varthabharthi


ಅನುಗಾಲ

ಬಡ ಪ್ರಜೆಗಳ ಬೇಸರಿನ ಬೇಗೆ

ವಾರ್ತಾ ಭಾರತಿ : 29 Apr, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಎಲ್ಲ ಶೋಷಣೆಗಳೂ ಸುಳ್ಳುಗಳೂ ಅಗತ್ಯಸೇವೆಯೇ ಆಗುತ್ತಿರುವಾಗ, ‘ಅಗತ್ಯ’ಗಳು ಹೀಗಿರುವಾಗ ಎಲ್ಲ ಹಿಂಸೆಗಳನ್ನೂ ತಾಳಿಕೊಳ್ಳುವುದೇ ಪ್ರಜೆಗಳ ಹಣೆಬರಹವಾಗುವುದು ಮತ್ತು ಕೋವಿಡ್-19ಕ್ಕಿಂತಲೂ ಹೆಚ್ಚು ಅಪಾಯವನ್ನು ತಂದೊಡ್ಡಬಲ್ಲ ಈ ನಿವಾರಣೋಪಾಯಗಳನ್ನು ಸಹಿಸುವ ಶಕ್ತಿಕೊಡು ತಂದೆ ಎಂದು ಪ್ರಾರ್ಥಿಸುವುದು ಅನಿವಾರ್ಯ. ಹೆಣದ ಬಣವೆಯ ಕೆಳಗೆ ಇನ್ನೂ ಸಾಯದೇ ಉಳಿದ ಮಗು ಅಳುವುದರ ಹೊರತು ಇನ್ನೇನು ಮಾಡಲು ಸಾಧ್ಯ?ರಾಜನೊಬ್ಬ ತನ್ನಲ್ಲಿ ಯಾರೂ ಸಾವಿನ ಸುದ್ದಿ ಹೇಳಬಾರದೆಂದೂ, ಹೇಳಿದವರಿಗೆ ಮರಣದಂಡನೆ ವಿಧಿಸಲಾಗುವುದೆಂದೂ ಘೋಷಿಸಿದ. ಆತನ ಆಪ್ತ ಜೀವವೊಂದು ಅಳಿದಾಗ ಯಾರೂ ಏನೂ ಹೇಳಲಿಲ್ಲ. ಎಲ್ಲರೂ ಮೌನವಾಗಿದ್ದರು. ಕೊನೆಗೆ ಒಬ್ಬನಲ್ಲಿ ವಿಚಾರಿಸಿದಾಗ ಆತ ಆ ಜೀವಿಯು ಮಲಗಿದೆ, ಉಸಿರಾಡುವುದಿಲ್ಲವೆಂದನಂತೆ. ಆಗ ರಾಜ ಅದು ಸತ್ತಿದೆಯೆಂದು ಹೇಳಬಾರದೇ ಎಂದಾಗ ಅದರ ಪರಿಣಾಮವನ್ನು ಆತ ನೆನಪಿಸಿದನಂತೆ. ಕರ್ನಾಟಕವು ಎಪ್ರಿಲ್ 21ರಿಂದ ಮೇ 4ರ ವರೆಗೆ ಅನ್ವಯವಾಗುವಂತೆ ರಾಜ್ಯಾದ್ಯಂತ ಮಿತಿಯುಳ್ಳ ದೈನಂದಿನ ಹಾಗೂ ವಾರಾಂತ್ಯದ ಸುಖಕ್ಕೆ ಪೂರ್ಣ ಕರ್ಫ್ಯೂ ವಿಧಿಸಿತ್ತು. ಈಗ ಒಂದು ವಾರದ ಪ್ರಯೋಗದ ಬಳಿಕ ಅದನ್ನು ಎರಡು ವಾರಗಳ ವರೆಗೆ ಪೂರ್ಣಾವಧಿಯ ಕರ್ಫ್ಯೂ ಆಗಿ ಪರಿವರ್ತಿಸಿದೆ. ಜನರಿಗೆ ತೊಂದರೆಯಾಗದಂತೆ (ಇದನ್ನು ‘ಬಡಜನರಿಗೆ ತೊಂದರೆಯಾಗುವಂತೆ’ ಎಂದು ತಿದ್ದಿ ಓದಿಕೊಳ್ಳಬೇಕು!) ಲಾಕ್‌ಡೌನ್ ಎಂಬ ಪದಕ್ಕಿಂತ ಕರ್ಫ್ಯೂ ಎಂಬ ಪದ ಹಿತವೇ ಇಂಪೇ ಬಲ್ಲವರು ಹೇಳಬೇಕು. ಅರ್ಧ ಡಝನ್‌ಗಿಂತ ಆರು ಸುಖ!, ಹುಚ್ಚ ಅಲ್ಲ ತಲೆಕೆಟ್ಟವ ಎಂಬ ಹಾಗೆ! ಕೇಂದ್ರವಂತೂ ತನ್ನ ಪಾಡಿಗೆ ತಾನು ಮನದ ಮಾತಿನಲ್ಲಿ ಹಾಯಾಗಿ ಮಲಗಿದೆ. ನಮ್ಮ ಕೆಲವು ಮಾಧ್ಯಮಗಳು ಸಹಜ ಉದಾರವಾದವೆಂಬಂತೆ ‘ಜನತಾ ಕರ್ಫ್ಯೂ’ ಎಂದೂ ನಾಮಕರಣಮಾಡಿವೆ. ತಾಯಿ ಎಷ್ಟೇ ನೋವುಪಟ್ಟರೂ ‘ಸುಖಪ್ರಸವ’ ಎಂದು ಹೆಸರಿಟ್ಟಂತೆ! ಹೇಗೂ ಇರಲಿ ಇದರ ಗುಣ-ಋಣ ವಿಶ್ಲೇಷಣೆಗೆ ಈ ಪದಗಳು ಅಡ್ಡಿ ಬರುವುದಿಲ್ಲ.

