varthabharthi


ಪ್ರಚಲಿತ

ಕೊರೋನ ಮತ್ತು ಕೋಮು ವೈರಾಣುಗಳು

ವಾರ್ತಾ ಭಾರತಿ : 10 May, 2021

ಭವಿಷ್ಯದ ಭಾರತ ಬಾಬಾಸಾಹೇಬ್ ಅಂಬೇಡ್ಕರ ಅವರ ಸಂವಿಧಾನದ ದಾರಿಯಲ್ಲೇ ನಡೆದರೆ ಮಾತ್ರ ಉಳಿಯುತ್ತದೆ, ಬೆಳೆಯುತ್ತದೆ. ಕೋಮುವಾದದ ದಾರಿಯಲ್ಲಿ ಸಾಗಿದರೆ ನಾಶವಾಗುತ್ತದೆ. ಇದರ ಮುನ್ಸೂಚನೆ ಈಗಾಗಲೇ ದೊರಕಿದೆ. ಜನರಿಗೂ ಅರಿವಾಗುತ್ತಿದೆ. ಬುರುಡೆ ಬಹಾದ್ದೂರನ ಬಣ್ಣದ ಮಾತುಗಳಿಗೆ ಮರುಳಾಗುವ ಕಾಲ ಮುಗಿಯಿತು. ಅದೇನೆ ಇರಲಿ, ಇಡೀ ಮನುಕುಲಕ್ಕೆ ಸವಾಲಾದ ಕೋವಿಡ್ ಗಂಡಾಂತರದಿಂದ ಮೊದಲು ಪಾರಾಗುವ ದಾರಿ ಕಂಡುಕೊಳ್ಳೋಣ.

ಕೋವಿಡ್‌ಗೆ ನಿತ್ಯವೂ ಅನೇಕರು ಬಲಿಯಾಗುತ್ತಿದ್ದಾರೆ. ಸಾಯುತ್ತಿರುವವರಲ್ಲಿ ನಮ್ಮ ಬಂಧು ಬಳಗದವರು, ಆತ್ಮೀಯರು, ವೈಚಾರಿಕ ಒಡನಾಡಿಗಳು, ಹೋರಾಟದ ಸಂಗಾತಿಗಳು ಸೇರಿದ್ದಾರೆ. ಸಾವಿನ ಈ ದಂಡಯಾತ್ರೆ ಇಲ್ಲಿಗೆ ನಿಲ್ಲುವ ಸೂಚನೆ ಕಾಣುತ್ತಿಲ್ಲ. ಇಂದು ಅವರಿವರ ಸ್ನೇಹಿತರ ಸಾವಿಗೆ ಕಂಬನಿ ಸುರಿಸುತ್ತಿರುವ ನಾವು, ನೀವು ಕೂಡ ಹೋಗಬಹುದು. ಒಂದೆಡೆ ಕೋವಿಡ್ ಕಾಟ, ಇನ್ನೊಂದೆಡೆ ಆರ್ಥಿಕ ಬಿಕ್ಕಟ್ಟು. ಇಂತಹ ಸಂಕಟದ ಸನ್ನಿವೇಶದಲ್ಲಿ ನೆರವಿಗೆ ಬರಬೇಕಾದವರು ಯಾರು? ಯಾರು ಇದನ್ನೆಲ್ಲ ನಿಭಾಯಿಸಬೇಕು? ಈ ಪ್ರಶ್ನೆಗೆ ಉತ್ತರ ಹುಡುಕಲು ಪರದಾಡಬೇಕಿಲ್ಲ.

