varthabharthi


ನಿಮ್ಮ ಅಂಕಣ

ಭಾರತದ ಆರೋಗ್ಯ ವ್ಯವಸ್ಥೆಯನ್ನು ಕಾಡುತ್ತಿರುವ ಅನಾರೋಗ್ಯ

ವಾರ್ತಾ ಭಾರತಿ : 4 May, 2021
ಅಮರ್ತ್ಯ ಸೇನ್ ಕನ್ನಡಕ್ಕೆ: ಸದಾನಂದ ಆರ್.

Healers Or Predators ಕೃತಿಯು 2018ರಲ್ಲಿ ಪ್ರಕಟವಾಯಿತು. ಸಮೀರನ್ ನಂದಿ, ಕೇಶವ್ ದೇಸಿರಾಜು ಮತ್ತು ಸಂಜಯ್ ನಗ್ರಾಲ್ ಅವರು ಸಂಪಾದಿಸಿರುವ ಈ ಕೃತಿಯು ಭಾರತದ ಆರೋಗ್ಯ ವ್ಯವಸ್ಥೆಯನ್ನು ಕಾಡುತ್ತಿರುವ ಸಮಸ್ಯೆಗಳ ಅನೇಕ ಮುಖಗಳನ್ನು ಪರಿಚಯಿಸುತ್ತದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಪ್ರಕಟಿಸಿರುವ ಈ ಕೃತಿಗೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞರಾದ ಅಮರ್ತ್ಯ ಸೇನ್ ಅವರ ಮುನ್ನುಡಿ ಇದೆ. ಅದರ ಕನ್ನಡ ಅನುವಾದ ಇಲ್ಲಿದೆ.


ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥ ವ್ಯವಸ್ಥೆಯನ್ನು ಹೊಂದಿರುವ ಭಾರತವು ಆರೋಗ್ಯದ ವಿಚಾರದಲ್ಲಿ ಮಾತ್ರ ರೋಗಪೀಡಿತವಾಗಿದೆ. ಉತ್ತಮ ಆರೋಗ್ಯವನ್ನು ಹೊಂದುವ ನಿಟ್ಟಿನಲ್ಲಿ ಕಳಪೆ ಸಾಧನೆಯನ್ನು ಭಾರತ ತೋರಿಸಿದೆ. ಶಿಶು ಮರಣ ಪ್ರಮಾಣ, ನಿರೀಕ್ಷಿತ ಜೀವಿತಾವಧಿ, ಮಕ್ಕಳಲ್ಲಿ ಅಪೌಷ್ಟಿಕತೆ, ಆರೋಗ್ಯದ ನಿರ್ವಹಣೆಗೆ ತಗಲುವ ಅತಿಯಾದ ಖರ್ಚು ಮುಂತಾದ ವಿಷಯಗಳಲ್ಲಿ ಭಾರತದ ಸಾಧನೆ ಚೀನಾ, ತೈವಾನ್‌ಗಳಿಗೆ ಹೋಲಿಸಿದಾಗ ಅಗಾಧವಾದ ಅಂತರಗಳಿವೆ; ಅಂತರಗಳು ಎನ್ನುವುದಕ್ಕಿಂತ ಕಂದಕಗಳು ಎನ್ನುವುದು ಸರಿಯಾಗುತ್ತದೆ. ಇನ್ನು ನೆರೆಯ ದೇಶಗಳಾದ ಬಾಂಗ್ಲಾದೇಶ ಮತ್ತು ನೇಪಾಳಗಳೂ ಸಹ ಅನೇಕ ವಿಚಾರಗಳಲ್ಲಿ ಭಾರತವನ್ನು ಹಿಂದಿಕ್ಕಿ ಮುಂದೆ, ಬಹು ಮುಂದೆ ಸಾಗಿಬಿಟ್ಟಿವೆ. ಇಂತಹ ದಯನೀಯ ಸ್ಥಿತಿಯಲ್ಲಿ ಭಾರತದ ಆರೋಗ್ಯ ವ್ಯವಸ್ಥೆ ಇದ್ದರೂ, ಇದರ ಕುರಿತು ಮಾಧ್ಯಮಗಳಲ್ಲಿ ಚರ್ಚೆ ನಡೆಯದಿರುವುದನ್ನು ಗಮನಿಸಿರಬಹುದು. ಹೀಗೆ ಚರ್ಚೆ ನಡೆಯುತ್ತಿಲ್ಲವೆಂದರೆ, ಭಾರತದ ಆರೋಗ್ಯ ವ್ಯವಸ್ಥೆ ಸಹನೀಯ ಹಂತದಲ್ಲಿದೆ ಅಂತೇನು ಅಲ್ಲ. ಬದಲಿಗೆ, ಮಾಧ್ಯಮಗಳು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ನಿರ್ಲಕ್ಷಿಸಿರುವ ದ್ಯೋತಕ ಇದು ಅಷ್ಟೆ.

