varthabharthi


ರಾಷ್ಟ್ರೀಯ

ಕೇಂದ್ರ ಪಡೆಗಳ ವಿರುದ್ಧ ಜನರನ್ನು ಪ್ರಚೋದಿಸಿದ್ದಾರೆಂದು ಮಮತಾ ಬ್ಯಾನರ್ಜಿ ವಿರುದ್ಧ ಪ್ರಕರಣ ದಾಖಲು

ವಾರ್ತಾ ಭಾರತಿ : 15 Apr, 2021

ಕೋಲ್ಕತಾ, ಎ.15: ಕೇಂದ್ರ ಭದ್ರತಾ ಪಡೆಗಳನ್ನು ಘೇರಾವ್ ಮಾಡುವಂತೆ ಸ್ಥಳೀಯರನ್ನು ಪ್ರಚೋದಿಸಿದ ಆರೋಪದಲ್ಲಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕೂಚ್ಬೆಹಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.

ರಾಜ್ಯದಲ್ಲಿ ನಡೆದ ನಾಲ್ಕನೇ ಹಂತದ ಮತದಾನದ ಸಂದರ್ಭ ಸಿತಾಲ್ಕುಚಿ ಕ್ಷೇತ್ರದ ಮತಗಟ್ಟೆಯಲ್ಲಿ ಭದ್ರತಾ ಪಡೆಗಳು ಹಾಗೂ ಸ್ಥಳೀಯರ ಮಧ್ಯೆ ಘರ್ಷಣೆ ನಡೆದ ಬಳಿಕ ಭದ್ರತಾ ಪಡೆಗಳ ಗುಂಡೇಟಿನಿಂದ 4 ಮಂದಿ ಮೃತಪಟ್ಟಿದ್ದರು. ಈ ಘಟನೆಗೆ ಬಾಣೇಶ್ವರ ಪ್ರದೇಶದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಮತಾ ಬ್ಯಾನರ್ಜಿ ಮಾಡಿದ ಭಾಷಣ ಕಾರಣ. ಈ ರ್ಯಾಲಿಯಲ್ಲಿ ಮಾತನಾಡಿದ್ದ ಮಮತಾ, ಕೇಂದ್ರ ಪಡೆಗಳ ಮೇಲೆ ಆಕ್ರಮಣ ನಡೆಸುವಂತೆ ಸ್ಥಳೀಯರಿಗೆ ಕರೆ ನೀಡಿದ್ದರು ಎಂದು ಕೂಚ್ಬೆಹಾರ್ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸಿದ್ದಿಕ್ ಅಲಿ ಮಿಯಾ ಎಂಬವರು ದೂರು ನೀಡಿದ್ದರು.

ದೂರಿನ ಜತೆ, ಮಮತಾ ಬ್ಯಾನರ್ಜಿಯ ಭಾಷಣದ ವೀಡಿಯೋವನ್ನೂ ಠಾಣೆಗೆ ನೀಡಿದ್ದಾರೆ.

ಮಮತಾ ಬ್ಯಾನರ್ಜಿ ಭಾಷಣದಿಂದ ಪ್ರಚೋದಿತರಾದ ಜನರು(ಮಹಿಳೆಯರೂ ಇದ್ದರು) ಭದ್ರತಾ ಪಡೆಗಳ ಮೇಲೆ ಆಕ್ರಮಣ ನಡೆಸಿದ್ದರು ಎಂದು ದೂರಿನ ಜತೆಗಿನ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)