varthabharthi


ರಾಷ್ಟ್ರೀಯ

ಅಮಿತ್ ಶಾ ಕೆಲಸಕ್ಕೆ ಬಾರದ ರಾಜಕೀಯ ಮತ್ತು ಚುನಾವಣಾ ಮ್ಯಾನೇಜರ್: ಪ್ರಶಾಂತ್ ಕಿಶೋರ್

ವಾರ್ತಾ ಭಾರತಿ : 4 May, 2021

ಪ್ರಶಾಂತ್ ಕಿಶೋರ್ / ಅಮಿತ್ ಶಾ (PTI)

ಹೊಸದಿಲ್ಲಿ : "ನಾನು ದುರಹಂಕಾರಿ ಎಂದು ಭಾವಿಸಬೇಡಿ, ಆದರೆ ಅಮಿತ್ ಶಾ ಅತ್ಯಂತ ಓವರ್-ರೇಟೆಡ್ ರಾಜಕೀಯ ಮತ್ತು ಚುನಾವಣಾ ಮ್ಯಾನೇಜರ್ ಆಗಿದ್ದಾರೆ. ಅವರು ಸಂಪೂರ್ಣ ವಿಫಲವಾಗಿದ್ದಾರೆ. ಅವರ ಬಹಳ ಚಾಣಾಕ್ಷ ಚುನಾವಣಾ ತಂತ್ರಜ್ಞ ಎಂದು ಪ್ರಚಾರ ಪಡೆಯುತ್ತಾರೆ. ಆದರೆ ಅವರಿಗೆ ತೋರಿಸಲು ಯಾವ ಸಾಧನೆಯಿದೆ?,'' ಎಂದು ಪಶ್ಚಿಮ ಬಂಗಾಳದಲ್ಲಿ ಅಮೋಘ ಜಯ ಸಾಧಿಸಿದ ಮಮತಾ ಬ್ಯಾನರ್ಜಿ ಅವರ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

'ದಿ ಟೆಲಿಗ್ರಾಫ್‍'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, "ನಾವು ಗೆಲ್ಲುತ್ತೇವೆ ಎನ್ನುವ ವಿಶ್ವಾಸ ನನಗೆ ಯಾವತ್ತೂ ಇತ್ತು. ಆದರೆ ಹೆಚ್ಚಿನವರು ನಮ್ಮನ್ನು ನಂಬಿರಲಿಲ್ಲ. ಅಬ್ಬರದ ಪ್ರಚಾರ ಯಾವತ್ತೂ ಚುನಾವಣೆಯಲ್ಲಿ ಗೆಲುವು ತಂದು ಕೊಡುವುದಿಲ್ಲ. ಇದು ಭಾಗಶಃ ಬಿಜೆಪಿಯ ದುರಹಂಕಾರದ, ಪ್ರಮುಖವಾಗಿ ಅಮಿತ್ ಶಾ ಅವರಂತಹ ನಾಯಕರ ದುರಹಂಕಾರದ ಪರಿಣಾಮ. ಅವರೆಲ್ಲಾ ಆಕಾಶದಲ್ಲಿಯೇ ಹಾರಾಡಿ, ನೆಲವನ್ನು ಮರೆತು ಬಿಟ್ಟರು. ಬಿಜೆಪಿ ತನ್ನನ್ನು ವಿಜೇತ ಎಂದು ಘೋಷಿಸಿಕೊಂಡೇ ಚುನಾವಣಾ ಕಣಕ್ಕಿಳಿಯುತ್ತದೆ, ಅವರು ಬಹಳಷ್ಟು ಸದ್ದು ಮಾತ್ರ ಮಾಡುತ್ತಾರೆ,'' ಎಂದು ಪ್ರಶಾಂತ್ ಕಿಶೋರ್ ಹೇಳಿದರು.

"ಅಮಿತ್ ಶಾ ಅವರಿಗೆ ವೇದಿಕೆಯಲ್ಲಿ ನಿಲ್ಲಿಸಲು ಅತ್ಯಂತ ವರ್ಚಸ್ವಿ ನಾಯಕ ನರೇಂದ್ರ ಮೋದಿ ಇದ್ದಾರೆ. ಅವರ ಕೈಯ್ಯಲ್ಲಿ ಅಪಾರ ಸಂಪನ್ಮೂಲಗಳೂ ಇವೆ. ಸಂಘ ಬೆಂಬಲಿತ ಪಕ್ಷದ ದೊಡ್ಡ ಜಾಲವೂ ಇದೆ, ಸರಕಾರ ಮತ್ತದರ ಏಜನ್ಸಿಗಳ ಬೆಂಬಲವೂ ಇದೆ, ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಚುನಾವಣಾ ಆಯೋಗವೂ ಇದೆ. ಆದರೂ ಅವರು ಸೋತರು. ಇದು ನಿಮಗೆ ಅಮಿತ್ ಶಾ ಅವರ ಅಸಲಿ ಸಾಮರ್ಥ್ಯ  ಎಂದು ತೋರಿಸುತ್ತದೆ ,'' ಎಂದು ಪ್ರಶಾಂತ್ ಕಿಶೋರ್ ಹೇಳಿದರು.

"ಇದು ನನ್ನ ಮತ್ತು ಅಮಿತ್ ಶಾ ಅವರ ನಡುವಿನ ಮೂರನೇ ಮುಖಾಮುಖಿ ಹಾಗೂ ಮೂರು ಬಾರಿಯೂ ನಾನು ಅವರನ್ನು ಸೋಲಿಸಿದ್ದೇನೆ- ಬಿಹಾರದಲ್ಲಿ 2015ರಲ್ಲಿ, ದಿಲ್ಲಿಯಲ್ಲಿ ಹಾಗೂ ಈಗ ಬಂಗಾಳದಲ್ಲಿ. ಮತ್ತೆ ಆಂಧ್ರ ಮತ್ತು ಪಂಜಾಬ್‍ನಲ್ಲೂ ಅವರನ್ನು ಸೋಲಿಸಿದ್ದೇವೆ, ಅವರು ಕೆಲಸಕ್ಕೆ ಬಾರದ ರಾಜಕೀಯ ಮ್ಯಾನೇಜರ್. ಒಬ್ಬ ರಾಜಕಾರಣಿಯಾಗಿ ಅಮಿತ್ ಶಾ ಅವರ ಮೇಲೆ ನನಗೆ ದೊಡ್ಡ ಗೌರವವೇನಿಲ್ಲ ಎಂದು ನನಗೆ ಹೇಳಬೇಕಾಗಿದೆ,'' ಎಂದು ಪ್ರಶಾಂತ್ ಕಿಶೋರ್ ತೀಕ್ಷ್ಣ ಮಾತುಗಳನ್ನಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)