varthabharthi


ಸಂಪಾದಕೀಯ

ಕೇಂದ್ರದಿಂದ ಮಲತಾಯಿ ಧೋರಣೆ: ಕೊನೆಗೂ ರಾಜ್ಯಕ್ಕೆ ದಕ್ಕಿದ ‘ಆಕ್ಸಿಜನ್’

ವಾರ್ತಾ ಭಾರತಿ : 8 May, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಎಲ್ಲೋ ಉತ್ತರ ಭಾರತದಲ್ಲಿ ನಡೆಯುತ್ತಿದ್ದ ದುರಂತಗಳು ಇದೀಗ ನಮ್ಮ ಮನೆಯಂಗಳಕ್ಕೇ ಕಾಲಿಟ್ಟಿವೆ. ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 25ಕ್ಕೂ ಅಧಿಕ ಜನರು ದಾರುಣವಾಗಿ ಮೃತಪಟ್ಟ ಬಳಿಕ, ರಾಜ್ಯದ ಆರೋಗ್ಯ ವಲಯದ ಬಂಡವಾಳ ಬಟಾಬಯಲಾಗಿದೆ. ರಾಜ್ಯಾದ್ಯಂತ ಹೆಚ್ಚುತ್ತಿರುವ ಕೊರೋನ ಸಾವುಗಳಿಗೆ ಆಕ್ಸಿಜನ್ ಕೊರತೆ ಬಹುಮುಖ್ಯ ಪಾತ್ರವಹಿಸುತ್ತಿದೆ ಎನ್ನುವುದೂ ಬೆಳಕಿಗೆ ಬಂದಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರ, ಆಕ್ಸಿಜನ್ ಹಂಚುವಿಕೆಗೆ ಸಂಬಂಧಿಸಿ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ. ಈ ಬಗ್ಗೆ ಈಗಾಗಲೇ ಸುಪ್ರಿಂಕೋರ್ಟ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸಾವು ನೋವುಗಳ ಆಧಾರದಲ್ಲಿ ದಿಲ್ಲಿ ಅತ್ಯಧಿಕ ಆಕ್ಸಿಜನ್ ಬೇಡಿಕೆಯನ್ನು ಮುಂದಿಟ್ಟಿದ್ದರೂ ಕೇಂದ್ರ ಸರಕಾರ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶಗಳಿಗೆ ಆದ್ಯತೆಯ ಮೇಲೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಒದಗಿಸಿತ್ತು. ‘‘ಯಾವ ಮಾನದಂಡದಲ್ಲಿ ನೀವು ಸಿಲಿಂಡರ್‌ಗಳನ್ನು ವಿತರಿಸುತ್ತಿದ್ದೀರಿ?’’ ಎಂದು ನ್ಯಾಯಾಲಯ ಕೇಂದ್ರ ಸರಕಾರವನ್ನು ಪ್ರಶ್ನಿಸಿತ್ತು. ಹಾಗೆಯೇ ಆಮ್ಲಜನಕ ಹಂಚಿಕೆ ಪ್ರಕ್ರಿಯೆಯ ಸಂಪೂರ್ಣ ಪರಿಷ್ಕರಣೆಯ ಅಗತ್ಯವೂ ಇದೆ ಎಂದು ಸುಪ್ರೀಂಕೋರ್ಟ್ ಕೇಂದ್ರಕ್ಕೆ ಸೂಚನೆ ನೀಡಿದೆ.

