varthabharthi


ಅನುಗಾಲ

ಹಿಂಸಾನಂದ ಭಾರತ

ವಾರ್ತಾ ಭಾರತಿ : 6 May, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಹಿಂಸೆಯನ್ನು ವಿರೋಧಿಸುವುದು ಮುತ್ಸದ್ದಿತನದ ಮತ್ತು ಕಲೆಯ ಶಾಶ್ವತ ಮೌಲ್ಯ. ಅದಕ್ಕೆ ಬುದ್ಧ-ಮಹಾವೀರರಾಗಲೀ, ಯೇಸುವಾಗಲೀ ಬೇಕಿಲ್ಲ. ಇದನ್ನು ಕಲೆಯೊಳಗಿನ ಮನಸ್ಸು ಹೇಳಬೇಕು. ಕಲಾವಿದನ ಬುದ್ಧಿಯನ್ನು ಜಾಗೃತಗೊಳಿಸಬೇಕು. ನಮ್ಮ ರಾಜಕೀಯ ನಾಯಕರು ತಮ್ಮ ದುರ್ಬುದ್ಧಿಯನ್ನು ಬೆಳೆಸಿದರೆ ಅವರಿಗೆ ವಿವೇಕವನ್ನು ಹೇಳಬೇಕು. ನೀವು ಶಾಶ್ವತವಲ್ಲವೆಂದು ಸಂವೇದನಾಶೀಲರು ಹೇಳಬೇಕು. ದುರದೃಷ್ಟವೆಂದರೆ ನಟನೆಯು ರಂಗಕ್ಕೆ ಸೀಮಿತವಾಗದೆ ನಿಜಜೀವನದಲ್ಲಿ ಹಿಂಸೆಯನ್ನು ಆಹ್ವಾನಿಸುವ ಖಳನಾಯಕರು ರಾಜಕಾರಣದಲ್ಲಿ ಮಾತ್ರವಲ್ಲ, ಕಲೆಯೂ ಸೇರಿದಂತೆ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಇರುವುದು ಮತ್ತು ಹೆಚ್ಚುತ್ತಿರುವುದು. ಇದನ್ನು ನಿಯಂತ್ರಿಸದೇ ಹೋದರೆ ಇಂತಹ ವ್ಯವಸ್ಥಾನಿರ್ಮಾಪಕರು ಭಸ್ಮಾಸುರರಾಗಿ ಬೆಳೆಯುವುದು ಖಚಿತ.ಕೋವಿಡ್-19ರ ಮಾರಕ ಪರಿಣಾಮಗಳ ಹೊರತು ಬೇರೆ ಏನನ್ನು ಬರೆದರೂ ಅದು ಅಪ್ರಸ್ತುತವೆನಿಸುವಷ್ಟರ ಮಟ್ಟಿನ ದುರಂತದ ಅಂಚಿಗೆ ದೇಶ ಬಂದು ನಿಂತಂತಿದೆ. ಪತ್ರಿಕೆ ಇಲ್ಲವೇ ದೃಶ್ಯ ಮಾಧ್ಯಮಗಳನ್ನು, ಸಾಮಾಜಿಕ ಜಾಲತಾಣಗಳನ್ನು ಅಗೆದರೆ ಅಲ್ಲಿ ಸಾವು-ನೋವುಗಳದ್ದೇ ಅಟ್ಟಹಾಸ. ಚರಿತ್ರೆಯಲ್ಲಿ ಕೇಳಿದ ಮಹಾಯುದ್ಧ, ಮಹಾಪಿಡುಗುಗಳೆಲ್ಲ ನಮ್ಮೆದುರೇ ಪ್ರತ್ಯಕ್ಷವಾಗಿ ಹಾದುಹೋಗುತ್ತಿರುವಂತೆ ಭಾಸವಾಗುತ್ತಿದೆ. ಬದುಕಿದರೆ ಸಾಕು ಎಂಬ ಆತಂಕ ಎಲ್ಲರನ್ನು ಬಾಧಿಸುತ್ತಿದೆ. ಪ್ರಾಣವಾಯುವೆನಿಸಿದ ಆಮ್ಲಜನಕದ ಕೊರತೆಯಿಂದ ಜನರು ಸಾಯುವ ಪ್ರಮಾಣ ಮತ್ತು ವೇಗವನ್ನು ಗಮನಿಸಿದರೆ ಕಾಯಿಲೆ ಎಷ್ಟು ದೊಡ್ಡದೆಂದು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.

