varthabharthi


ಬುಡಬುಡಿಕೆ

ಮನೆ ಗ್ಯಾಸ್ ಸಿಲಿಂಡರ್ ದೊಡ್ಡದಾ, ದೇಸ ದೊಡ್ಡದಾ?

ವಾರ್ತಾ ಭಾರತಿ : 18 Apr, 2021
ಚೇಳಯ್ಯ chelayya@gmail.com

‘‘ಲಾಕ್‌ಡೌನ್...ಲಾಕ್‌ಡೌನ್....’’ ಎಂದು ಟಿವಿಗಳು ಅಬ್ಬರಿಸುವುದನ್ನು ಕೇಳಿ ಬಸ್ಯ ಸಂಭ್ರಮದಿಂದ ಓಡಿ ಬಂದ. ಚೌಕೀದಾರರು ಕೊರೋನ ವಿರುದ್ಧ ಹೊಸ ರಣತಂತ್ರ ಹೆಣೆಯುತ್ತಿರುವುದನ್ನು ಮಾಧ್ಯಮಗಳು ರೋಚಕವಾಗಿ ವರ್ಣಿಸುತ್ತಿದ್ದವು. ಮತ್ತೆ ಲಾಕ್‌ಡೌನ್ ಹೇರಿ, ದೇಶವನ್ನು ಚೌಕೀದಾರರು ರಕ್ಷಿಸಲಿದ್ದಾರೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಭಕ್ತರಲ್ಲಿ ಭಕ್ತನಾದ ಬಸ್ಯ ರೋಮಾಂಚನಗೊಂಡ. ಒಳಗಡೆಯಿಂದ ಪತ್ನಿ ಕಮಲ ಮಾತ್ರ ಯದ್ವಾತದ್ವಾ ರೇಗಾಡತೊಡಗಿದಳು ‘‘ಈ ಚೌಕೀದಾರಂತಂದ್ದು....ಲಾಕ್‌ಡೌನ್ ಮಾಡ್ತಾನಂತೆ....ಊರೆಲ್ಲ ಚುನಾವಣೆ ಎಂದು ಬಟ್ಟೆ ಬಿಚ್ಚಿ ಓಡಾಡ್ಕೊಂಡು ಬಂದು, ಈಗ ಲಾಕ್‌ಡೌನ್....’’ ಅಲ್ಲಿಂದಲೇ ಬೀಸಿ ಒಗೆದ ಪಾತ್ರೆ ಬಸ್ಯನ ತಲೆಯನ್ನು ಮೊಟಕಿ ರಸ್ತೆಗೆ ಹೋಗಿ ಬಿತ್ತು.

‘‘ನೋಡೆ....ಮೋದಿಯೋರು ಈ ದೇಸಕ್ಕಾಗಿ ಎಷ್ಟು ಕಷ್ಟಪಡ್ತಾ ಇದ್ದಾರೆ. ಈಗ ಮತ್ತೆ ಲಾಕ್‌ಡೌನ್ ಹಾಕಿ ದೇಸವನ್ನು ಉಳಿಸೋಕೆ ಹೊರಟಿದ್ದಾರೆ. ಇಂತಹ ಚೌಕೀದಾರರು ಸಿಕ್ಕಿದ್ದು ನಮ್ಮ ಪುಣ್ಯ....’’ ಬಸ್ಯ ಸಮಾಧಾನಿಸಲು ನೋಡಿದ.

‘‘ಹೆಂಡ್ತಿ ಇಲ್ಲ ಮಕ್ಕಳಿಲ್ಲ. ಅಂತವನ ಕೈಗೆ ದೇಸ ಕೊಟ್ಟರೆ, ಅವನು ಇನ್ನೇನು ಮಾಡ್ತಾನೆ....?ನಿನ್ನನ್ನು ಕಟ್ಕಂಡು ನನ್ನ ಸ್ಥಿತಿ ಆ ಚೌಕೀದಾರನನ್ನು ಕಟ್ಕೊಂಡ ಹೆಣ್ಣು ಮಗಳಂತಾಗಿದೆ. ಒಂದಲ್ಲ ಒಂದು ದಿನ ನಿನ್ನ ತಲೆಯನ್ನು ಆ ಖಾಲಿ ಗ್ಯಾಸ್ ಸಿಲಿಂಡರ್‌ನಿಂದ ಒಡೆದು ಪುಡಿ ಮಾಡಲಿಲ್ಲ....ನನ್ನವ್ವಗೆ ನಾನು ಹುಟ್ಟಲೇ ಇಲ್ಲ ಅನ್ತೀನಿ...’’ ಕಮಲ ಸಿಡಿಯ ತೊಡಗಿದಳು. ಇಲ್ಲಿದ್ದರೆ, ಗ್ಯಾಸ್ ಸಿಲಿಂಡರ್ ಸ್ಫೋಟಿಸಿ ಬಿಡಬಹುದು ಎಂದವನೇ ಬಸ್ಯ ಮೆಲ್ಲಗೆ ಹೊರ ನಡೆದ.

ದಾರಿಯಲ್ಲಿ ಪತ್ರಕರ್ತ ಎಂಜಲು ಕಾಸಿಯನ್ನು ಕಂಡದ್ದೇ ಬಸ್ಯನ ಮುಖ ತಾವರೆ ಅರಳಿದಂತೆ ಅರಳಿತು. ನೇರವಾಗಿ ಕಾಸಿಯ ಬಳಿ ನಡೆದ. ‘‘ಕಾಸಿ ಅವರೇ...ಮತ್ತೆ ಲಾಕ್‌ಡೌನ್ ಅಂತೆ ನಿಜಾನ....’’ ಬಸ್ಯ ಒಳಗೊಳಗೆ ಆತಂಕಪಡುತ್ತಾ, ಹೊರಗೆ ಮಾತ್ರ ಸಂಭ್ರಮಿಸುತ್ತಾ ಕೇಳಿದ.

‘‘ಚುನಾವಣೆ ಮುಗಿಯಿತು. ಕುಂಭಮೇಳವೊಂದು ಮುಗಿದರೆ...ಆನಂತರ ಲಾಕ್‌ಡೌನ್ ಮಾಡಬಹುದು ಅಂತ ಕಾಣುತ್ತೆ....’’ ಕಾಸಿ ಉತ್ತರಿಸಿದ.

‘‘ನೋಡ್ರಿ...ನಮ್ಮ ಚೌಕೀದಾರರ ತಂತ್ರ ಎಂದರೆ ತಂತ್ರ. ಚುನಾವಣೆಯಲ್ಲಿ ಅಷ್ಟು ಜನರನ್ನು ಸೇರಿಸಿದರೂ ಕೊರೋನ ಜನರನ್ನು ಕಾಡಲಿಲ್ಲ. ಇದೀಗ ನೋಡಿ, ವಿಶ್ವದ ಎಲ್ಲ ದೇಶಗಳು ಕೊರೋನಕ್ಕೆ ಅಂಜಿ ಮನೆಯಲ್ಲಿ ಕುಳಿತಿರುವಾಗ ಕೋಟ್ಯಂತರ ಜನರನ್ನು ಸೇರಿಸಿ ಕುಂಭಮೇಳ ಮಾಡಲಿಲ್ಲವೇ? ಬೇರೆ ನಾಯಕರಿಗೆ ಇದು ಸಾಧ್ಯವಿತ್ತೇ? ಕುಂಭಮೇಳದ ಜನಜಾತ್ರೆ ನೋಡಿ ವಿಶ್ವ ಭಾರತದ ಕುರಿತಂತೆ ಬೆಚ್ಚಿ ಬಿದ್ದಿದೆಯಂತೆ’’ ಗುರು ಹೆಂಗ್ ಪುಂಗ್ಲಿಯವರು ಹೇಳಿಕೊಟ್ಟಿರುವುದನ್ನು ಬಸ್ಯ ಯಥಾವತ್ ಉರು ಹೊಡೆದು ಉದಿರಿಸತೊಡಗಿದ. ಈ ಬಸ್ಯನಿಗೆ ಏನೆಲ್ಲ ತಿಳಿದಿದೆ ಎಂದು ಕಾಸಿ ರೋಮಾಂಚನಗೊಂಡ. ‘‘ನಿಮ್ಮ ಪತ್ನಿ ಕಮಲ ಏನೆಂತಾಳೆ...?’’ ಕಾಸಿ ಕುತೂಹಲದಿಂದ ಕೇಳಿದ.