‘ಕೇಂದ್ರ ಸರಕಾರ ತನ್ನ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಿಗೆ ಅಧಿಕ ಆಮ್ಲಜನಕ ಒದಗಿಸುತ್ತಿದೆ’ ಎಂಬ ಆರೋಪ ಕರ್ನಾಟಕದ ಪಾಲಿಗೆ ಹಿತವಾಗಿಯೇ ಇದೆ. ಆರೋಪದಂತೆ ಮಧ್ಯಪ್ರದೇಶ, ಉತ್ತರ ಪ್ರದೇಶಗಳಿಗೆ ಕೇಂದ್ರ ಸರಕಾರ ನೀಡಿದ ಆದ್ಯತೆಯನ್ನು ಕರ್ನಾಟಕಕ್ಕೂ ನೀಡಬೇಕಾಗಿತ್ತು. ಯಾಕೆಂದರೆ ಕರ್ನಾಟಕದಲ್ಲೂ ಬಿಜೆಪಿ ಸರಕಾರವೇ ಅಧಿಕಾರದಲ್ಲಿದೆ. ಕೇಂದ್ರದಲ್ಲಿ ಮೋದಿಯನ್ನು ಪ್ರಧಾನಿ ಮಾಡಲು ಈ ರಾಜ್ಯ ಬಿಜೆಪಿಯ ಮೂಲಕ ಅತ್ಯಧಿಕ ಸಂಸದರನ್ನು ನೀಡಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಅಭಿವೃದ್ಧಿ ಸುಲಭವಾಗುತ್ತದೆ ಎಂದು ಇದೇ ಬಿಜೆಪಿ ನಾಯಕರು ವಿಧಾನಸಭಾ ಚುನಾವಣೆಯಲ್ಲಿ ಪುಂಗಿ ಊದಿದ್ದರು. ಕನಿಷ್ಟ ಆಕ್ಸಿಜನ್ ಕೊರತೆಯಿಂದ ರಾಜ್ಯದಲ್ಲಿ ನಡೆದ ದುರಂತದ ಬಳಿಕವಾದರೂ ಕೇಂದ್ರ ನಮ್ಮ ಕಡೆಗೆ ಅನುಕಂಪದ ದೃಷ್ಟಿಯನ್ನು ಹರಿಸಬೇಕಾಗಿತ್ತು. ತಾನಾಗಿಯೇ ಆದ್ಯತೆಯಿಂದ ಆಕ್ಸಿಜನ್‌ನ್ನು ಒದಗಿಸಿ, ಮೋದಿಯ ಮೇಲೆ ರಾಜ್ಯದ ಜನರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕಿತ್ತು. ವಿಪರ್ಯಾಸವೆಂದರೆ, ತಾನಾಗಿ ನೀಡುವುದಿರಲಿ, ರಾಜ್ಯ ಹೈಕೋರ್ಟ್ ನೀಡಿದ ಆದೇಶವನ್ನೂ ಕೇಂದ್ರ ಪಾಲಿಸಲು ಸಿದ್ಧವಿರಲಿಲ್ಲ.

ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಕರ್ನಾಟಕಕ್ಕೆ ಈಗ ಒದಗಿಸಲಾಗುತ್ತಿರುವ 965 ಮೆಟ್ರಿಕ್‌ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ರಮಾಣವನ್ನು 1,200 ಮೆಟ್ರಿಕ್ ಟನ್‌ಗೆ ಏರಿಕೆ ಮಾಡಬೇಕು ಎಂದು ರಾಜ್ಯ ಹೈಕೋರ್ಟ್ ಕೇಂದ್ರಕ್ಕೆ ಇತ್ತೀಚೆಗೆ ಆದೇಶ ನೀಡಿತ್ತು. ಈ ಆದೇಶವನ್ನು ಪಾಲಿಸಿ ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ತನ್ನ ಸಹಕಾರವನ್ನು ನೀಡುವ ಬದಲು, ಆದೇಶದ ವಿರುದ್ಧ ಕೇಂದ್ರ ಸರಕಾರ ಸುಪ್ರೀಂಕೋರ್ಟ್ ಮೊರೆ ಹೋಯಿತು. ಆದರೆ ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆಯಾಗುವುದಕ್ಕೆ ಹಿಂಜರಿಯಿತು. ಕೇಂದ್ರ ಸರಕಾರದ ವೈಫಲ್ಯದಿಂದಾಗಿ ನಡೆಯುತ್ತಿರುವ ಸಾಲು ಸಾಲು ದುರಂತಗಳನ್ನು ಕಂಡು ಸುಪ್ರೀಂಕೋರ್ಟ್ ಕೂಡ ಹೆದರಿರಬೇಕು. ಯಾವುದೇ ಕಾರಣಕ್ಕೂ ಹೈಕೋರ್ಟ್ ಆದೇಶಕ್ಕೆ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ ಮಾತ್ರವಲ್ಲದೆ, ಕರ್ನಾಟಕದ ಜನತೆ ತತ್ತರಿಸುವುದನ್ನು ನೋಡುವುದಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರಕ್ಕೆ ಚಾಟಿ ಬೀಸಿದೆ. ಕೇಂದ್ರದ ಸರ್ವಾಧಿಕಾರ ಮನಸ್ಥಿತಿಗೆ ಭಾರೀ ಮುಖಭಂಗ ಮಾಡಿದೆ.