ಆದರೆ ನಮ್ಮ ಸಚಿವರೆಲ್ಲ ದೇಶ-ರಾಜ್ಯಗಳ ಕೇಂದ್ರದಲ್ಲಿ ಕುಳಿತು ನೀಡುವ ಹೇಳಿಕೆಗಳು, ಮಾಡುವ ಅತಿರೇಕಗಳು, ಅವಾಂತರಗಳು ದೇವರಿಗೇ ಪ್ರೀತಿ. ಬಹಳಷ್ಟು ಸಲ ತಮ್ಮ ಅಜ್ಞಾನವನ್ನು ಹೇಗಾದರೂ ಸಾಬೀತುಮಾಡಬೇಕೆಂದೇ ರಾಜಕಾರಣಿಗಳು ಪತ್ರಿಕಾ ಹೇಳಿಕೆಗಳನ್ನು ನೀಡುವುದುಂಟು. ಉತ್ತರ ಪ್ರದೇಶದ ಮುಖ್ಯಮಂತ್ರಿ ಐಐಟಿ ಕಾನ್ಪುರದ ಸಹಾಯಪಡೆದು ವಾತಾವರಣದಲ್ಲಿರುವ ಸಾರಜನಕವನ್ನು ಆಮ್ಲಜನಕವಾಗಿ ಪರಿವರ್ತಿಸಲು ಅಗತ್ಯಕ್ರಮ ಕೈಗೊಳ್ಳಬೇಕೆಂದು ಅದೇಶಿಸಿದ್ದಾರಂತೆ! ಹೆಸರು ಬದಲಾಯಿಸಿದರೆ ಸಾಕೆಂದಿದ್ದಲ್ಲಿ ಈಗಾಗಲೇ ಈ ಆದೇಶ ಜಾರಿಗೆ ಬರುತ್ತಿತ್ತೇನೋ?

ಆದರೆ ಇದಕ್ಕಿಂತಲೂ ಅಪಾಯಕಾರಿಯಾದ್ದು ಹಿಂಸೆ. ಹಿಂಸೆಯನ್ನು ತ್ಯಜಿಸದಿದ್ದರೆ ಯಾವ ರಾಮದೇಗುಲವೂ ದಂಡ; ದಂಡಿಸುವ ಕೋದಂಡವೂ ದಂಡ.
ಈಗಷ್ಟೇ ಮುಗಿದ 4 (ಪಶ್ಚಿಮಬಂಗಾಳ, ಅಸ್ಸಾಮ್, ತಮಿಳುನಾಡು, ಕೇರಳ) ರಾಜ್ಯಗಳ ಮತ್ತು 1 ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ವಿಧಾನಸಭಾ ಚುನಾವಣೆಯಲ್ಲಿ ದೇಶದ ಪ್ರಧಾನಿ, ಗೃಹಮಂತ್ರಿ ಮತ್ತು ಅವರ ಅಧೀನ ದಂಡು ಪಶ್ಚಿಮಬಂಗಾಳವನ್ನು ಹೇಗಾದರೂ ಬುಟ್ಟಿಗೆ ಹಾಕಿಕೊಳ್ಳಬೇಕೆಂದು ನಡೆಸಿದ ಚುನಾವಣಾ ಸಂಚು ವಿಫಲವಾಗಿದೆ. ಒಂದು ರಾಜ್ಯವನ್ನು ಮತ್ತು ಮಮತಾ ಬ್ಯಾನರ್ಜಿಯೆಂಬ ಅಲ್ಲಿನ ಪ್ರಾದೇಶಿಕ ಪಕ್ಷವೊಂದರ ನಾಯಕರನ್ನು ಗುರಿಯಾಗಿರಿಸಿ ಈ ಪರಿಯ ಹಲ್ಲೆ ನಡೆದದ್ದು ಭಾರತದ ಚುನಾವಣಾ ಇತಿಹಾಸದಲ್ಲಿ ಪ್ರಥಮವೇ ಇರಬಹುದು. ಉಳಿದೆಡೆ ಹತ್ತಾರು ರ್ಯಾಲಿಗಳಾದರೆ ಈ ರಾಜ್ಯದಲ್ಲಿ ಪ್ರಧಾನಿ-ಗೃಹಮಂತ್ರಿದ್ವಯರು 40ಕ್ಕೂ ಮಿಕ್ಕಿ ರ್ಯಾಲಿಗಳನ್ನು ನಡೆಸಿದರು.

