varthabharthi


ರಾಷ್ಟ್ರೀಯ

ದೇಶದಲ್ಲಿ ಎರಡು ಕೋಟಿ ದಾಟಿದ ಕೊರೋನ ಸೋಂಕು ಪ್ರಕರಣ

ವಾರ್ತಾ ಭಾರತಿ : 4 May, 2021

ಹೊಸದಿಲ್ಲಿ : ಭಾರತ ಎರಡು ಕೋಟಿಗಿಂತ ಅಧಿಕ ಕೊರೋನ ಪ್ರಕರಣಗಳು ವರದಿಯಾದ ಜಗತ್ತಿನ ಎರಡನೇ ದೇಶ ಎಂಬ ಕುಖ್ಯಾತಿಗೆ ಸೋಮವಾರ ಪಾತ್ರವಾಗಿದೆ.

ದೇಶದಲ್ಲಿ ಸೋಮವಾರ 3,55,832 ಹೊಸ ಕೊರೋನ ಪ್ರಕರಣಗಳು ಮತ್ತು 3,502 ಸಾವು ವರದಿಯಾಗಿದೆ.

ಕಳೆದ ವರ್ಷದ ಮಾರ್ಚ್ 3ರಂದು ಭಾರತದ ಮೊದಲ ಪ್ರಕರಣ ವರದಿಯಾಗಿತ್ತು. ಒಟ್ಟು ಪ್ರಕರಣಗಳ ಸಂಖ್ಯೆ 50 ಲಕ್ಷ ತಲುಪಲು 197 ದಿನ ತೆಗೆದುಕೊಂಡಿತ್ತು. ಸೆಪ್ಟೆಂಬರ್ 15ರಂದು 50 ಲಕ್ಷದ ಗಡಿ ದಾಟಿದ್ದ ಒಟ್ಟು ಪ್ರಕರಣಗಳ ಸಂಖ್ಯೆ ಮತ್ತೆ 94 ದಿನದಲ್ಲಿ ದ್ವಿಗುಣಗೊಂಡಿತು. 121 ದಿನಗಳ ಬಳಿಕ ಪ್ರಕರಣಗಳ ಸಂಖ್ಯೆ 1.5 ಕೋಟಿ ದಾಟಿದರೆ, ಕೊನೆಯ 50 ಲಕ್ಷ ಪ್ರಕರಣಗಳು ಕೇವಲ 15 ದಿನಗಳಲ್ಲಿ ವರದಿಯಾಗಿವೆ. ಇದು ದೇಶದಲ್ಲಿ ಎರಡನೇ ಅಲೆಯ ತೀವ್ರತೆಯನ್ನು ಸೂಚಿಸುತ್ತದೆ.

ಕೆಲ ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್‌ವಾಲ್ ಸುದ್ದಿಗೋಷ್ಠಿಯಲ್ಲಿ, "ಬಿಹಾರ, ರಾಜಸ್ಥಾನ, ಹರ್ಯಾಣ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿ ದೈನಿಕ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ" ಎಂದು ಹೇಳಿದ್ದಾರೆ. ದೇಶದ 12 ರಾಜ್ಯಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ ಎಂದು ಅವರು ವಿವರಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)