varthabharthi


ಸಂಪಾದಕೀಯ

ಸೈಜುಗಲ್ಲು ಹೊತ್ತೋರು... ಲಾಕ್‌ಡೌನ್‌ನಲ್ಲಿ ಸತ್ತೋರು...!

ವಾರ್ತಾ ಭಾರತಿ : 7 May, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

‘ಸೈಜುಗಲ್ಲು ಹೊತ್ತೋರು...ಹಸಿವಿನಿಂದ ಸತ್ತೋರು ನನ್ನ ಜನಗಳು’ ದಲಿತ ಕವಿ ಸಿದ್ದಲಿಂಗಯ್ಯ ಅವರ ಜನಪ್ರಿಯ ಪದ್ಯ. ಈ ದೇಶದ ಅಭಿವೃದ್ಧಿ ನಿಂತಿರುವುದೇ ಕಟ್ಟಡ ಕೂಲಿಕಾರ್ಮಿಕರ ಎಲುಬುಗೂಡಿನ ಮೇಲೆ. ಅಭಿವೃದ್ಧಿ ಎಂದರೆ ‘ಗಗನ ಚುಂಬಿ ಕಟ್ಟಡಗಳು’ ‘ಕಾಂಕ್ರಿಟ್ ರಸ್ತೆಗಳು’ ಎಂದು ನಾವು ನಂಬಿದ್ದೇವೆ. ಆದರೆ ್ಲ ಅವುಗಳ ನಿರ್ಮಾಣದಲ್ಲಿ ಬೆವರು ಮತ್ತು ರಕ್ತ ಹರಿಸುವವರಿಗೆ ಯಾವ ಪಾಲೂ ಇಲ್ಲ ಎನ್ನುವುದು ಕಹಿ ಸತ್ಯ. ಹಳ್ಳಿಗಳಿಂದ ವಲಸೆ ಬಂದ ಕಟ್ಟಡ ಕಾರ್ಮಿಕರು, ಅಸಂಘಟಿತ ಕೂಲಿ ಕಾರ್ಮಿಕರಿಲ್ಲದೆ ನಗರಗಳು ಚಲಿಸಲಾರವು. ಕೃಷಿಯ ವೈಫಲ್ಯ, ಜಮೀನು ಒತ್ತುವರಿ, ಸಾಲ, ಜಾತೀಯತೆ, ಜಮೀನ್ದಾರರ ದಬ್ಬಾಳಿಕೆ ಇವೆಲ್ಲದರಿಂದ ಬೇಸತ್ತು ನಗರಕ್ಕೆ ವಲಸೆ ಬಂದ ಒಂದು ದೊಡ್ಡ ಶ್ರಮಜೀವಿಗಳ ತಂಡವಿದೆ. ಇವರು ಸುರಿದ ಬೆವರು ಮತ್ತು ರಕ್ತದ ಬಲದಿಂದ ಇಲ್ಲಿ ಕಟ್ಟಡಗಳು ತಲೆಎತ್ತುತ್ತವೆ. ವಿಪರ್ಯಾಸವೆಂದರೆ, ತನಗೆ ಬೇಡ ಎಂದಾಗ ಇದೇ ನಗರ ಈ ಶ್ರಮಜೀವಿಗಳನ್ನು ಎಡಗಾಲಲ್ಲಿ ಒದೆಯುತ್ತದೆ.

ಕೊರೋನ ಕಾಲದ ಲಾಕ್‌ಡೌನ್‌ನಲ್ಲಿ ಈ ಕಾರ್ಮಿಕರು ಅನುಭವಿಸಿದ ಸಾವು ನೋವುಗಳೇ ಅವರ ಅತಂತ್ರ ಬದುಕನ್ನು ಹೇಳುತ್ತದೆ. ಊರು ಮತ್ತು ನಗರ ಎರಡೂ ಅವರನ್ನು ಫುಟ್‌ಬಾಲ್‌ನಂತೆ ಒದೆಯುತ್ತಿವೆ. ನಗರದಲ್ಲಿ ಇನ್ನು ಬದುಕುವುದು ಸಾಧ್ಯವಿಲ್ಲ ಎಂದು ಮರಳಿ ಹೋದರೆ ಊರು ಕೂಡ ಇವರನ್ನು ಸ್ವೀಕರಿಸಲು ಸಿದ್ಧವಿಲ್ಲ. ಊರಿನಲ್ಲಿರುವ ಕಾರ್ಮಿಕರಿಗೇ ಕೆಲಸವಿಲ್ಲದ ಸ್ಥಿತಿಯಿರುವಾಗ ನಗರಗಳಿಂದ ಮರಳಿದವರಿಗೆ ಊರು ಪುನರ್ವಸತಿಯನ್ನು ನೀಡುವುದಾದರೂ ಹೇಗೆ? ಇದೇ ಸಂದರ್ಭದಲ್ಲಿ ಕೊರೋನ ಸೋಂಕಿನ ಕಳಂಕದಿಂದಾಗಿ ಊರಿಗೆ ಇವರು ಅಸ್ಪಶ್ಯವಾಗಿದ್ದಾರೆ. ಕುಟುಂಬ ಇವರನ್ನು ಮರಳಿ ಮನೆಗೆ ಸೇರಿಸಲು ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿಯಿದೆ. ಜೊತೆಗೆ ಜಾತೀಯತೆ, ಹಸಿವು ಮೊದಲಾದ ಕಾರಣದಿಂದಾಗಿ ಅನಿವಾರ್ಯವಾಗಿ ಮತ್ತೆ ನಗರದ ಕಡೆಗೆ ಇವರು ಮುಖ ಮಾಡಬೇಕಾಗುತ್ತದೆ.

ಮರಳಿ ನಗರಕ್ಕೆ ಆಗಮಿಸಿರುವ ಕಟ್ಟಡ ಕಾರ್ಮಿಕರು, ಈಗ ಊರಿಗೆ ಮತ್ತೆ ವಲಸೆ ಹೋಗಬೇಕೋ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ. ಒಂದು ರೀತಿಯಲ್ಲಿ ‘ಅತ್ತ ಧರಿ, ಇತ್ತ ಪುಲಿ’ ಎನ್ನುವಂತಹ ಸ್ಥಿತಿ ಅವರದ್ದಾಗಿದೆ. ರಾಜ್ಯದಲ್ಲಿ ಕಟ್ಟಡ ಕಾರ್ಮಿಕರಿಗೆ ಸರಕಾರ ಕೆಲಸ ನಿರ್ವಹಿಸಲು ಅವಕಾಶ ನೀಡಿದೆಯಾದರೂ, ಸಾರಿಗೆ ಸಂಪರ್ಕಗಳ ವ್ಯತ್ಯಯ, ವಸತಿ, ಊಟ ಇತ್ಯಾದಿ ಸಮಸ್ಯೆಗಳಿಂದಾಗಿ ಅವರು ಕೊರೋನಕ್ಕಿಂತಲೂ ಭೀಕರ ಸಂಕಟಕ್ಕೆ ಸಿಲುಕಿದ್ದಾರೆ. ಕೃಷಿ ಸಂಬಂಧಿ ಕೆಲಸಗಳ ಬಳಿಕ ಕಟ್ಟಡ ನಿರ್ಮಾಣ ಕಾಮಗಾರಿಯು ದೇಶದ ಎರಡನೇ ಅತ್ಯಂತ ಪ್ರಮುಖ ಜೀವನೋಪಾಯದ ಮೂಲವಾಗಿದೆ. ಆದರೆ ಇದನ್ನು ಅವಲಂಬಿಸಿದ ಕಾರ್ಮಿಕರ ಬದುಕು ಕಳೆದ ಒಂದು ವರ್ಷದಿಂದ ಮೂರಾಬಟ್ಟೆಯಾಗಿದೆ. ಮಧ್ಯಮ, ಮೇಲ್‌ಮಧ್ಯಮ ವರ್ಗ ಕೊರೋನಕ್ಕೆ ಹೆದರಿ ಜೀವನ ನ  ೆಸುತ್ತಿದ್ದರೆ, ಇವರು ಲಾಕ್‌ಡೌನ್‌ಗೆ ಬೆದರಿ ಜೀವನ ನಡೆಸುತ್ತಿದ್ದಾರೆ. ನಗರದಲ್ಲಿ ಬದುಕುತ್ತಿರುವವರು ‘ಆಕ್ಸಿಜನ್’ ಎಂದು ಚೀರಾಡುತ್ತಿದ್ದರೆ, ಈ ನಗರ ನಿರ್ಮಾತೃಗಳು ‘ಹಸಿವು’ ಎಂದು ಚೀರಾಡುತ್ತಿದ್ದಾರೆ. ಮೇಲ್‌ಮಧ್ಯಮ ವರ್ಗ ‘ಲಾಕ್‌ಡೌನ್ ವಿಧಿಸಿ’ ಎಂದು ಒತ್ತಾಯಿಸುತ್ತಿದ್ದರೆ, ‘ಲಾಕ್‌ಡೌನ್ ಬೇಡ. ಅದಕ್ಕಿಂತ ಕೊರೋನವೇ ವಾಸಿ’ ಎಂದು ಇವರು ಆಗ್ರಹಿಸುತ್ತಿದ್ದಾರೆ. ಆದರೆ ಮಾಧ್ಯಮಗಳು ಈ ಕಾರ್ಮಿಕರ ಧ್ವನಿಗೆ ಕಿವಿಯಾಗಿಯೇ ಇಲ್ಲ. ಇತ್ತ, ಕಾರ್ಮಿಕರ ಹಿತರಕ್ಷಣೆಗೆಂದು ರೂಪಿಸಲಾದ ವಿಶೇಷ ಕಲ್ಯಾಣ ಕಾರ್ಯಕ್ರಮಗಳು ನಿಷ್ಪ್ರಯೋಜಕವೆನಿಸಿವೆ.