ದೇಶದಲ್ಲಿ ಮಾರಕ ಸೋಂಕು ಕೋವಿಡ್-19ರ ಎರಡನೆಯ ಅಲೆಯ ಸುನಾಮಿ ಅಪ್ಪಳಿಸಿದರೂ ಅದರ ಶಮನಕ್ಕೆ ಯೋಚಿಸದೆ, ದೇಶದ ಇತರೆಡೆಯ ಭೀಕರ ಪರಿಸ್ಥಿತಿಯನ್ನು ಪರಿಗಣಿಸದೆ ಇದೇ ತಮ್ಮ ಅಳಿವು-ಉಳಿವಿನ ಚುನಾವಣೆಯೆಂಬಂತೆ ಈ ಇಬ್ಬರು ಮತ್ತು ಇವರ ಪಡೆ ಪಶ್ಚಿಮಬಂಗಾಳವನ್ನು ಕೇಂದ್ರೀಕರಿಸಿದ್ದು ಯಾವುದೇ ಪ್ರಜಾಪ್ರಭುತ್ವದ, ಅದರ ರಾಜಕಾರಣದ ಮತ್ತು ರಾಷ್ಟ್ರೀಯ ನಾಯಕತ್ವದ ಘನತೆಗೆ ಸಲ್ಲದು. ಸಾಂವಿಧಾನಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕಾಗಿದ್ದ ಚುನಾವಣಾ ಆಯೋಗವನ್ನು ತನ್ನ ಕೈಗೂಸನ್ನಾಗಿ ಮಾಡಿಕೊಂಡು ಅಲ್ಲಿನ ಚುನಾವಣೆಯನ್ನು 8 ಹಂತಗಳಲ್ಲಿ ನಡೆಸಲು ಯೋಜಿಸಲಾಯಿತು. ಪ್ರಾದೇಶಿಕ ಪಕ್ಷಕ್ಕೆ ಎಲ್ಲ ಕಡೆ ಪ್ರಚಾರ ಮಾಡಲು ಅದರದ್ದೇ ಆದ ವ್ಯವಸ್ಥೆಯಿರುತ್ತದೆ. ಆದರೆ ಅಲ್ಲಿ ನೆಲೆಯೇ ಇಲ್ಲದ ಭಾಜಪಕ್ಕೆ ಇಡೀ ರಾಜ್ಯದ ಚುನಾವಣೆ ಒಂದೇ ಬಾರಿ ನಡೆದರೆ ಪ್ರಚಾರ ಕೈಗೊಳ್ಳಲು ಧನಬಲವಿದ್ದರೂ ಜನಬಲವಿರಲಿಲ್ಲವಾದ್ದರಿಂದ ಹಂತಹಂತವಾಗಿ ಪ್ರಚಾರ ನಡೆಸಿ ಜನರನ್ನು ಧರ್ಮ/ಮತಾಧಾರಿತವಾಗಿ ಪ್ರತ್ಯೇಕಿಸಲು, ಪ್ರಚೋದಿಸಲು ಈ ಅಮಾತ್ಯರಾಕ್ಷಸ ತಂತ್ರವನ್ನು ಹೂಡಿದ್ದನ್ನು ಕಂಡು ಪ್ರಜಾಪ್ರಭುತ್ವವು ಮಮ್ಮಲ ಮರುಗಿರಬಹುದು.

ಸ್ವತಂತ್ರ ಭಾರತದಲ್ಲಿ ಅತೀ ಹೆಚ್ಚು ಪಕ್ಷಾಂತರವನ್ನು ಮಾಡಿಸಿದ ಕಪ್ಪುಚುಕ್ಕಿಯ ದಾಖಲೆ ಈ ಪಕ್ಷಕ್ಕಿದೆ. ಅಂತೆಯೇ ಪ್ರಜಾತಂತ್ರ ವ್ಯವಸ್ಥೆ ಮಾತ್ರವಲ್ಲ ಅಳಿದುಳಿದ ನೈತಿಕ ಮೌಲ್ಯಗಳನ್ನೂ ಉಲ್ಲಂಘಿಸಿ ತೃಣಮೂಲ ಕಾಂಗ್ರೆಸಿನಿಂದ ಸಾಕಷ್ಟು ಮಂದಿಯನ್ನು ಪಕ್ಷಾಂತರಗೊಳಿಸಿ ತಮ್ಮ ಅಭ್ಯರ್ಥಿಗಳಾಗಿಸಿ ಸ್ಪರ್ಧಾಕಣಕ್ಕಿಳಿಸಲಾಯಿತು. ಆಳುವ ಪಕ್ಷಕ್ಕಿರುವ ಅನುಕೂಲಗಳೆಂದರೆ ಸಾರ್ವಜನಿಕ ವೆಚ್ಚದಲ್ಲಿ ಅವರು ವ್ಯವಸ್ಥೆಯ ಎಲ್ಲ ಲಾಭಗಳನ್ನು ಪಡೆಯಬಹುದು. ಮತೀಯವಾದವನ್ನು ಬೀಜಮಂತ್ರವಾಗಿಸಿ ಜನರನ್ನು ಧ್ರುವೀಕರಿಸಿ ಪ್ರಚಾರ ಕೈಗೊಳ್ಳಲಾಯಿತು. ತಿರಸ್ಕೃತ ರಾಜಕಾರಣಿಗಳ ಪುನರ್ವಸತಿ ಕೇಂದ್ರವೆನಿಸಿದ ರಾಜ್ಯಪಾಲ ಹುದ್ದೆಯ ಗುಲಾಮರು ಕಾನೂನಿನ ಪರಿಪಾಲನೆಗೆ ಮನಗೊಡದೆ ಈ ಸಂಚಿಗೆ ನೆರವಾದರು. ಜನ ಸೇರಬಾರದೆಂಬ ಕೋವಿಡ್-19ರ ಸೂತ್ರಕ್ಕೆ ಬದ್ಧರಾಗದೆ ವಿಶಾಲ ಮೈದಾನದಲ್ಲಿ ಸೇರಿದ ಜನಸಂದಣಿಯನ್ನು ಕಂಡು ‘‘ಇಷ್ಟೊಂದು ದೊಡ್ಡ ಸಮೂಹವನ್ನು ನಾನೆಂದೂ ಕಂಡಿರಲಿಲ್ಲ!’’ ಎಂದು ಪ್ರಧಾನಿ ಹೇಳಿದ್ದು ಅವರನ್ನು ಅಂಧನೃಪಾಲರನ್ನಾಗಿಸಿತೇ ಹೊರತು ದೇಶದ ಪ್ರಧಾನಿಯಾಗಿಸಲಿಲ್ಲ.