ಇಂತಹ ಸಾವು ಬದುಕಿನ ಸನ್ನಿವೇಶದಲ್ಲಿ ನಮ್ಮ ನೆರವಿಗೆ ಬರಬೇಕಾದದ್ದು ನಾವು ಚುನಾಯಿಸಿದ ಸರಕಾರ. ನಾವು ಚುನಾಯಿಸಿದ ಜನಪ್ರತಿನಿಧಿಗಳು ಮತ್ತು ದೇಶದ ಹೊಣೆ ಹೊತ್ತ ಪ್ರಧಾನಮಂತ್ರಿ. ನಿಜ, ಕೋವಿಡ್ ಎಂಬುದು ವಿಚಿತ್ರವಾದ ಮರಣ ಘಾತುಕ ವ್ಯಾಧಿ. ಯಾರ ಅಳತೆಗೂ ಸಿಗುತ್ತಿಲ್ಲ. ಆದರೆ, ಇಂತಹ ಸನ್ನಿವೇಶದಲ್ಲಿ ಸರಕಾರಿ ಆಸ್ಪತ್ರೆಗಳು ಸುಸಜ್ಜಿತ ಆಗಿರಬೇಕಲ್ಲವೇ? ಎಲ್ಲ ಆಸ್ಪತ್ರೆಗಳಲ್ಲೂ ಜೀವರಕ್ಷಕ ಪ್ರಾಣವಾಯು ವ್ಯವಸ್ಥೆ ಇರಬೇಕಲ್ಲವೇ? ಇಂತಹ ಮಾರಕ ಸೋಂಕು ಹಬ್ಬಿದಾಗ ವಿಶೇಷ ಏರ್ಪಾಡುಗಳನ್ನು ಮಾಡಿಕೊಳ್ಳಬೇಕಲ್ಲವೇ? ಇದೆಲ್ಲ ಯಾರ ಹೊಣೆ? ಸರಕಾರದ ಜವಾಬ್ದಾರಿಯಲ್ಲವೇ?

ಸರಕಾರ ತನ್ನ ಹೊಣೆಗಾರಿಯಲ್ಲಿ ವಿಫಲಗೊಂಡಿದೆಯೆಂದರೆ ಅದರ ತಪ್ಪು ಇಂತಹ ಸರಕಾರವನ್ನು ಮತ್ತು ಜನಪ್ರತಿನಿಧಿಗಳನ್ನು ಚುನಾಯಿಸಿದ ನಮ್ಮದೇ ಆಗುತ್ತದೆ.

2014ರಿಂದ ಈವರೆಗೆ ಕೇಂದ್ರದ ಅಧಿಕಾರ ಸೂತ್ರ ಹಿಡಿದ ಪಕ್ಷಕ್ಕೆ ಜನಕಲ್ಯಾಣದ ಯಾವುದೇ ಕಾರ್ಯಕ್ರಮ ಇರಲಿಲ್ಲ. ಸಾರ್ವಜನಿಕ ಆಸ್ಪತ್ರೆ, ಸರಕಾರಿ ಶಾಲೆಗಳನ್ನು ಬಲಪಡಿಸುವ ಯೋಜನೆ ಇರಲಿಲ್ಲ. ಅವರಿಗಿದ್ದುದು ಒಂದೇ ಅಜೆಂಡಾ. ಅದು ಕೋಮು ವಿಭಜನೆ. ಆ ಅಜೆಂಡಾದ ಭಾಗವಾಗಿ ಅಯೋಧ್ಯೆಯ ಮಸೀದಿ ಕೆಡವಿ ಮಂದಿರ ನಿರ್ಮಿಸಲು ಸರ್ವೋಚ್ಚ ನ್ಯಾಯಾಲಯ ಹಸಿರು ನಿಶಾನೆ ತೋರಿಸುವಂತೆ ಮಾಡಲಾಯಿತು. ಇದು ಮುಗಿದ ನಂತರ ಗೋಹತ್ಯೆ, ಅದರ ನಂತರ ಮತಾಂತರದ ಹುಯಿಲು, ಜೊತೆಗೆ ಮಥುರಾ, ಕಾಶಿ ವಿವಾದ ಕೆದಕಲು ತಿಳಿ ನೀರಿನಲ್ಲಿ ಕಲ್ಲೆಸೆತ. ಹೀಗೆ ಭಾರತೀಯರನ್ನು ಹಿಂದೂ, ಮುಸ್ಲಿಮ್, ಕ್ರೈಸ್ತ ಎಂದು ವಿಭಜಿಸುತ್ತ ಹೋಗಿ ಕೊನೆಗೆ ಬಾಬಾಸಾಹೇಬರ ಸಂವಿಧಾನ ಬದಲಿಸಿ ಮನುವಾದಿ ಹಿಂದೂರಾಷ್ಟ್ರ ನಿರ್ಮಾಣ. ಇದು ಈ ಸರಕಾರದ ಬಹಿರಂಗಗೊಳ್ಳದ ಕಾರ್ಯಸೂಚಿ. ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದಲ್ಲಿ ತಯಾರಾದ ಕಾರ್ಯಸೂಚಿ ಇದು.