ಅಕ್ಷರಶಃ ರಾಜ್ಯ ಸರಕಾರದ ಅಧಿಕೃತ ಪ್ರಕಟನೆೆಯನ್ನು ಇಲ್ಲಿ ಉಲ್ಲೇಖಿಸ ಬೇಕಾಗಿಲ್ಲ. ಜನರಿಗೆ ಅದು ಅನುಭವಕ್ಕೆ ಬಂದಿದೆ. ಪೊಲೀಸರು ಮತ್ತಿತರ ಅಧಿಕಾರಿಗಳು ದಂಡಸೇವೆಯನ್ನು ಹೇರಲು ಇದು ‘ಸುವರ್ಣಾ’ವಕಾಶ. ಆದರೆ ಬಹುಪಾಲು ಚಟುವಟಿಕೆಗಳಿಗೆ ಮತ್ತು ಸೇವೆಗಳಿಗೆ ಕರ್ಫ್ಯೂ ವಿಧಿಸಲಾಗಿದೆ. ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯಾವ ಸರಕಾರವೂ ಜನರ ಮುಂದೆ ಹೋಗುವುದಿಲ್ಲ. ಒಮ್ಮೆ ಚುನಾವಣೆಯ ಪೂರ್ವದಲ್ಲಿ ಅಭ್ಯರ್ಥಿಗಳು ಮತ್ತು ಅವರ ನಾಯಕಮಣಿಗಳು ಭಿಕ್ಷುಕರಂತೆ ಮನೆಮನೆ (ಪ್ರಚಾರಕ್ಕೆ) ಹೋಗಿ ಕೈಮುಗಿದರೆ ಮತ್ತೆ ಇನ್ನೊಂದು ಚುನಾವಣಾಪೂರ್ವ ಪ್ರಚಾರದ ವರೆಗೆ ಜನರ ಬಳಿ ಸುಳಿಯುವುದೇ ಇಲ್ಲದ ಜನತಂತ್ರ ನಮ್ಮದು.

ಒಂದು ರೀತಿಯಲ್ಲಿ ಇದೂ ಸರಿ. ಏಕೆಂದರೆ ನಮ್ಮ ಜನತೆ ತಾವು ತಮ್ಮ ಹಕ್ಕುಗಳನ್ನು, ಭವಿಷ್ಯವನ್ನು ಮತಪಟ್ಟಿಗೆಯಲ್ಲಿ ಅಡವು ಇಟ್ಟು ಬದುಕುವ ಅವಕಾಶವನ್ನು ಕೇಳುತ್ತಾರೆ. ಸರಕಾರದ ಪರವಾಗಿ ಬೊಕ್ಕಸದ (ಅಂದರೆ ಜನರ) ಹಣದಲ್ಲೇ ಜನಪ್ರತಿನಿಧಿಗಳು ಮಾಡಬೇಕಾದ್ದನ್ನೇ ಮಾಡಿದರೂ ನಮ್ಮ ಜನರು ಈ ಜನಪ್ರತಿನಿಧಿಗಳು ಆಕಾಶದಿಂದ ತಮಗೆ ಐರಾವತವನ್ನು ತಂದುಕೊಟ್ಟಂತೆ ಮತ್ತು ತಮಗೆ ಬಂದ ಬಿಟ್ಟಿ ಉಡುಗೊರೆಯೆಂಬಂತೆ ಆರಾಧನಾಭಾವಕ್ಕಿಂತಲೂ ಹೆಚ್ಚಿನದ್ದಾದ ದಾಸ್ಯಭಾವದಿಂದ ತಮ್ಮ ಸ್ವಂತ ಹಣವನ್ನು ವೆಚ್ಚ ಮಾಡಿ ಫ್ಲೆಕ್ಸ್ ಬ್ಯಾನರುಗಳು, ಪತ್ರಿಕಾ ಮತ್ತು ಟಿವಿ ಜಾಹೀರಾತುಗಳು ಇವುಗಳ ಮೂಲಕ ಅಷ್ಠಾರ್ಚನೆ ಮಾಡಿ ಸಂಭ್ರಮಿಸುತ್ತಾರೆ. ಇಂತಹ ಕುರಿಗಳಿಗೆ ಜನಪ್ರತಿನಿಧಿಗಳೆಂಬ ತೋಳಗಳೇ ಕಾವಲು ಕಾಯಬೇಕು; ಇನ್ಯಾರು?