ಕಟ್ಟಡ ನಿರ್ಮಾಣ ಕಾರ್ಮಿಕರ ಸಂರಕ್ಷಣೆಗಾಗಿ ಕೇಂದ್ರ ಸರಕಾರವು ಎರಡು ವಿಶೇಷ ಕಾನೂನುಗಳನ್ನು ಜಾರಿಗೊಳಿಸಿದೆ. 1996ರಲ್ಲಿ ಈ ಕಾನೂನುಗಳು ಜಾರಿಗೆ ಬಂದಿದ್ದವು. ಕಾರ್ಮಿಕ ಸಂಘಟನೆಗಳ ಅವಿಶ್ರಾಂತ ಪ್ರಯತ್ನಗಳ ಫಲವಾಗಿ ಸುಪ್ರೀಂಕೋರ್ಟ್ ಸೇರಿದಂತೆ ನ್ಯಾಯಾಲಯಗಳು ಈ ಕಾನೂನುಗಳ ಉತ್ತಮ ಅನುಷ್ಠಾನಕ್ಕಾಗಿ ಕಾಲಕಾಲಕ್ಕೆ ಮಹತ್ವದ ಆದೇಶಗಳನ್ನು ಜಾರಿಗೊಳಿಸಿವೆೆ. ಆದರೆ ಈಗ ಈ ಕಾನೂನುಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ.

