varthabharthi


ಆರೋಗ್ಯ

ಕೋವಿಡ್ ನಿಂದ ಚೇತರಿಸಿಕೊಳ್ಳಲು ರೋಗಿಗಳು ಅನುಸರಿಸಬೇಕಾದ ಮಾರ್ಗ

ವಾರ್ತಾ ಭಾರತಿ : 5 May, 2021
ವಾಣಿ ಮಲಿಕ್, ಡಾ.ಅಮಿತ್ ಸರಾಫ್ (ಜ್ಯುಪಿಟರ್ ಹಾಸ್ಪಿಟಲ್,ಥಾಣೆ)

ಕೋವಿಡ್ ವರದಿಗಳ ಸತ್ಯಾಸತ್ಯತೆಯ ಬಗ್ಗೆ ಈಗಲೂ ಸಾಕಷ್ಟು ಸಂಶಯ ಜನರ ಮನಗಳಲ್ಲಿದೆ. ಆದರೆ ಒಂದು ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದರೆ ಕೋವಿಡ್ ಅನ್ನು ದೃಢಪಡಿಸಿಕೊಳ್ಳಲು ಪರೀಕ್ಷೆಯನ್ನು ಪುನರಾವರ್ತಿಸಬೇಕಿಲ್ಲ ಎನ್ನುವುದು ಮಾತ್ರ ನಿಜ. ವಿಶೇಷವಾಗಿ ಕೋವಿಡ್ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಮತ್ತು ಈಗ ಎಲ್ಲೆಲ್ಲೂ ಕೋವಿಡ್ ಇದೆ ಎಂಬ ಊಹಾಪೋಹಗಳ ಈ ಸಮಯದಲ್ಲಿ ಯಾವುದೇ ಭೀತಿಗೊಳಗಾಗದೆ ತಜ್ಞ ವೈದ್ಯರಿಂದ ಸೂಕ್ತ ಸಲಹೆಯನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ. ನೀವು ಪಾಸಿಟಿವ್ ಆಗಿದ್ದೀರಿ ಎಂದರೆ ಈಗಾಗಲೇ ಸೋಂಕು ಪೀಡಿತರಾಗಿದ್ದೀರಿ. ಇತರರಿಂದ ಪ್ರತ್ಯೇಕವಾಗಿರಲು ಆರಂಭಿಸಿ ಮತ್ತು ನಿಮ್ಮ ವೈದ್ಯರು ಹೇಳುವಂತೆ ಚಿಕಿತ್ಸೆ ಪಡೆಯಲು ಸಿದ್ಧರಾಗಿ.

ಥಾಣೆಯ ಜ್ಯುಪಿಟರ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ನ ನಿರ್ದೇಶಕ ಡಾ.ಅಮಿತ್ ಸರಾಫ್ ಅವರು ಸೂಕ್ತ ಚೇತರಿಕೆಗಾಗಿ ಕೋವಿಡ್ ರೋಗಿಗಳು ಅನುಸರಿಸಬೇಕಾದ ಕೆಲವು ಟಿಪ್ಸ್ ನೀಡಿದ್ದಾರೆ.

ಲಕ್ಷಣಗಳು ಕಾಣಿಸಿಕೊಂಡ ಆರಂಭಿಕ ದಿನಗಳಲ್ಲಿ ಎದೆಯ ಸಿಟಿ ಸ್ಕಾನ್ ಮಾಡಿಸಬೇಡಿ. ವೈದ್ಯರು ಸೂಚಿಸಿದಾಗ ಮಾತ್ರ ಪರೀಕ್ಷೆಗಳನ್ನು ಮಾಡಿಸಬೇಕು. ನೀವಾಗಿಯೇ ಸಿಟಿ ಸ್ಕಾನ್ನ್ನು ಪುನರಾವರ್ತಿಸಬೇಡಿ,ಏಕೆಂದರೆ ಚಿಕಿತ್ಸೆಯ ನಂತರವು ಚಿತ್ರಣವು ಕೆಟ್ಟದ್ದಾಗಿರಬಹುದು. ವೈದ್ಯಕೀಯ ವೃತ್ತಿಪರನಲ್ಲದ ಯಾವುದೇ ವ್ಯಕ್ತಿಯು ಸ್ವಚಿಕಿತ್ಸೆಯನ್ನು ಮಾಡಿಕೊಂಡರೆ ಅದಕ್ಕಿಂತ ಕೆಟ್ಟದ್ದು ಬೇರೆಯದಿಲ್ಲ. ಹೀಗಾಗಿ ವೈದ್ಯರು ಹೇಳುವಂತೆಯೇ ಮಾಡಿ.
 