ಕಳೆದ ಲಾಕ್‌ಡೌನ್ ಮತ್ತದರ ಘೋರ ಪರಿಣಾಮವನ್ನು ಮರೆಯುವ ಮೊದಲೇ ಈ ಬಾರಿಯ ಈ ಹಿಂಬಾಗಿಲ ಓಟ ಆರಂಭವಾಗಿದೆ. ಇದು ಕುದುರೆಯ ಎದುರು ಕಟ್ಟಿದ ಹಸಿರುಹುಲ್ಲಿನ ಕಂತೆಯಂತೆ, ಮರೀಚಿಕೆಯಂತೆ ಮುಂದೆ-ಮುಂದೆ ಹೋಗುವ ಸಾಧ್ಯತೆಗಳೇ ಹೆಚ್ಚು. ಕಳೆದ ಬಾರಿ ಪ್ರಧಾನಿ ಕುರುಕ್ಷೇತ್ರದ 18 ದಿನ, ಆನಂತರ 21 ಹೀಗೆ ವಾರ-ವಾರ ಕಾಲೋಚಿತ ವ್ಯಾಯಾಮದ ಮೂಲಕ ತನ್ನ ಬಾಹುಗಳನ್ನು ವಿಸ್ತರಿಸಿದ್ದೇ ಇನ್ನೂ ಜನಮಾನಸದಿಂದ ಮರೆಯಾಗಿಲ್ಲ. ಈ ಬಾರಿ ಮೇ ಮಧ್ಯಭಾಗದಲ್ಲಿ ಕೋವಿಡ್-19 ಶಿಖರಾಗ್ರದಲ್ಲಿ ಸಂಚರಿಸಲಿದೆಯೆಂಬ ಆತಂಕಕಾರೀ ಭರವಸೆಯಿದೆ. ಬಜೆಟ್‌ನ ಹಾಗೆ ಇದರಲ್ಲೂ ಏನಿದೆ? ಏನಿಲ್ಲ? ಎಂದು ಹುಡುಕುವ ಮಂದಿಯೇ ಹೆಚ್ಚು. ಎಲ್ಲಾ ಶಿಕ್ಷಣ ಸಂಸ್ಥೆಗಳು, ಚಲನಚಿತ್ರ ಮಂದಿರಗಳು, ಅಂಗಡಿಮುಂಗಟ್ಟುಗಳು, ಷಾಪಿಂಗ್ ಮಾಲ್‌ಗಳು, ಈಜುಕೊಳಗಳು, ಕ್ರೀಡಾಸಂಕೀರ್ಣಗಳು, ಜಿಮ್, ಯೋಗ, ಪ್ರಾರ್ಥನಾ/ಪೂಜಾ ಕೇಂದ್ರಗಳು, ಸೌಂದರ್ಯ ಕೇಂದ್ರಗಳು, ಮನರಂಜನಾ ಪಾರ್ಕ್‌ಗಳು, ಕಲ್ಯಾಣ ಮಂಟಪಗಳು, ಇವುಗಳನ್ನು ಮುಚ್ಚಲಾಗಿದೆ ಇಲ್ಲವೇ ನಿರರ್ಥಕಗೊಳಿಸಲಾಗಿದೆ. ಕೆಲವೆಡೆ ಉಪಯೋಗಕ್ಕೆ ಬಾರದ ರಿಯಾಯಿತಿ/ವಿನಾಯಿತಿಗಳಿವೆ.