ಈ ನಿರ್ಲಕ್ಷವೇ ಭಾರತದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಅನಾರೋಗ್ಯಕರ ಸ್ಥಿತಿಯಲ್ಲಿರಲು ಕಾರಣವಾಗಿರುತ್ತದೆ. ಏಕೆಂದರೆ ಸರಕಾರಗಳ ಕಾರ್ಯನೀತಿಯಲ್ಲಿ ಲೋಪಗಳು ಉಂಟಾದಾಗ, ಅದರ ಕುರಿತು ಸಾರ್ವಜನಿಕ ಚರ್ಚೆಗಳು ನಡೆದಾಗ ಮಾತ್ರ, ಲೋಪಗಳನ್ನು ಸರಿಪಡಿಸಲು ಅವಕಾಶಗಳು ಸೃಷ್ಟಿಯಾಗುತ್ತವೆ. ಚರ್ಚೆಯೇ ಆಗಲಿಲ್ಲವೆಂದ ಮೇಲೆ, ಲೋಪಗಳನ್ನು ಸರಿಪಡಿಸುವ ಮಾತಿರಲಿ, ಲೋಪಗಳ ಇರುವಿಕೆಯನ್ನೇ ಗುರುತಿಸಲಾಗದ ಸ್ಥಿತಿ ನಿರ್ಮಾಣವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಕಾರ್ಯನೀತಿಗಳ ದೋಷಗಳನ್ನು ಚರ್ಚೆಗೆ ಒಳಪಡಿಸುವುದು ಯಾವಾಗಲೂ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ 2014ರ ಚುನಾವಣಾ ಪೂರ್ವ ಚರ್ಚೆಗಳಲ್ಲಿ ಆರೋಗ್ಯ ಕ್ಷೇತ್ರ ಹೆಚ್ಚಿನ ಗಮನವನ್ನು ಪಡೆಯಲೇ ಇಲ್ಲ! ಭಾರತದ ಆರೋಗ್ಯ ಕ್ಷೇತ್ರದ ಸ್ಥಿತಿಗತಿ ಕುರಿತು ಸಮೀರನ್ ನಂದಿ, ಕೇಶವ ದೇಸಿರಾಜು ಮತ್ತು ಸಂಜಯ್ ನಗ್ರಾಲ್ ಅವರು ಸಂಪಾದಿಸಿರುವ ಈ ಕೃತಿಯಲ್ಲಿ ವಿವರವಾಗಿ ಚರ್ಚಿಸಿದ್ದಾರೆ. ನಮ್ಮ ಪ್ರೀತಿಯ ಭಾರತ ಎಲ್ಲಿ ಮತ್ತು ಹೇಗೆ ಎಡವಿದೆ ಎನ್ನುವುದನ್ನು ಅರಿಯಲು ಈ ಕೃತಿ ಸಹಾಯಕವಾಗುತ್ತದೆ. ಹಾಗೆ, ಈಗಿರುವ ಸಮಸ್ಯೆಗಳ ಹಿಂದಿನ ಕಾರಣಗಳೇನು ಮತ್ತು ಸಾಧ್ಯವಿರಬಹುದಾದ ಉತ್ತರಗಳೇನು ಎನ್ನುವುದನ್ನು ಕೃತಿ ವಿವರಿಸುತ್ತದೆ.