ಕೇಂದ್ರದಿಂದ ರಾಜ್ಯಕ್ಕೆ ಪದೇ ಪದೇ ಅನ್ಯಾಯಗಳಾಗಿವೆ. ಆದರೆ ಈ ರಾಜ್ಯದ ಅಷ್ಟೂ ಅಂಜುಬುರುಕ ಸಂಸದರು ಮೋದಿಯವರಿಗೆ ಭೋಪರಾಕ್ ಹೇಳುತ್ತಾ ಕಾಲ ಕಳೆಯುತ್ತಿದ್ದಾರೆಯೇ ಹೊರತು, ನಾಡಿನ ಅಳಲನ್ನು ದಿಲ್ಲಿಗೆ ತಲುಪಿಸುತ್ತಿಲ್ಲ. ಆ ಕಾರಣದಿಂದ  ಕರ್ನಾಟಕವನ್ನು ಕೇಂದ್ರವೂ ತುಚ್ಛವಾಗಿ ನೋಡುತ್ತಿದೆ. ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪರಿಹಾರ ಧನ, ಪ್ರಕೃತಿ ವಿಕೋಪಗಳಿಗೆ ನೀಡಬೇಕಾದ ಪರಿಹಾರ ಧನ, ಯೋಜನೆಗಳಿಗೆ ಒದಗಿಸಬೇಕಾದ ಅನುದಾನಗಳೆಲ್ಲವನ್ನು ಕೇಂದ್ರ ಸರಕಾರ ತಡೆ ಹಿಡಿದಿದೆೆ. ಕೇಂದ್ರವೇನೂ ರಾಜ್ಯಕ್ಕೆ ಭಿಕ್ಷೆ ನೀಡುತ್ತಿಲ್ಲ. ರಾಜ್ಯದ ಜನರು ತಾವು ಕಟ್ಟಿದ ತೆರಿಗೆಯ ಹಣವನ್ನು ಮರಳಿ ಕೇಳುತ್ತಿದ್ದಾರೆ. ರಾಜ್ಯದ ಪರವಾಗಿ ಮಾತನಾಡಿದರೆ ಎಲ್ಲಿ ದಿಲ್ಲಿಯ ವರಿಷ್ಠರ ಸಿಟ್ಟಿಗೆ ಪಾತ್ರರಾಗಬೇಕಾಗುತ್ತದೋ ಎಂಬ ಆತಂಕ ನಮ್ಮ ಸಂಸದರದ್ದು.