ನಿಮ್ಮ ಕಚೇರಿಗೆ ಸಂಬಂಧಿಸಿದ ಅಧಿಕೃತ ಉದ್ದೇಶಕ್ಕಲ್ಲವಾದರೆ ನೀವು ಕೋವಿಡ್ಗೆ ನೆಗೆಟಿವ್ ಆಗಿದ್ದೀರಾ ಎನ್ನುವುದನ್ನು ತಿಳಿದುಕೊಳ್ಳಲು ಪರೀಕ್ಷೆ ಮಾಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಅಲ್ಲದೆ ಐಸೊಲೇಷನ್ನ 14 ದಿನಗಳನ್ನು ನೀವು ಪೂರ್ಣಗೊಳಿಸಿದ್ದೀರಿ ಎಂಬ ಏಕೈಕ ಕಾರಣಕ್ಕೆ,ಆದರೆ ಈಗಲೂ ನಿಮ್ಮಲ್ಲಿ ಲಕ್ಷಣಗಳಿದ್ದರೆ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಡಿ. ನೀವು ಈಗಲೂ ಕೋವಿಡ್ ಹೊಂದಿರಬಹುದಾದ ಸಾಧ್ಯತೆಯಿದೆ.
 
ಹಿಂದಿನ ತಿಂಗಳು ಕೋವಿಡ್ನಿಂದ ಗುಣಮುಖರಾಗಿ ಬಳಿಕ ನೆಗೆಟಿವ್ ಆಗಿರುವವರು ಸೇರಿದಂತೆ ಕೋವಿಡ್ಗೆ ಪಾಸಿಟಿವ್ ಆಗಿರುವ ಎಲ್ಲರೂ ಒಟ್ಟಿಗೆ ಇರಬಹುದು. ತೀವ್ರ ರೋಗಲಕ್ಷಣಗಳಿರುವ ವ್ಯಕ್ತಿಯು ಕಡಿಮೆ ಲಕ್ಷಣಗಳಿರುವ ವ್ಯಕ್ತಿಯೊಂದಿಗಿದ್ದರೆ ಅಂತಹ ವ್ಯಕ್ತಿಗೆ ಸೋಂಕು ಇನ್ನಷ್ಟು ಹೆಚ್ಚಬಹುದು ಎನ್ನುವುದು ಕೇವಲ ಮಿಥ್ಯೆಯಾಗಿದೆ.
 
ಸೌಮ್ಯದಿಂದ ಮಧ್ಯಮ ಸ್ವರೂಪದ ಲಕ್ಷಣಗಳನ್ನು ಹೊಂದಿರುವ ಹಾಲುಣಿಸುತ್ತಿರುವ ತಾಯಂದಿರು ಮಾಸ್ಕ್ ಧರಿಸುವ ಮತ್ತು ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಮಕ್ಕಳಿಗೆ ಹಾಲುಣಿಸುವುದನ್ನು ಮುಂದುವರಿಸಬಹುದು.