ಭಾರತದ ಆರೋಗ್ಯ ಕ್ಷೇತ್ರದ ಸಂಕಟಕ್ಕೆ ಮೂಲ ಕಾರಣವೇನು? ಇದಕ್ಕೆ ಸಿಗುವ ತಕ್ಷಣದ ಉತ್ತರದ ಕುರಿತು ನಾವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಏಕೆಂದರೆ ಈ ಉತ್ತರದಾಚೆಗೆ ನಮ್ಮ ಅರಿವನ್ನು ವಿಸ್ತರಿಸಿಕೊಳ್ಳುವ ಅಗತ್ಯವಿರುತ್ತದೆ. ಇಲ್ಲದೆ ಹೋದಲ್ಲಿ, ಬಹಳ ತೆಳುವಾದ ಚರ್ಚೆಯಲ್ಲಿ ಇದು ಅಂತ್ಯಗೊಳ್ಳುವ ಅಪಾಯವಿರುತ್ತದೆ. ಭಾರತ ತನ್ನ ರಾಷ್ಟ್ರೀಯ ತಲಾ ಆದಾಯದ (ಜಿಡಿಪಿ) ಶೇ.ಒಂದು ಅಥವಾ ಅದಕ್ಕಿಂತಲೂ ಕಡಿಮೆ ವೆಚ್ಚವನ್ನು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಮಾಡುತ್ತಾ ಬಂದಿದೆ. ಇದರ ಮೂರು ಪಟ್ಟು ವೆಚ್ಚವನ್ನು ಪಕ್ಕದ ಚೀನಾ ದೇಶ ಮಾಡುತ್ತದೆ! ಬಿತ್ತಿದಂತೆ ಬೆಳೆ. ಇತರ ದೇಶಗಳು ಹೆಚ್ಚಿನ ಸಂಪನ್ಮೂಲವನ್ನು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿ ಸಾಧಿಸಿರುವ ಸಾಧನೆಗಳನ್ನು, ನಾವು ಅದೇ ರೀತಿಯಲ್ಲಿ ಸಂಪನ್ಮೂಲವನ್ನು ವಿನಿಯೋಗಿಸದೆ ಸಾಧಿಸಲು ಆಗುವುದಿಲ್ಲ ಎನ್ನುವುದೇ ತಕ್ಷಣಕ್ಕೆ ಮಂಡಿತವಾಗುವ ಉತ್ತರವಾಗಿರುತ್ತದೆ.

ಮೇಲ್ನೋಟಕ್ಕೆ, ಭಾರತದ ಆರೋಗ್ಯ ಕ್ಷೇತ್ರದ ಅನಾರೋಗ್ಯಕ್ಕೆ ಇದುವೇ ಮೂಲ ಕಾರಣ ಎನಿಸಿಬಿಡುತ್ತದೆ. ಆದರೆ ವಿಷಯ ಇನ್ನೂ ಗಂಭೀರವಾಗಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ರಾಷ್ಟ್ರೀಯ ತಲಾ ಆದಾಯದ ಶೇ. ಒಂದರಷ್ಟನ್ನು ಮಾತ್ರ ಖರ್ಚು ಮಾಡುತ್ತಿರುವುದು ಸಮಸ್ಯೆಯ ಒಂದು ಮುಖ ಮಾತ್ರ ಆಗಿರುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಸಂಪನ್ಮೂಲವನ್ನು ವಿನಿಯೋಗಿಸದೆ ಇರುವ ವಿಚಾರ, ಇತರ ಲೋಪಗಳನ್ನು ಮುಚ್ಚಿ ಹಾಕಿಬಿಡುತ್ತದೆ. ಈ ಕೃತಿಯಲ್ಲಿ ದಾಖಲಾಗಿರುವ ಕೆಲವು ಲೇಖನಗಳು ಸಮರ್ಥವಾಗಿ ವಿವರಿಸುವ ಹಾಗೆ, ಭಾರತದ ಆರೋಗ್ಯ ಕ್ಷೇತ್ರದ ಅನಾರೋಗ್ಯಕ್ಕೆ ಇನ್ನೂ ಅನೇಕ ಬಲವಾದ ಕಾರಣಗಳು ಇವೆ. ಭಾರತದ ಒಟ್ಟಾರೆ ಆರೋಗ್ಯ ಕ್ಷೇತ್ರದ ರಚನೆಯೇ ದೋಷಪೂರಿತವಾಗಿಬಿಟ್ಟಿದೆ. ಈ ಕೃತಿಯಲ್ಲಿ ಇರುವ ಸಂಶೋಧನೆಯನ್ನು ಆಧರಿಸಿದ ಲೇಖನಗಳು ವಿವರವಾಗಿ ಈ ದೋಷಗಳನ್ನು ನಮ್ಮ ಮುಂದೆ ಇಡುತ್ತವೆ.