 2024. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ವರ್ಷ. ಅಷ್ಟರೊಳಗೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನಾಗಪುರದ ಗುರುಗಳಿಗೆ ಭರವಸೆ ನೀಡಿದ್ದರು. ಆ ಲೆಕ್ಕ ಉಲ್ಟಾಪಲ್ಟಾ ಆಗಿದೆ. ಕೋವಿಡ್ ವೈಫಲ್ಯ, ಆರ್ಥಿಕ ದುರವಸ್ಥೆಯಿಂದ ರಾಜಕೀಯ ಹೊಸ ದಿಕ್ಕಿಗೆ ನಿಧಾನವಾಗಿ ಚಲಿಸುತ್ತಿದೆ.

ಇನ್ನೊಂದೆಡೆ ಕೊರೋನವನ್ನು ಕೋಮುವಾದದ ಮೂಲಕ ಎದುರಿಸಲು ಯತ್ನಿಸಿ ತೇಜಸ್ವಿ ಸೂರ್ಯನಂಥ ಸಂಸದರು ಅಪಹಾಸ್ಯಕ್ಕೀಡಾಗುತ್ತಿದ್ದಾರೆ. ಬೆಡ್ ಹಂಚಿಕೆ ಹಗರಣ ಬಯಲುಗೆಳೆದಿದ್ದಾಗಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಂಡ ತೇಜಸ್ವಿ ಮಾಡಿದ್ದೇನು? ತನ್ನ ಮಾವ ರವಿ ಸುಬ್ರಹ್ಮಣ್ಯ (ಬಿಜೆಪಿ ಶಾಸಕ), ಉದಯ ಗರುಡಾಚಾರ (ಬಿಜೆಪಿ ಶಾಸಕ) ಮತ್ತು ಸತೀಶ್ ರೆಡ್ಡಿ (ಬಿಜೆಪಿ ಶಾಸಕ) ಜೊತೆಗೆ ವಾರ್ ರೂಮ್‌ಗೆ ಭೇಟಿ ನೀಡಿದ ತೇಜಸ್ವಿ ಸೂರ್ಯ ಮುಸ್ಲಿಮ್ ಸಮಾಜಕ್ಕೆ ಸೇರಿದ 17 ಜನರ ಹೆಸರನ್ನು ಓದಿ ಹೇಳಿದರು. ‘ಇವರನ್ನೇಕೆ ನೇಮಕ ಮಾಡಿಕೊಂಡಿರಿ’ ಎಂದು ಕೂಗಾಡಿದ್ದಾರೆ?.

ಅವರ ಮಾವ ರವಿ ಸುಬ್ರಹ್ಮಣ್ಯ ಒಂದು ಹೆಜ್ಜೆ ಮುಂದೆ ಹೋಗಿ ‘ನೀವೇನು ಮದ್ರಸಾ ನಡೆಸುತ್ತಿದ್ದೀರಾ’ ಎಂದು ಅರಚಾಡಿದ್ದಾರೆೆ. ಇವರು ಕೂಗಾಡಿದ ತಕ್ಷಣ ಬಿಬಿಎಂಪಿ ಅಧಿಕಾರಿಗಳು ಆ 17 ಮಂದಿ ಮುಸ್ಲಿಮ್ ನೌಕರರನ್ನು ಕೆಲಸದಿಂದ ತೆಗೆದಿದ್ದಾರೆ. ಇದು ಕಾನೂನಿಗೆ ವಿರೋಧವಲ್ಲವೇ? ನಮ್ಮ ಸಂವಿಧಾನದ ಪ್ರಕಾರ ಎಲ್ಲರೂ ಸಮಾನರು. ಉದ್ಯೋಗ ಸೇರಿ ಯಾವುದರಲ್ಲೂ ಪಕ್ಷಪಾತ ಮಾಡುವಂತಿಲ್ಲ.