ಮದುವೆಗೆ 50, ಅಂತ್ಯಸಂಸ್ಕಾರಕ್ಕೆ 20 ಇದ್ದದ್ದು ಈಗ 5ಕ್ಕೆ ಇಳಿದಿದೆ. ಹೀಗೆ ಜನಸಂದಣಿಯ ಮಿತಿಯಿದೆ. (ಮದುವೆಗೆ ವಧೂವರರು ಸೇರಿ 2, ಶವಸಂಸ್ಕಾರಕ್ಕೆ ಶವವೂ ಸೇರಿ 5 ಎಂಬುದೇ ಒಳಿತು.) ಹೊಟೇಲುಗಳಲ್ಲಿ ಪಾರ್ಸೆಲ್ ಮಾತ್ರ ಅವಕಾಶ. ಬೆಳಗ್ಗೆ 6ರಿಂದ 10ರ ವರೆಗೆ ನ್ಯಾಯಬೆಲೆ ಅಂಗಡಿಗಳು, ದಿನಸಿ, ಆಹಾರ ಪದಾರ್ಥಗಳು, ಹಣ್ಣು-ತರಕಾರಿ, ಹಾಲು, ಮಾಂಸ, ಮೀನು, ಪಶುಆಹಾರಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಕೃಷಿ ಸಂಬಂಧಿತ ಮತ್ತು ಕಾರ್ಖಾನೆ, ಕಟ್ಟಡ ನಿರ್ಮಾಣ ಇತ್ಯಾದಿಗಳ ಕೆಲಸವನ್ನು ಮುಂದುವರಿಸಬಹುದಾಗಿದೆ. ಬಸ್‌ಸಂಚಾರ ನಿಷೇಧವಾಗಿದೆ. ತಮಾಷೆ ಮತ್ತು ವಿಷಾದದ ಸಂಗತಿಯೆಂದರೆ ಬದುಕಿದವರಿಗೆ ಈ ಕಟ್ಟುಕಟ್ಟಳೆಗಳು. ಬಹುಪಾಲು ಗೃಹಬಂಧನದ ಅನಿವಾರ್ಯ. ಕೋವಿಡ್‌ಬಾಧಿತರಿಗೆ ಆಸ್ಪತ್ರೆಗೆ ಹೋಗಬಹುದೆಂದರೆ ಅಲ್ಲೂ ಜಾಗವಿಲ್ಲ. ಜಾಗವಿದ್ದರೂ ಅಗತ್ಯ ಬೇಕಾದ ಆ್ಯಂಬುಲೆನ್ಸ್‌ಗಳಾಗಲೀ, ವೆಂಟಿಲೇಟರುಗಳಾಗಲೀ, ಪ್ರಾಣವಾಯುವಾದ ವೈದ್ಯಕೀಯ ಆಮ್ಲಜನಕವಾಗಲೀ ಇಲ್ಲ.

ಒಂದು ವೇಳೆ ಇವನ್ನೆಲ್ಲ ಮೀರಿ ಸತ್ತರೂ ಶ್ಮಶಾನದಲ್ಲಿ ಜಾಗವಿಲ್ಲ. ಇಂತಹದ್ದೊಂದು ಸ್ಥಿತಿ ಎದುರಾಗುತ್ತದೆಂದು ಜನರು ಕನಸಲ್ಲೂ ಊಹಿಸಿರಲಿಲ್ಲ. ಸಾಯುವ ಸಂಖ್ಯೆಗೆ ಮಿತಿ ಹಾಕಿಲ್ಲ. ಸೋಂಕಿತ ಮೃತದೇಹಗಳನ್ನು ದಫನ/ದಹನ ಮಾಡಲು ಸರಕಾರ ಜಮೀನನ್ನು ಹುಡುಕುತ್ತ ಹೊರಟಿದೆ. ಬದುಕಿದ್ದಾಗ ಸರಕಾರಿ ಜಾಗ ಮಂಜೂರಿಗೆ ಅರ್ಜಿ ಹಾಕಿದವರಿಗೆ ಆದ್ಯತೆ ನೀಡಬಹುದೇನೋ ಗೊತ್ತಿಲ್ಲ. ಇಂತಹ ಶ್ಮಶಾನಗಳನ್ನು ನೋಡಿಯೇ ಕುಮಾರವ್ಯಾಸ ‘ಉರಿವುರಿವುತಿದೆ ದೇಶ’ ಎಂದನೇನೋ?