ಮಕ್ಕಳು ಹೆಚ್ಚಾಗಿ ಸೌಮ್ಯ ಲಕ್ಷಣಗಳನ್ನು ಹೊಂದಿರುತ್ತಾರೆ ಮತ್ತು ಜ್ವರ ಹಾಗೂ ಕೆಮ್ಮಿನ ಸಾದಾ ಔಷಧಿಗಳನ್ನು ನೀಡುವ ಮೂಲಕ ನಿರ್ವಹಿಸಬಹುದಾಗಿದೆ. ಇಂತಹ ಸಂದರ್ಭದಲ್ಲಿ ಆತಂಕಕ್ಕೊಳಗಾಗದೆ ವೈದ್ಯರನ್ನು ಸಂಪರ್ಕಿಸಿ ನಿಮ್ಮ ಮಗುವಿನ ಲಕ್ಷಣಗಳಿಗೆ ಅನುಗುಣವಾಗಿ ಅಗತ್ಯವಿರಬಹುದಾದ ಔಷಧಿಗಳ ಬಗ್ಗೆ ತಿಳಿದುಕೊಳ್ಳಬೇಕು. ಮಕ್ಕಳಲ್ಲಿ ಮಧ್ಯಮದಿಂದ ತೀವ್ರ ಸ್ವರೂಪದ ಲಕ್ಷಣಗಳಿದ್ದರೆ ಮಕ್ಕಳ ತಜ್ಞರನ್ನು ಸಂಪರ್ಕಿಸಬೇಕು.

ಕೋವಿಡ್ ಲಕ್ಷಣಗಳಿರುವವರು ಔಷಧಿಗಳನ್ನು ಸೇವಿಸಿದ ಬಳಿಕವೂ ಜ್ವರ ಮತ್ತು ಮೈಕೈ ನೋವು ಮುಂದುವರಿಯುತ್ತದೆ. ಅದನ್ನು ಕೆಲವು ದಿನಗಳ ಕಾಲ ಸಹಿಸಿಕೊಳ್ಳಿ ಮತ್ತು ಐಸೊಲೇಷನ್ನಲ್ಲಿ ಇರುವಾಗ ಪದೇ ಪದೇ ವೈದ್ಯರಲ್ಲಿಗೆ ಧಾವಿಸಬೇಡಿ.

ಮಾಮೂಲು ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಭೇಟಿ ನೀಡಬೇಡಿ,ಹಾಗೆ ಮಾಡುವುದರಿಂದ ಈ ಕೋವಿಡ್ ಸಂದರ್ಭದಲ್ಲಿ ನಿಮ್ಮ ಮೂರ್ಖತನವನ್ನು ಸಾಬೀತು ಪಡಿಸಿದಂತಾಗುತ್ತದೆ. ನೀವು ಈಗಲೂ ಮೂಗಿನ ಕೆಳಗೆ ಮಾಸ್ಕ್ ಧರಿಸುತ್ತೀರಾದರೆ ವಿಫಲ ಚಿಕಿತ್ಸೆಗಾಗಿ ವೈದ್ಯಕೀಯ ಸಿಬ್ಬಂದಿಗಳನ್ನು ದೂರುವ ಹಕ್ಕು ನಿಮಗಿಲ್ಲ.
 
ರೆಮ್ಡೆಸಿವಿರ್, ಟೋಸಿಲಿಜುಮಾಬ್, ಫ್ಯಾಬಿಫ್ಲು ಇತ್ಯಾದಿಗಳ ಹಿಂದೆ ಬೀಳಬೇಡಿ. ದೃಢೀಕೃತ ಮೂಲಗಳು ಮತ್ತು ಔಷಧಿ ಅಂಗಡಿಗಳಿಂದ ಮಾತ್ರ ಔಷಧಿಗಳನ್ನು ಖರೀದಿಸಿ. ನಿಮ್ಮ ಶರೀರದಲ್ಲಿಯ ಆಮ್ಲಜನಕದ ಮಟ್ಟ ಮತ್ತು ಉಷ್ಣತೆಯ ಮೇಲೆ ನಿಗಾಯಿರಿಸುವುದು ನೀವು ಮಾಡಬಹುದಾದ ಏಕೈಕ ಸ್ಮಾರ್ಟ್ ಕೆಲಸವಾಗಿದೆ. ನಿರಂತರವಾಗಿ ಹೆಚ್ಚಿನ ಉಷ್ಣತೆಯಿದ್ದರೆ ಮತ್ತು ಆಮ್ಲಜನಕದ ಮಟ್ಟ ಶೇ.92ಕ್ಕಿಂತ ಕಡಿಮೆಯಿದ್ದರೆ ಖಂಡಿತವಾಗಿಯೂ ಆಮ್ಲಜನಕವನ್ನು ಪಡೆಯುವುದು ಮತ್ತು ಆಸ್ಪತ್ರೆಗೆ ದಾಖಲಾಗುವುದು ಅಗತ್ಯವಾಗುತ್ತದೆ. 