ಆದರೆ, ಸಂವಿಧಾನಕ್ಕೆ ನಿಷ್ಠೆಯಿಂದ ಇರುವುದಾಗಿ ಹೇಳಿ ಪ್ರಮಾಣ ವಚನ ಸ್ವೀಕರಿಸಿದ ತೇಜಸ್ವಿ ಸೂರ್ಯ ಮತ್ತು ಅವರ ಜೊತೆಗಾರ ಶಾಸಕರು ಮಾಡಿದ್ದೇನು? ಸಂವಿಧಾನಕ್ಕೆ ಅಪಚಾರವಲ್ಲವೇ? ಇವರು ಶಾಸಕರಾಗಿ, ಸಂಸದರಾಗಿ ಉಳಿಯಲು ಅರ್ಹರೇ?

 ತೇಜಸ್ವಿ ಸೂರ್ಯ ಮತ್ತು ಅವರ ಜೊತೆಗಾರ ಶಾಸಕರಾಗಲಿ, ದೇಶದ ಅಧಿಕಾರ ಸೂತ್ರ ಹಿಡಿದ ನರೇಂದ್ರ ಮೋದಿ, ಅಮಿತ್ ಶಾ ಅವರಾಗಲಿ ಸಂವಿಧಾನಕ್ಕೆ ಅಪಚಾರ ಮಾಡಿದರೆ ಅಚ್ಚರಿ ಪಡಬೇಕಾಗಿಲ್ಲ. ಇವರೆಲ್ಲ ಅಂಬೇಡ್ಕರ್ ಸಂವಿಧಾನದ ಮೇಲೆ ನಿಷ್ಠೆ ಹೊಂದಿದವರಲ್ಲ. ಇವರ ಸಂವಿಧಾನ ಆರೆಸ್ಸೆಸ್‌ನ ಎರಡನೇ ಸರ ಸಂಘಚಾಲಕ ಮಾಧವ ಸದಾಶಿವ ಗೋಳ್ವಲ್‌ಕರ್ ಬರೆದ ‘ಬಂಚ್ ಆಫ್ ಥಾಟ್ಸ್’ ಕನ್ನಡದಲ್ಲಿ ‘ಚಿಂತನ ಗಂಗಾ’ ಎಂದು ಅನುವಾದವಾಗಿದೆ. ಇದರಲ್ಲಿ ‘ಹಿಂದೂರಾಷ್ಟ್ರ’ ಎಂದರೆ ಹೇಗಿರಬೇಕೆಂಬ ಸ್ಪಷ್ಟ ಉಲ್ಲೇಖವಿದೆ.

  ಸಂವಿಧಾನ ಮತ್ತು ಸಮಾಜವಾದ ಎರಡನ್ನೂ ಏಕಕಾಲದಲ್ಲಿ ವಿರೋಧಿಸುವ ಗೋಳ್ವಲ್‌ಕರ್ ‘ಮುಸ್ಲಿಮರು ಈ ದೇಶದಲ್ಲಿ ಬದುಕಬೇಕೆಂದಿದ್ದರೆ ನಾವು ಹೇಳಿದಂತೆ ಕೇಳಿಕೊಂಡು ಇರಬೇಕು. ದ್ವಿತೀಯ ದರ್ಜೆಯ ನಾಗರಿಕರಂತೆ ಜೀವನ ನಡೆಸಬೇಕು. ಯಾವ ಹಕ್ಕುಗಳೂ ಅವರಿಗೆ ಇರಕೂಡದು’ ಎನ್ನುತ್ತಾರೆ.

ಇಂದಿಗೂ ಆರೆಸ್ಸೆಸ್ ನಂಬಿಕೆ ಹೊಂದಿರುವುದು ಆ ಹಿಂದೂರಾಷ್ಟ್ರ ಸಿದ್ದಾಂತದಲ್ಲಿ. ಮೋದಿ, ಅಮಿತ್ ಶಾ, ತೇಜಸ್ವಿ, ರವಿಸುಬ್ರಹ್ಮಣ್ಯ ಇವರೆಲ್ಲ ಗೋಳ್ವಲ್‌ಕರ್ ವಿಚಾರ ಶಾಲೆಯ ವಿದ್ಯಾರ್ಥಿಗಳು. ಅವರಿಂದ ಇಂತಹ ಜನಾಂಗ ದ್ವೇಷದ ಜೀವ ಘಾತುಕ ವಿಷವನ್ನಲ್ಲದೇ ಇನ್ನೇನನ್ನು ನಿರೀಕ್ಷೆ ಮಾಡಲು ಸಾಧ್ಯ?

