varthabharthi


ನಿಮ್ಮ ಅಂಕಣ

ಕೊರೋನಕ್ಕೆ ಸವಾಲಾದ ಶರಣ ಸಂಸ್ಕೃತಿ

ವಾರ್ತಾ ಭಾರತಿ : 30 Apr, 2021
ರಂಜಾನ್ ದರ್ಗಾ

ಮಾನವನ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಕೊರೋನ ವೈರಸ್ ಈ ಪೃಥ್ವಿಯ ಮೇಲಿರುವ ಪ್ರತಿಯೊಬ್ಬರಲ್ಲಿ ಗಾಬರಿ ಹುಟ್ಟಿಸಿದೆ. ಅವರು ಬಡವರು, ಶ್ರೀಮಂತರು, ಯಾವುದೇ ಧರ್ಮದವರು, ಯಾವುದೇ ಜಾತಿ ಮತ್ತು ಕುಲದವರು ಹಾಗೂ ಯಾವುದೇ ದೇಶದವರು ಇರಬಹುದು. ಕೊರೋನಕ್ಕೆ ಇದಾವುದರ ಪರಿವೆ ಇಲ್ಲ. ಹೀಗಾಗಿ ಇವರೆಲ್ಲ ಕೊರೋನಕ್ಕೆ ಭಯಪಟ್ಟಿದ್ದಾರೆ. ಇಂದು ಕೊರೋನ ವೈರಸ್ ಏಕಕಾಲಕ್ಕೆ ಇಡೀ ಜಗತ್ತನ್ನು ವ್ಯಾಪಿಸಿದೆ. 200 ದೇಶಗಳ 777 ಕೋಟಿ ಜನರಿಗೆ ಅವರ ಮನೆಗಳೇ ಬಂದೀಖಾನೆಗಳಾಗಿವೆ. ಕಣ್ಣಿಗೆ ಕಾಣದ ಕೊರೋನ ವೈರಾಣುವಿನ ಮುಂದೆ ನ್ಯೂಕ್ಲಿಯರ್ ಶಕ್ತಿಪ್ರದರ್ಶನದ ಮೂಲಕ ಜಂಭಕೊಚ್ಚಿಕೊಳ್ಳುವ ದೇಶಗಳೂ ಮಂಡಿಯೂರಿವೆ. ಈ ಪೃಥ್ವಿಯನ್ನು ನೂರಾರು ಬಾರಿ ಧ್ವಂಸಮಾಡುವಂತಹ ಶಕ್ತಿಶಾಲಿ ಪರಮಾಣು ಬಾಂಬುಗಳಿಗೆ ಕೂಡ ಈ ವೈರಾಣುವನ್ನು ಕೊಲ್ಲುವ ಶಕ್ತಿ ಇಲ್ಲ! ‘‘ಈ ವೈರಾಣು ಎಲ್ಲಿಂದ ಬಂದಿತು ಇದು ಎಂದು ಅಂತ್ಯಗೊಳ್ಳುವುದು’’ ಎಂಬ ಪ್ರಶ್ನೆಗೆ ಇಲ್ಲಿಯವರೆಗೆ ವಿಜ್ಞಾನಿಗಳಿಂದ ಒಮ್ಮತದ ಉತ್ತರ ಬಂದಿಲ್ಲ.

ಮಾನವ ನಿಸರ್ಗದ ಭಾಗವಾಗಿದ್ದಾನೆ. ಆದ್ದರಿಂದ ನಿಸರ್ಗವನ್ನು ಕಾಪಾಡುವುದು ಆತನ ಪರಮ ಕರ್ತವ್ಯವಾಗಿದೆ. ಮಾನವರ ಅವಶ್ಯಕತೆಗಳನ್ನು ಪೂರೈಸುವುದಕ್ಕೆ ಮಾತ್ರ ನಿಸರ್ಗ ಇದೆ. ಆತನ ಸಂಗ್ರಹಬುದ್ಧಿಯ ದುರಾಸೆಯನ್ನು ಪೂರೈಸುವ ಶಕ್ತಿ ಅದಕ್ಕೆ ಇಲ್ಲ. ಇಡೀ ಜೀವಜಾಲ ಸಮತೋಲನವನ್ನು ಕಾಪಾಡುವ ಜವಾಬ್ದಾರಿ ನಿಸರ್ಗದ ಮೇಲಿದೆ ಎಂಬುದನ್ನು ಮಾನವ ಮರೆಯಬಾರದು.