ಕೃತಿಯಲ್ಲಿರುವ ಲೇಖನಗಳ ಮೂಲಕ ಸಂಪಾದಕರು ಆರೋಗ್ಯ ಕ್ಷೇತ್ರದಲ್ಲಿನ ಭ್ರಷ್ಟಾಚಾರವನ್ನು ಗುರುತಿಸುತ್ತಾರೆ. ಇದನ್ನು ಕೇಳಿದಾಗ ಬಹಳ ಬೇಸರವಾಗುತ್ತದೆ. ಆದರೆ ಲೇಖನಗಳು ಮಂಡಿಸುವ ಸತ್ಯವು ಅಂಕಿ-ಸಂಖ್ಯೆಯಾಧಾರಿತ ವೈಜ್ಞಾನಿಕ ಅಧ್ಯಯನದ ಫಲ ಎನ್ನುವುದನ್ನು ಗಮನಿಸಿದಾಗ ಒಪ್ಪಿಕೊಳ್ಳಲೇಬೇಕಾಗುತ್ತದೆ. ಭಾರತದ ಆರೋಗ್ಯ ವ್ಯವಸ್ಥೆಯ ನಿರ್ವಹಣೆಯ ಹೊಣೆಯನ್ನು ನಿಭಾಯಿಸುತ್ತಿರುವ ವಿವಿಧ ವ್ಯಕ್ತಿಗಳ ಮತ್ತು ಸಂಸ್ಥೆಗಳ ದುರಾಸೆ ಮತ್ತು ದುಷ್ಟತನಗಳೇ ಇದಕ್ಕೆಲ್ಲ ಕಾರಣ ಎನ್ನುವುದನ್ನು ಗುರುತಿಸದೆ ಬೇರೆ ದಾರಿಯಿರುವುದಿಲ್ಲ. ಭಾರತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಉಚಿತವಾಗಿ ನೀಡುವ ಅನೇಕ ಸೇವೆಗಳನ್ನು ಪಡೆಯುವಲ್ಲಿ ಬಡವರು ಅಸಮರ್ಥರಾಗುತ್ತಾರೆ ಎನ್ನುವುದನ್ನು ಗಮನಿಸಿದಾಗ, ಇಂತಹ ಪರಿಸ್ಥಿತಿ ಹೇಗೆ ನಿರ್ಮಾಣವಾಯಿತೆಂದು ಆಲೋಚಿಸಬೇಕಾಗುತ್ತದೆ. ಖಾಸಗಿಯಾಗಿ ಆರೋಗ್ಯ ಸೇವೆಯನ್ನು ನೀಡುವವರು ಹಣದ ಪಾವತಿಯಾಗದೆ ಸ್ವಲ್ಪವು ಅಲುಗಾಡುವುದಿಲ್ಲ. ಹೆಸರಿಗೆ ಕೆಲವು ಸೇವೆಗಳು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಉಚಿತವೆಂದು ಘೋಷಣೆಯಾಗಿದ್ದರೂ, ಹಣವಿಲ್ಲದೇ ಇಲ್ಲಿ ಯಾವುದೇ ಸೇವೆ ದೊರೆಯುವುದಿಲ್ಲ. ಇವರಿಂದ ಸೇವೆ ಪಡೆಯುವುದು ಬಹುತೇಕ ಭಾರತೀಯರಿಗೆ ಸಾಧ್ಯವೇ ಇರುವುದಿಲ್ಲ. ಇಲ್ಲಿ ಮಂಡಿತವಾಗಿರುವ ಇನ್ನೂ ಅನೇಕ ಅಧ್ಯಯನಗಳು ಭಾರತದ ಆರೋಗ್ಯ ವ್ಯವಸ್ಥೆಯ ಇತರ ಕೆಲವು ದೋಷಗಳನ್ನು ಪಟ್ಟಿ ಮಾಡುತ್ತವೆ.

ಭಾರತದಲ್ಲಿ ಉತ್ತಮ ಗುಣಮಟ್ಟದ ಔಷಧಿಗಳ ಲಭ್ಯತೆಯ ಕೊರತೆಯಿದೆ. ನಕಲಿ ಔಷಧಿಗಳನ್ನು ತಯಾರಕರು ಮತ್ತು ವಿತರಣೆಗಾರರು ಬಹಳ ಸುಲಭವಾಗಿ ನಮ್ಮ ನಡುವೆ ತಂದು ಹಾಕುತ್ತಾರೆ. ಇಂತಹುದೇ ಅಪರಾಧಗಳು ವೈದ್ಯಕೀಯ ಉಪಕರಣಗಳು ಮತ್ತು ಸಾಧನ-ಸಲಕರಣೆಗಳ ವಿಚಾರದಲ್ಲೂ ಯಾವುದೇ ಎಗ್ಗಿಲ್ಲದೆ ನಡೆಯುತ್ತಿದೆ. ಇಂತಹ ಅವಘಡಗಳನ್ನು ತಡೆಗಟ್ಟುವಲ್ಲಿ ಕಾನೂನುಗಳು ಪ್ರಬಲವಾದ ಪಾತ್ರವನ್ನು ನಿರ್ವಹಿಸುತ್ತವೆ. ಅಂತಹ ಕಾನೂನುಗಳು ನಮ್ಮ ದೇಶದಲ್ಲೂ ಇವೆ. ಆದರೆ ಬಹಳ ಸುಲಭವಾಗಿ ಇವುಗಳನ್ನು ದಾಟಿ ಹೋಗಲು ಸಾಧ್ಯವಿದೆ. ಇಂತಹ ಕಾನೂನಿನ ಉಲ್ಲಂಘನೆಗೆ ಸಹಕರಿಸಿದವರಿಗೆ ಹಣದ ಸುರಿಮಳೆಯಾಗುತ್ತದೆ. ವೈದ್ಯಕೀಯ ಸೇವೆಯನ್ನು ನೀಡುವ ಸಂಸ್ಥೆಗಳನ್ನು ಹೆಸರಿಗಷ್ಟೇ ಬಲವಾಗಿರುವ ಕಾನೂನುಗಳು ನಿರ್ದೇಶಿಸುತ್ತವೆ; ಇವು ಕಾಗದದ ಹುಲಿಗಳಾಗಿ ಮಾತ್ರ ಉಳಿದಿವೆ.