ಇವರೆಲ್ಲ ಪ್ರಜಾಪ್ರಭುತ್ವದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಇವರನ್ನು ಚುನಾಯಿಸಿದ ಅಂದರೆ ಇವರಿಗೆ ಮತ ಹಾಕಿದ ಬಹುತೇಕರು ಮುಸ್ಲಿಮ್ ಮತ್ತು ದಲಿತ ವಿರೋಧಿ ವ್ಯಾಧಿಯಿಂದ ಬಳಲುತ್ತಿರುವವರು. ಅವರು ತಮಗೆ ಸರಿಯಾದ ಜನ ಪ್ರತಿನಿಧಿಗಳನ್ನು ಮತ್ತು ಸರಕಾರವನ್ನು ಪಡೆದಿದ್ದಾರೆ.

ಕೇರಳದ ಮತದಾರರು ಜಾಣರು. ತಮ್ಮ ಹಿತರಕ್ಷಣೆ ಯಾರು ಮಾಡುತ್ತಾರೆಂದು ಅವರಿಗೆ ಗೊತ್ತಿತ್ತು. ಅಂಥವರನ್ನು ಚುನಾಯಿಸಿದರು. ಅಂತಲೇ ಅಲ್ಲಿ ಲಾಕ್‌ಡೌನ್ ಕಾಲದಲ್ಲಿ ಎಲ್ಲರಿಗೂ ಉಚಿತ ಆಹಾರಧಾನ್ಯ, ಉಚಿತ ಕೋವಿಡ್ ಚಿಕಿತ್ಸೆ ಜೊತೆಗೆ ಇತರ ರಾಜ್ಯಗಳಿಗೆ ಅಗತ್ಯವಿದ್ದರೆೆ ವ್ಯಾಕ್ಸಿನ್(ಲಸಿಕೆ) ಕಳಿಸುವುದಾಗಿ ಕೇರಳ ಎಡರಂಗ ಸರಕಾರ ಪ್ರಕಟಿಸಿದೆ.

ಇದರಲ್ಲಿ ತಮಿಳುನಾಡು ಕೂಡ ಮುಂದಿದೆ. 4,000 ರೂ. ನಗದು ಕೋವಿಡ್ ಪ್ಯಾಕೇಜ್ ಘೋಷಿಸಿದೆ. ಕೋವಿಡ್ ರೋಗಿಗಳ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಖರ್ಚನ್ನು ಸರಕಾರವೇ ಭರಿಸುವುದಾಗಿ ನೂತನ ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ. ಆದರೆ, ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿ ಮಾಡಿದ ಉತ್ತರ ಪ್ರದೇಶದ ಜನ ಕೋವಿಡ್‌ನಿಂದ ಬೀದಿ ಹೆಣವಾಗುತ್ತಿದ್ದಾರೆ. ಆಕ್ಸಿಜನ್ ಕೇಳಿದ ವೈದ್ಯರ ಮೇಲೆ ಎಫ್‌ಐಆರ್ ದಾಖಲಾಗುತ್ತಿದೆ.