ಅಗೋಚರ ನಿಸರ್ಗ: 
ಮಾನವ ಮತ್ತು ನಿಸರ್ಗದ ಮಧ್ಯೆ ಅಗೋಚರ ನಿಸರ್ಗವೊಂದಿದೆ. ವೈರಾಣುಗಳು ಕಣ್ಣಿಗೆ ಕಾಣದ ಈ ನಿಸರ್ಗಕ್ಕೆ ಸಂಬಂಧಿಸಿದವುಗಳಾಗಿವೆ. ಕಣ್ಣಿಗೆ ಕಾಣುವ ನಿಸರ್ಗದ ರಕ್ಷಣೆಗಾಗಿ ಕಣ್ಣಿಗೆ ಕಾಣದ ನಿಗೂಢವಾದ ನಿಸರ್ಗದ ಸೈನಿಕರೇ ಈ ವೈರಾಣುಗಳು. ನಿಸರ್ಗದ ಕರ್ತವ್ಯಕ್ಕೆ ಮಾನವ ಚ್ಯುತಿ ತಂದಾಗ, ನಿಸರ್ಗ ನಿತ್ರಾಣವಾಗುವ ಸ್ಥಿತಿ ತಲುಪುವ ಮೊದಲೇ ವೈರಾಣುಗಳು ಬಂದು ಮಾನವನ ಮೇಲೆ ಯುದ್ಧ ಸಾರುತ್ತವೆ. ಮಾನವರನ್ನು ತಹಬಂದಿಗೆ ತಂದು ನಿಸರ್ಗ ರಕ್ಷಣೆ ಮಾಡುತ್ತವೆ. ಹಿಂದೆ ಪ್ಲೇಗ್, ಕಾಲರಾ, ಸಿಡಬು, ಮಲೇರಿಯಾ, ಚಿಕುನ್ ಗುನ್ಯಾ, ಹಂದಿರೋಗ, ಕೋಳಿಜ್ವರ, ಮಂಗನ ಕಾಯಿಲೆಯಂತಹ ಅನೇಕ ಕಾಯಿಲೆಗಳು ಬಂದಿವೆ. ಆದರೆ ಅವು ಇಷ್ಟೊಂದು ವ್ಯಾಪಕವಾಗಿ ಏಕಕಾಲಕ್ಕೆ ಮಾನವನ ಮೇಲೆ ದಾಳಿ ಮಾಡಿದ್ದಿಲ್ಲ. ಎಲ್ಲ ಸಿದ್ಧಾಂತಗಳು, ಎಲ್ಲ ಧರ್ಮಗಳು ಈ ವೈರಾಣುವಿನ ಶಕ್ತಿಯ ಮುಂದೆ ನಿಬ್ಬೆರಗಾಗಿವೆ. ನಾವು ನಿಸರ್ಗಧರ್ಮವನ್ನು ಪಾಲಿಸಲೇಬೇಕು ಎಂಬುದು ಈ ವೈರಾಣುವಿನ ಆದೇಶವಾಗಿದೆ. ಇಂದು ಪೃಥ್ವಿಯ ಮೇಲೆ ಮಾನವನ ಹೊರತಾಗಿ ಉಳಿದೆಲ್ಲ ಪ್ರಾಣಿ ಪಕ್ಷಿಗಳು ಮತ್ತು ಪಂಚಮಹಾಭೂತಗಳು ನೆಮ್ಮದಿಯನ್ನು ವ್ಯಕ್ತಪಡಿಸುತ್ತಿವೆ. ಎಲ್ಲವುಗಳ ಮುಂದೆ ಮನುಷ್ಯ ನಾಲಾಯಕ್ ಆಗಿ ತಲೆ ತಗ್ಗಿಸಿ ನಿಲ್ಲುವಂತಾಗಿದೆ.

