varthabharthi


ರಾಷ್ಟ್ರೀಯ

ಬಿಜೆಪಿಯ ಸುವೇಂದು ಅಧಿಕಾರಿ ಪ್ರತಿಪಕ್ಷ ನಾಯಕನಾಗಿ ಆಯ್ಕೆ

ಪಶ್ಚಿಮಬಂಗಾಳದ ವಿಧಾನ ಸಭೆ: ಟಿಎಂಸಿಯ 43 ನಾಯಕರು ಪ್ರಮಾಣ ವಚನ ಸ್ವೀಕಾರ

ವಾರ್ತಾ ಭಾರತಿ : 10 May, 2021

ಕೋಲ್ಕತಾ, ಮೇ 10: ಕೋಲ್ಕತಾದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ತೃಣಮೂಲ ಕಾಂಗ್ರೆಸ್ನ 43 ನಾಯಕರು ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಗಗನ್ದೀಪ್ ಧಂಕರ್ ಅವರು ಈ ನಾಯಕರಿಗೆ ಪ್ರಮಾಣ ವಚನ ಬೋಧಿಸಿದರು.

ಟಿಎಂಸಿಯ ಮೂವರು ನಾಯಕರಾದ ಅಮಿತ್ ಮಿತ್ರಾ, ಬ್ರಾತ್ಯ ಬಸು ಹಾಗೂ ರತನ್ ಘೋಷ್ ಅವರು ವರ್ಚುವಲ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮಿತ್ರ ಅವರು ಅಸೌಖ್ಯಕ್ಕೀಡಾಗಿದ್ದರೆ, ಬಸು ಹಾಗೂ ಘೋಷ್ ಕೋವಿಡ್ ಸೋಂಕಿನಿಂದ ಗುಣಮುಖರಾಗುತ್ತಿದ್ದಾರೆ.

ಪಾರ್ಥ ಚಟರ್ಜಿ, ಸುಬ್ರತಾ ಮುಖರ್ಜಿ, ಫಿರ್ಹಾದ್ ಹಕೀಮ್ ಹಾಗೂ ಸಾಧನ್ ಪಾಂಡೆಯಂತಹ ಇತರ ಚುನಾಯಿತ ಶಾಸಕರು ಕೂಡ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜ್ಯ ಸರಕಾರದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಮಾಣ ವಚನ ಸ್ವೀಕರಿಸಿದವರಲ್ಲಿ 24 ಸಂಪುಟ ಸಚಿವರು ಹಾಗೂ 10 ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ) ಒಳಗೊಂಡಿದ್ದಾರೆ. ಮಮತಾ ಬ್ಯಾನರ್ಜಿ ಅವರು ಗೃಹ ಖಾತೆ ಸೇರಿದಂತೆ 6 ಖಾತೆಗಳನ್ನು ತನ್ನಲ್ಲಿ ಉಳಿಸಿಕೊಂಡಿದ್ದಾರೆ.

ಬಿಜೆಪಿಯ ಸುವೇಂದು ಅಧಿಕಾರಿ ಪ್ರತಿಪಕ್ಷದ ನಾಯಕ

ಪಶ್ಚಿಮಬಂಗಾಳದ ಹೊಸ ವಿಧಾನ ಸಭೆಗೆ ಬಿಜೆಪಿಯು ಪ್ರತಿಪಕ್ಷದ ನಾಯಕನಾಗಿ ಸುವೇಂದು ಅಧಿಕಾರಿಯನ್ನು ನೇಮಕ ಮಾಡಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಸುವೇಂದು ಅಧಿಕಾರಿ ಅವರ ಹೆಸರನ್ನು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರಕಟಿಸಿದರು. ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ಸುವೇಂದು ಅಧಿಕಾರಿ ಅವರು ಕಳೆದ ವರ್ಷ ಡಿಸೆಂಬರ್ನಲ್ಲಿ ಟಿಎಂಸಿ ತ್ಯಜಿಸಿ ಬಿಜೆಪಿ ಸೇರ್ಪಡೆಯಾಗಿದ್ದರು. ಪೂರ್ವ ಮಿಡ್ನಾಪುರ ಜಿಲ್ಲೆಯ ನಂದಿಗ್ರಾಮ ಕ್ಷೇತ್ರದ ವಿಧಾನ ಸಭೆ ಚುನಾವಣೆಯಲ್ಲಿ ಅವರು ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)