ಇನ್ನು ವಿಶ್ವ ಗುರು ‘ಪಿಎಂ ಕೇರ್ಸ್ ನಿಧಿ’ ಸಂಗ್ರಹಿಸಿ ಯಾರಿಗೂ ಒಂದು ಪೈಸೆ ಕೊಡದೆ ಸತಾಯಿಸುತ್ತಿದ್ದಾರೆೆ. ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ಕೊಡಬೇಕೆಂದು ಕರ್ನಾಟಕ ಹೈಕೋರ್ಟ್ ಆದೇಶ ಮಾಡಿದರೆ ಕೇಂದ್ರ ಸರಕಾರ ಅದನ್ನು ಒಪ್ಪದೆ ಸುಪ್ರೀಂ ಕೋರ್ಟ್‌ಗೆ ಹೋಗಿ ತಕರಾರು ಅರ್ಜಿ ಸಲ್ಲಿಸುತ್ತದೆ. ಒಳ್ಳೆಯ ಬೆಳವಣಿಗೆಯೆಂದರೆ ಸುಪ್ರೀಂಕೋರ್ಟ್ ಕೇಂದ್ರದ ತಕರಾರು ಅರ್ಜಿಯನ್ನು ತಿರಸ್ಕರಿಸಿದೆ. ಇದರಿಂದ ಕೆಂಡಾಮಂಡಲರಾದ ಕೇಂದ್ರ ಗೃಹ ಸಚಿವ ಅಮಿತ್‌ಶಾ ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರನ್ನು ದಿಲ್ಲಿಗೆ ಕರೆಸಿಕೊಂಡು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದ್ಯಾವುದೂ ಆಕಸ್ಮಿಕ ಅಥವಾ ದುಡುಕಿನಿಂದಾದ ಘಟನೆ ಅಲ್ಲ. ಭಾರತವನ್ನು ಹಿಂದೂರಾಷ್ಟ್ರವನ್ನಾಗಿ ಮಾಡುವ ಮೊದಲು ಅದಕ್ಕಾಗಿ ದೇಶವನ್ನು ಸಜ್ಜುಗೊಳಿಸಲು ಸಂಘಪರಿವಾರ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಿದಂತೆ ಎಲ್ಲವೂ ನಡೆಯುತ್ತಿದೆ. ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ವಲಯದ ಕೋವಿಡ್ ವಾರ್ ರೂಮ್ ಮೇಲೆ ದಾಳಿ ನಡೆಯುವ ತುಂಬಾ ಮೊದಲೇ ಮುಸ್ಲಿಮ್ ನೌಕರರನ್ನು ವಜಾ ಮಾಡಬೇಕೆಂದು ಬಿಜೆಪಿ ಶಾಸಕರು ಮತ್ತು ಅಧಿಕಾರಿಗಳ ಮೇಲೆ ಸತತ ಒತ್ತಡ ತರುತ್ತಿದ್ದರು ಎಂಬ ಸಂಗತಿ ಬಯಲಾಗಿದೆ. ಯಾವುದೇ ತಪ್ಪು ಮಾಡದ, ಯಾವುದೇ ದೂರಿಲ್ಲದೆ ವಿನಾಕಾರಣ ಕೆಲಸದಿಂದ ವಜಾ ಮಾಡಲು ಒತ್ತಾಯಿಸುವುದೆಂದರೆ ಅದು ಕೋಮುವಾದಿ ಅಜೆಂಡಾದ ಭಾಗವಲ್ಲದೇ ಬೇರೇನೂ ಅಲ್ಲ.

 ಈ ಕೊರೋನ ಹಿಂದೂ, ಮುಸ್ಲಿಮ್, ಕ್ರೈಸ್ತ, ಜೈನ ,ಬೌದ್ಧ, ಸಿಖ್, ಕಪ್ಪು, ಬಿಳಿ ಎನ್ನದೇ ಎಲ್ಲರನ್ನೂ ಕೊಲ್ಲುತ್ತಿದೆ. ಇದನ್ನು ಮನುಷ್ಯರಾದವರೆಲ್ಲ ಒಂದಾಗಿ ಎದುರಿಸಬೇಕಾಗಿದೆ. ಆದರೆ, ಕೋಮುವಾದಿ ಸಿದ್ಧಾಂತ ಅದಕ್ಕೆ ಅಡ್ಡಿಯಾಗಿದೆ. ಕಳೆದ ವರ್ಷ ಕೊರೋನ ಮೊದಲ ಅಲೆ ಬಂದಾಗ, ತಬ್ಲೀಗಿ ವೈರಸ್ ಎಂದು ಹೆಸರಿಸಿ ಒಂದು ಸಮುದಾಯದ ಜನರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ದುಷ್ಟ ಯತ್ನ ನಡೆಯಿತು.