ಓಜೋನ್ ಬೆಲ್ಟ್ ರಂಧ್ರಗಳು ಮುಚ್ಚುತ್ತಿವೆ. ಗಂಗಾ ಯಮುನಾ ನದಿಗಳು ಸ್ವಚ್ಛವಾಗುತ್ತಿವೆ. ಪಕ್ಷಿಗಳು, ಪ್ರಾಣಿಗಳು ರಸ್ತೆ ಮೇಲೆ ಬರುತ್ತಿವೆ. ಮನುಷ್ಯರು ಬಂದಿಯಾಗಿದ್ದಾರೆ. ಎಲ್ಲ ಜೀವಸಂಕುಲ ನಿಸರ್ಗದ ಜೊತೆ ಇದೆ. ಅನ್ಯೋನ್ಯವಾಗಿದೆ. ಆದರೆ ಮನುಷ್ಯ ಮಾತ್ರ ತದ್ವಿರುದ್ಧವಾಗಿದ್ದಾನೆ. ಆದ್ದರಿಂದಲೇ ನಮ್ಮ ಎಲ್ಲಾ ಸಂತರು, ಶರಣರು ಅನುಭಾವಿಗಳು ಹೇಳುವುದೇನಂದರೆ ನಿಸರ್ಗದ ಜೊತೆ ಮಿತೃತ್ವ ಹೊಂದಿರಿ. ನಿಸರ್ಗವನ್ನು ಗೌರವಿಸಿ ಅದು ನಿಮ್ಮನ್ನು ಗೌರವಿಸುತ್ತದೆ.

ಮಾರ್ಗದರ್ಶಿ ಸೂತ್ರಗಳು:

ಇಂತಹ ಅನಾಹುತಗಳು ಆಗದೆ ಇರಲಿಕ್ಕೆ ನಾವು ಯಾವರೀತಿ ಬದುಕಬೇಕು ಎಂಬುದನ್ನು ತಿಳಿಸುವ ಮಾರ್ಗದರ್ಶಿ ಸೂತ್ರಗಳು ನಮ್ಮ ಶರಣರ ವಚನಗಳಲ್ಲಿವೆ.

ಬಸವಣ್ಣನವರು ಹೇಳುವಂತೆ ಅಂತರಂಗ ಶುದ್ಧಿ ಇಲ್ಲದೆ ಬಹಿರಂಗ ಶುದ್ಧಿ ಇಲ್ಲ. ಬಹಿರಂಗ ಶುದ್ಧಿ ಇಲ್ಲದೆ ಮಾನವನ ಅಸ್ತಿತ್ವ ಇಲ್ಲ. ಕೊರೋನ ಈ ಎಚ್ಚರಿಕೆಯ ಮುನ್ಸೂಚನೆಯಾಗಿದೆ. ಮಾನವನ ಹೊರತಾಗಿ ಪ್ರತಿಯೊಂದು ಜೀವಿ ತನಗೆ ಎಷ್ಟು ಬೇಕೊ ಅಷ್ಟನ್ನೇ ಮಾತ್ರ ನಿಸರ್ಗದಿಂದ ಪಡೆಯುತ್ತದೆ. ತಲೆಮಾರುಗಳವರೆಗೆ ಬೇಕಾಗುವ ಹಾಗೆ ಸಂಗ್ರಹ ಮಾಡುವ ಬುದ್ಧಿ ಅವುಗಳಿಗೆ ಇಲ್ಲ. ಮಾನವ ಮಾತ್ರ ಇದನ್ನು ಮಾಡಬಲ್ಲ. ಈ ಸಂಗ್ರಹ ಬುದ್ಧಿಯೇ ಮಾನವನ ಅಂತರಂಗ ಮತ್ತು ಬಹಿರಂಗ ಅಶುದ್ಧಿಗೆ ಕಾರಣವಾಗಿದೆ.

ಬಂಡವಾಳಶಾಹಿ ಸಮಾಜದಲ್ಲಿ ಸಂಪತ್ತಿನ ಕ್ರೋಡೀಕರಣವು ಮೌಲ್ಯವಾಗಿ ಪರಿಣಮಿಸಿದೆ. ಬಂಡವಾಳಶಾಹಿ ವ್ಯವಸ್ಥೆ ನಿಂತಿರುವುದೇ ‘ಮಿಗುತಾಯಮೌಲ್ಯ’ದ (ಸರ್‌ಪ್ಲಸ್ ವ್ಯಾಲ್ಯೂ) ಮೇಲೆ. ಶ್ರಮಜೀವಿಗಳ ಶೋಷಣೆಯ ಮೂಲಕ ಮಿಗುತಾಯ ಮೌಲ್ಯದ ಸಂಗ್ರಹವಾಗುವುದು. ಮಾನವರ ಈ ಸಂಗ್ರಹ ಬುದ್ಧಿ, ಸುಲಿಗೆ ವ್ಯವಸ್ಥೆಯ ಮೂಲವಾಗಿದೆ.

ಬಂಡವಾಳಶಾಹಿಗಳು ಬಂಡವಾಳದ ಮೂಲಕ ನೈಸರ್ಗಿಕ ಸಂಪನ್ಮೂಲಗಳು, ಮಾನವಶ್ರಮ ಮತ್ತು ಕಾರ್ಮಿಕರನ್ನು ದುಡಿಸಿಕೊಳ್ಳುವಲ್ಲಿ ಪರಿಣತಿ ಹೊಂದಿರುವ ಕಂಪೆನಿ ತಜ್ಞರನ್ನು (ಆರ್ಗನೈಜೇಷನ್ ಎಕ್ಸ್ ಪರ್ಟ್ಸ್) ಶೋಷಣೆಗಾಗಿ ಬಳಸಿಕೊಳ್ಳುತ್ತಾರೆ. ಕಾರ್ಮಿಕರು ಮತ್ತು ತಜ್ಞರ ಮೇಲೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಮಾಡಿದ ಖರ್ಚುವೆಚ್ಚಗಳ ಜೊತೆಗೆ ತಮ್ಮ ಶೋಷಣೆಯ ಪ್ರತಿಭೆಗೂ ಬೆಲೆ ಕಟ್ಟುತ್ತಾರೆ. ಇಷ್ಟೆಲ್ಲ ಲೆಕ್ಕಾಚಾರದ ನಂತರ ಉಳಿಯುವ ಸಂಪತ್ತೇ ಮಿಗುತಾಯಮೌಲ್ಯ ಎನಿಸಿಕೊಳ್ಳುತ್ತದೆ. ‘ನನ್ನದು’ ಎನ್ನುವ ಈ ಮಿಗುತಾಯಮೌಲ್ಯದ ಪರಿಕಲ್ಪನೆಯಲ್ಲಿ ಮನುಷ್ಯನ ದುರಂತ ಅಡಗಿದೆ. ಮಿಗುತಾಯಮೌಲ್ಯವನ್ನು ಸಾಮಾಜೀಕರಣ ಗೊಳಿಸಿದಾಗ ವ್ಯಕ್ತಿ, ಸಮಾಜ ಮತ್ತು ಜೀವಸಂಕುಲ ದಿಂದ ತುಂಬಿದ ನಿಸರ್ಗ ಸುರಕ್ಷಿತವಾಗಿರುತ್ತದೆ ಎಂದು ಬಸವಣ್ಣನವರು 12ನೇ ಶತಮಾನದಲ್ಲೇ ಹೇಳಿದ್ದಾರೆ. ಅದನ್ನು ಕಾಯಕ, ಪ್ರಸಾದ ಮತ್ತು ದಾಸೋಹದ ಮೂಲಕ ಸೂಚಿಸಿದ್ದಾರೆ.

ನಿಸರ್ಗಧರ್ಮದ ಸೂತ್ರಗಳ ಮೇಲೆ ಬಸವಧರ್ಮ ರೂಪುಗೊಂಡಿದೆ. ಕಾಯಕವು ನಿಸರ್ಗ ಧರ್ಮದ ಮೂಲಸೂತ್ರವಾಗಿದೆ. ಕಾಯಕವಿಲ್ಲದ ಯಾವುದೇ ವಸ್ತು ಅಥವಾ ಜೀವಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಹಸಿರೆಲೆಯು ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ತೊಡಗುವವರೆಗೂ ಗಿಡ ಅದನ್ನು ತನ್ನ ಭಾಗವಾಗಿ ಉಳಿಸಿಕೊಂಡಿರುತ್ತದೆ. ಆ ಎಲೆ ಹಳದಿ ಬಣ್ಣಕ್ಕೆ ತಿರುಗಿದ ಮೇಲೆ ಅದರಿಂದ ಆ ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಯುವುದಿಲ್ಲ. ಆಗ ಗಿಡ ಆ ಹಣ್ಣೆಲೆಯನ್ನು ಉದುರಿಸುತ್ತದೆ. ಹೀಗೆ ಕಾಯಕವು ನಿಸರ್ಗದ ನಿಯಮವಾಗಿದೆ. ಕಾಯಕವಿಲ್ಲದೆ ಅಸ್ತಿತ್ವವಿಲ್ಲ. ಕಾಯಕ ಮಾಡದ ಯಾವುದೇ ವ್ಯಕ್ತಿ ಘನತೆಯಿಂದ ಬದುಕಲು ಸಾಧ್ಯವಿಲ್ಲ.

ಹಣ್ಣಿನ ಮರವೊಂದು ಹಣ್ಣುಗಳನ್ನು ಕೊಡುತ್ತಲೇ ಇರುತ್ತದೆ. ತನಗಾಗಿ ಸಂಗ್ರಹಿಸಿ ಇಟ್ಟುಕೊಳ್ಳುವುದಿಲ್ಲ. ಆದರೆ ಮನುಷ್ಯ ತಾನು ಯಾವುದೇ ರೀತಿಯಲ್ಲಿ ಪಡೆದದ್ದನ್ನು ಸಂಗ್ರಹಿಸಿ ಮಕ್ಕಳು ಮೊಮ್ಮಕ್ಕಳಿಗೆ ಕೂಡ ಇಟ್ಟುಕೊಳ್ಳಲು ಸತತವಾಗಿ ಪ್ರಯತ್ನಿಸುತ್ತಿರುತ್ತಾನೆ. ‘ಎಲ್ಲವೂ ನನ್ನದು’ ಎನ್ನುವುದು ಹುಲುಮಾನವನ ಸ್ವಭಾವ. ಸಂಗ್ರಹಿಸಿಟ್ಟುಕೊಳ್ಳಲು ಬಯಸುವವನು ಜಗತ್ತನ್ನು ಕೊಳ್ಳುವಷ್ಟು ಶ್ರೀಮಂತನಾದರೂ ಶರಣರ ದೃಷ್ಟಿಯಲ್ಲಿ ಹುಲುಮಾನವನೇ ಆಗಿರುತ್ತಾನೆ.

ಏಕೆಂದರೆ ಶರಣರು ‘ಇದು ನನ್ನದು’ ಎಂದು ಹೇಳುವುದಿಲ್ಲ; ‘ಇದು ನಮ್ಮದು’ ಎಂದು ಹೇಳುತ್ತಾರೆ. ಅದಕ್ಕಾಗಿ ಬಸವಣ್ಣನವರು ಸೂತ್ರವೊಂದು ರೂಪಿಸಿದ್ದಾರೆ. ಕಾಯಕ ಮಾಡಬೇಕು. ಕಾಯಕದಿಂದ ಬಂದದ್ದನ್ನು ಪ್ರಸಾದವೆಂದು ಸ್ವೀಕರಿಸಬೇಕು. ಪ್ರಸಾದವಾಗಿ ಸ್ವೀಕರಿಸಿದ ನಂತರ ಪ್ರಸಾದದಂತೆ ಬಳಸಬೇಕು. ಆಗ ಉಳಿಯುವುದೆಲ್ಲವೂ ದೇವರ ಸೊತ್ತೇ ಆಗಿರುವುದರಿಂದ ಸಮಾಜವೆಂಬ ದೇವರಿಗೆ (ಜಂಗಮಲಿಂಗ) ದಾಸೋಹ ಭಾವದಿಂದ ಅರ್ಪಿಸಬೇಕು. ಇದು ಬಸವಣ್ಣನವರ ಅರ್ಥಶಾಸ್ತ್ರವೂ ಆಗಿದೆ. ಹೀಗೆ ಯೋಗ್ಯ ಉತ್ಪಾದನೆ ಮಾಡುವುದು, ಉತ್ಪಾದಿಸಿದ್ದನ್ನು ಪ್ರಸಾದದ ಹಾಗೆ ಸದ್ಬಳಕೆ ಮಾಡುವುದು ಹಾಗೂ ಮಿಗುತಾಯವನ್ನು ದಾಸೋಹಿಯಾಗಿ ಸಾಮಾಜಿಕ ವಿತರಣೆ ಮಾಡುವುದು. ಆ ಮೂಲಕ ಸಂತೃಪ್ತಿಯನ್ನು ಪಡೆಯುವುದೇ ಬಸವಣ್ಣನವರ ಅರ್ಥಶಾಸ್ತ್ರದ ಗುರಿಯಾಗಿದೆ.

ಉದಾತ್ತವಾಗುವ ದಾರಿ: ವ್ಯಕ್ತಿ, ಸಮಾಜ ಮತ್ತು ನಿಸರ್ಗವನ್ನು ಒಂದಾಗಿ ನೋಡುವುದರ ಮೂಲಕ ಮಾನವರನ್ನು ಸ್ವಾವಲಂಬಿಗಳಾಗಿಸಿ; ಕುಟುಂಬ, ಸಮಾಜ ಮತ್ತು ನಿಸರ್ಗದ ರಕ್ಷಣೆ ಮಾಡುವ ತತ್ತ್ವವೇ ಬಸವತತ್ತ್ವ. ಇದುವೇ ಬಸವಾದ್ವೈತ. ಮಾನವ, ಸಕಲಜೀವಾತ್ಮರಿಂದ ಕೂಡಿದ ಸಮಾಜ ಮತ್ತು ನಿಸರ್ಗವನ್ನು ಒಳಗೊಂಡ ವಿಶ್ವ ಒಂದಾಗಿ ಸಾಗುವ ದರ್ಶನವೇ ಬಸವಾದ್ವೈತ. ಹೀಗೆ ಒಂದಾಗುವುದರಿಂದ ಮಾನವರ ಮತ್ತು ನಿಸರ್ಗದ ಶೋಷಣೆ ಆಗುವುದಿಲ್ಲ. ಆಗ ಸಹಜವಾಗಿಯೇ ಪಂಚಮಹಾಭೂತಗಳು ಮಲಿನಗೊಳ್ಳುವುದಿಲ್ಲ. ಹವಾಮಾನ ವೈಪರೀತ್ಯವಾಗುವುದಿಲ್ಲ. ಮರಗಿಡ ಸಮೇತ ಎಲ್ಲ ಜೀವಿಗಳು ಆನಂದದಿಂದ ಇರುತ್ತವೆ. ನಿಸರ್ಗ ಚೇತೋಹಾರಿಯಾಗಿರುತ್ತದೆ. ಅರಣ್ಯನಾಶವಾಗುವುದಿಲ್ಲ. ನದಿಗಳು ಕೊಳೆತು ನಾರುವುದಿಲ್ಲ. ಸಮುದ್ರಜೀವಿಗಳಿಗೆ ಮಾಲಿನ್ಯದ ಕಂಟಕವಿರುವುದಿಲ್ಲ. ಕೊರೋನ ಬರುವುದಿಲ್ಲ!

