varthabharthi


ವಿಶೇಷ-ವರದಿಗಳು

ಪುತ್ತೂರು ಗಿರಿಜಾ ಕ್ಲಿನಿಕ್‌ನಲ್ಲಿ 30 ಬೆಡ್‌ಗಳ ಕೇರ್ ಸೆಂಟರ್

ಮುಚ್ಚಿದ್ದ ಆಸ್ಪತ್ರೆ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ

ವಾರ್ತಾ ಭಾರತಿ : 10 May, 2021
ಸಂಶುದ್ದೀನ್ ಸಂಪ್ಯ

ಪುತ್ತೂರು: ಕಳೆದ ಆರೇಳು ವರ್ಷಗಳಿಂದ ಮುಚ್ಚಲ್ಪಟ್ಟಿರುವ ಪುತ್ತೂರಿನ ಹೃದಯ ಭಾಗದಲ್ಲಿರುವ ಗಿರಿಜಾ ಕ್ಲಿನಿಕ್ ಆಸ್ಪತ್ರೆಯ ಕಟ್ಟಡ ಮುಂದಿನ ಕೆಲ ದಿನಗಳಲ್ಲಿ ಸರಕಾರದ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆಯಾಗಲಿದೆ. ಪುತ್ತೂರಿನ ಶಾಸಕ ಸಂಜೀವ ಮಠಂದೂರು ಅವರ ಪ್ರಯತ್ನದ ಫಲವಾಗಿ ಈ ಕಟ್ಟಡ ಸರ್ವ ಸುಸಜ್ಜಿತ ಕೋವಿಡ್ ಕೇರ್ ಸೆಂಟರ್ ಆಗಲಿದೆ. ಕೋವಿಡ್-19 ಇದರ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿಯೂ ಪಾಸಿಟಿವ್ ಪ್ರಕರಣವು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದರಿಂದಾಗಿ ಮುಚ್ಚಿದ ಸ್ಥಿತಿಯಲ್ಲಿರುವ ಡಾ.ಗೌರಿ ಪೈ ಮಾಲಕತ್ವದ ಪುತ್ತೂರಿನ ಗಿರಿಜಾ ಕ್ಲಿನಿಕ್ ಆಸ್ಪತ್ರೆಯ ಕಟ್ಟಡವನ್ನು ಶಾಸಕ ಸಂಜೀವ ಮಠಂದೂರು ಕಟ್ಟಡ ಮಾಲಕ ಹಾಗೂ ಸರಕಾರದೊಂದಿಗೆ ಮಾತುಕತೆ ನಡೆಸಿ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಕಟ್ಟಡ ಸುಮಾರು 30 ಬೆಡ್‌ಗಳನ್ನು ಒಳಗೊಂಡ ಕೋವಿಡ್ ಕೇರ್ ಸೆಂಟರ್ ಆಗಿ ಕಾರ್ಯ ನಿರ್ವಹಿಸಲಿದೆ.

ಕರಸೇವಕರು, ಪೌರ ಕಾರ್ಮಿಕರಿಂದ ಶುಚಿತ್ವ:

ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆಗೊಳ್ಳಲಿರುವ ಗಿರಿಜಾ ಕ್ಲಿನಿಕ್ ಕಟ್ಟಡವನ್ನು ಮತ್ತು ವಠಾರವನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ನಿತ್ಯ ಕರಸೇವಕರು ಮತ್ತು ಪುತ್ತೂರು ನಗರಸಭೆಯ ಪೌರ ಕಾರ್ಮಿಕರು ಶುಚಿತ್ವಗೊಳಿಸುವ ಕಾರ್ಯ ನಡೆಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಈ ಆಸ್ಪತ್ರೆ ಮುಚ್ಚಲ್ಪಟ್ಟಿರುವುದರಿಂದ ಸುತ್ತ ಮುತ್ತಲೂ ಹುಲ್ಲುಗಂಟಿಗಳು ಬೆಳೆದಿದ್ದು, ಕಸ ತ್ಯಾಜ್ಯಗಳು ತುಂಬಿದ್ದವು. ಅವುಗಳನ್ನು ನಗರಸಭಾ ಪೌರ ಕಾರ್ಮಿಕರು ಕಡಿದು, ತೆರವುಗೊಳಿಸಿದ್ದಾರೆ. ಅಲ್ಲದೆ ಶ್ರೀ ಮಹಾಲಿಂಗೇಶ್ವರ ದೇವಳದ ನಿತ್ಯ ಕರಸೇವಕರಾದ 30 ಜನರ ತಂಡವು ಆಸ್ಪತ್ರೆಯ ನೆಲ, ಗೋಡೆ ಸೇರಿದಂತೆ ಇಡೀ ಕಟ್ಟಡವನ್ನು ತೊಳೆದು ಶುಚಿಗೊಳಿಸಿದ್ದಾರೆ.

