varthabharthi


ಕರ್ನಾಟಕ

ಮುಖ್ಯಮಂತ್ರಿ, ಆರೋಗ್ಯ ಸಚಿವರ ರಾಜೀನಾಮಗೆ ಆಗ್ರಹ

ಚಾಮರಾಜನಗರ ಜಿಲ್ಲಾಸ್ಪತ್ರೆಯ ಘಟನೆ ಸರಕಾರ ನಡೆಸಿದ ಕಗ್ಗೊಲೆ: ಮಾಜಿ ಸಚಿವೆ ಮೋಟಮ್ಮ ವಾಗ್ದಾಳಿ

ವಾರ್ತಾ ಭಾರತಿ : 4 May, 2021

ಚಿಕ್ಕಮಗಳೂರು, ಮೇ 4: ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರಗಳೇ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಅಸುನೀಗಿದ 24 ಮಂದಿ ಅಮಾಯಕರ ಸಾವಿಗೆ ನೇರ ಕಾರಣ. ಇದು ಸರಕಾರ ನಡೆಸಿದ ಕಗ್ಗೊಲೆಯಾಗಿದೆ. ಈ ಘಟನೆ ಸರಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದ್ದು, ಘಟನೆಗೆ ನೈತಿಕ ಹೊಣೆ ಹೊತ್ತು ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಹಿರಿಯ ನಾಯಕಿ, ಮಾಜಿ ಸಚಿವೆ ಮೋಟಮ್ಮ ಆಗ್ರಹಿಸಿದ್ದಾರೆ.

ಈ ಸಂಬಂದ ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋವಿಡ್-19 ಎರಡನೇ ಅಲೆ ದೇಶಾದ್ಯಂತ ಉಲ್ಭಣಗೊಳ್ಳುವ ಸಾಧ್ಯತೆಗಳ ಈ ಹಿಂದೆಯೇ ರಾಜ್ಯ, ಕೇಂದ್ರ ಸರಕಾರಕ್ಕೆ ತಜ್ಞರು ವರದಿ ನೀಡಿದ್ದರು. ಆದರೆ ಜವಬ್ದಾರಿ ಮರೆತ ಸರಕಾರಗಳು ಜನರ ಆರೋಗ್ಯ ರಕ್ಷಣೆಗಾಗಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವುದನ್ನು ಬಿಟ್ಟು ಅಧಿಕಾರದ ಆಸೆ, ಪ್ರತಿಷ್ಟೆಗಾಗಿ ರಾಜಕೀಯ ಸಮಾವೇಶ, ರ್ಯಾಲಿಯತ್ತ ಗಮನವನ್ನು ಕೇಂದ್ರೀಕರಿಸಿತ್ತು. ವಿರೋಧದ ಮಧ್ಯೆಯೂ ಕುಂಭಮೇಳದಂತಹ ಧಾರ್ಮಿಕ ಉತ್ಸವ ನಡೆಸಿ ದೇಶಾದ್ಯಂತ ಕೋವಿಡ್ ಸೋಂಕು ಹರಡಲು ಕಾರಣವಾಯಿತು. ಸದ್ಯ ಕೊರೋನ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು, ಪ್ರಜೆಗಳು ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್‍ನಂತಹ ಸೌಲಭ್ಯವಿಲ್ಲದೇ ಬೀದಿ ಹೆಣವಾಗುತ್ತಿರುವ ವಾತಾವರಣ ನಿರ್ಮಾಣವಾಗಿದ್ದು, ಇಂತಹ ಸಂದರ್ಭದಲ್ಲಿ ಜನರ ರಕ್ಷಣೆಗೆ ಮುಂದಾಗಬೇಕಾದ ಸರಕಾರಗಳು ಕೈಚೆಲ್ಲಿ ಕುಳಿತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಡಳಿತದ ಅನುಭವ ತೀವ್ರವಾಗಿ ಕಾಡುತ್ತಿದೆ. ಕೋವಿಡ್ ಸೋಂಕು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಇರುವ ಆಸ್ಪತ್ರೆಗಳಿಗೆ ಅಗತ್ಯ ಆಕ್ಸಿಜನ್ ಸೌಲಭ್ಯ, ಬೆಡ್‍ಗಳ ವ್ಯವಸ್ಥೆಯನ್ನು ಮಾಡಬೇಕಿತ್ತು. ಆದರೆ ಸಿಎಂ, ಆರೋಗ್ಯ ಸಚಿವರೂ ಸೇರಿದಂತೆ ಸರಕಾರ ಎಲ್ಲ ಸಚಿವರೂ ಮೈಮರೆತು ಸಿಡಿ ರಾಜಕಾರಣದಲ್ಲಿ ಮುಳುಗಿ ಹೋಗಿದ್ದರು. ಸದ್ಯ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದ್ದು, ಇಂತಹ ಸಂದರ್ಭದಲ್ಲಿ ಸರಕಾರದ ಪ್ರತಿನಿಧಿಗಳು ಪರಸ್ಪರ ಕೆಸರೆರಚಾಟದಲ್ಲಿ ನಿರತರಾಗಿದ್ದಾರೆಯೇ ಹೊರತು ಸೋಂಕಿತರು ಸಾಯುವುದನ್ನು ತಡೆಯಲು ಮುಂದಾಗುತ್ತಿಲ್ಲ ಎಂದು ಮೋಟಮ್ಮ ಟೀಕಿಸಿದ್ದಾರೆ.