ಮಮತಾ ಕುರಿತು ಈ ಇಬ್ಬರೂ ಭಾಷಣಕೋರರು ಮಾಡಿದ ವ್ಯಂಗ್ಯಕ್ಕೆ ಸಾಟಿಯಾಗಬಲ್ಲ ಉದಾಹರಣೆಗಳು ಕಡಿಮೆ. ‘‘ದೀದೀ.. ಓ ದೀದೀ..’’ ಎಂಬ ಪ್ರಧಾನಿಯ ಕುಹಕ ಬಹುಕಾಲ ಜನಮನದಲ್ಲಿ ಅನುರಣಿಸಬಹುದು. ತಾವು 200 ಸ್ಥಾನಗಳನ್ನು ಜಯಿಸುತ್ತೇವೆಂದೂ ಮೇ 2ರ ಅಪರಾಹ್ನ ಮಮತಾ ರಾಜೀನಾಮೆ ಅನಿವಾರ್ಯವೆಂದೂ ಅವರಿಗೆ ಯಥೋಚಿತ ಬೀಳ್ಕೊಡುಗೆಯನ್ನು ನೀಡಬೇಕೆಂದೂ ಅಮಿತ್ ಶಾ ಹೇಳಿ ತಮ್ಮ ಬೆಂಬಲಿಗರಿಂದ ಕೈಚಪ್ಪಾಳೆಗಿಟ್ಟಿಸಿಕೊಂಡರು. ಹಿಂದೆ ತಮಿಳುನಾಡಿನಲ್ಲಿ ಜಯಲಲಿತಾ ಅವರ ಮೇಲೆ ವಿಧಾನಸಭೆಯೊಳಗೇ ಕೈಮಾಡಿ ಅವಮಾನಿಸಿದ್ದು, ಮತ್ತು ಮಹಾಭಾರತದಲ್ಲಿ ದುಶಾಃಸನನಿಂದ ನಡೆದ ದ್ರೌಪದೀವಸ್ತ್ರಾಪಹಾರ, ಇವುಗಳು ರೂಪಕಗಳಷ್ಟೇ ಅಲ್ಲ.

ಕೊನೆಗೂ ಚುನಾವಣಾ ಫಲಿತಾಂಶ ಬಂದಾಗ ಈ ಇಬ್ಬರೂ ಬಾಲಮಡಚಿ ದಿಲ್ಲಿಯಲ್ಲಿ ಮೌನಕ್ಕೆ ಶರಣಾಗಬೇಕಾದ ಸ್ಥಿತಿ ಬಂದಿತು. (ಕೇರಳವಂತೂ ಆಂಧ್ರಪ್ರದೇಶದಂತೆ ಭಾಜಪಮುಕ್ತವಾಯಿತು.) ಬುದ್ಧಿವಂತ ಭಾದ್ರಲೋಕ್ ಬಂಗಾಳಿಗಳು ಇಂದು ಕಂಡದ್ದನ್ನು, ನಿರ್ಧರಿಸಿದ್ದನ್ನು ಭಾರತ ನಾಳೆ ಕಾಣುತ್ತದೆಯೆಂಬ ಹೇಳಿಕೆಯಿದೆ. ಪ್ರಾಯಃ ಪರಿಸ್ಥಿತಿ ಈಗ ಕೊಂಚ ಬದಲಾಗಿರಬಹುದಾದರೂ ದೇಶದ ಹಿತ ಕಾಯುವಲ್ಲಿ ಬಂಗಾಳಿಗಳೂ ಪಂಜಾಬಿಗಳೂ ಇತರರಿಗಿಂತ ಮುಂದಿದ್ದಾರೆಂಬುದನ್ನು ಸ್ವಾತಂತ್ರ್ಯಪೂರ್ವ ಮತ್ತು ಸ್ವತಂತ್ರಭಾರತದ ಇತಿಹಾಸ ಮತ್ತೆ ಮತ್ತೆ ತೋರಿಸಿದೆ. ಸುಭಾಶ್‌ಚಂದ್ರ ಭೋಸ್ 1940ರ ದಶಕದಲ್ಲಿ ಕಾಂಗ್ರೆಸ್ ಅಧ್ಯಕ್ಷತೆಯನ್ನು ಕಳೆದುಕೊಳ್ಳುವ ಪೂರ್ವದಲ್ಲಿ ‘‘ನಾನೋರ್ವ ಕುಸ್ತಿಪಟುವಿನಂತೆ. ಪಂದ್ಯ ಮುಗಿದದ್ದೇ ಕೈಯಪ್ಪುಗೆ ಸಾಧಿಸಿ, ಫಲಿತಾಂಶವನ್ನು ಸ್ಪರ್ಧಾಮನೋಭಾವದಿಂದ ಸ್ವೀಕರಿಸುವವನು.’’ ಎಂದಿದ್ದರು.

