ರಾಷ್ಟ್ರೀಯ
ಓರ್ವ ಕೊರೋನ ಪಾಸಿಟಿವ್ ವ್ಯಕ್ತಿ ಎಷ್ಟು ಮಂದಿಗೆ ಸೋಂಕು ಹರಡಬಲ್ಲ ಗೊತ್ತೇ ?

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಸೂಕ್ತ ಸುರಕ್ಷಿತ ಅಂತರ ಕಾಪಾಡಿಕೊಳ್ಳದಿದ್ದರೆ ಹಾಗೂ ಮಾಸ್ಕ್ ಧರಿಸದಿದ್ದರೆ ಒಬ್ಬ ಕೋವಿಡ್-19 ಸೋಂಕಿತ ವ್ಯಕ್ತಿ ಕನಿಷ್ಠ 406 ಮಂದಿಗೆ ಸೋಂಕು ಹರಡುವ ಸಾಮರ್ಥ್ಯ ಹೊಂದಿರುತ್ತಾನೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.
ಈ ಕುರಿತ ಅಧ್ಯಯನ ವರದಿಯನ್ನು ಸುದ್ದಿಗೋಷ್ಠಿಯಲ್ಲಿ ಸೋಮವಾರ ಉಲ್ಲೇಖಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗ್ರವಾಲ್, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಅನಿವಾರ್ಯ ಎಂದು ಪ್ರತಿಪಾದಿಸಿದರು.
ಒಬ್ಬ ಸೋಂಕಿತ ವ್ಯಕ್ತಿ ಒಂದು ತಿಂಗಳಲ್ಲಿ 406 ಮಂದಿಗೆ ಸೋಂಕು ಹರಡಬಲ್ಲ ಎನ್ನುವುದು ಹಲವು ವಿಶ್ವವಿದ್ಯಾನಿಲಯಗಳು ನಡೆಸಿದ ಸಂಶೋಧನೆಯಿಂದ ದೃಢಪಟ್ಟಿದೆ. "ಆದರೆ ಸೋಂಕಿತ ವ್ಯಕ್ತಿ ಶೇಕಡ 50ರಷ್ಟು ಸಂಪರ್ಕವನ್ನು ಕಡಿಮೆ ಮಾಡಿದರೆ 406ರ ಬದಲಾಗಿ ಕೇವಲ 15 ಮಂದಿಗೆ ಸೋಂಕು ಹರಡುತ್ತದೆ. ಸೋಂಕಿತ ವ್ಯಕ್ತಿ ಶೇಕಡ 75ರಷ್ಟು ಸಂಪರ್ಕವನ್ನು ಕಡಿಮೆ ಮಾಡಿದರೆ 2.5 ಮಂದಿಗೆ ಮಾತ್ರ 30 ದಿನಗಳಲ್ಲಿ ಸೋಂಕು ಹರಡುತ್ತದೆ" ಎಂದು ಲಾವ್ ಅಗ್ರವಾಲ್ ಹೇಳಿದರು. ಪ್ರಕರಣಗಳ ವೈದ್ಯಕೀಯ ನಿರ್ವಹಣೆ ಎಷ್ಟು ಮುಖ್ಯವೋ ಸಾಂಕ್ರಾಮಿಕವನ್ನು ನಿಯಂತ್ರಿಸುವುದು ಕೂಡಾ ಅಷ್ಟೇ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಮಾಸ್ಕ್ ಧರಿಸುವ ಅಗತ್ಯತೆಯನ್ನು ಒತ್ತಿ ಹೇಳಿದ ಅವರು, ಸೋಂಕಿತ ವ್ಯಕ್ತಿ ಮತ್ತು ಸೋಂಕು ಇಲ್ಲದ ವ್ಯಕ್ತಿ ಮಾಸ್ಕ್ ಧರಿಸಿದರೆ ಸೋಂಕು ಹರಡುವ ಸಾಧ್ಯತೆ ಕೇವಲ ಶೇಕಡ 1.5ರಷ್ಟು ಎಂದು ಸ್ಪಷ್ಟಪಡಿಸಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ











