ರಾಷ್ಟ್ರೀಯ
ರಾಜಸ್ಥಾನ ವಿಧಾನಸಭಾ ಉಪಚುನಾವಣೆ: ಎರಡರಲ್ಲಿ ಕಾಂಗ್ರೆಸ್ ಗೆಲುವು, ಕ್ಷೇತ್ರ ಉಳಿಸಿಕೊಂಡ ಬಿಜೆಪಿ

ಜೈಪುರ,ಮೇ 2: ರಾಜಸ್ಥಾನದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳ ಫಲಿತಾಂಶಗಳು ರವಿವಾರ ಪ್ರಕಟಗೊಂಡಿದ್ದು,ಸಹಾಡಾ ಮತ್ತು ಸುಜಾನಗಡ ಕ್ಷೇತ್ರಗಳನ್ನು ಕಾಂಗ್ರೆಸ್ ಹಾಗೂ ರಾಜಸಮಂದ್ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿವೆ. ತನ್ಮೂಲಕ ಕಳೆದ ವರ್ಷ ತಮ್ಮ ಶಾಸಕರ ನಿಧನಗಳಿಂದ ತೆರವಾಗಿದ್ದ ಈ ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಿ ಉಭಯ ಪಕ್ಷಗಳು ಯಶಸ್ವಿಯಾಗಿವೆ. ಎ.17ರಂದು ಈ ಮೂರು ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು,ಸರಾಸರಿ ಶೇ.60.37ರಷ್ಟು ಮತದಾನವಾಗಿತ್ತು.
ಸಹಾಡಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ದೇವಿ ಅವರು ಬಿಜೆಪಿಯ ರತನಲಾಲ್ ಜಾಟ್ ಅವರನ್ನು 42,200 ಮತಗಳಿಂದ ಸೋಲಿಸಿದ್ದಾರೆ. ದೇವಿಯವರ ಪತಿ ಹಾಗೂ ಶಾಸಕ ಕೈಲಾಷ ತ್ರಿವೇದಿ ಅವರು ಕಳೆದ ವರ್ಷದ ಅಕ್ಟೋಬರ್ನಲ್ಲಿ ಕೋವಿಡ್ನಿಂದ ನಿಧನರಾದ ಬಳಿಕ ಕ್ಷೇತ್ರವು ತೆರವುಗೊಂಡಿತ್ತು.
ಸುಜಾನಗಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನೋಜ ಮೇಘ್ವಾಲ್ ಅವರು ಬಿಜೆಪಿಯ ಖೇಮಾರಾಮ ಮೇಘ್ವಾಲ್ ಅವರನ್ನು 33,611 ಮತಗಳಿಂದ ಪರಾಭವಗೊಳಿಸಿದ್ದಾರೆ. ಕಳೆದ ವರ್ಷದ ನವೆಂಬರ್ನಲ್ಲಿ ಮೇಘ್ವಾಲ್ರ ತಂದೆ ಹಾಗೂ ಶಾಸಕ ಮಾಸ್ಟರ್ ಭಂವರಲಾಲ್ ಮೇಘ್ವಾಲ್ ಅವರ ನಿಧನದಿಂದ ಈ ಕ್ಷೇತ್ರವು ತೆರವಾಗಿತ್ತು.
ರಾಜಸಮಂದ್ನಲ್ಲಿ ಬಿಜೆಪಿಯ ದೀಪ್ತಿ ಮಹೇಶ್ವರಿ ಅವರು ಕಾಂಗ್ರೆಸ್ ಅಭ್ಯರ್ಥಿ ತನುಷ್ಕ್ ಬೊಹರಾರನ್ನು 5,310 ಮತಗಳಿಂದ ಸೋಲಿಸಿದ್ದಾರೆ. ಕ್ಷೇತ್ರದ ಶಾಸಕರಾಗಿದ್ದ ಅವರ ತಂದೆ ಕಿರಣ ಮಹೇಶ್ವರಿ ಅವರು ಕಳೆದ ವರ್ಷದ ನವೆಂಬರ್ನಲ್ಲಿ ಕೋವಿಡ್ಗೆ ಬಲಿಯಾಗಿದ್ದರು. 200 ಸದಸ್ಯಬಲದ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ 106,ಬಿಜೆಪಿ 72,ಆರ್ಎಲ್ಪಿ ಮೂವರು, ಸಿಪಿಎಂ ಮತ್ತು ಬಿಟಿಪಿ ತಲಾ ಇಬ್ಬರು ಶಾಸಕರನ್ನು ಹೊಂದಿವೆ. 13 ಶಾಸಕರು ಪಕ್ಷೇತರರಾಗಿದ್ದು,ತೆರವಾಗಿರುವ ವಲ್ಲಭನಗರ ಕ್ಷೇತ್ರದಲ್ಲಿ ಇನ್ನಷ್ಟೇ ಉಪಚುನಾವಣೆ ನಡೆಯಬೇಕಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ











