ ನಾಟಕವು ದುರ್ಗಮವಾದ ಧರ್ಮಸಿದ್ಧಾಂತಗಳನ್ನು ಪ್ರಶ್ನಿಸುತ್ತದೆ. ಅಯೋಧ್ಯೆಯ ರಾಜವಂಶವೂ ರಾಜಕಾರಣದ ಗೂಡಾಗಿ, ಮನುಷ್ಯ ಸಹಜ ಲೋಪಗಳ ಬೀಡಾಗಿ ಕಾಣುತ್ತದೆ. ಇದು ಸಹಜವೂ ಹೌದು. ಒಂದು ವೇಳೆ ರಾಮನ ವನವಾಸವು ಧರ್ಮಪರವೇ ಆಗಿದ್ದರೆ ಭರತನು ರಾಮದರ್ಶನಕ್ಕೆ ಬಂದು ಆತನನ್ನು ಒಲಿಸಿ ಕರೆದುಕೊಂಡು ಹೋಗಲು ಮಾಡುವ ಪ್ರಯತ್ನವು ತೀರಾ ಅಧರ್ಮವೂ ಕೃತಕವೂ ಆಗುತ್ತದೆ. ಇದರ ಹಿನ್ನೆಲೆಯಲ್ಲಿ ಜಾಬಾಲಿಯು ಹೇಳುವ ತರ್ಕಗಳು ಪೌರಾಣಿಕ ಸತ್ಯವಾಗಿಯೂ ಸಾಧುವೆನಿಸುತ್ತದೆ. ಪ್ರಾಯಃ ರಾಜಧರ್ಮದ ಸಿದ್ಧತರ್ಕಗಳನ್ನು ಪ್ರಶ್ನಿಸುವುದೇ ಜಾಬಾಲಿಯ ಮೂಲಕ ಚಿತ್ರಿಸಲ್ಪಟ್ಟಿದೆ.

ನಾಟಕದ ಪೀಠಿಕೆಯಲ್ಲಿ ನಾರ್ಲರು ಸಂಸ್ಕೃತ ರಾಮಾಯಣದ ಅಂಶಗಳನ್ನೇ ಎತ್ತಿಹಿಡಿದು ಅದರ ಮೌಲ್ಯಗಳನ್ನು ಪ್ರಶ್ನಿಸುತ್ತಾರೆ. ಜೊತೆಗೆ ರಾಮಾಯಣವು ಒಂದು ಕಥೆಯಾದ್ದರಿಂದ ಅದನ್ನು ಇತಿಹಾಸವಾಗಿ ಕಾಣಬಾರದೆಂದು ಎಚ್ಚರಿಸುತ್ತಾರೆ. ‘‘ಚರಿತ್ರೆ ಕಥೆಯಾಗಬಹುದು; ಕಥೆ ಮಾತ್ರ ತಪ್ಪದೆ ಚರಿತ್ರೆಯಾಗಬೇಕಾದುದಿಲ್ಲ. ಪುರಾಣದಲ್ಲಿ ಇತಿಹಾಸ ಬೀಜಮಾತ್ರವಾಗಿ ಇರಬಹುದು; ಅಷ್ಟುಮಾತ್ರಕ್ಕೆ ಪುರಾಣ ಇತಿಹಾಸವಾಗಿಬಿಡುವುದಿಲ್ಲ. ಕಾವ್ಯ ಸ್ವಲ್ಪಮಟ್ಟಿಗೆ ವಾಸ್ತವಿಕ ಸಂಘಟನೆಗಳ ಮೇಲೆ ಕಾಲೂರಬಹುದು; ಆದರೆ ಕಲ್ಪನೆಯಲ್ಲಿ ಪ್ರಾಗಲ್ಭ್ಯವನ್ನು ತೋರಿಸಲಾರದ್ದು ಉತ್ತಮ ಕಾವ್ಯವಾಗಲಾರದು.’’ ಎನ್ನುವ ಮೂಲಕ ರಾಮಾಯಣದ ಸಾಮಾಜಿಕ ವ್ಯಾಪ್ತಿಯನ್ನೂ ಪ್ರಸ್ತುತತೆಯ ಮಿತಿಯನ್ನೂ ಸಾರುತ್ತಾರೆ. ರಾಮಾಯಣದಲ್ಲಿನ ಸಂಗತಿಗಳನ್ನು ವಾಸ್ತವವೆಂದು ಹೇಳುವುದಕ್ಕೂ ಅದು ಕಾವ್ಯಸತ್ಯವೆಂದು ಹೇಳುವುದಕ್ಕೂ ಅಂತರವಿದೆ. ನಾರ್ಲರು ಅದರ ತರ್ಕಬದ್ಧತೆಯ, ತರ್ಕಶುದ್ಧತೆಯ, ಅಸಂಗತಗಳನ್ನು ದರ್ಶಿಸುತ್ತಾರೆ. ಸೀತಾರಾಮಲಕ್ಷ್ಮಣರು ಸಸ್ಯಾಹಾರಿಗಳಾದರೇನು ಮಾಂಸಾಹಾರಿಗಳಾದರೇನು, ಓದುಗರಿಗೆ ಮುಖ್ಯವಾಗಬಾರದು. ಆದರೆ ಅವರನ್ನು ಸದಾಚಾರಿಗಳಾಗಿಸುವ ಅವಸರದಲ್ಲಿ ವೈದಿಕರು ತಮ್ಮ ಜೀವನ ಪದ್ಧತಿಗೆ ಒಗ್ಗಿಸುವ ಯತ್ನಗಳನ್ನು ಅವರು ಖಂಡಿಸುತ್ತಾರೆ.