ಇದರೊಂದಿಗೆ ಬ್ಯಾಂಕುಗಳು ತಮ್ಮ ಉದ್ಯೋಗವೇಳೆಯನ್ನು ಕಡಿತಗೊಳಿಸಿವೆ. ವಿರೋಧಾಭಾಸವೆಂದರೆ ಬ್ಯಾಂಕುಗಳು, ಅಂಚೆ ಕಚೇರಿಗಳು ಮುಂತಾದ ಸಾರ್ವಜನಿಕ ವ್ಯವಹರಣಾ ಕೇಂದ್ರಗಳು ಬೆಳಗಿನ 10 ಗಂಟೆಯ ನಂತರ ಕೆಲಸ ಮಾಡುತ್ತವೆ. ಸಾರ್ವಜನಿಕರು ಬೆಳಗ್ಗೆ 6ರಿಂದ 10 ಗಂಟೆಯ ಒಳಗೆ ಅಗತ್ಯ ಕೆಲಸಗಳನ್ನು ಪೂರೈಸಬೇಕು. ಹಾಗಾದರೆ ಈ ಬ್ಯಾಂಕುಗಳು, ಅಂಚೆಕಚೇರಿಗಳು ನೊಣ ಹೊಡೆಯುತ್ತ ಕುಳಿತಿರಬೇಕೇ? ಅಥವಾ ಅವರಿಗೆ ಬೆಳಗಿನಿಂದ ಸಂಜೆಯ ವರೆಗೆ ಕೂರುವ ಸಾದಾಶಿಕ್ಷೆಯೇ? ಸರಕಾರವನ್ನು ಬೆಂಬಲಿಸುವವರು ಕರಕಮಲವನ್ನೆತ್ತಿ ಜೈಕಾರ ಮಾಡುವುದು ಸಾಧ್ಯವಾಗದಂತೆ ಬಂಧಿತರಾಗಿದ್ದರೂ ಅವರ ಕೀರಲು ದನಿ ಅನಿವಾರ್ಯವೆಂಬಂತೆ ಇನ್ನೂ ಕೇಳಿಸುತ್ತಿರುವುದು ವ್ಯಂಗ್ಯ.

ಮುಖ್ಯಮಂತ್ರಿಗಳೇ ಪರಿಸ್ಥಿತಿ ಕೈಮೀರಿದೆ ಎನ್ನುತ್ತಿದ್ದಾರೆ. ‘ಕೈಮೀರಿದೆ’ ಎಂಬ ಪದದ ಬದಲಿಗೆ ಆಪರೇಷನ್ ಮಾಡಿ ‘ಕರಕಮಲಮೀರಿದೆ’ ಎಂದು ಹೇಳುವುದು ಉಚಿತವೇನೋ? ಆಡಳಿತ ಪಕ್ಷದವರೂ ಕೊರೋನದ ಜನ್ಮಭೂಮಿ-ಕರ್ಮಭೂಮಿ ಕರ್ನಾಟಕವೇನೋ ಎಂಬಂತೆ ರಾಜ್ಯಸರಕಾರವನ್ನು ಟೀಕಿಸುತ್ತಿದ್ದಾರೆ. ಹಾಗೆನ್ನುವ ಬೃಹನ್ನಳೆ-ಉತ್ತರಕುಮಾರರಿಗೆ ಕೇಂದ್ರವನ್ನು ಟೀಕಿಸಲು ಧೈರ್ಯವೆಂಬ ಬಿಲ್ಲು-ಬಾಣಗಳೂ ಇಲ್ಲ, ಪಕ್ಷದ ಹೊರತಾಗಿ ಜನಬೆಂಬಲವೆಂಬ ಬತ್ತಳಿಕೆಯೂ ಇಲ್ಲ.
ಈ ನಿಯಮ-ನಿರ್ಬಂಧಗಳು ತುಘಲಕ್ ದರ್ಬಾರಿನಂತಿವೆಯೆಂದು ಮೇಲ್ನೋಟಕ್ಕೇ ಕಾಣುತ್ತದೆ. ಕೆಲವನ್ನು ಪರಿಶೀಲಿಸಬಹುದು: ಅಗತ್ಯಸೇವೆ ಲಭ್ಯ ಎಂದು ಸರಕಾರವು ಮತ್ತೆ ಮತ್ತೆ ಹೇಳುವ ಮತ್ತು ಕಾನೂನು ಹೇಳದ ಲಭ್ಯ ಅಗತ್ಯಸೇವೆಗಳು ಯಾವುವು?