ಪುತ್ತೂರಿನ 3ನೇ ಕೋವಿಡ್ ಕೇರ್ ಸೆಂಟರ್ :


ಗಿರಿಜಾ ಕ್ಲಿನಿಕ್ ಕಟ್ಟಡವು ಪುತ್ತೂರಿನ 3ನೇ ಕೋವಿಡ್ ಕೇರ್ ಸೆಂಟರ್ ಆಗಿ ಕಾರ್ಯ ನಿರ್ವಹಿಸಲಿದೆ. ಈಗಾಗಲೇ ಪುತ್ತೂರಿನ ಹೊರವಲಯದಲ್ಲಿನ ಬಲ್ನಾಡು ಎಂಬಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಗುರುತಿಸಲಾಗಿದೆ. ಇಲ್ಲಿ ಸುಮಾರು 70 ಬೆಡ್‌ಗಳನ್ನು ಕೋವಿಡ್ ರೋಗಿಗಳಿಗಾಗಿ ಸಿದ್ದಪಡಿಲಾಗಿದೆ. ಈ ಕೇಂದ್ರಕ್ಕೆ ಈಗಾಗಲೇ ದಾಖಲಾತಿ ಪ್ರಾರಂಭಗೊಂಡಿದೆ. ಇದರೊಂದಿಗೆ ಸಮಾಜ ಕಲ್ಯಾಣ ಇಲಾಖೆಯ ಕೊಂಬೆಟ್ಟು ಹಾಸ್ಟೆಲ್‌ನಲ್ಲಿ ಕೋವಿಡ್ ಕೇರ್ ಸೆಂಟರ್ ಆಗಿ ಸಿದ್ಧ್ದಪಡಿಸಲಾಗಿದೆ. ಆದರೆ ಇಲ್ಲಿ ಈ ತನಕ ಯಾವುದೇ ದಾಖಲಾತಿ ನಡೆದಿಲ್ಲ.

300 ಬೆಡ್‌ಗಳ ವ್ಯವಸ್ಥೆ:

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕೊರೋನ ಮುನ್ನೆಚ್ಚರಿಕೆಯ ಕ್ರಮವಾಗಿ ಸುಮಾರು 300 ಬೆಡ್‌ಗಳ ಹಾಗೂ ಅದಕ್ಕೆ ಪೂರಕ ವ್ಯವಸ್ಥೆಗಳಿಗಾಗಿ ಶಾಸಕ ಸಂಜೀವ ಮಠಂದೂರು ಅವರು ಚಿಂತನೆ ನಡೆಸಿದ್ದು, ಅದಕ್ಕೆ ಪೂರಕ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಈಗಾಗಲೇ ಪುತ್ತೂರು ನಗರದ ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ವೆಂಟಿಲೇಟರ್ ಸಹಿತ 30 ಬೆಡ್‌ಗಳು ಸಿದ್ಧವಾಗಿವೆ. ಕೊಂಬೆಟ್ಟು ಹಾಸ್ಟೆಲ್‌ನಲ್ಲಿ 40 ಬೆಡ್‌ಗಳು ಸಿದ್ಧಗೊಂಡಿದೆ. ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ 30 ಬೆಡ್‌ಗಳು ಸಿದ್ಧವಾಗಿವೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 35 ಬೆಡ್‌ಗಳು ಸಿದ್ಧವಾಗಿದೆ. ಪುತ್ತೂರಿನ ಗಿರಿಜಾ ಕ್ಲಿನಿಕ್‌ನಲ್ಲಿ ಸರಕಾರಿ ವ್ಯವಸ್ಥೆಯಲ್ಲಿ 30 ಬೆಡ್‌ಗಳ ವ್ಯವಸ್ಥೆ ಸಿದ್ಧ್ದವಾಗುತ್ತಿದೆ. ಪುತ್ತೂರು ತಾಲೂಕಿನಲ್ಲಿ ಆಕ್ಸಿಜನ್ ಮತ್ತು ವೆಂಟಿಲೇಟರ್ ವ್ಯವಸ್ಥೆ ಸಹಿತ 135 ಬೆಡ್‌ಗಳಿಗೆ ಈಗಾಗಲೇ ಸಿದ್ದತೆ ಮಾಡಲಾಗಿದೆ.