ಈಗ ಎರಡನೇ ರೂಪಾಂತರಿ ಅಲೆ ಇನ್ನೂ ಭಯಾನಕವಾಗಿ ಬಂದಿದೆ. ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸಾವಿಗೀಡಾದ ವ್ಯಕ್ತಿಗಳ ಮೃತದೇಹ ಮುಟ್ಟಲು ಸಂಬಂಧಿಕರೂ ಹೆದರುತ್ತಿದ್ದಾರೆ. ಅನೇಕ ಕಡೆ ದಿಕ್ಕು ದೆಸೆಯಿಲ್ಲದೆ ಬಿದ್ದ ಇಂತಹ ಶವಗಳನ್ನು ಮುಸ್ಲಿಮ್ ಯುವಕರು ಅತ್ಯಂತ ಗೌರವದಿಂದ ಅವರವರ ನಂಬಿಕೆಯಂತೆ ಅಂತ್ಯಕ್ರಿಯೆ ಮಾಡುತ್ತಿದ್ದಾರೆ ಎಂಬ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಓದುತ್ತಿದ್ದೇವೆ.

 ಅನೇಕ ಮಿತ್ರರು ಫೋನ್ ಮಾಡಿ ಇಂತಹ ಸಂಗತಿಗಳನ್ನು ನನಗೆ ಹೇಳಿದ್ದಾರೆ. ನಿತ್ಯವೂ ದೇಶನಿಷ್ಠೆಯನ್ನು ಪ್ರಶ್ನಿಸುವ ನಕಲಿಗಳಿಂದ ಅವಮಾನ ಅನುಭವಿಸಿ ಸೇವಾ ಕಾರ್ಯದಲ್ಲಿ ತೊಡಗಿರುವ ಮುಸ್ಲಿಮ್ ಸಮುದಾಯ ಇತರರಿಗೆ ಮಾದರಿಯಾಗಿದೆ. ಮುಸ್ಲಿಮ್ ಸಮುದಾಯ ಮಾತ್ರವಲ್ಲ ಸಿಖ್ ಸಮುದಾಯ ಕೂಡ ದಿಲ್ಲಿ, ಮುಂಬೈ, ಬೆಂಗಳೂರು ಮುಂತಾದ ನಗರಗಳಲ್ಲಿ ಲಂಗರ್‌ಗಳನ್ನು ಆರಂಭಿಸಿ ನಿತ್ಯ ಸಾವಿರಾರು ಮಂದಿ ಕೋವಿಡ್ ಪೀಡಿತರ ಬಂಧುಗಳಿಗೆ ಎರಡೂ ಹೊತ್ತು ಊಟದ ಸೌಲಭ್ಯ ಮಾಡಿದೆ.

ಬೀದರ್‌ನ ಶಾಹೀನ್ ಶಿಕ್ಷಣ ಸಂಸ್ಥೆ ನಿತ್ಯ 600 ಮಂದಿ ಬಡವರಿಗೆ ಊಟ ಹಾಕುತ್ತಿದೆ. ಅನೇಕ ಮಸೀದಿ, ದರ್ಗಾಗಳು ಕೋವಿಡ್ ಕೇಂದ್ರಗಳಾಗಿವೆ. ಸೌದಿ ಅರೇಬಿಯಾದಿಂದ ಆಕ್ಸಿಜನ್ ಬಂದಿದೆ. ಕೋಟ್ಯಂತರ ರೂಪಾಯಿಗಳ ಪಡಿತರ ಚೀಲಗಳನ್ನು ಮುಸ್ಲಿಮ್ ಸಂಘಟನೆಗಳು ಬಡವರ ಮನೆ ಮನೆಗೆ ಹಂಚುತ್ತಿವೆ.

ಇದು ಆರೆಸ್ಸೆಸ್‌ನವರಿಗೂ ಗೊತ್ತಿದೆ. ಇದನ್ನು ಒಪ್ಪಿಕೊಂಡರೆ, ಹಿಂದೂ ಮುಸ್ಲಿಮರು ಒಂದಾದರೆ, ಹಿಂದುಗಳಿಗೆಲ್ಲ ಮುಸ್ಲಿಮರ ಭಯ ತೋರಿಸಿ ಮನುವಾದಿ ಹಿಂದೂ ರಾಷ್ಟ್ರ ಕಟ್ಟುವ ತಮ್ಮ ಕಾರ್ಯಸೂಚಿ ಮೂಲೆ ಗುಂಪಾಗುತ್ತದೆ ಎಂದು ಅವರು ಒಪ್ಪಿಕೊಳ್ಳುತ್ತಿಲ್ಲ.

ಕೋಮುವಾದಿ ಶಕ್ತಿಗಳು ಈ ಪರಿ ಬಾಲ ಬಿಚ್ಚಲು ಮತ್ತು ಹೊಸ ಪೀಳಿಗೆಯ ಮೆದುಳಿಗೆ ದ್ವೇಷದ ವಿಷ ಲೇಪನ ಮಾಡಲು ಜಾತ್ಯತೀತ, ಪ್ರಗತಿಪರ ಶಕ್ತಿಗಳ ದೌರ್ಬಲ್ಯವೇ ಕಾರಣ. ಕಾಂಗ್ರೆಸ್‌ನಂತಹ ರಾಷ್ಟ್ರೀಯ ಪಕ್ಷಗಳು ಯುವಕರಲ್ಲಿ ವೈಚಾರಿಕ ತಿಳಿವಳಿಕೆ ಮೂಡಿಸುತ್ತ ಬಂದಿದ್ದರೆ ಹೀಗಾಗುತ್ತಿರಲಿಲ್ಲ. ಆದರೆ, ಹಾಗಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ಒಳಗೆ ಸೇರಿಕೊಂಡ ಮತೀಯವಾದಿಗಳೂ ಕಾರಣ.

ಸಂಘಪರಿವಾರಕ್ಕೆ ಪಿ.ವಿ.ನರಸಿಂಹರಾವ್‌ರಂಥವರು ಕಾಂಗ್ರೆಸ್ ನಾಯಕರಾಗಿರುವುದು ಬೇಕಾಗಿತ್ತು. ಅವರನ್ನು ಬಳಸಿಕೊಂಡು ಅಯೋಧ್ಯೆಯ ಬಾಬರಿ ಮಸೀದಿ ಕೆಡವಿದರು. ಇಂದಿರಾ, ರಾಜೀವ್, ರಾಹುಲ್ ಸೇರಿ ನೆಹರೂ ಕುಟುಂಬದ ಯಾರನ್ನೂ ಅವರು ಇಷ್ಟಪಡುವುದಿಲ್ಲ. ಇನ್ನು ಎಡಪಂಥೀಯ ಪಕ್ಷಗಳು ತಾತ್ವಿಕವಾಗಿ ಕೋಮುವಾದ ವಿರೋಧಿಸುತ್ತಿದ್ದರೂ ಕೇರಳ ಹೊರತುಪಡಿಸಿ ಬೇರೆ ಕಡೆ ಅವರ ಶಕ್ತಿ ಸಾಲದು.

 ಭವಿಷ್ಯದ ಭಾರತ ಬಾಬಾಸಾಹೇಬ್ ಅಂಬೇಡ್ಕರ ಅವರ ಸಂವಿಧಾನದ ದಾರಿಯಲ್ಲೇ ನಡೆದರೆ ಮಾತ್ರ ಉಳಿಯುತ್ತದೆ, ಬೆಳೆಯುತ್ತದೆ. ಕೋಮುವಾದದ ದಾರಿಯಲ್ಲಿ ಸಾಗಿದರೆ ನಾಶವಾಗುತ್ತದೆ. ಇದರ ಮುನ್ಸೂಚನೆ ಈಗಾಗಲೇ ದೊರಕಿದೆ. ಜನರಿಗೂ ಅರಿವಾಗುತ್ತಿದೆ. ಬುರುಡೆ ಬಹಾದ್ದೂರನ ಬಣ್ಣದ ಮಾತುಗಳಿಗೆ ಮರುಳಾಗುವ ಕಾಲ ಮುಗಿಯಿತು.

ಅದೇನೆ ಇರಲಿ, ಇಡೀ ಮನುಕುಲಕ್ಕೆ ಸವಾಲಾದ ಕೋವಿಡ್ ಗಂಡಾಂತರದಿಂದ ಮೊದಲು ಪಾರಾಗುವ ದಾರಿ ಕಂಡುಕೊಳ್ಳೋಣ. ಮೊದಲು ಮಾನವರಾಗೋಣ. ಆಮೇಲೆ ದೇವರು, ಧರ್ಮ. ಪರಸ್ಪರ ಹೊಂದಿಕೊಂಡರೆ ಭಾರತದ ಭವಿಷ್ಯ ಉಜ್ವಲವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)