ಆದಾಯ ಬರುವುದಷ್ಟೇ ‘ಅಗತ್ಯ’ವಲ್ಲ. ಆದರೆ ಘನ ಸರಕಾರವು ಅಧಿಕಾರ ರಾಜಕಾರಣದ ಮತ್ತು ಹಣದ ಬಲದಲ್ಲೇ ನಡೆಯುವುದರಿಂದ ಆದಾಯ ಮೂಲಗಳೇ ಅಗತ್ಯ ಸೇವೆಗಳು, ಲಾಭ ತಂದುಕೊಡಬಲ್ಲ ಸರಕುಗಳೇ ಅಗತ್ಯಸರಕುಗಳು ಎಂದಾಗಿದೆ. ಇಲ್ಲವಾದರೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದರ ಅರ್ಥವೇನು? ನಮ್ಮನ್ನಾಳುವ ಪ್ರಭೃತಿಗಳಿಗೆ ಮದ್ಯಪಾನ ಅಗತ್ಯಸೇವೆ. ಈ ಅರ್ಥಾನುಕೂಲದಿಂದ ಯಾವುದೇ ಪ್ರಜ್ಞಾವಂತನಿಗೂ ನಾಚಿಕೆಯಾಗಬೇಕು. ಪ್ರಜ್ಞೆಯಿಲ್ಲದಿರುವುದು ಮದ್ಯಪಾನ ಮಾಡಿದವನಿಗೆ. ಇದಕ್ಕೆ ವಿರುದ್ಧವಾಗಿ ಪುಸ್ತಕದ ಅಂಗಡಿಗೆ ಬೀಗ. ಮಹಾನಗರಗಳಲ್ಲಿರುವ, ಸರಕಾರದ ಮಹೋದಯರೊಂದಿಗೆ ಆಗಾಗ ವೇದಿಕೆ ಹಂಚಿಕೊಳ್ಳುವ, ಜನಪ್ರಿಯ ಮಹಾಸಾಹಿತಿ/ಚಿಂತಕರಲ್ಲಿ ಯಾರೂ ಈ ಬಗ್ಗೆ ಚಕಾರವೆತ್ತದಿರುವುದನ್ನು ನೋಡಿದರೆ ಅವರ ಆದ್ಯತೆ ಯಾವುದೆಂಬುದರ ಬಗ್ಗೆ ಸಂದೇಹ ಮೂಡುತ್ತದೆ. ಅವರಿರಲಿ, ನಮ್ಮ ಶಾಸಕ-ಮಂತ್ರಿಗಳಲ್ಲಿ ಪ್ರಜ್ಞಾವಂತರ ಬಿರುದಿನವರು ಅನೇಕರಿದ್ದಾರೆ. ಪತ್ರಿಕೆಗಳು ಬೇಕು, ಪ್ರಚಾರಕ್ಕೆ, ಜಾಹೀರಾತಿಗೆ. ಓದುಗರೊಬ್ಬರು ಹೇಳಿದಂತೆ ಅರಿವೆಂಬ ಸೋಂಕು ಸರಕಾರಕ್ಕೆ ಬೇಡ; ಮದ್ಯವೆಂಬ ಪ್ರೇರಕರಸಪಾನ ಬೇಕು. ಉಮರ್‌ಖಯ್ಯೆಮನೂ ಮತ್ಸರಿಸಬೇಕು. ಹಾಗಿದೆ ಕಾನೂನು.

ಈಗೀಗ ಇತರ ಅಧಿಕಾರಿಗಳೂ ಕರಕಮಲವನ್ನು ಮುಂದೆ ಮಾಡುವುದೇ ಹೆಚ್ಚು. ಜಿಲ್ಲಾಧಿಕಾರಿಯೊಬ್ಬರು ಕೊರೋನ ನಿಯಮ ಮೀರಿದ್ದಕ್ಕಾಗಿ ಬಸ್‌ಗಳಲ್ಲಿದ್ದ ವಿದ್ಯಾರ್ಥಿಗಳು, ನಾಗರಿಕರನ್ನು ಅರ್ಧದಾರಿಯಲ್ಲಿಯೇ ಇಳಿಸಿದ್ದ ವೀಡಿಯೊ ವೈರಲ್ ಆಗಿತ್ತು! ಅವರು ಕಾನೂನಿನಡಿ ಸರಿಯಿರಬಹುದು. ಆದರೆ ಮರುದಿನ ಇನ್ನೊಂದು ಸಮಾರಂಭದಲ್ಲಿ ಅವರೇ ಮಾಸ್ಕ್ ಹಾಕದ ಫೋಟೊ ಕೂಡ ಅಷ್ಟೇ ವೇಗವಾಗಿ ಪ್ರಸಾರವಾಯಿತು. ಅದು ಸಾರ್ವಜನಿಕ ಸ್ಥಳವಲ್ಲವೆಂದ ಅವರ ಸಬೂಬು ಸೋಂಕು ಹಬ್ಬದಂತಿರುವ ಮಾಸ್ಕಿನ ಆರೋಗ್ಯಕರ ಉದ್ದೇಶವನ್ನೇ ಅವರು ಮರೆತಂತಿತ್ತು! ಹಳೆಯ ಗಾದೆ ‘ದೊಡ್ಡವರು ತಿಂದರೆ ಔಷಧಿಗೆ, ಬಡವ ತಿಂದರೆ ಹೊಟ್ಟೆಗಿಲ್ಲದೆ’! ಶೌಚವನ್ನು ಸರಕಾರ ಅಗತ್ಯ ಸೇವೆಯೆಂದು ನಮೂದಿಸಿಲ್ಲ. ಕರ್ಫ್ಯೂ ಕಾಲದಲ್ಲಿ ಎಲ್ಲರೂ ಮನೆಗಳಲ್ಲೇ ಇರಬೇಕು. ಆದರೆ ಹಳ್ಳಿ-ಪಟ್ಟಣ-ನಗರಗಳಲ್ಲಿ ಇಂದಿಗೂ ಶೌಚಾಲಯಗಳಿಲ್ಲದ ಮನೆಗಳು ಬೇಕಷ್ಟಿವೆ. ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಮನೆಗಳಿಂದ ಕಿಲೋಮೀಟರ್‌ಗಟ್ಟಲೆ ದೂರ ಶೌಚಕ್ಕಾಗಿ ಹೋಗಬೇಕಾಗಿದೆ.