ಯಾವುದೇ ಯುದ್ಧದಲ್ಲಿ ‘ವೈರಿಗೆ ಆಪತ್ತೆಸಗಿದಾಗಲೇ ಕೊಲ್ಲುವುದು ವಸುಮತೀಶರ ನೀತಿ’ಯೆಂದು ಕುರುಕ್ಷೇತ್ರಯುದ್ಧವೇ ಸಾಕ್ಷೀಕರಿಸಿದೆ. ಆದ್ದರಿಂದ ಚುನಾವಣಾ ಪೌರುಷವನ್ನು ಸಿನೆಮಾದ ಅರ್ಜುನ-ಬಭ್ರುವಾಹನರ ನಡುವಣ ರಾಜಸ ಸ್ಪರ್ಧೆಯಂತೆ ಕಾಣಬಹುದು. ಆದರೆ ಸೋಲಿನಲ್ಲೂ ಘನವಾಗದೆ, ಪಶ್ಚಿಮಬಂಗಾಳದಲ್ಲಿ ಹಿಂಸೆಯನ್ನು ಪ್ರಚೋದಿಸಲಾಗಿದೆ. ಇದರ ಹೊಣೆಯನ್ನು ಮಮತಾರ ಮೂತಿಗೆ ಒರೆಸುವ ಪ್ರಯತ್ನ ನಡೆದಿದೆ. ಚುನಾವಣಾ ಪ್ರಚಾರ ನಡೆದ ವೈಖರಿಯನ್ನು ನೋಡಿದರೆ ತಾವು ಗೆಲ್ಲದಿದ್ದರೆ ಹಿಂಸೆ ಅನಿವಾರ್ಯವೆಂಬ ಸೂಚನೆಯನ್ನು ದೇಶದ ಈ 1ನೇ ಮತ್ತು 2ನೇ ಕ್ರಮಸಂಖ್ಯೆಯ ನಾಯಕರು ಪ್ರಚಾರಕಾಲದಲ್ಲೇ ನೀಡಿದ್ದರು. ತೃಣಮೂಲ ಕಾಂಗ್ರೆಸಿನ ಮೂಲಕ ಹಿಂಸೆ ಸಂಭವಿಸುವುದಾಗಿದ್ದರೆ ಮಮತಾ ಸೋತ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲೇ ನಡೆಯಬೇಕಾಗಿತ್ತು. ಗೂಂಡಾಗಿರಿಯೇ ಹಿಂದುತ್ವವೆಂಬ ಕೆಟ್ಟ ನಿರೂಪಣೆಗೆ ಭಾಜಪ ಕಾರಣವಾಗುತ್ತಿದೆ. ಆದರೆ ಹಿಂಸೆ ನಡೆದಿದೆಯೆಂದು ಪ್ರಧಾನಿ ಸಾಂವಿಧಾನಿಕ ಲಜ್ಜೆಯನ್ನೂ ಗೌರವವನ್ನೂ ಬದಿಗೊತ್ತಿ ರಾಜ್ಯಪಾಲರನ್ನು ಸಂಪರ್ಕಿಸುತ್ತಾರೆಯೇ ಹೊರತು ಮಮತಾರನ್ನಲ್ಲ. ಈಗಿನ ರಾಜಕಾರಣಿಗಳಿಂದ ಸ್ಪರ್ಧಾಮನೋಭಾವವನ್ನು ನಿರೀಕ್ಷಿಸುವುದು ತಪ್ಪೆಂದು ಮೋದಿ-ಶಾದ್ವಯರು ಸಾಬೀತುಮಾಡಿದ್ದಾರೆ. ಹದ್ದು ಎಷ್ಟೇ ಎತ್ತರದಲ್ಲಿ ಹಾರುತ್ತಿದ್ದರೂ ಅದರ ದೃಷ್ಟಿ ನೆಲದ ಮೇಲಣ ಮಾಂಸದ ತುಂಡಿನ ಮೇಲಿರುತ್ತದಂತೆ!