ಬಿಜೆಪಿ ಅಧಿಕಾರಕ್ಕೆ ಬಂದ ಆರಂಭದಲ್ಲಿ, ರಾಜ್ಯ ಮಳೆಹಾನಿಯಿಂದ ಸರ್ವನಾಶವಾಗುತ್ತಿರುವಾಗ ಕೇಂದ್ರ ಯಾವುದೇ ಪರಿಹಾರವನ್ನು ಬಿಡುಗಡೆ ಮಾಡಿರಲಿಲ್ಲ. ಯಡಿಯೂರಪ್ಪ ಅವರು ಪರಿಹಾರಧನಕ್ಕಾಗಿ ಪದೇ ಪದೇ ದಿಲ್ಲಿಗೆ ಹೋದರಾದರೂ, ಅವರನ್ನು ಭೇಟಿಯಾಗುವುದಕ್ಕೇ ವರಿಷ್ಠರು ಸಿದ್ಧರಿರಲಿಲ್ಲ. ಇಂತಹ ಸಂದರ್ಭದಲ್ಲಿ, ರಾಜ್ಯದ ಪರವಾಗಿ ಧ್ವನಿಯೆತ್ತಬೇಕಾಗಿದ್ದ ಸಂಸದರು, ‘ಮಳೆ ವಿಪತ್ತನ್ನು ನಿರ್ವಹಿಸಲು ರಾಜ್ಯ ಶಕ್ತವಾಗಿದೆ’ ಎಂಬಂತಹ ಹೇಳಿಕೆಯನ್ನು ನೀಡಿದರು. ಸಂಸದ ತೇಜಸ್ವಿ ಸೂರ್ಯನಾರಾಯಣ ರಾವ್ ಅವರಂತೂ ಒಂದು ಹೆಜ್ಜೆ ಮುಂದೆ ಹೋಗಿ ‘ರಾಜ್ಯಕ್ಕೆ ಪರಿಹಾರದ ಅಗತ್ಯವಿಲ್ಲ. ರಾಜ್ಯದ ಬೊಕ್ಕಸದಲ್ಲಿ ಸಾಕಷ್ಟು ಹಣವಿದೆ’ ಎಂಬ ಹೇಳಿಕೆಯನ್ನು ನೀಡಿ ಜನರಿಗೆ ದ್ರೋಹ ವೆಸಗಿದರು. ಆಗ ಯಡಿಯೂರಪ್ಪ ಅವರ ಪರವಾಗಿ, ನಾಡಿನ ಪರವಾಗಿ ಧ್ವನಿಯೆತ್ತಿರುವುದು, ಈಗ ಭಿನ್ನಮತೀಯರಾಗಿ ಗುರುತಿಸಲ್ಪಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್. ‘ತಕ್ಷಣ ಪರಿಹಾರ ನೀಡದೇ ಇದ್ದರೆ ರಾಜೀನಾಮೆ ನೀಡಬೇಕಾಗುತ್ತದೆ’ ಎಂದು ಅವರು ವರಿಷ್ಠರಿಗೆ ಬೆದರಿಕೆ ಹಾಕಿದರು. ಇದೀಗ ಆಕ್ಸಿಜನ್ ವಿಷಯದಲ್ಲೂ, ಈ ಸಂಸದರು ‘ರಾಜ್ಯಕ್ಕೆ ಆಕ್ಸಿಜನ್‌ನ ಅಗತ್ಯವೇ ಇಲ್ಲ’ ಎಂದು ಹೇಳಿಕೆ ನೀಡದೇ ಇದ್ದುದಕ್ಕೇ ನಾವು ಕೃತಜ್ಞರಾಗಬೇಕಾಗಿದೆ. ಮೋದಿಯನ್ನು ಮೆಚ್ಚಿಸುವುದಕ್ಕಾಗಿ ‘ರಾಜ್ಯದಲ್ಲಿ ಆಕ್ಸಿಜನ್ ಬೇಕಾದಷ್ಟಿದೆ’ ಎಂದು ಹೇಳಿಕೆ ನೀಡುವುದಕ್ಕೂ ಹಿಂಜರಿಯುವವರಲ್ಲ ಇವರು.