ಮಹಿಳೆಯರಿಗಂತೂ ಇದೊಂದು ನಿತ್ಯನರಕ. ಅದಕ್ಕೆ ವೇಳೆ ನಿಗದಿಪಡಿಸುವವರು ಯಾರು? ಪ್ರಕೃತಿ ನಿಯಮಕ್ಕೆ ವಿರುದ್ಧ ಸರಕಾರದ ನಿಯಮಗಳಿದ್ದರೆ ಯಾವುದನ್ನು ಪಾಲಿಸಬೇಕು? ಹೇಗೆ? ಇಂತಹ ಸಂದರ್ಭದಲ್ಲಿ ನಮ್ಮ ಅಧಿಕಾರಿಗಳು ಶೌಚಸೌಕರ್ಯಕ್ಕೂ ಲಾಠಿ ಇಲ್ಲವೇ ಲಂಚವನ್ನು ಬಳಸದಿರುತ್ತಾರೆಯೇ? ಮಧುಮೇಹಿಗಳಿಗೆ ವಾಕಿಂಗ್ ಎಂದು ನಾವು ಸುಶಿಕ್ಷಿತ ಭಾಷೆಯಲ್ಲಿ ಹೇಳುವ ವ್ಯಾಯಾಮ ಅತೀ ಅಗತ್ಯ. ಆದರೆ ನಡೆದಾಡುವಂತಿಲ್ಲ. ರಾಜಕಾರಣಿಗಳಂತೆ ಎಲ್ಲರಿಗೂ ಎಕರೆಗಟ್ಟಲೆ ಅಂಗಳದ ವಾಸದ ಮನೆಗಳಿಲ್ಲ. ಅವರೇನು ಮಾಡಬೇಕು? ಬ್ಯಾಂಕು, ಅಂಚೆ ಕಚೇರಿ ಮುಂತಾದ ಕಡೆಗಳಿಗೆ ಮೈಲುಗಟ್ಟಲೆ ಹೋಗಬೇಕಾದವರು ಸಮಯಪಾಲನೆ ಹೇಗೆ ಮಾಡಬೇಕು? ವೈದ್ಯರ ಭೇಟಿಗೆ ಪ್ರಯಾಣಿಸಬಹುದಂತೆ. ಹಾಗೆ ವಾಹನದಲ್ಲಿ ಹೋಗುವವರು ಅನಿರೀಕ್ಷಿತವಾಗಿ ವಾಹನವು ಕೆಟ್ಟರೆ ದಂಡಾಧಿಕಾರಿಗಳಿಂದ ಪಾರಾಗುವ ಬಗೆ ಹೇಗೆ? ರಾತ್ರಿ ಕಾಯಿಲೆ ಬಂತೆನ್ನಿ.