ಚಾಮರಾಜನಗದ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ 24 ಮಂದಿ ಅಮಾಯಕರು ಆಕ್ಸಿಜನ್ ಕೊರತೆಯಿಂದ ಅಸುನೀಗಿದ್ದಾರೆ. ಇದು ಸರಕಾರ ಮಾಡಿರುವ ಕಗ್ಗೊಲೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರು ಹೆಚ್ಚುತ್ತಿರುವುದು ತಿಳಿದಿದ್ದರೂ ಆಕ್ಸಿಜನ್ ಕೊರತೆ ನೀಗಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‍ ಕುಮಾರ್, ಆರೋಗ್ಯ ಸಚಿವ ಡಾ.ಸುಧಾಕರ್ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿರುವುದೇ ದುರಂತಕ್ಕೆ ಕಾರಣವಾಗಿದೆ. ಸಕಾಲದಲ್ಲಿ ಆಕ್ಸಿಜನ್ ಪೂರೈಕೆ ಮಾಡದ ಸರಕಾರದ ಬೇಜವಬ್ದಾರಿತನಿಂದಾಗಿ 24 ಮಂದಿ ಅಮಾಯಕರು ಸಾವನ್ನಪ್ಪಿದ್ದಾರೆ, ಇದನ್ನು ಸರಕಾರದ ಭಾಗವಾಗಿರುವ ಸಿ.ಟಿ.ರವಿ ಸೇರಿದಂತೆ ಅನೇಕ ಶಾಸಕರು, ಸಚಿವರೂ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಈ ಘಟನೆಗೆ ನೈತಿಕ ಹೊಣೆ ಹೊತ್ತು ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮೋಟಮ್ಮ ಒತ್ತಾಯಿಸಿದ್ದಾರೆ.

ದೇಶದಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಾಗಿನಿಂದ ಪ್ರಧಾನಿ ಮೋದಿ ಮತ್ತು ರಾಜ್ಯದ ಸಿಎಂ ಯಡಿಯೂರಪ್ಪ ಸೋಂಕು ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲ್ಲಿಲ್ಲ. ಕೊರೋನ ನಿಯಂತ್ರಣಕ್ಕೆ ಅಗತ್ಯವಾಗಿದ್ದ ಪಿಪಿಇ ಕಿಟ್ ಸೇರಿದಂತೆ ಅಗತ್ಯ ಉಪಕರಣಗಖ ಖರೀದಿಯಲ್ಲೂ ಈ ಸರಕಾರಗಳು ದುಡ್ಡು ಮಾಡುವ ಸಂಚು ಮಾಡಿದರು. ಇದನ್ನು ಆರಂಭವಿದಿಂದಲೂ ಕಾಂಗ್ರೆಸ್ ಪಕ್ಷದ ವರಿಷ್ಠರು ವಿರೋಧಿಸುತ್ತಾ, ಎಚ್ಚರಿಸುತ್ತಲೇ ಬಂದಿದ್ದಾರೆ. ಆದರೆ ವಿರೋಧ ಪಕ್ಷಗಳ ಸಲಹೆ, ಸಹಕಾರವನ್ನು ಧಿಕ್ಕರಿಸಿದ ಸರಕಾರ ಸದ್ಯ ಕೊರೋನದಿಂದ ಜನರು ಬೀದಿ ಹೆಣವಾಗುತ್ತಿರುವ ಸಂದರ್ಭದಲ್ಲಿ ಅಸಹಾಯಕತೆ ಪ್ರದರ್ಶಿಸುತ್ತಾ ತನ್ನ ತಪ್ಪುಗಳನ್ನು ಮುಚ್ಚಿ ಹಾಕಲು ತೆರೆಮರೆಯಲ್ಲಿ ಹುನ್ನಾರ ಮಾಡುತ್ತಿದೆ. ಸರಕಾರದ ಈ ಬೇಜವಬ್ದಾರಿತನವನ್ನು ಕಾಂಗ್ರೆಸ್ ಪಕ್ಷ ತೀವ್ರ ಖಂಡಿಸುತ್ತದೆ ಎಂದು ತಿಳಿಸಿರುವ ಅವರು, ರಾಜ್ಯ ಸರಕಾರ ಕೊರೋನ ಸಂದಿಗ್ಧ ಪರಿಸ್ಥಿತಿ ಕೈ ಮೀರಿರುವ ಸಂದರ್ಭದಲ್ಲಿ ರಾಜ್ಯಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಬೇಕು, ಸೋಂಕಿತರು ಸಾಯುವುದನ್ನು ತಡೆಯುವ ನಿಟ್ಟಿನಲ್ಲಿ ಪ್ರತೀ ಜಿಲ್ಲಾ ಕೇಂದ್ರಗಳಿಗೆ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಆಕ್ಸಿಜನ್ ಪೂರೈಕೆ ಮಾಡಬೇಕು. ಹೆಚ್ಚು ಆಕ್ಸಿಜನ್ ಉತ್ಪಾದನೆಗೆ ಕ್ರಮಕೈಗೊಳ್ಳಬೇಕು. ಸೋಂಕು ನಿಯಂತ್ರಣದ ಸಲುವಾಗಿ ಸುಪ್ರೀಂಕೋರ್ಟ್ ಸೂಚನೆಯನ್ನು ಅವಲೋಕಿಸಿ ಜನಜೀವನಕ್ಕೆ ತೊಂದರೆಯಾಗದಂತೆ ಸೂಕ್ತ ಪರಿಹಾರ ಯೋಜನೆಗಳನ್ನು ಜಾರಿ ಮಾಡಿ, ಲಾಕ್‍ಡೌನ್ ಘೋಷಣೆ ಮಾಡಬೇಕು ಎಂದು ಮೋಟಮ್ಮ ಸರಕಾರವನ್ನು ಆಗ್ರಹಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)