‘‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು.
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,
ನಾರಿ ತನ್ನ ಮನೆಯಲ್ಲಿ ಕಳುವೊಡೆ,
ತಾಯ ಮೊಲೆವಾಲು ನಂಜಾಗಿ ಕೊಲುವಡೆ,
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ!’’
                                -ಬಸವಣ್ಣ
ಹತ್ತಿದ ಒಲೆಯನ್ನು ಆರಿಸುವಷ್ಟು ಮಾತ್ರ ನಮ್ಮ ಸಾಮರ್ಥ್ಯ ಇದೆ. ಆದರೆ ಧರೆ ಹತ್ತಿ ಉರಿದರೆ ನಿಲ್ಲಿಸುವ ಸಾಮರ್ಥ್ಯವಿಲ್ಲ. ನಾವಿಂದು ಇಡೀ ಧರೆ ಉರಿಯುವಂತೆ ಮಾಡಿದ್ದೇವೆ. ಆ ಉರಿಯನ್ನು ನಿಲ್ಲಿಸುವ ಶಕ್ತಿ ನಮ್ಮಲ್ಲಿಲ್ಲ. ಇಂಥವೆಲ್ಲ ನಮ್ಮ ಕುಕೃತ್ಯದಿಂದಲೇ ಸಂಭವಿಸುತ್ತಿವೆ. ನಾವು ರಕ್ಷಿಸುವ ಜವಾಬ್ದಾರಿಯ ಬದಲಿಗೆ ಭಕ್ಷಿಸುತ್ತಿದ್ದೇವೆ. ನೀರನ್ನು ತಡೆಯಲು ಏರಿ ಇರುತ್ತದೆ. ಆದರೆ ಆ ಏರಿಯೆ ನೀರು ಉಂಡರೆ ತದ್ವಿರುದ್ಧವಾಗುವುದು. ಅದೇ ರೀತಿ ಬೇಲಿ ಹೊಲ ಮೆಯ್ದರೆ, ಗೃಹಿಣಿಯೆ ತನ್ನ ಮನೆಯಲ್ಲಿ ಕಳ್ಳತನ ಮಾಡಿದರೆ, ಜೀವ ಉಳಿಸುವ ತಾಯಿಯ ಮೊಲೆ ಹಾಲೇ ಕೂಸಿಗೆ ನಂಜಾದರೆ ಆಗಬಾರದ್ದು ಆಗುವುದು. ಹೀಗೆ ಮಾನವ ಈ ಪೃಥ್ವಿಗೆ ಮಾಡಬಾರದ್ದು ಮಾಡಿದ್ದರಿಂದ ಆಗಬಾರದ್ದು ಆಗುತ್ತಿದೆ.

ಶರಣರು ಕುಟುಂಬ, ಸಮಾಜ ಮತ್ತು ಸಕಲಜೀವಾತ್ಮರಿಂದ ಕೂಡಿದ ನಿಸರ್ಗದೊಂದಿಗೆ ಅನ್ಯೋನ್ಯವಾಗಿ ಬದುಕುವ ಮೂಲಕ ಮತ್ತು ಬದುಕಿನ ಮೂಲಾಧಾರವಾದ ಸಾಮರಸ್ಯದ ಪಾಠವನ್ನು ನಮಗೆ ಕಲಿಸುವ ಮೂಲಕ ನಾವೆಲ್ಲ ಸಕಲ ಜೀವರಾಶಿ ಮತ್ತು ನಿಸರ್ಗದ ಜೊತೆ ಬದುಕುವಂತೆ ಮಾಡಿದರು. ಆದರೆ ನಾವು ಅವರ ಮಾತು ಕೇಳದೆ ನರಳುವಂತಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)