ಕಾರ್ಮಿಕರ ಪಿಂಚಣಿಗಳಿಗೆ ಅರ್ಥಿಕ ನಿಧಿಯನ್ನು ಒದಗಿಸುವುದಕ್ಕಾಗಿ ನಿರ್ಮಾಣ ಕಾಮಗಾರಿಗಳ ಮೇಲೆ ಶೇ.1ರಷ್ಟು ಮೇಲ್ತೆರಿಗೆಯನ್ನು ವಿಧಿಸಲು ಅವಕಾಶ ನೀಡುತ್ತದೆೆ. ಕಟ್ಟಡ ನಿರ್ಮಾಣ ಕಾರ್ಮಿಕರ ಆರೋಗ್ಯ ಪಾಲನೆ ಹಾಗೂ ಹೆರಿಗೆ ಕಾಲದ ಸವಲತ್ತುಗಳು ಮತ್ತು ಅವರ ಮಕ್ಕಳಿಗೆ ವಿದ್ಯಾರ್ಥಿವೇತನದ ಸೌಲಭ್ಯಗಳಿಗೆ ಹಣಕಾಸು ನಿಧಿಯನ್ನು ಒದಗಿಸುತ್ತದೆ. ಈ ಎರಡು ಕಾನೂನುಗಳಡಿ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 36 ಕಟ್ಟಡ ಹಾಗೂ ಇತರ ಕಟ್ಟಡ ನಿರ್ಮಾಣ ಕಾರ್ಮಿಕ ಮಂಡಳಿ (ಬಿಒಸಿಡಬ್ಲು)ಗಳನ್ನು ಸ್ಥಾಪಿಸಲಾಗಿದೆ. ಪ್ರಾರಂಭದಲ್ಲಿ ಈ ಕಾನೂನುಗಳ ಅನುಷ್ಠಾನ ಪ್ರಕ್ರಿಯೆ ಮಂದಗತಿಯಲ್ಲಿತ್ತು. ಆದರೆ ನ್ಯಾಯಾಲಯದ ಆದೇಶಗಳ ಬಳಿಕ ಅವು ಜಾರಿಗೆ ಬರುವ ಬಗ್ಗೆ ಭರವಸೆಗಳು ಮೂಡತೊಡಗಿದ್ದವು . ವಿಷಾದಕರವೆಂದರೆ ಈವರೆಗೆ ಬೆರಳೆಣಿಕೆಯಷ್ಟು ಕಾರ್ಮಿಕ ಕುಟುಂಬಗಳು ಮಾತ್ರವೇ ಈ ಕಾನೂನುಗಳಡಿ ಸೌಲಭ್ಯಗಳನ್ನು ಪಡೆಯುವಲ್ಲಿ ಸಫಲವಾಗಿವೆೆ. ಆದರೆ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಕಚೇರಿಗಳಿಗೆ ಓಡಾಡುತ್ತಾ, ಅರ್ಜಿ, ದಾಖಲೆಪತ್ರಗಳನ್ನು ಪದೇ ಪದೇ ಸಲ್ಲಿಸುತ್ತಿದ್ದರೂ ಯಾವುದೇ ಸೌಲಭ್ಯಗಳನ್ನು ಪಡೆಯಲು ವಿಫಲರಾಗಿದ್ದಾರೆ. ಸುಪ್ರೀಂಕೋರ್ಟ್‌ನ ನೂತನ ಆದೇಶಗಳಿಂದಾಗಿ ಈ ಕಾರ್ಮಿಕರಲ್ಲಿ ಮೂಡಿದ್ದ ಆಶಾವಾದವು ಈಗ ನಿಧಾನವಾಗಿ ಕರಗತೊಡಗಿದೆ.