ದೇಶದ ಆರೋಗ್ಯ ಕ್ಷೇತ್ರದ ಅತ್ಯುನ್ನತ ಸಂಸ್ಥೆಯಾಗಿರುವ ಎಂಸಿಐ(ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ) ಕೂಡ ಉತ್ತಮ ಚಾರಿತ್ರ್ಯವನ್ನು ಹೊಂದಿರುವುದಿಲ್ಲ. ಅದರ ಇತಿಹಾಸ ಅನೇಕ ಅವಮಾನ ಮತ್ತು ಅನುಮಾನಗಳಿಂದ ತುಂಬಿ ಹೋಗಿದೆ. ದೇಶದ ವೈದ್ಯಕೀಯ ಸೇವೆಗಳ ಉಸ್ತುವಾರಿಯನ್ನು ಮತ್ತು ವಿವಿಧ ಭಾಗಗಳ ನಡುವೆ ಸಮನ್ವಯತೆಯನ್ನು ಸಾಧಿಸಬೇಕಾಗಿರುವ ಕರ್ತವ್ಯವನ್ನು ಎಂಸಿಐ ಹೊಂದಿದೆ. ಇದರ ಜೊತೆಗೆ ದೇಶದಲ್ಲಿ ಸ್ಥಾಪನೆಯಾಗುವ ವೈದ್ಯಕೀಯ ಕಾಲೇಜುಗಳ ಗುಣಮಟ್ಟವನ್ನು ಕಾಪಾಡುವ ಹೊಣೆಗಾರಿಕೆಯನ್ನು ಇದು ಹೊಂದಿರುತ್ತದೆ. ವೈದ್ಯಕೀಯ ಕಾಲೇಜುಗಳ ಸ್ಥಾಪನೆಯ ವಿಚಾರದಲ್ಲಿ ಇರುವ ತನ್ನ ಅಧಿಕಾರವನ್ನು ಬಳಸಿಕೊಂಡು ಎಂಸಿಐ ಸಂಸ್ಥೆ ಅನೇಕ ಹಂತದಲ್ಲಿ ಯಾವುದೇ ಅಡೆ-ತಡೆಯಿಲ್ಲದ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಹೀಗೆ ಭಾರತದ ಆರೋಗ್ಯ ಕ್ಷೇತ್ರವನ್ನು ಕಾಡುತ್ತಿರುವ ರೋಗಗಳ ಕುರಿತು ಪಟ್ಟಿಯನ್ನು ವಿಸ್ತರಿಸುತ್ತಲೇ ಸಾಗಬಹುದು.