ಇದೇ ಸಂದರ್ಭದಲ್ಲಿ ಒಕ್ಕೂಟ ವ್ಯವಸ್ಥೆಯ ಹಿತಾಸಕ್ತಿಯನ್ನು ಎತ್ತಿ ಹಿಡಿಯಲು ಹೈಕೋರ್ಟ್ ಗಳು ಮುತುವರ್ಜಿ ವಹಿಸುತ್ತಿರುವುದು ಶ್ಲಾಘನೀಯವಾಗಿದೆ. ಕಳೆದ ವರ್ಷ ಪೂರ್ವ ಸಿದ್ಧತೆ ಇಲ್ಲದ ಲಾಕ್‌ಡೌನ್‌ನಿಂದಾದ ದುರಂತಗಳು ಮತ್ತು ವಲಸೆ ಕಾರ್ಮಿಕರ ಮಾರಣ ಹೋಮದ ವಿರುದ್ಧ ಹಲವು ಸಾಮಾಜಿಕ ಕಾರ್ಯಕರ್ತರು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದರು. ಆದರೆ ಸುಪ್ರೀಂ ಕೋರ್ಟ್ ಯಾವ ಲಜ್ಜೆಯೂ ಇಲ್ಲದೆ, ಕೇಂದ್ರವನ್ನು ರಕ್ಷಿಸಿತು. ಆದರೆ ಈ ಬಾರಿ ಹೈಕೋರ್ಟ್‌ಗಳು ಎಚ್ಚೆತ್ತುಕೊಂಡಿವೆ. ಕೊರೋನಾ ನಿರ್ವಹಣೆಯಲ್ಲಿ ಸರಕಾರಗಳ ವೈಫಲ್ಯಗಳನ್ನು ಹೈಕೋರ್ಟ್‌ಗಳು ಸ್ವಯಂ ವಿಚಾರಣೆಗೆ ಕೈಗೆತ್ತಿಕೊಂಡವು. ಯಾವಾಗ ಹೈಕೋರ್ಟ್‌ಗಳು ಅತ್ಯಾಸಕ್ತಿಯಿಂದ ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡವೋ ಆಗ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಿ ‘ನಾನು ವಿಚಾರಣೆ ನಡೆಸುತ್ತೇನೆ’ ಎಂದಿತು. ಆದರೆ ಇದನ್ನು ಸಂವಿಧಾನ ತಜ್ಞರು ತೀವ್ರವಾಗಿ ಪ್ರತಿಭಟಿಸಿದರು.

ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳ ನಡುವೆ ಈ ಬಗ್ಗೆ ಇತ್ತೀಚೆಗೆ ಸಣ್ಣದೊಂದು ಸಂಘರ್ಷವೇ ನಡೆದಿತ್ತು. ಸುಪ್ರೀಂಕೋರ್ಟ್‌ನ ಕಾರ್ಯ ನಿರ್ವಹಣೆ ಅದೆಷ್ಟು ನಿರಾಶಾದಾಯಕವಾಗಿತ್ತು ಎಂದರೆ, ಅದು ಇರುವುದೇ ಕೇಂದ್ರ ಸರಕಾರದ ವೈಫಲ್ಯಗಳನ್ನು ಸಮರ್ಥಿಸಿಕೊಳ್ಳಲು ಎಂದು ಜನರು ಭಾವಿಸುವಂತಾಗಿತ್ತು. ಇಂದು ತನ್ನ ತಪ್ಪುಗಳನ್ನು ಪರೋಕ್ಷವಾಗಿ ಹೈಕೋರ್ಟ್‌ಗಳು ಬೊಟ್ಟು ಮಾಡುತ್ತಿದ್ದಂತೆಯೇ ಸುಪ್ರೀಂಕೋರ್ಟ್ ಎಚ್ಚೆತ್ತುಕೊಂಡಿದೆ. ಆದುದರಿಂದಲೇ ಕರ್ನಾಟಕ ಹೈಕೋರ್ಟ್ ನೀಡಿದ ಆದೇಶಕ್ಕೆ ಮಧ್ಯ ಪ್ರವೇಶಿಸಲು ಸುಪ್ರೀಂಕೋರ್ಟ್ ಹಿಂಜರಿದಿದೆ. ಅದೇನೇ ಇರಲಿ, ಈ ತೀರ್ಪು ರಾಜ್ಯವನ್ನು ಕೇಂದ್ರದ ಸರ್ವಾಧಿಕಾರಕ್ಕೆ ಬಲಿಯಾಗಿಸಲು ಅತ್ಯಾಸಕ್ತಿ ಹೊಂದಿರುವ ಬಿಜೆಪಿಯ ಮುಖಂಡರಿಗೆ, ರಾಜ್ಯದ ಸಂಸದರಿಗೆ ನೀಡಿದ ಬಲವಾದ ತಪರಾಕಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)