ವೈದ್ಯರಲ್ಲಿಗೆ ಹೋಗುವುದು ಹೇಗೆ? ನಮ್ಮ ದೂರವಾಣಿ ಮತ್ತು ವಿದ್ಯುತ್ ಇಲಾಖೆಯ ದಕ್ಷತೆ ನಮಗೆ ಗೊತ್ತಿದೆ. ಇಂತಹ ಸಂದರ್ಭದಲ್ಲಿ ಯಾರನ್ನಾದರೂ ಬದುಕಿಸುವ ಬಗೆ ಹೇಗೆ? ಹೋಗಲಿ; ದುಡಿದು ಉಣ್ಣುವ ಬಗೆ ಹೇಗೆ? ದಿನಾ ದುಡಿದು ಹೊಟ್ಟೆ ತುಂಬಿಸಿಕೊಳ್ಳುವ ಬಡಪಾಯಿಗಳಿಗೆ ಪೊಲೀಸರ ಲಾಠಿಯಿಂದ ರಕ್ಷಣೆ ಹೇಗೆ? ಬೀದಿಬದಿಯ ವ್ಯಾಪಾರಿ, ಕಾರ್ಮಿಕರು ಮಾತ್ರವಲ್ಲ, ಸ್ವಾವಲಂಬಿ ವೃತ್ತಿಪರರೂ ನಿರಾಸೆಯಿಂದ, ಹತಾಶೆಯಿಂದ ಆಕಾಶವನ್ನು ನೋಡುವಂತಾಗಿದೆ.
ಏಕೆಂದರೆ ಈ ಎಲ್ಲ ನಿಯಂತ್ರಣಗಳೂ ಹೇರಲ್ಪಟ್ಟದ್ದು ಬಡಪ್ರಜೆಗಳ ಅಗತ್ಯಗಳ ಮೇಲೆ. ಸರಕಾರದ, ಶ್ರೀಮಂತರ, ಪ್ರಭಾವಿಗಳ ಮೇಲಲ್ಲ. ಚುನಾವಣಾ ಪ್ರಚಾರಗಳೂ ಅಗತ್ಯ ಸೇವೆಯೇ? ಅವಕ್ಕೆ ಅಲಿಖಿತ ಅನುಮತಿಯಿದೆ. ಜನರ ತಾಳ್ಮೆಯ ಕಟ್ಟೆ ಒಡೆಯುತ್ತಿದೆ. ಮಂತ್ರಿಗಳೂ ಅವರ ಮನೆಮಂದಿಯೂ ಸತ್ತಿಲ್ಲ, ಸಾಯುವುದೂ ಇಲ್ಲ, ಜನರೇ ಸಾಯುತ್ತಿರುವುದು ಎಂಬ ಘೋರ ಸತ್ಯದ ಅರಿವು ಜನತೆಗೆ ಆಗುತ್ತಿದೆ. ಎಲ್ಲ ಶೋಷಣೆಗಳೂ ಸುಳ್ಳುಗಳೂ ಅಗತ್ಯಸೇವೆಯೇ ಆಗುತ್ತಿರುವಾಗ, ‘ಅಗತ್ಯ’ಗಳು ಹೀಗಿರುವಾಗ ಎಲ್ಲ ಹಿಂಸೆಗಳನ್ನೂ ತಾಳಿಕೊಳ್ಳುವುದೇ ಪ್ರಜೆಗಳ ಹಣೆಬರಹವಾಗುವುದು ಮತ್ತು ಕೋವಿಡ್-19ಕ್ಕಿಂತಲೂ ಹೆಚ್ಚು ಅಪಾಯವನ್ನು ತಂದೊಡ್ಡಬಲ್ಲ ಈ ನಿವಾರಣೋಪಾಯಗಳನ್ನು ಸಹಿಸುವ ಶಕ್ತಿಕೊಡು ತಂದೆ ಎಂದು ಪ್ರಾರ್ಥಿಸುವುದು ಅನಿವಾರ್ಯ.

ಹೆಣದ ಬಣವೆಯ ಕೆಳಗೆ ಇನ್ನೂ ಸಾಯದೇ ಉಳಿದ ಮಗು ಅಳುವುದರ ಹೊರತು ಇನ್ನೇನು ಮಾಡಲು ಸಾಧ್ಯ? ನನಗೆ ರಾಜ್ಯ ಬೇಡ, ಸ್ವರ್ಗ ಬೇಡ, ಪುನರ್ಜನ್ಮ ಬೇಡ, ದುಃಖಿಗಳ ದುಃಖವನ್ನು ಶಮನಮಾಡಲು, ಜೀವಿಗಳ ಹಸಿವನ್ನು ನಾಶಮಾಡಲು ಶಕ್ತಿಕೊಡು ಎಂದ ರಂತಿದೇವನ ಸಂತತಿ ಎಂದೋ ನಾಶವಾದಂತಿದೆ. ಬದುಕುವುದು ಸಾಯುವುದಕ್ಕಿಂತ ಹೆಚ್ಚು ಕಷ್ಟಕರವಾದಾಗ ಜನರು ದಯಾಮರಣಕ್ಕೆ ಅರ್ಜಿ ಹಾಕಿದರೆ ಅಚ್ಚರಿಯಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)