ಈ ಕೃತಿಯ ಓದುಗರು ಇಲ್ಲಿ ಚರ್ಚಿತವಾಗಿರುವ ವಿದ್ವತ್‌ಪೂರ್ಣ ಲೇಖನಗಳಲ್ಲಿ ಹೆಚ್ಚಿನ ವಿವರಗಳನ್ನು ಕಾಣಬಹುದು. ಭಾರತದ ಆರೋಗ್ಯ ಕ್ಷೇತ್ರದಲ್ಲಿ ಸಂಭವಿಸಿರುವ ಮೂರು ದೋಷಗಳ ಕುರಿತು ಚರ್ಚಿಸುವುದರೊಂದಿಗೆ ನನ್ನ ಈ ಮುನ್ನುಡಿಯನ್ನು ಅಂತ್ಯಗೊಳಿಸುತ್ತೇನೆ. ದೇಶದ ಪ್ರಾಥಮಿಕ ಆರೋಗ್ಯ ಸೇವೆಯ ವ್ಯವಸ್ಥೆಯನ್ನು ನಿರ್ಲಕ್ಷಿಸಿರುವುದು ಮೊದಲ ದೋಷವಾಗಿರುತ್ತದೆ. ಇದೊಂದು ಅಚ್ಚರಿದಾಯಕ ವಿಷಯವಾಗಿರುತ್ತದೆ. ಪ್ರಾಥಮಿಕ ಹಂತದಲ್ಲಿ ವೈದ್ಯಕೀಯ ಸೇವೆ ನೀಡುವುದು ಮತ್ತು ಹೊರ ರೋಗಿಗಳಿಗೆ ಚಿಕಿತ್ಸೆ ಒದಗಿಸುವುದು ಹೇಳಿಕೊಳ್ಳುವಂತಹ ಲಾಭವನ್ನು ತರುವು ದಿಲ್ಲ. ಹಾಗಾಗಿ ಇದಕ್ಕೆ ತೊಡಗಿಸುವ ಬಂಡವಾಳ ಯಾವಾಗಲೂ ಕಡಿಮೆಯೇ. ಒಟ್ಟಾರೆ ವೈದ್ಯಕೀಯ ಸೇವೆಯಲ್ಲಿ ಪ್ರಾಥಮಿಕ ಆರೋಗ್ಯ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಅರಿಯಲು ಭಾರತವು ಸೋತಿರುವುದೇ ಇಂದಿನ ಸ್ಥಿತಿಗೆ ಮೂಲ ಕಾರಣವಾಗಿದೆ. ಭಾರತದ ಪ್ರಾಥಮಿಕ ಆರೋಗ್ಯ ಸೇವಾ ವ್ಯವಸ್ಥೆಯು ಎರಡು ರೀತಿಯ ಸಮಸ್ಯೆಗಳಿಂದ ನರಳುತ್ತಿದೆ: ಬಂಡವಾಳದ ಕೊರತೆ ಮತ್ತು ಸಿಬ್ಬಂದಿಯ ಭ್ರಷ್ಟ ನಡವಳಿಕೆ. ಎರಡನೆಯ ಅಂಶ ದಿನನಿತ್ಯ ಕಾಣುವಂತದ್ದಾಗಿರುತ್ತದೆ.

ಪ್ರಾಥಮಿಕ ಆರೋಗ್ಯ ವ್ಯವಸ್ಥೆಗಳಿಗೆ ನಿಯೋಜಿತರಾಗಿರುವ ಸಿಬ್ಬಂದಿ ಸಾಮಾನ್ಯವಾಗಿ ಗೈರು ಹಾಜರಾಗಿರುತ್ತಾರೆ. ಜೊತೆಗೆ, ಅನೇಕ ವೇಳೆ ಸಾರ್ವಜನಿಕ ಆರೋಗ್ಯ ಸೇವೆಯ ವೈದ್ಯರು ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವಂತೆ ಹೆಚ್ಚು ಹೆಚ್ಚು ಸೂಚಿಸುತ್ತಾರೆ. ಇವರು ಸೂಚಿಸುವ ಖಾಸಗಿ ವೈದ್ಯ ಸೇವಾಕೇಂದ್ರಗಳು ಹೆಚ್ಚಿನ ಹಣವನ್ನು ರೋಗಿಗಳಿಂದ ವಸೂಲಿ ಮಾಡುತ್ತವೆ. ಎಷ್ಟೋ ವೇಳೆ ನುರಿತ ವೈದ್ಯರೂ ಸಹ ಇಂತಹ ಸ್ಥಳಗಳಲ್ಲಿ ಇರುವುದಿಲ್ಲ. ಗ್ರಾಮೀಣ ಭಾರತದಲ್ಲಿ ಇಂತಹ ಮೋಸಗಾರರು ಮತ್ತು ಇವರ ಜೊತೆಗೆ ನಕಲಿ ವೈದ್ಯರು ಪ್ರಾಥಮಿಕ ಆರೋಗ್ಯ ವ್ಯವಸ್ಥೆಯನ್ನು ಪೂರ್ಣವಾಗಿ ಆಕ್ರಮಿಸಿಕೊಂಡಿದ್ದಾರೆ. ಸರಕಾರದ ಕಾರ್ಯ ನೀತಿಗಳಲ್ಲಿರುವ ಗೊಂದಲ ಮತ್ತು ಜನರ ಆಲೋಚನೆಗಳಲ್ಲಿ ಇರುವ ದೋಷವು ಇಂತಹ ಅಪಾಯಕಾರಿ ಸನ್ನಿವೇಶದ ನಿರ್ಮಾಣಕ್ಕೆ ಕಾರಣವಾಗಿರುತ್ತದೆ. ಖಾಸಗಿ ವೈದ್ಯಕೀಯ ಸೇವೆಯನ್ನು ಅವಲಂಬಿಸುವ ಧಾವಂತವನ್ನು ತೋರಿಸಿದ್ದು ಭಾರತದ ಎರಡನೇ ದೋಷವಾಗಿರುತ್ತದೆ. ಅದರಲ್ಲೂ ಸಾರ್ವಜನಿಕ ಆರೋಗ್ಯ ಸೇವೆಯನ್ನು ನಿರ್ಲಕ್ಷಿಸಿ, ಖಾಸಗಿ ಸೇವೆಯನ್ನು ಅವಲಂಬಿಸುವ ನಿರ್ಧಾರ ಇದನ್ನು ಇನ್ನಷ್ಟು ಸಮಸ್ಯಾತ್ಮಕವಾಗಿಸಿದೆ.