ಆಹಾರದ ವಿಷಯದಲ್ಲಿ ಯಾವುದೇ ಪಥ್ಯವನ್ನು ಮಾಡಬೇಕಿಲ್ಲ. ನಿಮಗೆ ಬೇಕಾದ್ದನ್ನು ತಿನ್ನಬಹುದು,ಆದರೆ ಐಸ್ಕ್ರೀಂ ಮತ್ತು ತಂಪು ಪಾನೀಯಗಳಿಂದ ದೂರವಿರಿ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ರೋಗಿಗಳು ಮೊದಲಿನಂತೆಯೇ ಆಹಾರವನ್ನು ಸೇವಿಸಿ. ನಿಮಗೆ ವಾಂತಿ ಅಥವಾ ಜಠರದುರಿತ ಸಮಸ್ಯೆಯಿಲ್ಲದಿದ್ದರೆ ಎಣ್ಣೆ ಮತ್ತು ಮಸಾಲೆಭರಿತ ಬಿರಿಯಾನಿ ಮತ್ತು ಪಲಾವ್ ಅನ್ನೂ ತಿನ್ನಬಹುದು. ಅತಿಯಾಗಿ ಕಷಾಯಗಳನ್ನು ಸೇವಿಸಬೇಡಿ, ಅದು ಜಠರದುರಿತಕ್ಕೆ ಕಾರಣವಾಗಬಹುದು.
 
ಅಗತ್ಯವಿದ್ದರೆ ಸರಿಯಾದ ಮಾರ್ಗಗಳ ಮೂಲಕ ಆಸ್ಪತ್ರೆ ಹಾಸಿಗೆಯನ್ನು ಪಡೆಯಿರಿ. ನಿಮಗಾಗಿ ಹಾಸಿಗೆ ವ್ಯವಸ್ಥೆ ಮಾಡಲು ಸಾಧ್ಯವಾಗದಿದ್ದರೆ ಆಸ್ಪತ್ರೆ ಸಿಬ್ಬಂದಿಗಳ ಮೇಲೆ ರೇಗಬೇಡಿ. ವಾಟ್ಸ್ ಆ್ಯಪ್ ಮಾರ್ಗಸೂಚಿಗಳಿಗಿಂತ ವೈದ್ಯರ ಸಲಹೆಯು ಹೆಚ್ಚು ತೂಕವನ್ನು ಹೊಂದಿರುತ್ತದೆ. ಹೀಗಾಗಿ ನಿಮ್ಮ ತಜ್ಞವೈದ್ಯರ ಸಲಹೆಗಳನ್ನು ಪಾಲಿಸಿ. ಐಸೋಲೇಷನ್ ಮುಗಿದ ಬಳಿಕ ಅದಕ್ಕಾಗಿ ಸಂಭ್ರಮ ಪಡಬೇಕಿಲ್ಲ. ನೀವು ಕೋವಿಡ್ನಿಂದ ಹೊರಬಂದಿದ್ದರೂ ಮಾಸ್ಕ್ ಧರಿಸಲು ಮರೆಯಬೇಡಿ. ನಿಮಗೆ ಮತ್ತೆ ಸೋಂಕು ತಗುಲುವ ಸಾಧ್ಯತೆಯಿರುವುದರಿಂದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅಗತ್ಯವಾಗಿ ಅನುಸರಿಸಿ.

 

 ಕೃಪೆ: Onlymyhealth

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)