‘‘ಅವಳು ಇಷ್ಟು ದೇಸದ್ರೋಯಿ ಎಂದು ಗೊತ್ತಿದ್ರೆ ನಾನು ಆಕೇನಾ ಮದುವೇನೆ ಆಗುತ್ತಿರಲಿಲ್ಲ. ಮನೆ ಗ್ಯಾಸ್ ಸಿಲಿಂಡರ್ ದೊಡ್ಡದಾ, ದೇಸ ದೊಡ್ಡದಾ?’’ ಬಸ್ಯ ಮರು ಪ್ರಶ್ನಿಸಿದ.
‘‘ಗ್ಯಾಸ್ ಇಲ್ಲದೇ ಇದ್ದರೆ ಅಡುಗೆ ಮಾಡುವುದು ಹೆಂಗೆ?’’ ಕಾಸಿ ಮರು ಪ್ರಶ್ನಿಸಿದ.

‘‘ಅಡುಗೆ ದೊಡ್ಡದಾ, ದೇಸ ದೊಡ್ಡದಾ?’’ ಬಸ್ಯ ಪ್ರಶ್ನೆಗೆ ಮತ್ತೊಂದು ಪ್ರಶ್ನೆಯನ್ನು ಉತ್ತರವಾಗಿ ಎಸೆದ. ‘‘ಹೀಗೆ ಆದ್ರೆ ಹೆಂಡ್ತೀನೇ ನಿನ್ನನ್ನು ಬಿಟ್ಟು ಓಡಿ ಹೋಗ್ತಾಳೆ. ನೋಡ್ತಾ ಇರು....’’
‘‘ಹೆಂಡ್ತಿ ದೊಡ್ಡದಾ, ದೇಶ ದೊಡ್ದದಾ?’’ ಬಸ್ಯ ಮತ್ತೆ ಸವಾಲು ಹಾಕಿದ.

‘‘ಅಂದ್ರೆ ಹೆಂಡ್ತೀನಾ ಬಿಡುವುದಕ್ಕೆ ರೆಡಿಯಾಗಿದ್ದೀಯಾ ಅಂತಾಯಿತು...’’ ‘‘ಚೌಕೀದಾರರಿಗಾಗಿ ನಾನು ದೇಸ ಬಿಡುವುದಕ್ಕೂ ರೆಡೀನೇ....ಅವರು ನನಗೆ ದೇಸಕ್ಕಿಂತ ಮುಖ್ಯ. ಅವರಿಂದ ದೇಸ. ದೇಸದಿಂದ ಅವರಲ್ಲ....’’ ಬಸ್ಯ ಭಕ್ತಿಯ ಪರಾಕಾಷ್ಠೆಯನ್ನು ಮೆರೆದ.
‘‘ದೇಶಕ್ಕಿಂತ ಅವರು ಮುಖ್ಯ ಹೇಗೆ?’’ ಕಾಸಿ ಗಲಿಬಿಲಿಯಿಂದ ಕೇಳಿದ.
 ‘‘ದೇಸಕ್ಕೆ ಸೋಸಂತ್ರ ಬಂದದ್ದೇ ಅವರಿಂದ. ಕಾಸ್ಮೀರ ಭಾರತಕ್ಕೆ ಸೇರಿದ್ದು ಅವರಿಂದ. ಬಾಂಗ್ಲಾದೇಸಕ್ಕೆ ಸೋಸಂತ್ರ ಕೊಟ್ಟದ್ದು ಅವರೇ. ಇಮಾಲಯ ಪರ್ವತ ಕಂಡು ಹಿಡಿದದ್ದು ಅವರೇ. ಇಲ್ಲಿ ದೇಸ ಇತ್ತು ಅನ್ನೋದು ವಿದೇಸದ ಜನರಿಗೆ ತಿಳಿದದ್ದು ಅವರು ಬಂದ ಮೇಲೆ. ಅವರಿಲ್ಲದೆ ದೇಸ ಇಲ್ಲ...ಈಗ ಗೊತ್ತಾಯಿತ?’’
‘‘ಇಷ್ಟೆಲ್ಲ ಮಾಡಿದೋರು ಸಿಲಿಂಡರ್ ಸಿಗದ ಹಾಗೆ ಮಾಡಿಬಿಟ್ರಲ್ಲ?’’ ಕಾಸಿ ಬೇಜಾರಿನಿಂದ ಕೇಳಿದ.