ಸುಂದರ ಕಾಂಡದ 36ನೇ ಸರ್ಗದಲ್ಲಿ ಬರುವ ‘‘ನಿನ್ನ ವಿಯೋಗ ದುಃಖದಿಂದ ನಿನ್ನ ಗಂಡ ಮಾಂಸವನ್ನು ತಿನ್ನುತ್ತಿರಲಿಲ್ಲ; ಮದ್ಯವನ್ನು ಕುಡಿಯುತ್ತಿರಲಿಲ್ಲ’’ ಎಂದು ಹನುಮಂತನು ಸೀತೆಗೆ ಹೇಳುವ ಮಾತುಗಳನ್ನು ಬೇಕೆಂದೇ ಭಕ್ತರು ಮುಚ್ಚಿಡುತ್ತಿದ್ದಾರೆಂದು ನಾರ್ಲ ಸೂಚಿಸುತ್ತಾರೆ. ಕಾವ್ಯಕಥೆಯಲ್ಲಿ ಅವೂ ಸಹಜವಾಗಿಯೇ ಬೆಳಕು ಕಾಣಬೇಕೆಂಬುದು ಅವರ ವಾದ. ನಮ್ಮ ಪೌರಾಣಿಕ ನಿಷ್ಠೆಯು ನಾವು ಪ್ರತಿಪಾದಿಸುವ ಆಚಾರವಿಚಾರಗಳಡಿ ಪ್ರತಿಪಾದಿಸಲ್ಪಡುವುದು ನಮ್ಮ ದೊಡ್ಡ ದುರಂತವೆನ್ನುತ್ತಾರೆ ನಾರ್ಲರು. ‘ಜಾಬಾಲಿ’ ಧರ್ಮದ ಪರ-ವಿರೋಧಗಳನ್ನು ಹಿತ-ಮಿತವಾಗಿ ಹೇಳುತ್ತದೆ. ಪೀಠಿಕೆಯ ವಾದಗ್ರಸ್ತ ನಿಲುವು ನಾಟಕದಲ್ಲಿಲ್ಲ. ಅಲ್ಲಿ ಕಲೆ ಗೆದ್ದಿದೆ. ಒಬ್ಬ ವಿಚಾರವಂತ ಲೇಖಕ ಸೃಜನಶೀಲ ಪ್ರಕಾರದಲ್ಲಿ ಅಭಿವ್ಯಕ್ತಿಸಿಕೊಂಡಾಗ ಅದರೊಳಗಾಗುವುದನ್ನು ನಾರ್ಲರು ಅನನ್ಯವಾಗಿ ಸಾಧಿಸಿದ್ದಾರೆ. ಜಾಬಾಲಿಯನ್ನು ಗೆಲ್ಲಿಸಬೇಕೆಂಬ ಹಠ ಲೇಖಕರಿಗಿಲ್ಲ. ಕೃತಿಯ ಹೊರಗಿನ ಪ್ರತಿಪಾದನೆಯನ್ನು ಮೀರಿ ಜಾಬಾಲಿ ಸೃಷ್ಟಿಯಾಗಿರುವುದು ಸಾಹಿತ್ಯದ ಬಹುದೊಡ್ಡ ಸಾಧನೆ; ಸಿದ್ಧಿ.

ಇದನ್ನು ಶಕ್ತವಾಗಿ, ಆಪ್ತವಾಗಿ ಅನುವಾದಿಸಿ ಕನ್ನಡಿಗರಿಗೆ ಒದಗಿಸಿದ ಹರಿಹರಪ್ರಿಯರು ಅಭಿನಂದನಾರ್ಹರು. ರಾಮಾಯಣವನ್ನು ಪ್ರಶ್ನಿಸುವ ಅಗತ್ಯ ಎಂದಿಗಿಂತ ಹೆಚ್ಚಾಗಿರುವ ಈ ಕಾಲದಲ್ಲಿ ಹರಿಹರಪ್ರಿಯರ ಕಿವಿಮಾತು ಪ್ರತಿಧ್ವನಿಸುತ್ತದೆ. ಇಂತಹ ಅನುವಾದಗಳು ಹೆಚ್ಚಾಗಬೇಕು ಮಾತ್ರವಲ್ಲ, ಮತ್ತೆ ಮತ್ತೆ ಮುದ್ರಣವಾಗಿ ಓದುಗರಿಗೆ ಒದಗಬೇಕು. ನಮ್ಮ ಸರಕಾರಿ ಆಶ್ರಿತ ಸಾರ್ವಜನಿಕ, ಸ್ವಾಯತ್ತ ಪ್ರಾಧಿಕಾರಗಳು, ಅಕಾಡಮಿಗಳು ಇಂತಹ ಕಾರ್ಯಗಳನ್ನು ಮಾಡಿದರೆ ಜನಹಿತ, ಸಾಹಿತ್ಯಹಿತ ಎರಡನ್ನೂ ಸಾಧಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)