ಮೇ 5ರಂದು ಈ ಹಿಂಸೆಯ ವಿರುದ್ಧ ಭಾರತೀಯ ಜನತಾ ಪಕ್ಷವು ದೇಶಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಇದು ಯಶಸ್ವಿಯಾಗಿರಬಹುದು. ಏಕೆಂದರೆ ಹಿಂಸಾತ್ಮಕರೆಲ್ಲ ಒಂದೇ ಕಡೆ ಒಂದೇ ಉದ್ದೇಶದಿಂದ ಸೇರಿದಾಗ ಇತರರು ಸಹಜವಾಗಿಯೇ ಹೆದರಿ ಸುಮ್ಮನಿರುತ್ತಾರೆ. ಇವೆಲ್ಲದರ ಒಟ್ಟು ಸಾರಾಂಶವೆಂದರೆ ಆಳುವ ವ್ಯವಸ್ಥೆಗೆ ಹಾದಿ ನಿರೀಕ್ಷಿಸಿದಷ್ಟು ಸುಗಮವಾಗಿಲ್ಲ ಮತ್ತು ಸೋಲೆಂಬುದು ಎಂತಹ ವರ ಪಡೆದವರಿಗೂ ಇದೆಯೆಂಬ ಸತ್ಯದ ಸಾಕ್ಷಾತ್ಕಾರವನ್ನು ಸಹಿಸಲು ಅಸಾಧ್ಯವಾಗಿರುವುದು.

ಈ ಹಿಂಸೆಗೆ ಇಂಬು ಕೊಡುವಂತೆ ಹಲವು ಖ್ಯಾತರು ಸಾರ್ವಜನಿಕ ವಲಯದಲ್ಲಿ ಅಭಿವ್ಯಕ್ತಿಸಿದ್ದಾರೆ. ಇವರಲ್ಲಿ ಬಹುಪಾಲು ಅನ್ನದ ಋಣದಲ್ಲಿರುವವರು; ಜೋಳವಾಳಿಗೆಯವರು. ಎರಡು ಉದಾಹರಣೆಗಳು ಥಟ್ಟನೇ ಕಾಣಿಸುತ್ತವೆ. ಮೊದಲನೆಯದು, ಪದ್ಮಶ್ರೀ ಮತ್ತು ಹಲವು ರಾಷ್ಟ್ರೀಯ ಪುರಸ್ಕಾರಗಳಿಗೆ ಭಾಜನರಾದ ಹಿಂದಿ ಚಿತ್ರರಂಗದ ಖ್ಯಾತ ತಾರೆ ಮತ್ತು ಯಶಸ್ವಿ ನಟಿ ಕಂಗನಾ ರಣಾವತ್. ಈಕೆ ಕಳೆದ ಹಲವಾರು ವರ್ಷಗಳಿಂದ ಮೋದಿಯ ಸದ್ಭಕ್ತೆಯಾಗಿದ್ದಾರೆ. ತರ್ಕವನ್ನೂ ಬದಿಗೊತ್ತಿ ಮೋದಿಯ ಆಡಳಿತವನ್ನು ಬೆಂಬಲಿಸುವ ತನಗಾಗದ ಈ ದೇಶದ ಅನೇಕ ಖ್ಯಾತನಾಮರನ್ನೂ ಹಿರಿಯರನ್ನೂ ದ್ವೇಷಿಸುತ್ತಲೇ ಬಂದವರು. ಹೀಗೆ ಕಲಾ ಸಂವೇದನೆಯನ್ನು ಮೀರಿ ಆಸ್ಥಾನ ವಿದೂಷಕಿಯಂತೆ ವರ್ತಿಸುವ ಕಾರಣಕ್ಕೆ ಆಕೆಗೆ ಸರಕಾರಿ ಭದ್ರತೆ ನೀಡಲಾಗಿದೆ. ಈಕೆಗೆ ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ಸುಮಾರು 5 ಮಿಲಿಯ ಅನುಯಾಯಿಗಳಿದ್ದಾರಂತೆ. (ಮೋದಿ ಇದೇ ಜಾಲತಾಣದ ಮೂಲಕ ಮನ್ ಕಿ ಬಾತ್ ಮತ್ತು ಚುನಾವಣಾ ಭಾಷಣಗಳ ಹೊರತು ದೇಶದ ಇತರ ಎಲ್ಲ ಸಂಕಟ-ಸಂತಾಪವನ್ನು ವ್ಯಕ್ತಪಡಿಸುತ್ತಾರೆ!) ಈಕೆ ಈ ಜಾಲತಾಣದಲ್ಲಿ ತನ್ನ ಬಹಳಷ್ಟು ರೋಷವನ್ನು, ಪ್ರಚೋದನೆಯನ್ನು ಹರಿಬಿಟ್ಟಿದ್ದರು. ಆಕೆಗೆ ಟ್ವಿಟರ್ ಎಚ್ಚರಿಕೆಯನ್ನೂ ನೀಡಿತ್ತು. ಆದರೆ ಜನಪ್ರಿಯತೆ ಮತ್ತು ರಾಜಸಾಮೀಪ್ಯವು ಎಲ್ಲವನ್ನೂ ಮರೆಸುತ್ತದೆ, ಮೊನ್ನೆ ನಡೆದ ಪಶ್ಚಿಮಬಂಗಾಳದ ಚುನಾವಣೆಯ ಆನಂತರದ ಹಿಂಸೆಯ ಕುರಿತು ಈಕೆಗೆ ಎಲ್ಲಿಲ್ಲದ ಉತ್ಸಾಹ, ಉಮೇದು, ಉನ್ಮಾದ. ತಕ್ಷಣ ಹಿಂಸೆಗೆ ಹಿಂಸೆ, ಗೂಂಡಾಗಿರಿಗೆ ಗೂಂಡಾಗಿರಿ ನಡೆಸಬೇಕೆಂದು ಮತ್ತು ಈ ಹಿಂದೆ 2001-02ರಲ್ಲಿ ಗುಜರಾತಿನಲ್ಲಿ ಮೋದಿ ತೋರಿದ ವಿಕ್ರಮವನ್ನು ಪುನರಾವರ್ತಿಸಬೇಕೆಂಬ ತನ್ನ ಅಮೂಲ್ಯ ಸಲಹೆಯನ್ನು ಟ್ವಿಟರಿನಲ್ಲಿ ನೀಡಿದ್ದಾರೆ. ಇದು ಆಕೆಯ ದೇಶಭಕ್ತಿಯೆಂದು ಆಕೆ ತಿಳಿದಿದ್ದರೆ ಟ್ವಿಟರ್ ಬೇರೆಯೇ ಅಭಿಪ್ರಾಯಪಟ್ಟಿತು. ಎಚ್ಚರಿಕೆ ನೀಡಿದ್ದರೂ ತನ್ನ ದಾರಿಯನ್ನು ಬದಲಾಯಿಸದೆ ಇನ್ನೂ ಅಸಭ್ಯ ಮತ್ತು ಹಿಂಸಾತ್ಮಕ ಸಂದೇಶವನ್ನು ನೀಡಿದ್ದಕ್ಕಾಗಿ ಆಕೆಯ ಖಾತೆಯನ್ನು ಶಾಶ್ವತವಾಗಿ ನಿರ್ಬಂಧಿಸಿದೆ. (ಆಕೆ ಇದನ್ನು ಖಂಡಿಸಿ ಇನ್ನೊಂದು ಜಾಲತಾಣದಲ್ಲಿ ಮುಂದುವರಿಯುತ್ತಿದ್ದಾರೆ!)

ಎರಡನೆಯದು ಕನ್ನಡದ ಖ್ಯಾತ ನಾಟಕಕಾರ ಪ್ರಕಾಶ್ ಬೆಳವಾಡಿ. ಇವರು ಮೋದಿಯ ಮತ್ತು ಹಿಂಸೆಯ ಬೆಂಬಲಿಗರೆಂಬುದನ್ನು ತನ್ನ ಮನುಷ್ಯತನದಲ್ಲಿ ಪ್ರದರ್ಶಿಸಿದ್ದಾರೆ. ಪಶ್ಚಿಮಬಂಗಾಳವನ್ನು ಇನ್ನೊಂದು ಗುಜರಾತ್ ಆಗಿ ಪರಿವತಿಸಬೇಕೆಂದು ಹೇಳಿ 2001ರ ಗುಜರಾತ್‌ನ್ನು ನೆನಪಿಸಿದ್ದಾರೆ. ಕಂಗನಾ ರಣಾವತ್‌ರಂತೆ ಈತನೂ ಒಳ್ಳೆಯ ನಟ; ಒಳ್ಳೆಯ ರಂಗಕರ್ಮಿ. ಆದರೆ ರಂಗದಲ್ಲಿ ನಡೆಯುವ ಸಾವು-ನೋವನ್ನು ನಿಜಜೀವನದಲ್ಲಿ, ನಮ್ಮ ಸಮಾಜದಲ್ಲಿ ಪ್ರತ್ಯಕ್ಷವಾಗಿ ಕಂಡು ಆನಂದಿಸುವ ತವಕ. ಎರಡೂ ನಟರು ತಮ್ಮ ಉತ್ಸಾಹದಲ್ಲಿ ಮೋದಿ ಗುಜರಾತಿನ ಹಿಂಸೆಗೆ ಕಾರಣಕರ್ತರೆಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಈ ಎರಡೂ ನಟರಿಗೆ ಸಾಕಷ್ಟು ಪ್ರತಿರೋಧ ಪ್ರತಿಕ್ರಿಯೆಗಳು ಬಂದಿವೆ. ಆದರೆ ಎಂತಹ ಪ್ರತಿಕ್ರಿಯೆಗಳನ್ನೂ ಭರಿಸುವ ಶಕ್ತಿಯ ಜನಸಂಖ್ಯೆ ಈ ದೇಶದಲ್ಲಿರುವುದರಿಂದ ಯಾರೂ ಯಾರಿಗೂ ತಲೆಬಾಗಬೇಕಾಗಿಲ್ಲ; ಸತ್ಯಕ್ಕೂ; ಅಹಿಂಸೆಗೂ. ಹಿಂಸೆಯನ್ನು ವಿರೋಧಿಸುವುದು ಮುತ್ಸದ್ದಿತನದ ಮತ್ತು ಕಲೆಯ ಶಾಶ್ವತ ಮೌಲ್ಯ. ಅದಕ್ಕೆ ಬುದ್ಧ-ಮಹಾವೀರರಾಗಲೀ, ಯೇಸುವಾಗಲೀ ಬೇಕಿಲ್ಲ. ಇದನ್ನು ಕಲೆಯೊಳಗಿನ ಮನಸ್ಸು ಹೇಳಬೇಕು. ಕಲಾವಿದನ ಬುದ್ಧಿಯನ್ನು ಜಾಗೃತಗೊಳಿಸಬೇಕು. ನಮ್ಮ ರಾಜಕೀಯ ನಾಯಕರು ತಮ್ಮ ದುರ್ಬುದ್ಧಿಯನ್ನು ಬೆಳೆಸಿದರೆ ಅವರಿಗೆ ವಿವೇಕವನ್ನು ಹೇಳಬೇಕು. ನೀವು ಶಾಶ್ವತವಲ್ಲವೆಂದು ಸಂವೇದನಾಶೀಲರು ಹೇಳಬೇಕು. ದುರದೃಷ್ಟವೆಂದರೆ ನಟನೆಯು ರಂಗಕ್ಕೆ ಸೀಮಿತವಾಗದೆ ನಿಜಜೀವನದಲ್ಲಿ ಹಿಂಸೆಯನ್ನು ಆಹ್ವಾನಿಸುವ ಖಳನಾಯಕರು ರಾಜಕಾರಣದಲ್ಲಿ ಮಾತ್ರವಲ್ಲ, ಕಲೆಯೂ ಸೇರಿದಂತೆ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಇರುವುದು ಮತ್ತು ಹೆಚ್ಚುತ್ತಿರುವುದು. ಇದನ್ನು ನಿಯಂತ್ರಿಸದೇ ಹೋದರೆ ಇಂತಹ ವ್ಯವಸ್ಥಾನಿರ್ಮಾಪಕರು ಭಸ್ಮಾಸುರರಾಗಿ ಬೆಳೆಯುವುದು ಖಚಿತ. ದೇವರು ಇದ್ದಾನೆಯೋ ಇಲ್ಲವೋ, ಮನುಷ್ಯನಿಗೆ ಅಮರತ್ವ ಪ್ರಾಪ್ತವಾಗದಿರುವುದು ಒಂದು ವರ. ಬದುಕು ನಶ್ವರವೆಂದು ಗೊತ್ತಿದ್ದರೂ ಹೀಗಿರುವ ಮಂದಿಗೆ ಅಮರತ್ವವಿದ್ದಿದ್ದರೆ ಈ ದೇಶ, ಈ ಜಗತ್ತು ಹೇಗಾಗುತ್ತಿತ್ತೋ?

 ರಕ್ತ ಕುಡಿದು ಮಾಂಸ ತಿಂದು ಬದುಕುವ ಅರ್ಬುದ ಮನುಷ್ಯನಾಗಿದ್ದರೆ ಪುಣ್ಯಕೋಟಿಗೆ ಬದುಕಲು ಅವಕಾಶವನ್ನು ಕೊಡುತ್ತಿರಲಿಲ್ಲವೇನೋ? ಕೋವಿಡ್-19ರ ಈ ಕಾಲದಲ್ಲೂ ಅದಕ್ಕಿಂತ ದೊಡ್ಡ ವಿಚಾರವೆಂಬಂತೆ ಹಿಂಸೆಯನ್ನು ವಿಜೃಂಭಿಸುವ ಈ ಅನಿಷ್ಠ, ಅನಾಥ ದಾರಿಯಿಂದ ವಿಮುಖವಾಗದಿದ್ದರೆ, ಅಶ್ವತ್ಥಾಮನಂತೆ ನೋವಿನ ನಡುವೆಯೂ ಹಿಂಸೆಯನ್ನೇ ಗುರಿಯಾಗಿಸಿದರೆ ಕೋವಿಡ್-19ರಿಂದ ಮುಕ್ತಿ ಸಿಕ್ಕಿದರೂ ದೇಶ ಮೂಕವಾಗಿ, ಬೆತ್ತಲೆಯಾಗಿ, ಉಸಿರುಗಟ್ಟಿ ಬಲಿಯಾಗಬೇಕಾದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)