ಕ್ಯಾಂಪ್ಕೊ ಆಕ್ಸಿಜನ್ ಫ್ಲಾಂಟ್:

ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಕ್ಯಾಂಪ್ಕೊ ಸಂಸ್ಥೆಯ ವತಿಯಿಂದ ದೊಡ್ಡ ಮಟ್ಟದ ಆಕ್ಸಿಜನ್ ಫ್ಲಾಂಟ್ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ಆಕ್ಸಿಜನ್ ಫ್ಲಾಂಟ್ ನಿರ್ಮಾಣಗೊಳಿಸುವಂತೆ ಶಾಸಕ ಸಂಜೀವ ಮಠಂದೂರು ಅವರು ಗೇಲ್ ಕಂಪೆನಿಯ ಜೊತೆಗೆ ಮಾತುಕತೆ ನಡೆಸಿದ್ದರು. ಆದರೆ ಇದೀಗ ಕ್ಯಾಂಪ್ಕೊ ಸಂಸ್ಥೆಯು ಇದೀಗ ತಾನು ಆಕ್ಸಿಜನ್ ಫ್ಲಾಂಟ್ ನಿರ್ಮಿಸಿ ಕೊಡುವುದಾಗಿ ಮುಂದೆ ಬಂದಿದೆ. ಕೆಲ ದಿನಗಳಲ್ಲಿಯೇ ಕಾಮಗಾರಿ ಆರಂಭವಾಗಲಿದೆ. ಸರಕಾರಿ ಆಸ್ಪತ್ರೆಯ ವಠಾರದಲ್ಲಿಯೇ ಈ ಫ್ಲಾಂಟ್ ನಿರ್ಮಾಣಗೊಳ್ಳಲಿರುವುದರಿಂದ ಆಸ್ಪತ್ರೆಗೆ ದಾಖಲಾಗಿರುವ ಯಾರಿಗೂ ಮುಂದಿನ ದಿನಗಳಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಲಾರದು.

ಗಿರಿಜಾ ಕ್ಲಿನಿಕ್ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣಕ್ಕಾಗಿ ಕೆಲಸ ಕಾರ್ಯಗಳು ನಡೆಸಲಾಗುತ್ತಿದೆ. ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದ್ದು, ಪುತ್ತೂರಿನ ರೋಟರಿ ಸಂಸ್ಥೆಯವರು 35 ಬೆಡ್‌ಗಳನ್ನು ಒದಗಿಸಲಿದ್ದಾರೆ. ಆಸ್ಪತ್ರೆಯಲ್ಲಿ ಸೆಂಟರ್‌ಗೆ ಬೇಕಾದಷ್ಟು ಮಂಚಗಳು ಲಭ್ಯವಿದೆ. ಉಳಿದಂತೆ ಇತರ ಅಗತ್ಯ ವ್ಯವಸ್ಥೆಗಳನ್ನು ಜಿಲ್ಲಾಡಳಿತದಿಂದ ಕಲ್ಪಿಸಲಾಗುವುದು. 
-ರಮೇಶ್ ಬಾಬು
ತಹಶೀಲ್ದಾರ್,ಪುತ್ತೂರು.

ಗಿರಿಜಾ ಕ್ಲಿನಿಕ್ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ನಗರಸಭೆಯ ವತಿಯಿಂದ ಅಲ್ಲಿ ವಠಾರ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ಅಲ್ಲಿಗೆ ಬೇಕಾಗಿರುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ವ್ಯವಸ್ಥೆಗಳನ್ನು ಒದಗಿಸಲಾಗುವುದು. ಕೋವಿಡ್ ಕೇರ್ ಸೆಂಟರ್‌ನ ಸ್ವಚ್ಛತೆಯನ್ನು ಕೋವಿಡ್ ನಿಯಮಾವಳಿಯಂತೆ ಪೌರಕಾರ್ಮಿರ ಮೂಲಕ ನಡೆಸಲಾಗುತ್ತಿದೆ.

 -ರೂಪಾ ಟಿ. ಶೆಟ್ಟಿ

 ಪೌರಾಯುಕ್ತರು, ಪುತ್ತೂರು ನಗರಸಭೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)