‘‘ಎಲ್ಲ ಅವರೇ ಮಾಡಬೇಕೆಂದು ಹೇಳಿದರೆ ಹೇಗೆ? ಕಾಂಗ್ರೆಸ್‌ನೋರು ಇರೋದು ಯಾಕೆ ಮತ್ತೆ? ನೆಹರೂ, ಇಂದಿರಾಗಾಂಧಿ, ರಾಜೀವ್‌ಗಾಂಧಿ, ರಾಹುಲ್ ಗಾಂಧಿ ಇವರೆಲ್ಲ ಏನು ಮಾಡ್ತಾ ಇದ್ದಾರೆ?’’ ಬಸ್ಯ ಮತ್ತೆ ಪ್ರಶ್ನೆ ಹಾಕಿದ. ಕಾಸಿಗೆ ಅದೂ ಹೌದೆನ್ನಿಸಿತು.
 ‘‘ಆದರೆ ಕೊರೋನ ಜಾಸ್ತಿ ಆಗುತ್ತಿದೆಯಂತಲ್ಲ’’ ಕಾಸಿ ಮತ್ತೆ ಕೇಳಿದ.

‘‘ನೋಡಿ...ಕಳೆದ ವರ್ಸ ಲಾಕ್‌ಡೌನ್ ಮಾಡಿದಾಗ ಎಲ್ಲರೂ ಅವರಿಗೆ ಬೈದರು. ಲಾಕ್‌ಡೌನ್ ಮೂಲಕ ಅವರು ಭಾರತವನ್ನು ವಿಸ್ವ ಗುರು ಮಾಡಿದರು. ಈಗ ಮತ್ತೆ ಲಾಕ್‌ಡೌನ್ ಮಾಡ್ತಾರೆ....ಈ ಹಿಂದೆ ಎಷ್ಟು ಪ್ರಧಾನಿಗಳು ಬಂದರು. ಒಬ್ಬರಾದರೂ ಲಾಕ್‌ಡೌನ್ ಮಾಡಿದ್ರಾ....? ಅವರು ಅಂದೇ ಲಾಕ್‌ಡೌನ್ ಮಾಡಿದ್ದರೆ ಇವತ್ತು ಕೊರೋನ ಬರ್ತಾ ಇರಲಿಲ್ಲ....’’ ಬಸ್ಯ ವಾದಿಸಿದ. ‘‘ಅದೂ ಸರೀನೆ....ಆದರೆ ಕುಂಭಮೇಳದಿಂದ ಕೊರೋನ ಜಾಸ್ತಿ ಆಯಿತು ಅಂತಾರಲ್ಲ?’’ ಕಾಸಿ ಆತಂಕ ಪಟ್ಟ.

 ‘‘ದೇಸದ್ರೋಯಿಗಳು ಹಂಗೆಲ್ಲ ಹೇಳ್ತಾರೆ. ಗಂಗಾನದಿಯಲ್ಲಿ ಕೊರೋನ ವೈರಸ್‌ನ್ನು ಸಾಯಿಸುವ ಪವರ್ ಐತೆ. ಕುಂಭಮೇಳದಲ್ಲಿ ಯಾರೆಲ್ಲ ಸ್ನಾನ ಮಾಡಿದ್ದಾರೋ ಅವರ ಕೊರೋನ ಎಲ್ಲ ಗಂಗೆಯಲ್ಲಿ ಕೊಚ್ಚಿಕೊಂಡು ಹೋಗಿದೆ. ಯಾರೆಲ್ಲ ಗಂಗೆಯಲ್ಲಿ ಸ್ನಾನ ಮಾಡಿಲ್ಲವೋ ಅವರಿಗೆ ಕೊರೋನ ಬಂದಿದೆ. ಕೊರೋನ ಕಾಲದಲ್ಲಿ ಕೋಟ್ಯಂತರ ಜನರನ್ನು ಸೇರಿಸಿ ಮೇಳ ಮಾಡಿರುವುದು ಚೌಕೀದಾರರ ದೊಡ್ಡ ಸಾಧನೆ....ಕುಂಭಮೇಳ ಅವರು ವಿಸ್ವಕ್ಕೆ ಕೊಟ್ಟ ದೊಡ್ಡ ಕೊಡುಗೆ. ಕುಂಭಮೇಳದಿಂದಾಗಿ ದೇಸ ಇಸ್ವ ಗುರುವಾಯಿತು....ನಮೋ ಭಾರತ....ವಿಸ್ವ ಗುರುವೇ ನಮಃ’’ ಎಂದು ಭಕ್ತಿಯಿಂದ ಕಣ್ಣು ಮುಚ್ಚಿ ಕೈ ಮುಗಿದು ಚೌಕೀದಾರನನ್ನು ನೆನೆದುಕೊಂಡ.
ಬಸ್ಯ ಕಣ್ಣು ತೆರೆದಾಗ ಅಲ್ಲಿ ಕಾಸಿ ಇರಲಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)