ಮಾರುಕಟ್ಟೆಯಾಧಾರಿತ ವೈದ್ಯಕೀಯ ಸೇವೆ ಎಂದೆಂದಿಗೂ ಅತ್ಯುತ್ತಮವಾದುದು ಎನ್ನುವ ವಾದವನ್ನು ಗಂಭೀರವಾದ ಅಧ್ಯಯನಗಳಿಗೆ ಒಳಪಡಿಸದೆ ಒಪ್ಪಲಾಗಿದೆ. ಆರೋಗ್ಯ ಸೇವೆ ಎನ್ನುವುದು ವಿಶೇಷವಾದ ಸರಕಾಗಿದ್ದು, ಉಳಿದ ಸರಕುಗಳ ನಿರ್ವಹಣೆಯಲ್ಲಿ ಮಾರುಕಟ್ಟೆ ತೋರುವ ವರ್ತನೆ ಇಲ್ಲಿ ಕಾಣಿಸುವುದು ಸುಲಭವಾಗಿರುವುದಿಲ್ಲ. ನಾವೊಂದು ಹಲ್ಲುಜ್ಜುವ ಬ್ರಷ್ ಕೊಂಡರೆ, ಬ್ರಷ್ ಅನ್ನುವ ಉತ್ಪನ್ನದ ಬೆಲೆ ಎಷ್ಟಿರಬಹುದು ಮತ್ತು ಅದರ ಉಪಯೋಗ ಎಷ್ಟು ಎನ್ನುವ ಅಂದಾಜನ್ನು ಮಾಡಲು ಸಾಧ್ಯವಿದೆ. ಆದರೆ ಆರೋಗ್ಯ ಸೇವೆಯನ್ನು ಪಡೆಯಲು ಹೋದಾಗ ಇದು ಸಾಧ್ಯವಿರುವುದಿಲ್ಲ -ರೋಗ ಯಾವುದು ಮತ್ತು ಅದರ ಪರಿಣಾಮಗಳೇನು ಎನ್ನುವುದೇ ಅನೇಕ ವೇಳೆ ತಿಳಿದಿರುವುದಿಲ್ಲ. ಜೊತೆಗೆ ಈ ರೋಗವನ್ನು ಓರ್ವ ವೈದ್ಯ ಹೇಗೆ ಮತ್ತು ಎಷ್ಟರಮಟ್ಟಿಗೆ ನಿಯಂತ್ರಿಸುವ ಇಲ್ಲವೇ ವಾಸಿ ಮಾಡುವ ಸಾಧ್ಯತೆ ಇದೆ ಎಂದು ಅಂದಾಜು ಮಾಡುವುದು ಸಾಧ್ಯವಿರುವುದಿಲ್ಲ. ಹೀಗೆ ಸೇವೆಯನ್ನು ಕೊಡುವವರು ಮತ್ತು ಪಡೆಯುವವರ ನಡುವೆ ಇರುವ ಮಾಹಿತಿಯ ಕಂದಕ ಅನೇಕ ಬಾರಿ ಶೋಷಣೆಯ ವರ್ತನೆಗಳಿಗೆ ಅವಕಾಶವನ್ನು ನೀಡುತ್ತದೆ. ಮುಂದುವರಿದು ಹೇಳುವುದಾದರೆ, ಹಲ್ಲುಜ್ಜುವ ಬ್ರಷ್ ಕೊಂಡಾಗ, ಆ ಬ್ರಷ್ ನಿಮ್ಮ ಮೇಲೆ ಯಾವ ಪರಿಣಾಮವನ್ನು ಬೀರಬಹುದೆಂದು ಆಲೋಚಿಸಿದರೆ ಸಾಕಾಗುತ್ತದೆ. ಆದರೆ ಚಿಕಿತ್ಸೆಯ ವಿಚಾರದಲ್ಲಿ ಇದು ಭಿನ್ನವಾಗಿರುತ್ತದೆ.

ನಮಗೆ ಇರುವ ಕಾಯಿಲೆಯನ್ನು ವಾಸಿಗೊಳಿಸುವುದರ ಜೊತೆಗೆ ಅದು ಇತರರಿಗೆ ಹಬ್ಬದಂತೆ(ಸಾಂಕ್ರಾಮಿಕ ರೋಗವಾಗಿದ್ದ ಸಂದರ್ಭದಲ್ಲಿ) ಜೋಪಾನಿಸುವ ಅಗತ್ಯವೂ ಇರುತ್ತದೆ. ಅರ್ಥಶಾಸ್ತ್ರಜ್ಞರು ಸಾಮಾನ್ಯವಾಗಿ ಮಾರುಕಟ್ಟೆಯು ನೀಡುವ ಸೇವೆಗಳ ಮೇಲೆ ಉಂಟಾಗಬಹುದಾದ ಬಾಹ್ಯ ಪರಿಣಾಮಗಳ ಕುರಿತು ಅಂದಾಜು ಮಾಡುತ್ತಾರೆ. ವೈದ್ಯಕೀಯ ಸೇವೆಯಲ್ಲಿ ಬಾಹ್ಯ ಪರಿಣಾಮಗಳ ಒಟ್ಟಾರೆ ಫಲ ಉಳಿದ ಸೇವೆಗಳಿಗಿಂತ ಭಿನ್ನವಾಗಿರುತ್ತದೆ. ಅನೂಹ್ಯ ಬಾಹ್ಯ ಪರಿಣಾಮಗಳು ಮತ್ತು ಮಾಹಿತಿಯ ಕೊರತೆಗಳು ಮಾರುಕಟ್ಟೆಯಾಧಾರಿತ ವೈದ್ಯಕೀಯ ಸೇವೆಯ ಲಾಭಗಳನ್ನು ತಿರುಚುವ ಸ್ಥಿತಿಯನ್ನು ನಿರ್ಮಿಸುತ್ತವೆ. ಇದರ ಕುರಿತು ಸಾಕಷ್ಟು ಅಧ್ಯಯನಗಳನ್ನು ನಡೆಸಿರುವ ಪೌಲ್ ಸಾಮ್ಯುಲ್ಸನ್ ಮತ್ತು ಕೆನೆಥ್ ಆರೋ ಅವರು ಎರಡು ದಶಕಗಳ ಹಿಂದೆಯೇ(1963) ಮಂಡಿಸಿದ್ದ ವಾದ ಹೀಗಿದೆ: ಲಾಭ ಎನ್ನುವ ಅಂಶವೇ ನಂಬಿಕೆಯಾಧಾರಿತ ಸಂಬಂಧಗಳನ್ನು ನಿರಾಕರಿಸುತ್ತದೆ.

ಆರೋಗ್ಯ ಸೇವೆಯ ಕುರಿತು ಪರಿಣಾಮಕಾರಿ ಸಾರ್ವಜನಿಕ ಚರ್ಚೆಗಳ ಕೊರತೆ ಮೂರನೆಯ ದೋಷವಾಗಿರುತ್ತದೆ. ಇಂತಹ ಚರ್ಚೆಗಳು ಸಾರ್ವಜನಿಕ ಕಾರ್ಯನೀತಿಗಳ ನಿರೂಪಣೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಇಂತಹ ಸನ್ನಿವೇಶದ ಅನುಪಸ್ಥಿತಿಯು, ಶೋಷಿಸುವ ಮತ್ತು ಅಸರ್ಮಪಕವಾಗಿರುವ ಆರೋಗ್ಯ ಸೇವಾ ವ್ಯವಸ್ಥೆ ಭಾರತದಲ್ಲಿ ಜೀವಂತವಿರಲು ಕಾರಣವಾಗಿದೆ. ಭಾರತದ ಆರೋಗ್ಯ ವ್ಯವಸ್ಥೆಯು ಹೊಂದಿರುವ ದೋಷಗಳ ಕಾರಣದಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಸಾರ್ವಜನಿಕವಾಗಿ ಚರ್ಚೆಗಳೇ ನಡೆಯದ ಪರಿಸ್ಥಿತಿ ಇದೆ. ಇದರ ಕುರಿತು ಚರ್ಚೆಗಳನ್ನು ಆರಂಭಿಸುವುದೇ ಇದಕ್ಕಿರುವ ಏಕೈಕ ಪರಿಹಾರವಾಗಿರುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)