ನೋಟುನಿಷೇಧದ ದೀರ್ಘಕಾಲದ ಪ್ರತಿಕೂಲ ಪರಿಣಾಮಗಳಿಂದಾಗಿ ನಿರ್ಮಾಣ ಕಾರ್ಮಿಕರು ಮತ್ತವರ ಕುಟುಂಬಗಳಿಗೆ ಇನ್ನೂ ಹೆಚ್ಚಿನ ಹಾನಿಯಾಗಿದೆ ಹಾಗೂ ಅವರು ಹಿಂದೆಂಗಿಂತಲೂ ಹೆಚ್ಚು ಹತಾಶರಾಗಿದ್ದಾರೆ. ಸುಪ್ರೀಂಕೋರ್ಟ್‌ನ ಆದೇಶ ಮಾತ್ರವೇ ಅವರಲ್ಲಿ ಒಂದಿಷ್ಟು ಭರವಸೆಯನ್ನು ಮೂಡಿಸಿತ್ತು.ದುರದೃಷ್ಟವಶಾತ್ ಈಗ ಕೇಂದ್ರ ಸರಕಾರವು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದು, ಇದು ಕಾರ್ಮಿಕರ ಅಳಿದುಳಿದ ಭರವಸೆಗಳನ್ನು ಇಲ್ಲವಾಗಿಸಿದೆ. ನೂತನ ಕಾರ್ಮಿಕ ಸಂಹಿತೆಗಳಿಂದಾಗಿ 1996ರಲ್ಲಿ ಜಾರಿಗೆ ತರಲಾದ ಕಟ್ಟಡ ನಿರ್ಮಾಣ ಕಾರ್ಮಿಕ ಕಾಯ್ದೆಗಳು ಸೇರಿದಂತೆ ಪ್ರಸಕ್ತ ಅಸ್ತಿತ್ವದಲ್ಲಿರುವ ಕೆಲವು ಮಸೂದೆಗಳ ಭವಿಷ್ಯವು ಅನಿಶ್ಚಿತತೆಯಿಂದ ಕೂಡಿದೆ. 1996ರ ಬಿಒಸಿಡಬ್ಲು ಕಾಯ್ದೆಯನ್ನು ದುರ್ಬಲಗೊಳಿಸಬಹುದಾದ ನೂತನ ಕಾರ್ಮಿಕ ಸಂಹಿತೆಯನ್ನು ನಿರ್ಮಾಣ ಕಾರ್ಮಿಕರು ವಿರೋಧಿಸುತ್ತಿದ್ದಾರೆ. 1996ರಲ್ಲಿ ಜಾರಿಗೊಳಿಸಲಾದ ಎರಡು ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತಾಗಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ 2018ರಲ್ಲಿ ನೀಡಿದ ತೀರ್ಪನ್ನು ಜಾರಿಗೊಳಿಸುವಂತೆ ಕಾರ್ಮಿಕ ಸಂಘಟನೆಗಳು ಇದೀಗ ಆಗ್ರಹಿಸುತ್ತಿವೆ. ಆದರೆ ಇದಕ್ಕೆ ಸಿಕ್ಕಿದ ಪ್ರತಿಸ್ಪಂದನ ತೀರಾ ನಿರಾಶದಾಯಕವಾಗಿದೆ.

ಕಟ್ಟಡ ಕಾರ್ಮಿಕರ ಮೇಲಿನ ದಮನ ಅವರು ಶಾಶ್ವತವಾಗಿ ಊರಿನ ಕಡೆಗೆ ವಲಸೆ ಹೋಗುವಂತಹ ಸ್ಥಿತಿಯನ್ನು ನಿರ್ಮಾಣ ಮಾಡುತ್ತಿದೆ. ಬೇಕೆಂದಾಗ ಬಳಸುತ್ತಾ, ಬೇಡವಾದಾಗ ಕಸದ ತೊಟ್ಟಿಗೆ ಎಸೆಯುವ ನಗರ ಪ್ರವೃತ್ತಿ ಕಾರ್ಮಿಕರಲ್ಲಿ ತೀವ್ರ ನಿರಾಶಾವಾದವನ್ನು ಬಿತ್ತಿದೆ. ಇದು ನಗರಾಭಿವೃದ್ಧಿಯ ಮೇಲೆ ಭವಿಷ್ಯದಲ್ಲಿ ಭಾರೀ ದುಷ್ಪರಿಣಾಮವನ್ನು ಬೀರಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಸರಕಾರ ಕಟ್ಟಡ ಕಾರ್ಮಿಕರ ನೆರವಿಗೆ ಈ ಸಂಕಟದ ಸಂದರ್ಭದಲ್ಲಿ ದಾವಿಸದೇ ಇದ್ದರೆ, ಅದು ಪ್ರತಿಪಾದಿಸುವ ಅಭಿವೃದ್ಧಿಗೆ ಯಾವ ಅರ್ಥವೂ ಉಳಿಯುವುದಿಲ್ಲ. ಈ ನಿಟ್ಟಿನಲ್ಲಿ, ಕೊರೋನಾ ಸಂತ್ರಸ್ತರಿಗೆ ನೆರವಾದಂತೆಯೇ, ಲಾಕ್‌ಡೌನ್ ಸಂತ್ರಸ್ತರಿಗೆ ನೆರವಾಗುವುದಕ್ಕೂ ಸರಕಾರ ಆಸಕ್ತಿ ತೋರಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)